ವಿದ್ಯುತ್ ಪ್ಲಗ್‌ ನ ಪಿನ್‌ ನಲ್ಲಿ ಕಟ್ ಏಕೆ ಇರುತ್ತದೆ ಗೊತ್ತಾ?

ಎಲೆಕ್ಟ್ರಿಕ್ ಪ್ಲಗ್‌ ಗಳ ಪಿನ್ ಮೇಲೆ ಕಟ್ ಇರುವುದನ್ನು ನಾವೆಲ್ಲ ಮಾಮೂಲಾಗಿ ನೋಡಿದ್ದೇವೆ. ಪಿನ್ ಅನ್ನು ಸೀಳಿ ಎರಡು ಭಾಗ ಮಾಡಲಾಗಿರುತ್ತದೆ. ಆದರೆ ಹಾಗೇಕೆ ಎಂದು ನಾವು ಯಾರೂ ಯೋಚಿಸಿರುವುದಿಲ್ಲ, ಅಥವಾ ಆ ಬಗ್ಗೆ ಗಮನ ಹರಿಸಿರುವುದಿಲ್ಲ. ಅದೇನು ಪ್ರಮುಖವಾದ ವಿಷಯವಲ್ಲವಾದ್ದರಿಂದ ಯಾರೂ ತಿಳಿದುಕೊಳ್ಳುವ ಗೋಜಿಗೆ ಹೋಗಿರುವುದಿಲ್ಲ, ಆದರೆ ಸುಮ್ಮನೇ ಸಾಮಾನ್ಯ ಜ್ಞಾನಕ್ಕಾಗಿ ತಿಳಿಯಬೇಕೆನಿಸಿದರೆ, ಓದಿ ಅಥವಾ ಕೆಳಗಿನ ವಿಡಿಯೊ ನೋಡಿ…

ಹೀಗೆ ಕಟ್ ಎಲ್ಲ ಪ್ಲಗ್ ಗಳಲ್ಲಿಯೂ ಇರುತ್ತದಾ ಅಥವಾ ಕೆಲವು ನಿರ್ಧಿಷ್ಟ ಪ್ಲಗ್ ನ ಪಿನ್ ನಲ್ಲಿ ಮಾತ್ರವಾ? ನಿಮ್ಮ ಮನೆಯಲ್ಲಿ ಇರುವ ವಿದ್ಯುತ್ ಪ್ಲಗ್ ಅನ್ನು ನೀವೆಲ್ಲರೂ ನೋಡಿರಬೇಕು. ಕೆಲವು ವಿಭಿನ್ನ ಪ್ಲಗ್‌ ಗಳಿಗೆ ಕಟ್ ಇರುವುದನ್ನು ನೀವು ಗಮನಿಸಿರಬಹುದು. ಮತ್ತು ಕೆಲವು ಪ್ಲಗ್‌ ಗಳಲ್ಲಿ ಹಾಗೆ ಕಟ್ ಮಾಡಿರುವುದಿಲ್ಲ.

ಮೊದಲನೆಯದಾಗಿ, ಈ ಕಟ್ ಗಳು ಹಿತ್ತಾಳೆಯಿಂದ ಮಾಡಿದ ಆ ಪ್ಲಗ್‌ ಗಳಲ್ಲಿ ಇರುತ್ತವೆ. ಅಲ್ಯೂಮಿನಿಯಂನಿಂದ ಮಾಡಿದ ಪ್ಲಗ್‌ ಗಳಿಗೆ ಈ ಕಟ್ ಇರುವುದಿಲ್ಲ. ಹಿತ್ತಾಳೆಯ ಪಿನ್‌ ಗಳು ತುಕ್ಕು ಹಿಡಿಯುವ ಸಾಧ್ಯತೆಯಿರುವುದರಿಂದ ಅವುಗಳ ಮೇಲೆ ನಿಕಲ್ ಪಾಲಿಶ್ ಮಾಡಿ ಕಟ್ ಮಾಡಲಾಗುತ್ತದೆ.

ಅದರ ಮೇಲೆ ನಿಕ್ಕಲ್ ಪದರವನ್ನು ಹಾಕಲಾಗಿರುತ್ತದೆ. ಇದರಿಂದ ಅದು ಸ್ಟೀಲ್ ನಂತೆ ಕಾಣತೊಡಗುತ್ತದೆ. ಹಿತ್ತಾಳೆ ವಿದ್ಯುಚ್ಚಕ್ತಿಯ ಉತ್ತಮ ವಾಹಕ. ಅಂದರೆ ಅದರಲ್ಲಿ ವಿದ್ಯುತ್ ಚೆನ್ನಾಗಿ ಹರಿಯುತ್ತದೆ. ಹಿತ್ತಾಳೆಯ ಪ್ಲಗ್ ಗೆ ಕಟ್ ಮಾಡದೇ ಹೋದರೆ ಅದು ತುಂಬಾ ಬಿಸಿಯಾಗುತ್ತದೆ, ಮತ್ತು ಅಧಿಕ ಬಿಸಿಯಾಗುವುದರಿಂದ ಹಿತ್ತಾಳೆ ಹಿಗ್ಗಲು ಪ್ರಾರಂಭವಾಗುತ್ತದೆ.

ಬಿಸಿಯಾಗುವುದರಿಂದ ಅದರ ಗಾತ್ರ ಬದಲಾಗಬಹುದು. ಆಗ ಸಾಕೀಟ್ ನಲ್ಲಿರುವ ಪ್ಲಾಸ್ಟಿಕ್ ಸುಡಬಹುದು, ಪ್ಲಗ್ ಅಡಿಯಲ್ಲಿರುವ ತಂತಿಯು ಸಹ ಸುಡುತ್ತದೆ, ಬೆಂಕಿ ಕೂಡ ಹತ್ತಬಹುದು. ಹೀಗಾಗಿ ಪ್ಲಗ್ ನ ಪಿನ್ ಗಳನ್ನು ಎರಡು ಭಾಗವಾಗಿ ಕಟ್ ಮಾಡಲಾಗುತ್ತದೆ. ಆಗ ಹೆಚ್ಚು ಬಿಸಿಯಾದರೂ ಏನೂ ಸಮಸ್ಯೆ ಆಗುವುದ್ಇಲ್ಲ.

ಪ್ಲಗ್ ಮೇಲಿನ ಕಟ್ ನಿಂದಾಗಿ ವಿದ್ಯುತ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾದಂತಾಗುತ್ತದೆ. ಇದರಿಂದಾಗಿ ಅದು ಬೇಗನೆ ಬಿಸಿಯಾಗುವುದಿಲ್ಲ, ಹಿಗ್ಗಿದರೂ ಕಟ್ ನಲ್ಲಿ ಖಾಲಿ ಜಾಗ ಇರುವುದರಿಂದ ತೊಂದರೆ ಏನಾಗುವುದಿಲ್ಲ. ಈ ಬಗ್ಗೆ ವಿವರಿಸುವ ವಿಡಿಯೊವೊಂದು ಮೇಲಿದೆ, ಬೇಕಿದ್ದರೆ ನೋಡಿ…
-Team Infotrend