ಆರೋಗ್ಯ ಟಿಪ್ಸ್; ನಿಂಬೆರಸ ಮಿಶ್ರಿತ ನೀರು ನಿಯಮಿತವಾಗಿ ಕುಡಿಯುವುದರಿಂದಾಗುವ ದುಷ್ಪರಿಣಾಮಗಳು ಗೊತ್ತಾ? ಓದಿ ಒಮ್ಮೆ ಲೇಖನ…
‘ಅತಿಯಾದರೆ ಅಮೃತವೂ ಸಹ ವಿಷ’ ಎನ್ನುವ ಗಾದೆ ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ. ಯಾವುದೇ ವಿಷಯದಲ್ಲಿ ಒಂದು ಮರ್ಯಾದೆ ಕಾಯ್ದುಕೊಂಡು ಹೋಗಬೇಕು. ಆ ಮರ್ಯಾದೆ ಉಲ್ಲಂಘಿಸಿದರೆ ಅಲ್ಲಿ ವಿನಾಶ ತಪ್ಪಿದ್ದಲ್ಲ. ಆರೋಗ್ಯದ ದೃಷ್ಟಿಯಲ್ಲಿಯೂ ಈ ನಿಯಮವನ್ನು ದುರ್ಲಕ್ಷಿಸುವಂತಿಲ್ಲ.
ಪ್ರತಿಯೊಂದು ಹಣ್ಣು ಮನುಷ್ಯನಿಗೆ ವಿವಿಧ ರೀತಿಯ ಶಕ್ತಿಯನ್ನು ದಯಪಾಲಿಸುತ್ತದೆ. ಈ ಹಣ್ಣುಗಳಲ್ಲಿ ನಿಂಬೆಹಣ್ಣಿನ ನೀರು ಅಥವಾ ನಿಂಬೆಹಣ್ಣಿನಿಂದ ತಯಾರಾದ ಪಾನಕ ಇಲ್ಲ ಶರಬತ್ ಹೆಚ್ಚುಕಡಿಮೆ ಎಲ್ಲರಿಗೂ ಇಷ್ಟವಾಗುತ್ತದೆ.
ಸ್ಥೂಲಕಾಯದವರು ತಮ್ಮ ಬೊಜ್ಜು ಇಳಿಸಿಕೊಳ್ಳಲು ಬಯಸುವವರು ಮತ್ತು ಬಿಸಿಲಿನ ಶಾಖದಿಂದ ಪರಿಹಾರ ಪಡೆದುಕೊಳ್ಳಲು ಇಚ್ಚಿಸುವವರು ನಿಂಬೆಹಣ್ಣಿಗೆ ಪ್ರಥಮ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಹಾಗೆಯೇ ನಿಂಬೆರಸ ಮಿಶ್ರಿತ ನೀರಿನ ಸೇವನೆಯಿಂದ ದೇಹಕ್ಕೆ ಅನೇಕ ಲಾಭಗಳು ಆಗುತ್ತವೆ. ಇದರಿಂದ ದೇಹಕ್ಕೆ ವಿಟಮಿನ್ ಸಿ, ಪೊಟಾಶಿಯಂ ಮತ್ತು ಫೈಬರ್ ಹೇರಳವಾಗಿ ದೊರೆಯುತ್ತದೆ. ಇಷ್ಟೆಲ್ಲ ಇದ್ದರೂ ನಿಂಬೆಹಣ್ಣಿನ ರಸವನ್ನು ಕೂಡಿಸಿದ ಅತಿಯಾದ ನೀರಿನ ಸೇವನೆ ದೇಹಕ್ಕೆ ಲಾಭವಾಗುವ ಬದಲಾಗಿ ನಷ್ಟವೇ ಹೆಚ್ಚಾಗುವುದು.
ಹೇಗೆ ನೋಡಿ…
*ಹಲ್ಲುನೋವು
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಅಂಡ್ ಕ್ರಾನಿಯೊಫೇಸಿಯಲ್ ರಿಸರ್ಚ್ ನಲ್ಲಿ ತಿಳಿದು ಬಂದ ಒಂದು ಅಧ್ಯಯನದ ಪ್ರಕಾರ ನಿಂಬೆರಸ ಮಿಶ್ರಿತ ನೀರಿನ ಅತಿಯಾದ ಸೇವನೆಯಿಂದ ಹಲ್ಲುಗಳಿಗೆ ತುಂಬಾ ನಷ್ಟವಾಗುತ್ತದೆ. ನಿಂಬೆರಸದಲ್ಲಿ ಇರುವ ಎಸಿಡ್ ನ ಸಂಪರ್ಕದಲ್ಲಿ ಹಲ್ಲುಗಳು ಬರುವುದರಿಂದ ಹಲ್ಲುಗಳು ಹೆಚ್ಚು ಸೆನ್ಸಿಟಿವ್ ಅಂದರೆ ಸೂಕ್ಷ್ಮವಾಗುತ್ತವೆ. ಇದಕ್ಕೆ ಸರಿಯಾದ ಉಪಾಯವೆಂದರೆ ನಿಂಬೆರಸದ ನೀರನ್ನು ಸ್ಟ್ರಾ ಉಪಯೋಗಿಸಿ ಕುಡಿಯಬೇಕು.
*ಹೊಟ್ಟೆ ನೋವು.
ಅನೇಕ ಸಲ ಜನರು ತಿಂದ ಆಹಾರವನ್ನು ಜೀರ್ಣ ಮಾಡಿಕೊಳ್ಳಲು ನಿಂಬೆರಸಕ್ಕೆ ಮೊರೆ ಹೋಗುತ್ತಾರೆ. ಕಾರಣ ಅದರಲ್ಲಿರುವ ಆಮ್ಲವು ಆಹಾರವನ್ನು ಜೀರ್ಣ ಮಾಡಲು ಸಹಾಯ ಮಾಡುತ್ತದೆ. ಆದರೆ ಹೊಟ್ಟೆಯಲ್ಲಿ ಅತಿಯಾದ ಪ್ರಮಾಣದಲ್ಲಿ ಎಸಿಡ್ ತಯಾರಾಗುವುದರಿಂದ ಕೆಲವೊಮ್ಮೆ ವ್ಯಕ್ತಿಗೆ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ನಿಂಬೆರಸವನ್ನು ಯಾವಾಗಲೂ ಆಹಾರದಲ್ಲಿ ಮಿಕ್ಸ್ ಮಾಡಿ ಸೇವಿಸಬೇಕು.
*ಮೈಗ್ರೇನ್.
ಆರೋಗ್ಯ ತಜ್ಞರ ಪ್ರಕಾರ ಅಥವಾ ಡಾಕ್ಟರ್ಗಳು ಹೇಳುವ ಹಾಗೆ ನಿಂಬೆ ಅಥವಾ ನಿಂಬೆಯಂತಹ ತತ್ಸಮ ಹಣ್ಣುಗಳಿಂದ ವ್ಯಕ್ತಿಗೆ ಮೈಗ್ರೇನ್ ಸಮಸ್ಯೆ ಹೆಚ್ಚಾಗುತ್ತದೆ. ನಿಂಬೆಹಣ್ಣಿನಂಥ ತತ್ಸಮ ಹಣ್ಣುಗಳಲ್ಲಿ ಟೈರಾಮಾಯಿನ್ ಹೆಸರಿನ ವಿಶೇಷ ಘಟಕ ಇರುತ್ತದೆ. ಇದರಿಂದ ಮೈಗ್ರೇನ್ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇರುತ್ತದೆ.
*ನಿರ್ಜಲೀಕರಣ.
ಸತತವಾಗಿ ನಿಂಬೆ ರಸ ಮಿಶ್ರಿತ ನೀರು ಕುಡಿಯುವುದರಿಂದ ಮೂತ್ರದ ಸಮಸ್ಯೆ ಕಾಡಬಹುದು. ಇದರಿಂದಾಗಿ ದೇಹಕ್ಕೆ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ. ವಾಸ್ತವಿಕವಾಗಿ ಎಲೆಕ್ಟ್ರೋಲೈಟ್ಸ್ ಮತ್ತು ಸೋಡಿಯಂ ನಂತಹ ಘಟಕಗಳು ಮೂತ್ರದ ಮುಖಾಂತರ ದೇಹದಿಂದ ಹೊರಗೆ ಹಾಕಲಾಗುತ್ತದೆ. ಆದ್ದರಿಂದ ಇದರ ಅತಿಯಾದ ಸೇವನೆ ವ್ಯಕ್ತಿಯಲ್ಲಿ ಡಿಹೈಡ್ರೇಷನ್ ಸಮಸ್ಯೆಯನ್ನು ಉಂಟುಮಾಡುತ್ತದೆ.
*ರಕ್ತದಲ್ಲಿಯೇ ಕಬ್ಬಿಣಾಂಶದ ಪ್ರಮಾಣ
ವಿಟಮಿನ್-ಸಿ ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಉತ್ತೇಜಿಸುತ್ತದೆ. ದೇಹದಲ್ಲಿ ವಿಟಮಿನ್ ಸಿ ಯ ಅತಿರೇಕದಿಂದಾಗಿ ದೇಹದೊಳಗಿನ ಅವಯವಗಳಿಗೆ ಹಾನಿ ಉಂಟಾಗುತ್ತದೆ.
*ಡಾಕ್ಟರ್ ಸಲಹೆ
ಡಾಕ್ಟರ್ಗಳು ನೀಡುವ ಸಲಹೆ ಪ್ರಕಾರ, ನಿಂಬೆ ರಸ ಮಿಶ್ರಿತ ನೀರಿನ ಅತಿಯಾದ ಸೇವನೆ ದೇಹಕ್ಕೆ ತುಂಬಾನೇ ಹಾನಿಕಾರಕವಾಗಿದೆ. ಡಾಕ್ಟರ್ಗಳು ಹೇಳುವ ಪ್ರಕಾರ ದಿನವೊಂದರಲ್ಲಿ ಮೂರು ಕಪ್ ನಿಂಬೆ ರಸ ಮಿಶ್ರಿತ ನೀರು ಸೇವನೆ ಮಾಡಿದರೆ ಅದರಿಂದ ದುಷ್ಪರಿಣಾಮಗಳು ಆಗುವ ಸಾಧ್ಯತೆ ಇರುತ್ತದೆ. ನಿಂಬೆ ರಸ ಮಿಶ್ರಿತ ನೀರಿನ ಸೇವನೆ ನಿಯಮಿತವಾಗಿ ಮಾಡುವ ಮುನ್ನ ಒಂದು ಸಲ ನಿಮ್ಮ ಡಾಕ್ಟರ್ ಸಲಹೆ ಪಡೆಯುವುದು ತುಂಬಾ ಉತ್ತಮ.