Viral Video: ಜೀಬ್ರಾದ ಅದೃಷ್ಟ, ಮೊಸಳೆಯ ದುರಾದೃಷ್ಟ; ಜೀಬ್ರಾದ ಬೇ#ಟೆ ಮಿಸ್ ಆಗಿರುವುದರಿಂದ ಬೇಸರ ಮಾಡಿಕೊಂಡ ಮೊಸಳೆ!

ಕೂದಲೆಳೆಯಲ್ಲಿ ಸಾವಿನಿಂದ ಪಾರಾದ ಅನ್ನೋ ಮಾತನ್ನು ನಾವು ಕೇಳರ್ತೀವಿ. ಹಾಗೆ ಯಾವುದೋ ಒಂದು ಅಪಘಾತ ಅಥವಾ ಅನಾಹುತ ಇಲ್ಲವೇ ಪ್ರಾಣಗಂಡದಿಂದ ಪಾರಾಗಿ ಬಂದವರನ್ನು ನೋಡಿದಾಗ ನಿನ್ನ ಅದೃಷ್ಟ ಚೆನ್ನಾಗಿದೆ ಬಿಡೋ, ದೇವರು ನಿನಗೆ ಇನ್ನೂ ಆಯುಷ್ಯ ಜಾಸ್ತಿ ಬರೆದಿದ್ದಾ‌ನೆ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ಸಾವಿರ ವರ್ಷ ಆಯಸ್ಸು ಅಂತೆಲ್ಲಾ ಕೂಡಾ ಹೇಳ್ತಾರೆ. ನಿಜವಾಗಲೂ ಊಹೆ ಮಾಡದೇ ಅನಿರೀಕ್ಷಿತವಾಗಿ ಬಂದು ಎರಗುವ ಅಪಾಯದಿಂದ ಪ್ರಾಣ ರಕ್ಷಣೆ ಆಯ್ತು ಅಂದ್ರೆ ಅದು ಅದೃಷ್ಟವಲ್ಲದೇ ಮತ್ತೇನು? ಬದುಕಿದೆಯಾ ಬಡ ಜೀವ ಅಂತ ಖುಷಿ ಪಡಲೇಬೇಕು. ಆದರೆ ಇಂತಹ ಘಟನೆಗಳು ಅಪರೂಪಕ್ಕೆ ಒಮ್ಮೆ ನಡೆದರೂ ಕೂಡಾ ಭಾರೀ ಸುದ್ದಿ ಮಾತ್ರ ಆಗೋದು ಖಂಡಿತ.

ಆದರೆ ಈಗ ಹೇಳಿದ್ದಕ್ಕಿಂತ ಭಿನ್ನವಾಗಿ ಸಾವು ಬೆನ್ನ ಹಿಂದೆ ವರೆಗೂ ಬಂದರೂ ಕೂಡಾ ನಮಗೆ ಗೊತ್ತಾಗ್ದೇ ನಮ್ಮ ದಿನಚರಿಯನ್ನು ನಾವು ಮಾಮೂಲಿನಂತೆ ಮಾಡ್ಕೊಂಡು ಹೋದ್ರೆ ಅಲ್ಲಿ ಅಪಾಯದ ಸೂಚನೆ ಕೂಡಾ ನಮಗೆ ಸಿಕ್ಕಿರೋದಿಲ್ಲ. ಅದೇನಿದ್ರು ಯಾರಾದ್ರೂ ನೋಡಿದ್ರೆ ನಮಗೆ ಹೇಳಿದಾಗ ನಾವು ಕೂಡಾ ಹೌದಾ? ಹೀಗಾಗಿತ್ತಾ? ಅಂತ ಕೇಳಿಸಿಕೊಂಡು ಭಯಪಡಬೇಕಷ್ಟೇ. ಈಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ಭರ್ಜರಿಯಾಗಿ ವೈರಲ್ ಆಗ್ತಾ ಇದ್ದು, ಅದು ಈಗ ನಾವೇನು ಹೇಳಿದ್ವಿ ಆ ವಿಚಾರಕ್ಕೆ ತುಂಬಾ ಹತ್ತಿರವಾಗಿದೆ ಅಂತಾನೇ ಹೇಳಬಹುದು. ಶೇರ್ ಆಗಿರೋ ಆ ವೀಡಿಯೋನ ಪೂರ್ತಿ ನೋಡೋವರೆಗೂ ನಮಗೂ ಕೂಡಾ ಅಲ್ಲೇನು ನಡೀತಾ ಇದೆ ಅನ್ನೋದು ಅರ್ಥ ಆಗಲ್ಲ.

ವೀಡಿಯೋದಲ್ಲಿ ಒಂದು ಜೀಬ್ರಾ ಹಾಯಾಗಿ ಒಂದು ನದಿಯೋ ಅಥವಾ ತೊರೆಯಲ್ಲೋ ನಿಂತು, ತಂಪಿನ ಅನುಭವ ಪಡೆದು, ನೀರು ಕುಡಿದು ಅನಂತರ ಅದು ನಿಧಾನವಾಗಿ ಅಲ್ಲಿಂದ ದಡಕ್ಕೆ ನಡೆದು ಬಂದು, ಸ್ವಲ್ಪ ಎತ್ತರದಲ್ಲಿದ್ದ ದಂಡೆಯ ಮೇಲೆ ಏರಿದೆ. ಅಲ್ಲಿಯವರೆಗೆ ಎಲ್ಲಾ ಸರಿಯಾಗೇ ಕಾಣ್ತಾ ಇದ್ದ ನಮಗೆ ಆಗ ಆಗುತ್ತೆ ಶಾಕ್, ಯಾಕೆ ಅಂತೀರಾ ಎಲ್ಲಿ ಇತ್ತೋ ಏನೋ ಗೊತ್ತಿಲ್ಲ ನೀರೊಳಗೆ ಇದ್ದ ಮೊಸಳೆ ಒಂದು ಬಹಳ ರಭಸವಾಗಿ ಈಜಿಕೊಂಡು ಆ ಜೀಬ್ರಾವನ್ನು ಹಿಡಿದು ತನ್ನ ಆಹಾರ ಮಾಡಿಕೊಳ್ಳೋಕೆ ಅಂತ ಬಂದಿದೆ. ಜೀಬ್ರಾ ನದಿ ದಂಡೆ ಮೇಲೆ ಹತ್ತಿ ಎರಡು ಮೂರು ಹೆಜ್ಜೆ ಇಟ್ಟಿತ್ತೋ ಏನೋ ಅಷ್ಟರಲ್ಲೇ ಈ ಅನಿರೀಕ್ಷಿತ ಅಪಾಯ ನೀರೊಳಗಿಂದ ಎದ್ದು ಬಂದಿದೆ.

ಆದರೆ ಆ ಜೀಬ್ರಾಕ್ಕೆ ಹಿಂದೆ ಮೊಸಳೆ ಬಂದಿರುವ ಸೂಚನೆ ಕೂಡಾ ಇಲ್ಲದೇ ಆರಾಮಾಗಿ ನಡ್ಕೊಂಡು ಮುಂದೆ ಹೋಗಿದೆ. ಇನ್ನು ಮೊಸಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ತರ ಜೀಬ್ರಾದ ಕಾಲು ಹಿಡಿಯುವ ಪ್ರಯತ್ನ ಸಫಲವಾಗಿಲ್ಲ. ಕೆಲವೇ ಸೆಕೆಂಡಗಳ ಅಂತರದಲ್ಲಿ ಜಸ್ಟ್ ಮಿಸ್ ಅನ್ನೋತರ ಜೀಬ್ರಾ ಹಿಂದೆ ನೋಡದೇ ಮುಂದೆ ಹೆಜ್ಜೆ ಇಟ್ಟು ಹೋಗಿದೆ‌. ಒಂದು ವೇಳೆ ಆ ಜೀಬ್ರಾ ಒಂದೆರಡು ಸೆಕೆಂಡ್ ತಡ ಮಾಡಿದ್ದರೂ ಕೂಡಾ ಆ ಮೊಸಳೆಗೆ ಬಾಯಿಗೆ ಖಂಡಿತ ಆಹಾರವಾಗುತ್ತಿತ್ತು. ಆದರೆ ಅದೃಷ್ಟ ಮಾಡಿತ್ತೇನೋ ಅನ್ನೋ ಹಾಗೆ ಜೀಬ್ರಾ ಬಚಾವಾಗಿದೆ. ವಿಚಿತ್ರ ಎಂದರೆ ಅದಕ್ಕೆ ತನ್ನ ಮೇಲೆ ಮೊಸಳೆ ಆಕ್ರಮಣ ಮಾಡಲು ಪಟ್ಟ ಪ್ರಯತ್ನದ ಅರಿವೇ ಇಲ್ಲದೇ ಮುಂದೆ ಹೋಗಿದೆ.

ವಿಡಿಯೋ ನೋಡಿ…

ಸೆಪ್ಟೆಂಬರ್ 12 ರಂದು ಶೇರ್ ಆಗಿರುವ ಈ ವೀಡಿಯೋವನ್ನು 36 ಸಾವಿರಕ್ಕಿಂತ ಅಧಿಕ ಜನರು ಈಗಾಗಲೇ ವೀಕ್ಷಣೆ ಮಾಡಿದ್ದಾರೆ. ವೀಡಿಯೋ ನೋಡಿದವರು ಜೀಬ್ರಾದ ಅದೃಷ್ಟ ಮೆಚ್ಚಿಕೊಂಡಿದ್ದರೆ ಮೊಸಳೆಯ ದುರಾದೃಷ್ಟಕ್ಕೆ ಅಯ್ಯೋ ಪಾಪ ಎಂದಿದ್ದಾರೆ. ಕೆಲವರು ಜೀಬ್ರಾಗೆ ತನ್ನ ಬೆನ್ನ ಹಿಂದೆ ಕೆಲವೇ ಇಂಚುಗಳಲ್ಲಿ ಸಾವು ಇತ್ತು ಎಂಬುದೇ ತಿಳಿದಿರಲಿಲ್ಲ ಎಂದು ಉದ್ಗಾರ ತೆಗೆದಿದ್ದಾರೆ. ಮೊಸಳೆಯ ಪರಿಸ್ಥಿತಿ ನೋಡಿ ಕೆಲವರು ಹಾಸ್ಯ ಮಾಡಿದ್ದಾರೆ ಕೂಡಾ.‌