Video: ಗೊರಿಲ್ಲಾ ವೇಷ ಧರಿಸಿ ಕೋತಿಯ ಮುಂದೆ ಹೋದ, ಕೋತಿ ನೀಡಿದ ಪ್ರತಿಕ್ರಿಯೆ ನೋಡಿ ಆಶ್ಚರ್ಯ ಪಟ್ಟ ನೆಟ್ಟಿಗರು!
ಪ್ರಾಂಕ್ ವೀಡಿಯೋಗಳನ್ನು ಮಾಡುವುದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರ ಆಸಕ್ತಿಯ ವಿಚಾರವಾಗಿದೆ. ಅನೇಕ ಮಂದಿ ಇಂತಹ ಪ್ರಾಂಕ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ ಈ ರೀತಿ ಹಂಚಿಕೊಳ್ಳುವ ವಿಡಿಯೋಗಳು ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುವ ಮೂಲಕ ಸಾಕಷ್ಟು ವೈರಲ್ ಆಗುತ್ತದೆ. ಪ್ರಾಂಕ್ ವಿಡಿಯೋಗಳನ್ನು ಮಾಡುವವರು ಬಹಳಷ್ಟು ಸಂದರ್ಭದಲ್ಲಿ ಎಚ್ಚರಿಕೆಯನ್ನು ವಹಿಸಬೇಕು ಅಲ್ಲದೇ ಇಂತಹ ವಿಡಿಯೋಗಳನ್ನು ಮಾಡುವವರು ಪ್ರಾಣಿಗಳ ಜೊತೆ ಪ್ರಾಂಕ್ ಮಾಡುವುದು, ಆ ಪ್ರಾಣಿಗಳು ಆ ತಕ್ಷಣದಲ್ಲಿ ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದನ್ನು ತೋರಿಸುವ ಪ್ರಯತ್ನವನ್ನು ಮಾಡುತ್ತಾರೆ. ಇವರು ಮನರಂಜನೆಗಾಗಿ ಮಾಡುವ ಈ ವಿಡಿಯೋಗಳು ಕೆಲವೊಮ್ಮೆ ಪ್ರಾಣಿಪ್ರಿಯರ ಅಸಮಾಧಾನಕ್ಕೆ ಕೂಡಾ ಕಾರಣವಾಗುತ್ತದೆ ಆದರೂ ಇಂತಹ ವಿಡಿಯೋಗಳನ್ನು ನೋಡುವವರ ಸಂಖ್ಯೆಯೇನೂ ಕಡಿಮೆಯಿಲ್ಲ ಎಂದೇ ಹೇಳಬಹುದು.
ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ಗೊರಿಲ್ಲಾ ವೇಷವನ್ನು ಧರಿಸಿದ ಯೂಟ್ಯೂಬರ್ ಒಬ್ಬರು ಕೋತಿಯೊಂದಿಗೆ ಪ್ರಾಂಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದ್ದಕ್ಕಿದ್ದಂತೆ ತನ್ನ ಎದುರಿಗೆ ಗೊರಿಲ್ಲಾ ಬಂದರೆ ಕೋತಿ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಗೊರಿಲ್ಲಾ ವೇಷವನ್ನು ತೊಟ್ಟಿರುವ ವ್ಯಕ್ತಿಯು ಕಾಡಿನಂತಹ ಪ್ರದೇಶದ ರಸ್ತೆಯಲ್ಲಿ ಕುಳಿತಿರುವ ಕೋತಿಯೊಂದರ ಮುಂದೆವಬರುತ್ತಾನೆ. ಬಹುಶಃ ಕೋತಿ ಗೊರಿಲ್ಲಾ ಬಂದಿದ್ದು ನೋಡಿ ಓಡಿ ಹೋಗಬಹುದು ಎಂದು ನಾವು ಊಹಿಸಿದರೆ ನಮ್ಮ ಊಹೆ ಖಂಡಿತ ತಪ್ಪಾಗುತ್ತದೆ. ಏಕೆಂದರೆ ಅಲ್ಲಿ ಅದಕ್ಕಿಂತ ವಿಭಿನ್ನವಾದ ದೃಶ್ಯವನ್ನೇ ಗಮನಿಸಬಹುದಾಗಿದೆ.
ಹೌದು ಗೊರಿಲ್ಲ ವೇಷವನ್ನು ತೊಟ್ಟಿರುವ ವ್ಯಕ್ತಿಯು ಕೋತಿಯ ಕಡೆಗೆ ನಡೆದು ಬರುವಾಗಲೇ ಕೋತಿ ಅದನ್ನು ಎದುರಿಸಲು ಸಿದ್ಧವಾದಂತೆ ಕಾಣಿಸುತ್ತದೆ. ಅದು ಭಯ ಪಡುವುದಿಲ್ಲ ಬದಲಾಗಿ ಅದು ಗೊರಿಲ್ಲಾವನ್ನು ದೂರ ಓಡಿಸಲು ಸಜ್ಜಾಗುತ್ತದೆ. ಗೊರಿಲ್ಲಾ ವೇಷ ಧರಿಸಿದ ವ್ಯಕ್ತಿಯು ಅದರ ಹತ್ತಿರ ಬಂದಾಗ ಕೋತಿ ಭಯಪಡದೆ ಗೊರಿಲ್ಲಾ ಮೇಲೆ ದಾಳಿಯನ್ನು ಮಾಡಲು ಮುಂದಾಗುತ್ತದೆ. ಗೊರಿಲ್ಲ ವೇಷ ತೊಟ್ಟ ವ್ಯಕ್ತಿಯೇ ಹಿಂದಕ್ಕೆ ಬರುತ್ತಾನೆ. ಕೋತಿಗೆ ಎಷ್ಟು ಕೋಪ ಬರುತ್ತದೆ ಎಂದರೆ ಅದು ಗೊರಿಲ್ಲ ವನ್ನು ಕಚ್ಚಲು ಮುಂದಾಗುತ್ತದೆ. ಪ್ರಾಂಕ್ ಮಾಡಲು ಹೋದ ವ್ಯಕ್ತಿ ಕೂಡಾ ಕೋತಿಯ ಇಂತಹ ಪ್ರತಿಕ್ರಿಯೆ ನಿರೀಕ್ಷೆ ಮಾಡಿರುವುದಿಲ್ಲ.
ವಿಡಿಯೋ ನೋಡಿ.
ವೈರಲ್ ಆಗಿರುವ ಈ ಪ್ರಾಂಕ್ ವೀಡಿಯೋವನ್ನು ಈಗಾಗಲೇ 46 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ, 52 ಸಾವಿರಕ್ಕಿಂತ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಕಾಮೆಂಟ್ ಗಳ ಸಹಾ ಹರಿದು ಬರುತ್ತಿದ್ದು, ನೆಟ್ಟಿಗರೊಬ್ಬರು ಕೋತಿಗೆ ಅದು ಪ್ರಾಂಕ್ ವೀಡಿಯೋ ಎಂದು ಗೊತ್ತಿದೆ ಅದಕ್ಕೆ ಅದು ಅವನನ್ನು ಆಟ ಆಡಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಗೊರಿಲ್ಲ ವೇಷ ಧರಿಸಿ ನಿಜವಾದ ಸಿಂಹ ಅಥವಾ ಹುಲಿಯ ಜೊತೆಗೆ ಪ್ರಾಂಕ್ ವೀಡಿಯೋ ಮಾಡಿ ನೋಡೋಣ ಎಂದು ಸವಾಲನ್ನು ಹಾಕಿದ್ದಾರೆ. ಕೋತಿ ಭಯಪಡದೆ ಆರಾಮಾಗಿ ರಾಜನ ಹಾಗಿದೆ ಎಂದು ಕೆಲವರು ಮೆಚ್ಚುಗೆ ನೀಡಿದ್ದಾರೆ. ವೀಡಿಯೋ ನಂತರ ಕೋತಿಗೆ ತಿನ್ನಲು ಬಾಳೆ ಹಣ್ಣನ್ನು ನೀಡಿದ್ದನ್ನು ಸಹಾ ಮೆಚ್ಚಿದ್ದಾರೆ.