VIDEO : ರಾಜ್ಯದ ರಮಣೀಯ ತಾಣ ಯಾಣದ ಅದ್ಭುತ ಡ್ರೋನ್ ವಿಡಿಯೊ ಇಲ್ಲಿದೆ ನೋಡಿ…

ಕರ್ನಾಟಕದ ರಮ್ಯ ತಾಣಗಳಲ್ಲಿ ಯಾಣ ಕೂಡ ಒಂದು. ಉಳಿದೆಲ್ಲ ರಮಣೀಯ ತಾಣಗಳಿಗೆ ಹೋಲಿಸಿದರೆ ಯಾಣ ಒಂಥರಾ ಡಿಫ್ರೆಂಟ್. ಆಕಾಶದೆತ್ತರದ ಆ ಕಲ್ಲುಬಂಡೆಗಳು ನಿಮಗೆ ಮತ್ತೆಲ್ಲೂ ಈಪರಿ ನೋಡಸಿಗುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಈ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿ ಕರ್ನಾಟಕ ಮಾತ್ರವಲ್ಲ ದೇಶದೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಅಲ್ಲಿಯೇ ಹೋಗಿ ನೋಡಲು ಆಗದವರು ಇಲ್ಲಿರುವ ಡ್ರೋಣ್ ಮೂಲಕ ಸೆರೆ ಹಿಡಿಯಲಾಗಿರುವ ವಿಡಿಯೊ ಮೂಲಕ ಕಣ್ತುಂಬಿಕೊಳ್ಳಿ.

ಕುಮಟಾದಿಂದ 35 ಕಿ.ಮೀ, ಶಿರಸಿಯಿಂದ 45 ಕಿ.ಮೀ, ಅಂಕೋಲದಿಂದ 56 ಕಿ.ಮೀ, ಕಾರವಾರದಿಂದ 90 ಕಿ.ಮೀ ದೂರದಲ್ಲಿರುವ ಯಾಣದ ಪ್ರಮುಖ ಆಕರ್ಷಣೆಯೆಂದರೆ, ಕಪ್ಪು ಕಲ್ಲುಗಳಿಂದ ಕೂಡಿದ ಭೈರವೇಶ್ವರ ಮತ್ತು ಮೋಹಿನಿ ಶಿಖರ. ಈ ಎರಡೂ ಶಿಖರಗಳು ತೀರ ಕಡಿದಾದ ವಿಶಿಷ್ಟ ಕಪ್ಪು ಕಲ್ಲುಗಳಿಂದ ಕೂಡಿದೆ. ಇವುಗಳನ್ನು ನೋಡುವುದೇ ಸೊಬಗು.

ಭೈರವೇಶ್ವರ ಶಿಖರವು 390 ಅಡಿ ಎತ್ತರವಿದ್ದರೆ, ಮೋಹಿನಿ ಶಿಖರವು 300 ಅಡಿ ಎತ್ತರವಿದೆ. ಇನ್ನು ಯಾಣದ ಹಿರಿಬಂಡೆ 396 ಅಡಿ ಎತ್ತರವಾದ ಮತ್ತು ಅಷ್ಟೇ ಅಗಲವಾದ ಬೃಹದಾಕಾರದ ಶಿಲೆಯಾಗಿದೆ. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು, ಈ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗೇ ಉದ್ಭವಿಸಿದ (ನೈಸರ್ಗಿಕವಾಗಿ ರಚನೆಯಾದ) ಎರಡು ಮೀಟರ್ ಎತ್ತರದ ಭೈರವೇಶ್ವಲಿಂಗ ಇದೆ.

ವಿಶೇಷವೆಂದರೆ ತಾನಾಗೇ ಮೂಡಿ ನಿಂತಿರುವ ಈ ಲಿಂಗದ ಮೇಲೆ ಸದಾಕಾಲ ಇಂಚು ಗಾತ್ರದ ನೀರು ಮೇಲಿನಿಂದ ಬೀಳುತ್ತಲೇ ಇರುತ್ತದೆ. ಯಾಣದ ಇತಿಹಾಸ ಇಂದು ನಿನ್ನೆಯದಲ್ಲ, ಸ್ಕಂದಪುರಾಣದಲ್ಲಿ ಕೂಡ ಯಾಣದ ಕತೆ ಉಲ್ಲೇಖವಾಗಿದೆ. ಸುಂದರ ಕನ್ಯೆಯ ರೂಪ ತಾಳಿದ್ದ ವಿಷ್ಣುವು ಉರಿಹಸ್ತದ ವರ ಪಡೆದಿದ್ದ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳ ಇದೆಂದು ಪ್ರತೀತಿ.

ಹಾಗೆಯೇ ಶಿವರಾತ್ರಿಯ ದಿವಸ ಇಲ್ಲಿ ಪೂಜೆ ಮಾಡಿ ಇಲ್ಲಿನ ದಂಡಿತೀರ್ಥದ ನೀರನ್ನು ತಗೆದುಕೊಂಡು ಹೋಗಿ ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ಯಾಣದ ಈ ಎರಡು ಬೃಹತ್ ಶಿಲಾ ಶಿಖರಗಳು ಏಕಶಿಲೆಯಿಂದ ಎದ್ದು ನಿಂತಿವೆ. ಇಲ್ಲಿನ ಸುತ್ತಮುತ್ತ ಹಳ್ಳ, ದಿಣ್ಣೆ, ದಟ್ಟವಾದ ಅರಣ್ಯಗಳಿಂದ ಕೂಡಿದ ಪ್ರದೇಶ ಇಲ್ಲಿದೆ.

ಮೊದಲನೆ ನಿಖರವಾದ ಭೈರವೇಶ್ವರ ಶಿಖರದ ಒಂದು ಗುಹೆ ಇದ್ದು, ಈ ಗುಹೆಯಲ್ಲಿ ಚಂಡಿಕಾ ತಾಯಿಯ ಕಂಚಿನ ಮೂರ್ತಿ ಇದೆ. ಈ ಶಿಖರದ ಮತ್ತೂಂದು ತುದಿಯಿಂದ ಹರಿಯುವ ಚಂಡಿಹೊಳೆ ಎಂಬುದು ಉಪ್ಪಿನಪಟಣ್ಣ ಎಂಬ ಹಳ್ಳಿಯಲ್ಲಿ ಅಘನಾಶಿನಿ ನದಿಯನ್ನು ಸೇರುತ್ತದೆ. ಇದಕ್ಕೆ ಗಂಗೋದ್ಬವ ಎಂದು ಕರೆಯುತ್ತಾರೆ. ಇಲ್ಲಿಂದ ಸರಿಯಾಗಿ 12 ಕಿಲೋಮೀಟರ್ ದೂರದಲ್ಲಿ ವಿಭೂತಿ ಪಾಲ್ಸ್ ಇದೆ.

ತಲುಪುವುದು ಹೇಗೆ :
ಯಾಣವನ್ನು N.H 66 ಕುಮಟಾ ಮೂಲಕ ಸಂರ್ಪಕಿಸುತ್ತದೆ, ಶಿರಸಿಯಿಂದ ಬಂದಲ್ಲಿ ಮತ್ತಿ, ವಡ್ಡಿ, ದೇವಿಮನೆ ಘಟ್ಟಗಳ ಮಾರ್ಗವಾಗಿ ಇಲ್ಲಿಗೆ ಬರಬಹುದು. ಗೋಕರ್ಣದಿಂದ ಬರುವುದಾದರೆ ಗೋಕರ್ಣ ಮುಖಾಂತರ ಮಾದನಗೇರಿ, ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು, ಸುಮಾರು 52 ಕಿಲೋಮೀಟರ್ ದೂರವಾಗುವುದು.

ಅಂಕೋಲಾ ದಿಂದ ಕೂಡ ಮಾದನಗೇರಿ, ಅಚವೆ, ಮಾಬಗಿ ಮಾರ್ಗವಾಗಿ ಬರಬಹುದು. ಕಾರವಾರರಿಂದ ಬರುವುದಾದರೆ, ಅಂಕೋಲಾ ಬಂದು ಅಲ್ಲಿಂದ ಮಾಸ್ತಿಕಟ್ಟೆ ಬಳಿ ಹೊಸಕಂಬಿ ಕ್ರಾಸ್ ಕಡೆ ತಿರುಗಿ ಹೊಸಕಂಬಿ, ಅಚವೆ, ಮಾಬಗಿ ಮಾರ್ಗವಾಗಿ ಬರಬಹುದು. ಅಂದಾಜು 90 ಕಿಲೋಮೀಟರ್ ದೂರವಾಗುವುದು.

ಯಾಣ ಹುಬ್ಬಳ್ಳಿಯಿಂದ 142 ಕಿಲೋಮೀಟರ್, ಬೆಂಗಳೂರಿನಿಂದ 410 ಕಿಲೋಮೀಟರ್ ದೂರವಾಗುವುದು. N.H-4 ಶಿರಶಿ ಮುಖಾಂತರ ಇಲ್ಲಿಗೆ ಸಂರ್ಪಕಿಸುತ್ತದೆ. ಅದ್ಯಾಗ್ಗೂ ಯಾಣಕ್ಕೆ ಹೋಗಲು ಒಳ್ಳೆ ಮಾರ್ಗವೆಂದರೆ ಅದು ಕುಮಟಾ ಮತ್ತು ಶಿರಶಿ ಮೂಲಕ. ಆದರೆ ಸಮಸ್ಯೆ ಏನೆಂದರೆ ಈ ರಸ್ತೆಗಳು ಬಹಳ ಕೀರಿದ್ದಾಗಿದು ದಟ್ಟವಾದ ಅರಣ್ಯಗಳಿಂದ ಕೂಡಿವೆ.