ಆಪರೇಷನ್ ಗೆ ನಗುನಗುತ್ತಲೇ ಹೋದ ಮಗು ಮರಳಿ ಬರಲೇ ಇಲ್ಲ: ಆಟಿಕೆಯಲ್ಲಿನ ಮ್ಯಾಗ್ನೆಟ್ ನುಂಗಿದ್ದ ಬಾಲಕ
ಚಿಕ್ಕ ಮಕ್ಕಳು ಆಟ ಆಡುತ್ತಿರುವಾಗ ಏನಾದರೂ ಒಂದು ವಸ್ತುವನ್ನು ನುಂಗುವದು ಸಹಜ. ಇಂಥ ಘಟನೆಗಳನ್ನು ದಿನನಿತ್ಯ ಎಷ್ಟೋ ಕೇಳುತ್ತೇವೆ. ಇಂಥ ಘಟನೆಗಳಲ್ಲಿ ಮಕ್ಕಳಿಗೆ ಮೃತ್ಯು ಸಂಭವಿಸಿದ ಬಗ್ಗೆ ತೀರಾ ಕಡಿಮೆಯೇ ಕೇಳಿದ್ದೇವೆ. ಆದರೆ ಮಧ್ಯಪ್ರದೇಶದಲ್ಲಿಯ ಇಂದೋರ್ ನಲ್ಲಿ ಕಬೀರ್ ತಿವಾರಿ ಹೆಸರಿನ ಮೂರು ವರ್ಷದ ಮಗುವಿನ ಮೃತ್ಯು ಆಪರೇಷನ್ ನಂತರ ಆಗಿದೆ. ಇದಕ್ಕೆ ಡಾಕ್ಟರ್ಸ್ ಗಳ ನಿರ್ಲಕ್ಷತೆ ಕಾರಣವಾಗಿದೆ ಎಂದು ತಿವಾರಿ ಕುಟುಂಬದವರು ಆಸ್ಪತ್ರೆ ವಿರುದ್ಧ ಪೊಲೀಸರಲ್ಲಿ ತಕರಾರು ದಾಖಲಿಸಿದ್ದಾರೆ.
ತಿವಾರಿ ಕುಟುಂಬದವರಿಗೆ ಕಬೀರ ಹೆಸರಿನ ಒಂದೇ ಒಂದು ಮಗುವಿತ್ತು. ಮೂರು ವರ್ಷದ ಕಬೀರ್ ಜುಲೈ 29 ರಂದು ಆಟಿಗೆ ಸಾಮಾನಿನಲ್ಲಿ ಇರುವ ಮ್ಯಾಗ್ನೆಟ್ ನುಂಗಿದ್ದಾನೆ. ಮಗುವಿಗೆ ತಕ್ಷಣ ಅರಿಹಂತ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆ ಸಂದರ್ಭದಲ್ಲಿ ಮಗುವಿಗೆ ಶೀತ ಇರುವುದರಿಂದ ಶಸ್ತ್ರಕ್ರಿಯೆ ಮುಂದೂಡಲಾಯಿತು. 12 ದಿವಸಗಳ ನಂತರ ಆಗಸ್ಟ್ 9ರಂದು ಎಂಡೋಸ್ಕೋಪಿ ಮಾಡಿ ನಂತರ ಶಸ್ತ್ರಕ್ರಿಯೆ ಮಾಡಿದರು. ಸುಮಾರು ಒಂದು ಗಂಟೆಯ ಪ್ರಯತ್ನದ ನಂತರ ಗಂಟಲಲ್ಲಿ ಸಿಕ್ಕಿದ ಮ್ಯಾಗ್ನೆಟ್ ತೆಗೆಯಲಾಯಿತು. ನಂತರ ಕಬೀರನಿಗೆ ಐಸಿಯುನಲ್ಲಿ ದಾಖಲಿಸಲಾಯಿತು.
ಶಸ್ತ್ರಕ್ರಿಯೆಯ ಅರ್ಧಗಂಟೆ ನಂತರ ಕಬೀರ್ ನಿಗೆ ಪ್ರಜ್ಞೆ ಮರಳುತ್ತದೆ ಎಂದು ಡಾಕ್ಟರ್ ಹೇಳಿದರು. ಆದರೆ ಒಂದು ಗಂಟೆಯಾದರೂ ಪ್ರಜ್ಞೆ ಬರದ ಕಾರಣ ಇನ್ನೂ ಮೂರರಿಂದ ನಾಲ್ಕು ಗಂಟೆಗಳು ತಗಲುವದೆಂದು ಡಾಕ್ಟರ್ ಹೇಳಿದರು. ಇದನ್ನು ಕೇಳಿದ ನಂತರ ಕಬೀರನ ತಾಯಿ ಮಗುವನ್ನು ಸ್ಪರ್ಶಿಸಿ ನೋಡಿದಾಗ ಕಬೀರನ ದೇಹವು ತಂಪಾಗಿತ್ತು. ಇದನ್ನು ಗಮನಿಸಿದ ತಾಯಿ ಮತ್ತೆ ಡಾಕ್ಟರ್ ಗೆ ಕರೆದು ಹೇಳಿದಾಗ ಡಾಕ್ಟರ್ ನು ‘ನೀವು ಗಾಬರಿ ಪಡಬೇಡಿ ಮಗುವಿಗೆ ಸ್ವಲ್ಪ ಸಮಯದ ನಂತರ ಪ್ರಜ್ಞೆ ಬರುತ್ತದೆ’ ಎಂದು ಹೇಳಿದರು. ಸಾಕಷ್ಟು ಸಮಯ ತಾಗಿದರೂ ಮಗುವಿಗೆ ಪ್ರಜ್ಞೆ ಬರಲೇ ಇಲ್ಲ. ಆಮೇಲೆ ಡಾಕ್ಟರ್ ಮಗು ತಿರಿಕೊಂಡಿದೆ ಎಂದು ಹೇಳಿದರು. ಕಬೀರನ ಕುಟುಂಬದವರು ಡಾಕ್ಟರ್ಗೆ ಮೃತ್ಯುವಿನ ಕಾರಣ ಕೇಳಿದಾಗ ಡಾಕ್ಟರ್ ಯಾವುದೇ ರೀತಿಯ ಸರಿಯಾದ ಸಮರ್ಪಕ ಉತ್ತರ ನೀಡಲಿಲ್ಲ. ಈ ರೀತಿ ಮೊದಲಬಾರಿಗೆ ಘಟಿಸಿದೆ ಎಂದಷ್ಟೇ ಹೇಳಿದರು.
ಅನೆಸ್ತೇಶಿಯಾದ ಹೆಚ್ಚುವರಿ ಡೋಸ್ ಹಾಗು ವೈದ್ಯರ ನಿರ್ಲಕ್ಷತನದಿಂದ ಕಬೀರ್ ನ ಮೃತ್ಯು ಸಂಭವಿಸಿದೆಯೆಂದು ಕುಟುಂಬದವರು ಆಸ್ಪತ್ರೆಯ ಡಾಕ್ಟರ್ ಗಳ ಮೇಲೆ ಆರೋಪ ಮಾಡಿ ಸಮೀಪದ ಚಂದನ್ ನಗರ ಪೊಲೀಸ್ ಸ್ಟೇಷನ್ ನಲ್ಲಿ ತಕರಾರು ದಾಖಲಿಸಿದ್ದಾರೆ. ಪೊಲೀಸರು ಮಗುವಿನ ಮೃತದೇಹವನ್ನು ಪೋಸ್ಟ್ಮಾರ್ಟಮ್ ಸಲುವಾಗಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಕಬೀರನ ತಂದೆ ಹೇಳುವ ಪ್ರಕಾರ, ಡಾಕ್ಟರ್ ಗಳು ಕಬೀರನ ಸಾವಿಗೆ ನಿಜವಾದ ಕಾರಣವನ್ನು ಹೇಳಿಲ್ಲ. ನನ್ನ ಮಗುವಿನ ಸಾವು ಅನಸ್ತೇಶಿಯಾದ ಹೆಚ್ಚುವರಿ ಡೋಸ್ ನಿಂದಾಗಿಯೇ ಆಗಿದೆ ಆದರೆ ಡಾಕ್ಟರ್ಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ನನ್ನ ಮಗುವಿಗೆ ವೆಂಟಿಲೇಟರ್ ಮೇಲೆ ಇಟ್ಟರೂ ಯಾವುದೇ ಲಾಭವಾಗಲಿಲ್ಲ ಎಂದು ಡಾಕ್ಟರ್ ಸುಳ್ಳು ನೆಪ ಹೇಳುತ್ತಿದ್ದಾರೆ. ಡಾಕ್ಟರ್ ಗಳ ನಿರ್ಲಕ್ಷತನದಿಂದ ಇದ್ದ ಒಬ್ಬನೇ ಒಬ್ಬ ಮಗನನ್ನು ನಾನು ಕಳೆದುಕೊಂಡು ಬಿಟ್ಟೆ ಎಂದು ತಂದೆ ಸುನಿಲ್ ತಿವಾರಿ ಗೋಗರೆಯುತ್ತಿದ್ದಾನೆ.
ಅರಿಹಂತ್ ಆಸ್ಪತ್ರೆಯ ಅಧೀಕ್ಷಕರಾದ ಡಾಕ್ಟರ್ ಸಂಜಯ್ ರಾಥೋಡ್ ಅವರು ಹೇಳುವ ಪ್ರಕಾರ, ತಜ್ಞ ಡಾಕ್ಟರ್ ಗಳ ತಂಡವೇ ಮಗುವಿನ ಆಪರೇಷನ್ ಮಾಡಿದೆ. ಪೂರ್ವ ತಪಾಸಣೆಯನ್ನು ಮಾಡಿ ಆಮೇಲೆ ಎಂಡೋಸ್ಕೋಪಿ ಮುಖಾಂತರ ಮ್ಯಾಗ್ನೆಟ್ ತೆಗೆಯಲಾಗಿತ್ತು. ಆನಂತರ ಮಗುವನ್ನು ಐಸಿಯುನಲ್ಲಿ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿ ಮಗುವಿನ ಆರೋಗ್ಯವು ಹದಗೆಟ್ಟಿತು. ಆದರೆ ಮೃತ್ಯುವಿಗೆ ಸ್ಪಷ್ಟವಾದ ಯಾವುದೇ ಕಾರಣ ಕಂಡುಬಂದಿಲ್ಲ. ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದ ನಂತರವೇ ನಿಜವಾದ ಕಾರಣ ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಪ್ರಮಾಣಕ್ಕಿಂತ ಹೆಚ್ಚು ಅನೆಸ್ಥೆಸಿಯ ಡೋಸ್ ನೀಡಿಲ್ಲವೆಂದು ಡಾಕ್ಟರ್ ಹೇಳುತ್ತಾರೆ. ಅದಕ್ಕೆ ಸಂಬಂಧಪಟ್ಟ ಎಲ್ಲಾ ಕಾಗದಪತ್ರಗಳನ್ನು ಪೊಲೀಸರ ಕೈಗೆ ನೀಡಲಾಗಿದೆ. ಅರವಳಿಕೆ ತಜ್ಞ ಡಾಕ್ಟರ್ ಸೋನಲ್ ನಿವಸ್ಕರ ಹಾಗು ಗ್ಯಾಸ್ಟ್ರೋಎಂಟ್ರಾಲಜಿಸ್ಟ್ ಡಾಕ್ಟರ್ ಮಯಂಕ್ ಜೈನ್ ಇವರು ಒಳ್ಳೆಯ ತಜ್ಞ ಡಾಕ್ಟರ್ ಗಳಾಗಿದ್ದಾರೆ. ಮಗುವಿನ ಸಂಪೂರ್ಣ ಉಪಚಾರವನ್ನು ವೈದ್ಯಕೀಯ ಪ್ರೋಟೋಕಾಲ್ ಮುಖಾಂತರವೇ ಮಾಡಲಾಗಿದೆ ಎಂದು ರಾಥೋಡ್ ಹೇಳುತ್ತಾರೆ.