Viral Video: ತನ್ನಷ್ಟಕ್ಕೆ ತಾನು ಸಮುದ್ರ ದಂಡೆಯಲ್ಲಿ ಸರ್ಫಿಂಗ್ ಮಾಡುತ್ತಿರುವ ವ್ಯಕ್ತಿ; ಅದೇ ಸಮಯಕ್ಕೆ ಬಂದು ಎಂದೂ ಊಹಿಸದ ಶಾಕ್ ಕೊಟ್ಟ ಡಾಲ್ಫಿನ್

ಸಾಗರ ತೀರ ಎಂದರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಅಲ್ವಾ. ದೂರ ದೂರದ ವರೆಗೆ ಕಾಣಿಸೋ ನೀಲ ಸಾಗರ, ಎತ್ತರಕ್ಕೆ ಏರಿ ಬರುವ ಸಾಗರದ ಅಲೆಗಳು, ಬೀಸೋ ಗಾಳಿ, ಅಲಲ್ಲಿ ಮೀನು ಹಿಡಿಯೋರ ದೋಣಿಗಳು ಹೀಗೆ ಸಾಗರದ ದೃಶ್ಯ ನೋಡುಗರ ಮನ ತಣಿಸುವಂತಹ ವಾತಾವರಣದಲ್ಲಿ ಜನ ಮೈಮರೆತು ಬಿಡ್ತಾರೆ. ಬೀಚ್ ಗಳಲ್ಲಿ ಟೈಂ ಪಾಸ್ ಮಾಡೋದು ಅನೇಕರಿಗೆ ಒಂದೊಳ್ಳೆ ಹವ್ಯಾಸ ಕೂಡಾ. ಸಂಜೆ ಮತ್ತು ಮುಂಜಾನೆ ಸಮಯದಲ್ಲಿ ಬಹಳಷ್ಟು ಜನ ಬೀಚ್ ಗಳಲ್ಲಿ ಸಮಯವನ್ನು ಕಳೆಯೋದಕ್ಕೆ, ವಾಕ್ ಮಾಡೋಕೆ, ಜಾಗಿಂಗ್ ಮಾಡೋಕೆ ಹಾಗೂ ಕೆಲವರು ರಿಲ್ಯಾಕ್ಸ್ ಆಗೋಕೆ ಅಂತಾನೇ ಅಲ್ಲಿಗೆ ಬರ್ತಾರೆ. ಸಾಗರ ತೀರಗಳ ಜಾದೂ ಅಂತದ್ದು, ಪ್ರಕೃತಿ ಸೌಂದರ್ಯ ಸವಿಯೋ ಆಸೆ ಇರೋರಿಗೆ ಅದು ಸರಿಯಾದ ಸ್ಥಳ.‌

ವಿದೇಶಗಳಲ್ಲಿ ಬೀಚ್ ಗಳಿಗೆ ಹೋಗೋದು ಒಂದು ಹವ್ಯಾಸದ ಜೊತೆ ಅಲ್ಲಿ ನೀರಿನಲ್ಲಿ ವಿವಿಧ ಬಗೆ ಆಟಗಳು ಹಾಗೂ ವಿವಿಧ ಬಗೆಯ ವಾಟರ್ ರೈಡ್ ಗಳನ್ನು ಮಾಡೋದು ಕೂಡಾ ಒಂದು ಮೋಜು. ಇಲ್ಲಿ ಜನರು ಬೀಚ್ ಗಳಿಗೆ ಬರುವಾಗಲೇ ಮನೆಯಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಬರುತ್ತಾರೆ. ಅವರು ಸಾಗರದ ನೀರಿನಲ್ಲಿ, ಅಲೆಗಳ ಮೇಲೆ ಆಟವನ್ನು ಆಡಲು ಸರ್ಫರ್ ಗಳನ್ನು ಬಳಸಿ ಸಮುದ್ರದ ಅಲೆಗಳ ಮೇಲೆ ಸಾಹಸವನ್ನು ಮಾಡುವುದು ಕೂಡಾ ಉಂಟು. ಅದನ್ನು ನೋಡುವುದೇ ಒಂದು ಅದ್ಭುತ ಎನಿಸಿದರೆ ಆ ಆಟಗಳನ್ನು ಆಡುವವರಿಗೆ ಅದೊಂದು ಸಾಹಸ ಕ್ರೀಡೆ ಕೂಡಾ ಹೌದು.

ಹೀಗೆ ಸರ್ಫರ್ ನಲ್ಲಿ ಸಮುದ್ರದ ಅಲೆಗಳ ಮೇಲೆ ಸಾಹಸದ ಅನುಭವವನ್ನು ಪಡೆಯಲು ಹೋದ ವ್ಯಕ್ತಿಯೊಬ್ಬರಿಗೆ ಅನಿರೀಕ್ಷಿತವಾದ ಹಾಗೂ ಊಹೆ ಮಾಡಲೂ ಕೂಡಾ ಆಗದ ವಿಪರ್ಯಾಸವೊಂದು ಸಾಗರದ ಅಲೆಗಳ ಹಿಂದಿನಿಂದ ಬಂದು ಒಂದು ದೊಡ್ಡ ಶಾ ಕ್ ನೀಡಿರುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ವೀಡಿಯೋವೊಂದನ್ನು ಶೇರ್ ಮಾಡಿದ್ದು, ಅದನ್ನು ನೋಡಿದಾಗ ಒಂದು ಕಡೆ ನಗು ಬಂದರೂ, ಇನ್ನೊಂದು ಕಡೆ ಅದನ್ನು ನೋಡಿದಾಗ ಅರೆ‌ ಇದೇನಾಯ್ತು ಎಂದು ಕೂಡಾ ಅನಿಸಿಬಿಡುತ್ತದೆ.

ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಸರ್ಫರ್ ಮೇಲೆ ನಿಂತು ಸಾಗರದ ಅಲೆಗಳ ಮೇಲೆ ತೇಲುತ್ತಾ ಹೋಗುವಾಗ, ಅವರ ಎದುರಿಗೆ ಬಂದ ಅಲೆಗಳು ಸ್ವಲ್ಪ ಎತ್ತರದಲ್ಲಿ ಬಂದಿದ್ದು, ಅದರೊಳಗೆ ಅವರು ನಿರೀಕ್ಷೆ ಮಾಡದಂತೆ ಡಾಲ್ಫಿನ್ ಒಂದು ಕೂಡಾ‌ ಬಂದಿದೆ. ಬಹುಶಃ ಅದಕ್ಕೂ ಕೂಡಾ‌ ತಾನು ಏರಿದ ಅಲೆಗಳ ಇನ್ನೊಂದು ಬದಿಗೆ ವ್ಯಕ್ತಿಯೊಬ್ಬರು ಸರ್ಫಿಂಗ್ ಮಾಡಲು ಬಂದಿರುವುದು ತಿಳಿದಿಲ್ಲವೋ ಅಥವಾ ಡಾಲ್ಫಿನ್ ಬೇಕಂತಲೇ ಅವರನ್ನು ಬೀಳಿಸಲು ನೆಗೆದಿದೆ ಎನ್ನುವ ಹಾಗೆ ವೀಡಿಯೋದಲ್ಲಿ ಕಾಣುತ್ತದೆ. ಆ ವ್ಯಕ್ತಿಯ ಸರ್ಫ್ ಬೋರ್ಡ್ ಅಲೆಗಳ ಮೇಲೆ ಏರುವ ಸಮಯಕ್ಕೆ ಸರಿಯಾಗಿ ಡಾಲ್ಫಿನ್ ಮೇಲೆ ಜಿಗಿದು ಆ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಅದರ ಹೊಡೆತಕ್ಕೆ ಆ ವ್ಯಕ್ತಿ ಸರ್ಫರ್ ಮೇಲಿನ ತನ್ನ ಹಿಡಿತ ತಪ್ಪಿ ನೀರಿನೊಳಗೆ ಬಿದ್ದಿದ್ದಾರೆ.

ವಿಡಿಯೋ ನೋಡಿ….

ನಿಜಕ್ಕೂ ವೀಡಿಯೋ ನೋಡಿದವರಿಗೆಲ್ಲಾ ಇದೊಂದು ವಿಸ್ಮಯ ಹಾಗೂ ಆಶ್ಚರ್ಯವನ್ನು ಮೂಡಿಸಿದೆ. ಸೆಪ್ಟೆಂಬರ್ 19 ರಂದು ಶೇರ್ ಆಗಿರುವ ಈ ವೀಡಿಯೋ ಹತ್ತು ಸಾವಿರ ವೀಕ್ಷಣೆಯ ಹತ್ತಿರ ಬರುತ್ತಿದೆ. ಸಾವಿರಕ್ಕಿಂತ ಅಧಿಕ ಜನರು ಇಷ್ಟ ಪಟ್ಟಿರುವ ಈ ವೀಡಿಯೋ ನೋಡಿದವರು ಡಾಲ್ಫಿನ್ ಗಳನ್ನು ಇಂತಹ ತುಂಟಾಟಗಳಿಗಾಗಿಯೇ ನಾವು ಇಷ್ಟಪಡುವುದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಡಾಲ್ಫಿನ್ ಮತ್ತೊಮ್ಮೆ ತನ್ನ ದಾರಿಗೆ ಬರಬೇಡ ಎಂದು ಆ ವ್ಯಕ್ತಿಗೆ ವಾರ್ನಿಂಗ್ ನೀಡಿದೆ ಎಂದು ತಮಾಷೆಯನ್ನು ಮಾಡಿದ್ದಾರೆ.