ಒಂದು ಕಾಲದಲ್ಲಿ ಉಪವಾಸ ಮಲಗುತ್ತಿದ್ದ ಯುವಕ ಸಧ್ಯ ದೇಶದ ಅತ್ಯಂತ ಕಡಿಮೆ ವಯಸ್ಸಿನ ಐಪಿಎಸ್ ಆಫೀಸರ್
ನಮ್ಮ ದೇಶದ ಅತ್ಯಂತ ಉನ್ನತ ಪರೀಕ್ಷೆ ಎಂದರೆ ಅದು ಭಾರತೀಯ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ. ಅದರಲ್ಲಿ ಉತ್ತೀರ್ಣರಾಗಿ ಐಎಎಸ್, ಐಪಿಎಸ್ – ಐಎಫ್ಎಸ್ ನಂಥ ಉನ್ನತ ಹುದ್ದೆಗಳನ್ನ ಅಲಂಕರಿಸುವುದಕ್ಕಾಗಿ ಸಾಕಷ್ಟು ಜನರು ಕಾಯ್ದು ಕುಳಿತಿರುತ್ತಾರೆ. ಈ ಪರೀಕ್ಷೆ ಪಾಸಾಗುವುದೆಂದರೆ ಅಷ್ಟೇನೂ ಸುಲಭದ ಮಾತಲ್ಲ, ಎಷ್ಟೋ ವರ್ಷಗಳಿಂದ ಕಷ್ಟ ಪಟ್ಟು ತಯಾರಿ ನಡೆಸಿ ಯಶಸ್ಸನ್ನು ಸಾಧಿಸುತ್ತಾರೆ.
ಅದೇ ರೀತಿಯಲ್ಲಿ ಸ್ವಲ್ಪ ಭಿನ್ನ ಎಂದರೂ ಪರವಾಗಿಲ್ಲ ಇಂದು ನಾವು ಹೇಳ ಹೊರಟಿರುವ ಸಾಧಕನ ಕಥೆ ಕೇಳಿದರೆ ನಿಮಗೆಲ್ಲ ಹೆಮ್ಮೆ ಅನಿಸಬಹುದು, ಅವರು ಮಾಡಿದ್ದು ಅಂತಿಂಥ ಸಾಧನೆಯಲ್ಲ, ಅತೀ ಚಿಕ್ಕ ವಯಸ್ಸಿಗೆ ಈ ಪರೀಕ್ಷೆ ಪಾಸು ಮಾಡಿ ಸಧ್ಯ ಐಪಿಎಸ್ ಅಧಿಕಾರಿಯಾಗಿರುವ ಹಸನ್ ಸಫಿನ್ ಎಂಬ ಯುವಕನ ರೋಚಕ ಕಥೆಯನ್ನು ನೋಡೋಣ ಬನ್ನಿ…
ಗುಜರಾತ್ ನ ನಿವಾಸಿಯಾಗಿರುವ ಹಸನ್ ಸಫಿನ್ ಅವರು ವಜ್ರದ ಘಟಕದಲ್ಲಿ ಕಷ್ಟ ಪಟ್ಟು ದುಡಿಯುವ ತಂದೆ ತಾಯಿಯ ಮಗ. 2017 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 570 ನೇ ರ್ಯಾಂಕ್ ನೊಂದಿಗೆ ಉತ್ತೀರ್ಣರಾದವರು. ಅವರಿಗೆ ಕೇವಲ 22 ವರ್ಷ ವಯಸ್ಸಿಗೆ ಐಪಿಎಸ್ ಅಧಿಕಾರಿಯಾಗುವ ಯೋಗ ಒಲಿದು ಬಂದಿದೆ. 2020 ರ ಡಿಸೆಂಬರ್ 23 ರಿಂದ ಇವರು ಐಪಿಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಇವರು ಯು ಪಿ ಎಸ್ ಸಿ ಪರೀಕ್ಷೆ ಪಾಸಾಗುವದರ ಹಿಂದೆ ಒಂದು ರೋಚಕ ಕಥೆ ಅಡಗಿದೆ, ಇವರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಒಂದು ದಿನ ಅವರ ಶಾಲೆಗೆ ಜಿಲ್ಲಾಧಿಕಾರಿಯವರು ಭೇಟಿ ನೀಡಿದ್ದರಂತೆ, ಆ ಸಂದರ್ಭದಲ್ಲಿ ಅವರಿಗೆ ಇರುವ ಭದ್ರತೆ ಹಾಗೂ ಅವರ ಅಧಿಕಾರ ನೋಡಿ ಪ್ರಭಾವಿತರಾದರು.
ಮನೆಗೆ ಬಂದು ಅವರ ಚಿಕ್ಕಪ್ಪನ ಬಳಿ ಜಿಲ್ಲಾಧಿಕಾರಿ ಎಂದರೆ ಯಾರು ಆ ಸ್ಥಾನಕ್ಕೆ ಏನೇನು ಅಧಿಕಾರವಿದೆ ಎಂದು ಕೇಳಿದಾಗ, ಅವರ ಚಿಕ್ಕಪ್ಪ ‘ ಈ ಅಧಿಕಾರ ಪಡೆಯಲು ಚೆನ್ನಾಗಿ ಅಭ್ಯಾಸ ಮಾಡಬೇಕು ಹಾಗೂ ಜಿಲ್ಲಾಧಿಕಾರಿಯು ಒಂದು ಜಿಲ್ಲೆಯ ರಾಜನಾಗಿರುತ್ತಾನೆ ಎಂದು ಹೇಳಿದರಂತೆ.
ಅಂದಿನಿಂದ ಇವರಿಗೆ ಆ ಹುದ್ದೆಯ ಮೇಲೆ ಆಸೆ ಹುಟ್ಟಿತಂತೆ. ಆದರೆ ಕಿತ್ತು ತಿನ್ನುವ ಬಡತನದಲ್ಲಿಯೇ ಒಂದು ಚಿಕ್ಕ ಸೂರು ಮಾಡಿಕೊಳ್ಳುವ ಆಸೆಯಿಂದ ಅವರ ತಂದೆ ತಾಯಿ ಹಗಲಲ್ಲಿ ಕೆಲಸಕ್ಕೆ ಹೋಗುವುದು ರಾತ್ರಿ ವೇಳೆ ಮನೆ ಕಟ್ಟುವ ಕೆಲಸ ನೋಡಿಕೊಳ್ಳುತ್ತಾ ಇದ್ದರು. ವಜ್ರದ ಕಂಪನಿಯಲ್ಲಿನ ಕೆಲಸಕ್ಕೆ ಹಾಜರಾಗುವುದು ಕೆಲವೊಮ್ಮೆ ತಪ್ಪಿದಾಗ ಅವರ ತಂದೆ ತಾಯಿ ಇಬ್ಬರೂ ಕೆಲಸ ಕಳೆದುಕೊಂಡರು.

ನಂತರ ಅವರ ತಂದೆ ಮನೆ ನಡೆಸುವುದಕ್ಕಾಗಿ ಎಲೆಕ್ಟ್ರಿಕಲ್ ಕೆಲಸ ಮತ್ತು ಸಂಜೆ ವೇಳೆ ಕುದಿಸಿದ ಮೊಟ್ಟೆ ಹಾಗೂ ಬ್ಲಾಕ್ ಟೀ ಮಾರಾಟ ಮಾಡಲು ಶುರು ಮಾಡಿದರು. ಇನ್ನೂ ಅವರ ತಾಯಿ ಮನೆ ಮನೆಗೆ ತೆರಳಿ ರೋಟಿ ಮಾಡಿ ಕೊಡಲು ಶುರು ಮಾಡಿದರು. ತಂದೆ ತಾಯಿ ಇಷ್ಟೆಲ್ಲ ಕಷ್ಟ ಪಡುತ್ತಿರುವುದನ್ನು ಗಮನಿಸಿದ ಹಸನ್ ತಂದೆ ತಾಯಿಗಾಗಿ ಏನಾದರೂ ಒಳ್ಳೆಯದು ಮಾಡಲೇಬೇಕು ಎಂಬ ಹಠಕ್ಕೆ ಬಿದ್ದು ಮತ್ತಷ್ಟು ಓದತೊಡಗಿದರು.
ಪ್ರಾಥಮಿಕ ಶಿಕ್ಷಣ ಗುಜರಾತಿ ಭಾಷೆಯಲ್ಲಿ ಮುಗಿದರೆ, ಪ್ರೌಢ ಶಾಲೆಯ ಹತ್ತನೇ ತರಗತಿಯಲ್ಲಿ 92 ಪ್ರತಿಶತ ಅಂಕ ಪಡೆದಿದ್ದರು. ಮುಂದಿನ ಶಿಕ್ಷಣಕ್ಕಾಗಿ ಹಾಸ್ಟೆಲ್ ನಲ್ಲಿ ಇರಬೇಕಾಗಿ ಬಂದಾಗ ಇವರು ತಮ್ಮ ಹಾಸ್ಟೆಲ್ ಖರ್ಚು ನಿಭಾಯಿಸಿಕೊಳ್ಳಲು ತಮ್ಮ ಕಾಲೇಜು ರಜೆ ಇದ್ದಾಗ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು.
ಹೀಗೆ ಕಷ್ಟ ಪಟ್ಟು ಪದವಿ ಮುಗಿಸಿ ಯು ಪಿ ಎಸ್ ಸಿ ಪರೀಕ್ಷೆ ಬರೆಯುವ ವೇಳೆ ರಸ್ತೆ ಅಪಘಾತವಾಗಿತ್ತಂತೆ, ಆದರೂ ಸಹ ಹೆದರದೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ದೇಶದ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆಯುವುದಲ್ಲದೇ, ಅವರ ತಂದೆ ತಾಯಿಗೆ ಗೌರವವನ್ನೂ ಸಹ ತಂದುಕೊಟ್ಟಿದ್ದಾರೆ.
-ಮಂಜುನಾಥ್