ಅಪ್ಪ ಬೈದರೆಂದು 12 ನೇ ವಯಸ್ಸಿಗೆ ಮನೆ ಬಿಟ್ಟು ಹೋದ ಮಗ, 14 ವರ್ಷಗಳ ನಂತರ ‘ಇಷ್ಟೊಂದು’ ಶ್ರೀಮಂತನಾಗಿ ಮರಳಿ ಬಂದ!
ಸಣ್ಣ ವಯಸ್ಸಿನಲ್ಲಿ ಮನೆಯಲ್ಲಿ ತಂದೆ ಅಥವಾ ತಾಯಿ ಇಲ್ಲವೇ ಇನ್ನಾರೋ ಹಿರಿಯರು ಬೈದರೆಂದು ಸಿಟ್ಟಿನಿಂದ ಮನೆ ಬಿಟ್ಟು ಹೋಗುವ ಮಕ್ಕಳು, ಸುಮಾರು ಹದಿನೈದು, ಇಪ್ಪತ್ತು ವರ್ಷಗಳು ಕಳೆದ ಮೇಲೆ ಶ್ರೀಮಂತರಾಗಿ ತಮ್ಮ ಮನೆಗೆ ವಾಪಸ್ಸು ಬರುವುದು ಹಾಗೂ ಮನೆಯವರೆಲ್ಲಾ ಅದನ್ನು ನೋಡಿ ಖುಷಿಪಡುವುದು, ಇಂತಹ ಸನ್ನಿವೇಶಗಳನ್ನು ಸಾಮಾನ್ಯವಾಗಿ ನಾವು ಸಿನಿಮಾಗಳಲ್ಲಿ ಅಥವಾ ಧಾರವಾಹಿಗಳಲ್ಲಿ ನೋಡಿರುತ್ತೇವೆ. ಇಂತಹ ಕಥೆಗಳು ಘಟನೆಗಳು ಜನರ ಮೆಚ್ಚುಗೆಯನ್ನು ಪಡೆಯುತ್ತವೆ. ಆದರೆ ನಿಜ ಜೀವನದಲ್ಲಿ ಇಂತಹ ಘಟನೆಗಳೆಲ್ಲಾ ನಡೆಯೋದಿಲ್ಲ ಎಂದೇ ನಾವು ಭಾವಿಸುತ್ತೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ಅಕ್ಷರಶಃ ಇಂತಹದೊಂದು ಉದಾಹರಣೆಯು ವಾಸ್ತವ ಜೀವನದಲ್ಲಿ ನಡೆದಿದೆ. ಅಪ್ಪ ಬೈದರೆಂದು 12ವರ್ಷದ ವಯಸ್ಸಿನಲ್ಲಿ ಮನೆ ಬಿಟ್ಟು ಹೋದ ಬಾಲಕನೊಬ್ಬ ಬರೋಬ್ಬರಿ 14 ವರ್ಷಗಳ ಒಬ್ಬ ಜವಾಬ್ದಾರಿಯುತ ಯುವಕನಾಗಿ ತನ್ನ ಮನೆಗೆ ವಾಪಸಾಗಿರುವ ವಿಶೇಷವಾದ ಘಟನೆ ನಡೆದಿದೆ.
ಉತ್ತರಪ್ರದೇಶದ ಹರ್ದೊಯಿ ಎನ್ನುವ ಗ್ರಾಮದ ನಿವಾಸಿ ಬಾಲಕ ರಿಂಕು. ಇವನಿಗೆ ಓದುವುದರಲ್ಲಿ ಆಸಕ್ತಿ ಇರಲಿಲ್ಲ. ಆಟ ಆಡುವುದರಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದನು. ಇದನ್ನು ಕಂಡು ಒಂದು ದಿನ ರಿಂಕುವಿನ ತಂದೆ ಮಗನನ್ನು ಚೆನ್ನಾಗಿ ಬೈದಿದ್ದಾರೆ. ಇನ್ನಾದರೂ ಓದಿನ ಕಡೆ ಗಮನ ಹರಿಸುವಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಆ ವಯಸ್ಸಿನಲ್ಲಿ ತಂದೆ ತನ್ನ ಭವಿಷ್ಯದ ದೃಷ್ಟಿಯಿಂದ ಆ ಮಾತನ್ನು ಹೇಳಿದ್ದಾರೆ ಎನ್ನುವುದು ಅರ್ಥವಾಗದ ಬಾಲಕ, ತಂದೆ ಬೈದಿದ್ದಕ್ಕೆ ಸಿ ಟ್ಟು ಮಾಡಿಕೊಂಡು ಮನೆಯನ್ನು ಬಿಟ್ಟು ಹೊರ ಬಂದಿದ್ದಾನೆ. ಮನೆಯಿಂದ ಹೊರ ಬಂದವನು ರೈಲು ಹತ್ತಿ ಲುಧಿಯಾನಾ ತಲುಪಿದ್ದಾನೆ. ರಿಂಕು ಮನೆಯಿಂದ ಕಾಣೆಯಾದ ಮೇಲೆ ಆತನ ತಂದೆ-ತಾಯಿ ಹಾಗೂ ಕುಟುಂಬದವರು ರಿಂಕುವಿಗಾಗಿ ಬಹಳಷ್ಟು ಹುಡುಕಾಡಿದ್ದಾರೆ. ದಿನಗಳು, ತಿಂಗಳುಗಳು, ವರ್ಷಗಳ ಕಾಲ ಹುಡುಕಾಡಿದ ನಂತರ ಇನ್ನು ತಮ್ಮ ಮಗ ಸಿಗುವುದಿಲ್ಲವೆಂದು ನಿರಾಶೆಯಿಂದ ಸುಮ್ಮನಾಗಿ ಬಿಟ್ಟಿದ್ದಾರೆ.

ಇನ್ನೊಂದು ಕಡೆ ಮನೆ ಬಿಟ್ಟು ಓಡಿ ಹೋದ ರಿಂಕು ಪಂಜಾಬ್ ನಾನು ಲುಧಿಯಾನ ತಲುಪಿದ್ದಾನೆ. ಅಲ್ಲಿ ದೇವರ ದಯೆ ಎನ್ನುವಂತೆ ಆತನಿಗೆ ಒಬ್ಬ ಸರ್ದಾರ್ಜಿ ಯವರ ಪರಿಚಯವಾಗಿದೆ. ಅವರು ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಮಾಡುತ್ತಿದ್ದರು ಎನ್ನಲಾಗಿದ್ದು, ರಿಂಕು ಅವರ ಬಳಿಯೇ ಕೆಲಸವನ್ನು ಆರಂಭಿಸಿದ್ದಾನೆ. ಹಾಗೆ ಅಲ್ಲೇ ಬೆಳೆದ ರಿಂಕು ತನ್ನ ಹೆಸರನ್ನು ಹರಿಪ್ರೀತ್ ಸಿಂಗ್ ಎಂದು ಬದಲಾವಣೆ ಮಾಡಿಕೊಂಡಿದ್ದಾನೆ. ಸರ್ದಾರ್ಜಿ ಅವರ ಜೊತೆಯಲ್ಲಿ ಕೆಲಸ ಮಾಡುತ್ತಲೇ ಟ್ರಕ್ ಚಾಲನೆಯನ್ನು ಕಲಿತು ಟ್ರಕ್ ಡ್ರೈವರ್ ಆಗಿ ಕೆಲಸವನ್ನು ಆರಂಭಿಸಿದ ಹರಿಪ್ರೀತ್ ಮುಂದೊಂದು ದಿನ ತನ್ನ ಪರಿಶ್ರಮದಿಂದ ಟ್ರಕ್ಕುಗಳ ಮಾಲೀಕನಾಗಿ ಬೆಳೆದಿದ್ದಾನೆ. ಹೀಗೆ ಆತನ ಜೀವನದಲ್ಲಿ ಆತ ಸ್ಥಿರನಾದ ಮೇಲೆ ಒಂದು ಘಟನೆ ನಡೆಯುತ್ತದೆ.
ಒಮ್ಮೆ ಹರಿ ಪ್ರೀತ್ ಸಿಂಗ್ ಮಾಲೀಕತ್ವದ ಟ್ರಕ್ ಒಂದಕ್ಕೆ ಧನಬಾದ್ ನ ಬಳಿ ಅ ಪ ಘಾ ತ ಸಂಭವಿಸುತ್ತದೆ. ಆಗ ಈ ವಿಚಾರವಾಗಿ ಹರಿಪ್ರೀತ್ ಸಿಂಗ್ ಲೂಧಿಯಾನಾ ದಿಂದ ಧನ್ ಬಾದ್ ಗೆ ಹೋಗಬೇಕಾಗುತ್ತದೆ. ಹರಿಪ್ರೀತ್ ತನ್ನ ಕಾರಿನಲ್ಲಿ ಧನ್ ಬಾಗ್ ಗೆ ಹೋಗುವಾಗ ದಾರಿಯಲ್ಲಿ ತನ್ನ ಗ್ರಾಮ ಹರ್ದೋಯಿ ಮೂಲಕ ಪ್ರಯಾಣ ಮಾಡಬೇಕಾಗಿ ಬರುತ್ತದೆ. ಹರ್ದೋಯಿ ಬಳಿ ಬಂದ ಕೂಡಲೇ ಆತನಿಗೆ ತಾನು ಹುಟ್ಟಿ ಬೆಳೆದ ಗ್ರಾಮದ ನೆನಪಾಗಿದೆ. ಕೂಡಲೇ ತನ್ನ ಕಾರನ್ನು ನಿಲ್ಲಿಸಿದ್ದಾನೆ. ತನ್ನ ತಂದೆ ತಾಯಿಯ ಹೆಸರನ್ನು ಮರೆತಿದ್ದ, ಅವನಿಗೆ ನೆನಪಿದ್ದುದ್ದು ತಮ್ಮ ಮನೆಯ ಪಕ್ಕದಲ್ಲಿ ಇದ್ದಂತಹ ಒಬ್ಬ ವ್ಯಕ್ತಿಯ ಹೆಸರು ಮಾತ್ರ.

ಆ ಹೆಸರನ್ನ ಕೇಳಿ ಕೊಂಡು ಅವರ ಮನೆಯನ್ನು ತಲುಪಿದ್ದಾನೆ ಹರಿಪ್ರೀತ್ ಅಥವಾ ರಿಂಕು. ಆ ವ್ಯಕ್ತಿಯು ಬೆಳೆದು ದೊಡ್ಡವನಾಗಿ ಹದಿನಾಲ್ಕು ವರ್ಷಗಳ ನಂತರ ಊರಿಗೆ ಮರಳಿದ ರಿಂಕು ವನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ. ತಡ ಮಾಡದೇ ಆತನನ್ನು ಅವನ ತಂದೆ ತಾಯಿಯ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ವರ್ಷಗಳ ನಂತರ ಬಂದ ಮಗ ರಿಂಕುವನ್ನು ನೋಡಿದ ಅವರ ತಾಯಿ ಸೀತಾ ಮಗನನ್ನು ನೋಡಿದ ಕೂಡಲೇ ಗುರುತಿಸಿದ್ದಾರೆ. ತಂದೆ ಸೂರಜ್ ಅವರು ಮಗನನ್ನು ಕಂಡು ಬಹಳ ಸಂತೋಷ ಪಟ್ಟಿದ್ದಾರೆ. ಬಾಲ್ಯದಲ್ಲಿ ಮನೆ ಬಿಟ್ಟು ಹೋದ ಮಗ ಇನ್ನು ಜೀವನದಲ್ಲಿ ಸಿಗುವುದಿಲ್ಲ ಎಂದುಕೊಂಡಿದ್ದ ತಂದೆ-ತಾಯಿಗೆ ಮಗ ಬೆಳೆದು ದೊಡ್ಡವನಾಗಿ ಉತ್ತಮ ಜೀವನವನ್ನು ರೂಪಿಸಿಕೊಂಡಿರುವುದನ್ನು ನೋಡಿ ಬಹಳಷ್ಟು ಸಂತೋಷವಾಗಿದೆ.

ಹರಿ ಪ್ರೀತ್ ಗೆ ಕೂಡಾ ಹದಿನಾಲ್ಕು ವರ್ಷಗಳ ನಂತರ ಮತ್ತೆ ತನ್ನ ಕುಟುಂಬಕ್ಕೆ ಮರಳಿ ಬಂದಿರುವ ವಿಚಾರವಾಗಿ ಬಹಳ ಸಂತೋಷವಾಗಿದೆ. ಅವರು ಮಾದ್ಯಮವೊಂದರ ಮಾತನಾಡುತ್ತಾ ವರ್ಷಗಳ ನಂತರ ಮನೆಗೆ ವಾಪಸಾಗಿದ್ದು ಖುಷಿಯನ್ನು ನೀಡಿದೆ. ತಂದೆ ತಾಯಿಯನ್ನು ಮತ್ತೆ ನೋಡಿ ಬಹಳ ಸಂತೋಷವಾಗುತ್ತಿದೆ. ಇನ್ನು ನನ್ನ ಮುಂದಿನ ಜೀವನಕ್ಕೆ ತನ್ನ ತಂದೆ ತಾಯಿಯ ಆಶೀರ್ವಾದ ಬೇಕು. ಇನ್ನುಳಿದಿದ್ದು ಆ ಭಗವಂತನ ಇಚ್ಛೆ ಹೇಗಿದೆಯೋ ಹಾಗೇ ನಡೆಯಲಿ ಎಂದು ಹೇಳಿದ್ದಾರೆ. ಸಿನಿಮಾ, ಸೀರಿಯಲ್ ಗಳಲ್ಲಿ ನೋಡುವಂತಹ ಅಪರೂಪದ ಘಟನೆ ಕಂಡು ಗ್ರಾಮದ ಜನರು ಕೂಡಾ ಖುಷಿ ಪಟ್ಟಿದ್ದಾರೆ.