ಇಂಟರ್ನೆಟ್ ಜಗತ್ತಿಗೆ ಅಡಿಯಿಡಲು ಟಾಟಾ ಸಮೂಹ ಸಜ್ಜು: ‘ಈ’ ಕಂಪನಿಗಳಿಗೆ ಇದು ಒಡ್ಡಲಿದೆ ಸವಾಲು
ಟಾಟಾ ಕಂಪನಿ ಎಂದರೆ ಇದು ಭಾರತದ ಒಂದು ಜನಪ್ರಿಯ ಬ್ರಾಂಡ್ ಮಾತ್ರವೇ ಅಲ್ಲದೇ ಭಾರತದ ಒಂದು ಹೆಮ್ಮೆಯ ಬ್ರಾಂಡ್ ಕೂಡಾ ಆಗಿದೆ. ಟಾಟಾ ಕಂಪನಿ ಎಂದರೆ ಒಂದು ಗೌರವದ ಭಾವನೆ ಅಸಂಖ್ಯಾತ ಭಾರತೀಯರಲ್ಲಿ ಇದೆ. ಈಗಾಗಲೇ ಟಾಟಾ ಕಂಪನಿಯ ವೈವಿದ್ಯಮಯ ಉತ್ಪನ್ನಗಳು ದೇಶದ ಜನರ ನಂಬಿಕೆ ಗಳಿಸಿದೆ. ಇವೆಲ್ಲವುಗಳ ಬೆನ್ನಲ್ಲೇ ಇದೀಗ ಟಾಟಾ ಕಂಪನಿ ಸಹಾ ಸ್ಯಾಟಲೈಟ್ ಹಾಗೂ ಇಂಟರ್ನೆಟ್ ಜಗತ್ತಿಗೆ ಅಡಿಯಿಡಲು ಹಾಗೂ ಆ ಮೂಲಕ ಅಲ್ಲಿ ತನ್ನದೊಂದು ಛಾಪನ್ನು ಮೂಡಿಸುವ ಕನಸನ್ನು ಕಟ್ಟುತ್ತಿದೆ ಎಂದು ತಿಳಿದು ಬಂದಿದೆ. ಹೌದು ಟಾಟಾ ಸಮೂಹವು ಇಂತಹುದೊಂದು ಹೊಸ ಆಲೋಚನೆಯ ಕಡೆ ಗಮನವನ್ನು ಹರಿಸಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಡೇಟಾದ ಬಳಕೆ ಹೆಚ್ಚಾಗುತ್ತಿದ್ದು ಈಗ ಹೊಸ ಕಂಪನಿಗಳೂ ಈ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ.
ವಿಶ್ವದ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರಾಗಿರುವಂತಹ ಎಲನ್ ಮಸ್ಕ್ ತಮ್ಮ ಸ್ಟಾರ್ ಲಿಂಕ್ ಹೆಸರಿನ ಕಂಪನಿಯ ಮೂಲಕ ಸ್ಯಾಟಲೈಟ್ ಮತ್ತು ಇಂಟರ್ನೆಟ್ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಘೋಷಣೆ ಮಾಡಿಯಾಗಿದೆ. ಇದರ ಬೆನ್ನಲ್ಲೇ ಇದೀಗ ನಮ್ಮ ದೇಶದ ಪ್ರತಿಷ್ಠಿತ ಕಂಪನಿಯಾಗಿರುವ ಟಾಟಾ ಗ್ರೂಪ್ ಕೂಡ ಈ ಮಾರುಕಟ್ಟೆಯನ್ನು ಪ್ರವೇಶಿಸಲು ಆಲೋಚನೆಯನ್ನು ಮಾಡಿದೆ. ಟಾಟಾ ಸಮೂಹದ ಈ ನಡೆ ಸ್ಟಾರ್ ಲಿಂಕ್ಗೆ ಮಾತ್ರವೇ ಅಲ್ಲದೇ ಮುಖೇಶ್ ಅಂಬಾನಿಯ ರಿಲಯನ್ಸ್ ಜಿಯೋಗೆ ಕೂಡಾ ಇದೊಂದು ದೊಡ್ಡ ಸವಾಲನ್ನು ಒಡ್ಡಬಹುದಾಗಿದೆ.
ಟಾಟಾ ಇತ್ತೀಚೆಗೆ ಸೆಮಿಕಂಡಕ್ಟರ್ಗಳ ಉತ್ಪಾದನೆಯನ್ನು ಮಾಡುವ ಘೋಷಣೆಯನ್ನು ಮಾಡಿದೆ. ಈ ಸೆಮಿಕಂಡಕ್ಟರ್ ಅನ್ನು ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದರ ಹೊರತಾಗಿ, ಕಂಪನಿಯು 5G ಅನ್ನು ಪ್ರಾರಂಭಿಸುವ ಕೆಲಸವನ್ನೂ ಪ್ರಾರಂಭಿಸಿದೆ. ಟಾಟಾ ಸಮೂಹವು ಉಪಗ್ರಹ ಅಂತರ್ಜಾಲ ಸೇವೆಯನ್ನು ಆಧರಿಸಿದ ಬ್ರಾಡ್ ಬ್ಯಾಂಡ್ ಸೇವೆಯನ್ನು ಶೀಘ್ರವೇ ಆರಂಭಿಸಬಹುದು ಎಂದು ಊಹಿಸಲಾಗಿದೆ. ಇದಕ್ಕಾಗಿ, ಟಾಟಾ ಸಮೂಹವು ಟೆಲಿಸ್ಯಾಟ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎನ್ನುವ ಮಾತುಗಳು ಸಹಾ ಕೇಳಿ ಬಂದಿದೆ. ಈ ಸೇವೆಯು 2024 ರ ವೇಳೆಗೆ ಲಭ್ಯವಾಗಬಹುದು ಎನ್ನುವ ನಿರೀಕ್ಷೆ ಇದೆ.
ಪ್ರಸ್ತುತು JIOFIBER ಮಾರುಕಟ್ಟೆಯಲ್ಲಿದ್ದು, ಅದು ಗ್ತಾಹಕರಿಗೆ ಒದಗಿಸುತ್ತಿರುವ ವೇಗ ಮತ್ತು ಸೇವೆಯಿಂದ ಗ್ರಾಹಕರು ಸಾಕಷ್ಟು ತೃಪ್ತರಾಗಿದ್ದಾರೆ. ಎಲನ್ ಮಸ್ಕ್ ಅವರು ತಮ್ಮ ಸ್ಟಾರ್ಲಿಂಕ್ ಸೇವೆಯನ್ನು ಇತ್ತೀಚೆಗೆ ಘೋಷಣೆ ಮಾಡಿದ್ದು, ಇದು ಶೀಘ್ರದಲ್ಲೇ ಭಾರತದಲ್ಲಿಯೂ ಪ್ರಾರಂಭವಾಗಬಹುದು ಎನ್ನುವ ನಿರೀಕ್ಷೆಗಳು ದಟ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಟಾಟಾ ಸಮೂಹವು ಈ ಮಾರುಕಟ್ಟೆಯಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಲು ಅಡಿಯಿಟ್ಟರೆ, ಇದು ಎಲನ್ ಮಸ್ಕ್ ಮತ್ತು ಜಿಯೋ ಇಬ್ಬರಿಗೂ ಕಠಿಣ ಸ್ಪರ್ಧೆಯ ಪರಿಸ್ಥಿತಿಯನ್ನು ಸೃಷ್ಟಿಸಬಹುದಾಗಿದೆ.
2022 ರ ವೇಳೆಗೆ ಸ್ಟಾರ್ ಲಿಂಕ್ 150 Mbps ವೇಗವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆಂದು ಎಂದು ಅಂದಾಜಿಸಲಾಗಿದೆ. ಈ ಎಲ್ಲಾ ಪರಿಸ್ಥಿತಿಯ ಆಧಾರದ ಮೇಲೆ, ಟಾಟಾ ಸಮೂಹವು ರನ್ನ ಇಂಟರ್ನೆಟ್ ಸೇವೆಯನ್ನು ಪರಿಚಯಿಸಿದ ನಂತರ, ಬಳಕೆದಾರರು ಅನೇಕ ಉತ್ತಮವಾದ ಹಾಗೂ ಲಾಭದಾಯಕವಾದ ಯೋಜನೆಗಳನ್ನು ಪಡೆಯಬಹುದು ಎನ್ನುವ ಒಂದು ನಿರೀಕ್ಷೆಯನ್ನು ಸಹಾ ಇದು ಹುಟ್ಟು ಹಾಕಿದೆ. ಒಟ್ಟಾರೆ ಟಾಟಾ ಕಂಪನಿಯು ಸ್ಯಾಟಲೈಟ್ ಮತ್ತು ಇಂಟರ್ನೆಟ್ ಜಗತ್ತಿನಲ್ಲಿ ಎಂತಹ ಸಂಚಲನ ಸೃಷ್ಟಿಸಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.