ಕುಳ್ಳಗೆ ಇದ್ದುದರಿಂದ ತಾಯಿ ಕುದುರೆ ಈ ವಿಶ್ವದ ಅತಿ ಚಿಕ್ಕ ಕುದುರೆಯನ್ನು ಬಿಟ್ಟು ಹೋಯಿತು! ಈಗ ಮೂರು ನಾಯಿಗಳ ಸ್ನೇಹ ಸಿಕ್ಕಿದೆ : ವಿಡಿಯೋ ನೋಡಿ
ನೋಟ ಮತ್ತು ಎತ್ತರಕ್ಕೆ ಸಂಬಂಧಿಸಿದಂತೆ ನೀವು ಆಗಾಗ್ಗೆ ಮನುಷ್ಯರ ನಡುವೆ ತಾರತಮ್ಯವನ್ನು ನೋಡಿದ್ದೀರಿ. ಆದರೆ ಪ್ರಾಣಿಗಳು ಸಹ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನೀವು ಯೋಚಿಸಿದ್ದೀರಾ? ವಿಶ್ವದ ಚಿಕ್ಕ ಕುದುರೆಯ ವಿಷಯದಲ್ಲೂ ಅದೇ ಆಗುತ್ತಿದೆ. ಹಾಲು ಕುಡಿಯಲು ತಾಯಿ ಕುದುರೆಯ ಕೆಚ್ಚಲು ಸಹ ತಲುಪಲು ಸಾಧ್ಯವಾಗದ ಕಾರಣ ಅದರ ತಾಯಿ ಅದನ್ನು ತೊರೆದು ಹೋಯಿತು!
ವಿಶ್ವದ ಆ ಅತಿ ಚಿಕ್ಕ ಕುದುರೆ ಈಗ ಮೂರು ನಾಯಿಗಳ ಸ್ನೇಹ ಗಳಿಸಿ ಬಿಂದಾಸಾಗಿದೆ. ಸ್ಯಾನ್ ಡಿಯಾಗೋದಲ್ಲಿ 55 ವರ್ಷದ ಕುದುರೆ ತರಬೇತುದಾರ ಫೇತ್ ಸ್ಮಿತ್ ಈ ಪುಟ್ಟ ಕುದುರೆಯ ನೋವನ್ನು ಅರ್ಥಮಾಡಿಕೊಂಡಿದ್ದಾನೆ ಮತ್ತು ಆರು ವಾರಗಳ ಮರಿಯನ್ನು ಮೂರು ನಾಯಿಗಳೊಂದಿಗೆ ಮನೆಯಲ್ಲಿ ಇಟ್ಟುಕೊಂಡು ಪೀಬಾಡಿ ಎಂದು ಹೆಸರಿಸಿದ್ದಾನೆ.

19 ಪೌಂಡ್ ತೂಕದ ಈ ಕುದುರೆ ಈಗ ಈ ನಾಯಿಗಳೊಂದಿಗೆ ಮಸ್ತಾಗಿ ಬದುಕುತ್ತಿದೆ. “ಇದು ತನ್ನ ವಯಸ್ಸಿನ ಕುದುರೆಗಳಲ್ಲಿ ವಿಶ್ವದ ಅತಿ ಚಿಕ್ಕ ಕುದುರೆಯಾಗಿದೆ” ಎಂದು ಸ್ಮಿತ್ ಹೇಳಿದರು. ಕುದುರೆ ಎಂದೂ ಒಳಾಂಗಣ ಅಥವಾ ಮನೆಯೊಳಗೆ ಸಾಕುವಂತ ಪ್ರಾಣಿಯಲ್ಲ, ಆದರೆ ಪೀಬಾಡಿ ತುಂಬಾ ಚಿಕ್ಕದಾಗಿದ್ದು ಅದು ಸ್ವಲ್ಪ ದೊಡ್ಡದಾಗುವವರೆಗೆ ಹೊರಗೆ ವಾಸಿಸಲು ಸಾಧ್ಯವಿಲ್ಲ ಮತ್ತು ಅದು ದೊಡ್ಡದಾಗುತ್ತದೆ ಎಂದು ನಾವು ವಿಶ್ವಾಸದಿಂದ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಮಿತ್.
ತಾಯಿಯಿಂದ ಬೇರ್ಪಟ್ಟಿದ್ದ ಕುದುರೆ ತುಂಬಾ ದುರ್ಬಲವಾಗಿತ್ತು ಮತ್ತು ಹಾಲು ಸಹ ಕುಡಿಯಲು ಸಹ ಆಗುತ್ತಿರಲಿಲ್ಲ. ಅದಕ್ಕೆ ನಡೆಯಲು ಸಹ ಸಾಧ್ಯವಾಗಲಿಲ್ಲ ಮತ್ತು ಅದು ಕಿವುಡ ಮತ್ತು ಕುರುಡ ಎಂದು ಭಾವಿಸಲಾಗಿತ್ತು. ಈ ಎಲ್ಲಾ ತೊಂದರೆಗಳ ಹೊರತಾಗಿಯೂ ಸ್ಮಿತ್ ಅದನ್ನು ತನ್ನ ಮನೆಗೆ ಕರೆತಂದನು.
ಕೆಲವು ವಾರಗಳ ಆರೈಕೆ ನಂತರ ಅದು ಈಗ ಸಾಮಾನ್ಯವಾಗಿದೆ. ಭವಿಷ್ಯದಲ್ಲಿ ಅದು ಇನ್ನೂ ಸ್ವಲ್ಪ ಬೆಳೆದು ಇತರ ಕುದುರೆಗಳೊಂದಿಗೆ ಬದುಕಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಆರಂಭದಲ್ಲಿ ಅದು ನಾಯಿಗಳೊಂದಿಗೆ ಹೊಂದಿಕೊಳ್ಳಲಿಲ್ಲ, ಆದರೆ ಈಗ ಅವೆಲ್ಲ ಒಳ್ಳೆಯ ಸ್ನೇಹಿತರಾಗಿವೆ. ಸ್ಮಿತ್ ರವರ ಪ್ರೀತಿ ತುಂಬಿದ ಆರೈಕೆಯಲ್ಲಿ ಅವೆಲ್ಲ ತಿಂದುಂಡು ಮಸ್ತಿ ಮಾಡುತ್ತಿವೆ.