ಅದ್ಬುತ ಸಂದೇಶ ನೀಡಿದ ವೈರಲ್ ವೀಡಿಯೋ: ಪ್ರಾಣಿಗಳ ಈ ಗುಣ ನಮ್ಮಲ್ಲೇಕೆ ಇಲ್ಲ ಎಂದ ನೆಟ್ಟಿಗರು

ನಾವು ಮುಂದೆ ನಡೆದು ನಮ್ಮ ಜೊತೆಗೆ ಇರುವವರನ್ನು ಕೂಡಾ ಮುಂದೆ ನಡೆಸಬೇಕು, ಅವರಿಗೆ ಜೊತೆಯಾಗಿರಬೇಕು, ಅವರನ್ನು ಕೂಡಾ ನಮ್ಮೊಟ್ಟಿಗೆ ಕರೆದೊಯ್ಯುವ ಹಾಗೆ ಮಾಡಬೇಕು. ಅದೇ ಸಹಕಾರ, ಅದೇ ಸಾಮರಸ್ಯದ ಬದುಕು ಎಂದೆಲ್ಲಾ ಹೇಳುವುದನ್ನು ನಾವೆಲ್ಲಾ ಕೂಡಾ ಕೇಳಿಯೇ ಇದ್ದೇನೆ. ಭಾಷಣಗಳಲ್ಲಿ, ಪುಸ್ತಕಗಳಲ್ಲಿ ಅಥವಾ ಇನ್ನೆಲ್ಲೋ ಎಲ್ಲೋ ಪ್ರವಚನದಲ್ಲಿ ನಾವು ಕೇಳಿರುತ್ತೇವೆ. ಅಲ್ಲದೇ ಇದನ್ನು ಜೀವನದಲ್ಲಿ ಪಾಲಿಸಿದರೆ ಎಲ್ಲರೂ ಸುಖ, ಶಾಂತಿ ಹಾಗೂ ನೆಮ್ಮದಿಗಳಿಂದ ಜೀವನವನ್ನು ನಡೆಸಬಹುದು ಎನ್ನಲಾಗಿದೆ. ಆದರೆ ಇದೆಲ್ಲವೂ ಕೂಡಾ ಕೇವಲ ಭಾಷಣ ಹಾಗೂ ಅಕ್ಷರಗಳಿಗೆ ಮೀಸಲಾಗಿದೆಯೇ ಹೊರತು ಇದರ ಪಾಲನೆಯನ್ನು ನಾವು ನೋಡಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ ನಮ್ಮ‌ ಸುತ್ತ ಮುತ್ತಲಿನ ಪರಿಸರದಲ್ಲಿ.

ಆದರೆ ಇಂತಹ ಸಾಮರಸ್ಯ ಹಾಗೂ ಸಹಕಾರದ ತತ್ವವು ಮಾನವರಲ್ಲಿ ಮರೆಯಾಗುವಾಗಲೇ ಅದು ಪ್ರಾಣಿಗಳಲ್ಲಿ ಕಂಡು ಬಂದರೆ ನಿಜಕ್ಕೂ ಅದು ಅಚ್ಚರಿ ಎನಿಸದೇ ಇರಲಾರದು ಹಾಗೂ ಅದನ್ನು ನೋಡಿದಾಗ ಅರೆ ನಮ್ಮಲ್ಲೇಕೆ ಈ ಮೌಲ್ಯಗಳು ದಿನೇ ದಿನೇ ಕಣ್ಮರೆಯಾಗುತ್ತಿದೆ ಎನ್ನುವ ಒಂದು ಆಲೋಚನೆ ಕೂಡಾ ಮೂಡದೇ ಇರದು. ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಒಂದು ಅದ್ಭುತವಾದ ಸಂದೇಶವನ್ನು ನೀಡುವಂತಹ ವೀಡಿಯೋ ಒಂದು ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿರುವುದು ಮಾತ್ರವೇ ಅಲ್ಲದೇ ಅದು ಎಲ್ಲರಿಗೂ ಒಂದು ಅತ್ಯುತ್ತಮ ಎನಿಸುವ ಸಂದೇಶವನ್ನು ಕೂಡಾ ನೀಡುತ್ತಿದೆ ಎನ್ನಬಹುದು.

ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ವೀಡಿಯೋದಲ್ಲಿ ಮೂರು ನಾಲ್ಕು ಬೆಕ್ಕುಗಳ ಒಂದು ಗುಂಪು ಯಾವುದೋ ಕಟ್ಟಡದ ಮೇಲಕ್ಕೆ ಹತ್ತಿ ಎಲ್ಲೋ ಹೋಗಲು ಹೊರಟಿವೆ. ಇದರಲ್ಲಿ ಮೂರು ಬೆಕ್ಕುಗಳು ದೊಡ್ಡವು, ಒಂದು ಚಿಕ್ಕ ಬೆಕ್ಕು. ದೊಡ್ಡ ಬೆಕ್ಕುಗಳು ಮೂರೂ ಕೂಡಾ ಮೆಟ್ಟಿಲೇರಿ ,ಅಲ್ಲಿಂದ ಒಂದು ಎತ್ತರದ ಕಟ್ಟೆಯ ಮೇಲೆ ಎಗರಿ ಕುಳಿತಿವೆ. ಆದರೆ ಸಣ್ಣ ಬೆಕ್ಕಿನ ಮರಿ ಹಿಂದೆ ನಿಧಾನವಾಗಿ ಬರುತ್ತಿದ್ದು, ಅದರ ಕೈಲಿ ಹಾಗೆ ಮೇಲೇರಿ ಬರುವುದು ಸಾಧ್ಯವಿರಲಿಲ್ಲ. ಆದರೆ ಬೆಕ್ಕುಗಳು ಆ ಮರಿಯನ್ನು ಅಲ್ಲಿಂದ ಬಿಟ್ಟು ಹೋಗಲು ಸಿದ್ಧ ಕೂಡಾ ಇಲ್ಲ. ಆಗ ಒಂದು ಬೆಕ್ಕು ತಾನು ಕುಳಿತಿದ್ದ ಕಡೆಯಿಂದ ಇಳಿದು ಬಂದು ಆ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡಿದೆ.

ಮರಿಯನ್ನು ಬಾಯಲ್ಲಿ ಹಿಡಿದು ಕಟ್ಟೆಯ ಮೇಲೆ ಎಗರಿದೆ ಆದರೆ ಅನಿರೀಕ್ಷಿತವಾಗಿ ಮರಿ ಮತ್ತೆ ಕೆಳಗೆ ಬಿದ್ದು ಮೆಟ್ಟಿಲುಗಳ ಮೇಲೆ ಉರುಳಿದೆ. ಆಗ ದೊಡ್ಡ ಬೆಕ್ಕು ಓಡಿ ಹೋಗಿ ಮತ್ತೆ ಅದನ್ನು ಕಚ್ಚಿಕೊಂಡು ಬಂದು, ಈ ಬಾರಿ ಸರಿಯಾಗಿ ಗುರಿ ನೋಡಿ, ಮರಿ ಬೆಕ್ಕು ಮತ್ತೊಮ್ಮೆ ಕೆಳಗೆ ಬೀಳದಂತೆ ಗಟ್ಟಿಯಾಗಿ ಕಚ್ಚಿಕೊಂಡು ಮೇಲಕ್ಕೆ ಎಗರಿದೆ. ಅನಂತರ ನಾಲ್ಕು ಬೆಕ್ಕುಗಳು ಕೂಡಾ ಅಲ್ಲಿಂದ ನಡೆದು ಮುಂದೆ ಸಾಗಿವೆ. ನಿಜಕ್ಕೂ ವೀಡಿಯೋ ನೋಡಿದಾಗ ಹೀಗೆ ನಮ್ಮಲ್ಲೂ ಹೊಂದಾಣಿಕೆ ಇದ್ದರೆ ಸಮಸ್ಯೆಗಳಿಗೆ ಜಾಗವೇ ಇರುವುದಿಲ್ಲವೇನೋ ಎಂದು ಒಮ್ಮೆ ನಮಗೆ ಅನಿಸದೇ ಇರದು. ವೀಡಿಯೋ ನೋಡಲು ಬಹಳ ಆಸಕ್ತಿಕರವಾಗಿದೆ.

ವಿಡಿಯೋ ನೋಡಿ

ಟ್ವಿಟರ್ ನಲ್ಲಿ ಈಗಾಗಲೇ ಈ ವೀಡಿಯೋವನ್ನು 2 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದರೆ, 9 ಸಾವಿರಕ್ಕಿಂತ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ವೀಡಿಯೋವನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ ಕೂಡಾ. ಇನ್ನು ಕಾಮೆಂಟ್ ಗಳು ಕೂಡಾ ಸಾಕಷ್ಟು ಹರಿದು ಬರುತ್ತಿವೆ. ನೆಟ್ಟಿಗರೊಬ್ಬರು ಮನುಷ್ಯರಿಗೆ ನಾ ಚಿ ಕೆ ಯಾಗಬೇಕು, ಈ ರೀತಿ ಒಬ್ಬರ ಮೇಲೊಬ್ಬರು ಕಾಳಜಿ ತೋರುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.ಪ್ರಾಣಿಗಳು ತಾವೇಕೆ ಮುಗ್ಧ ಮತ್ತು ಸ್ಪಷ್ಟ ಎಂಬುದನ್ನು ತೋರಿಸುವ ವೀಡಿಯೋ ಇದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಮಾಡುವ ಪ್ರಯತ್ನವನ್ನು ಎಂದಿಗೂ ಬಿಡಬಾರದು ಎಂದು ಹೇಳಿದ್ದಾರೆ.