ಎತ್ತರದಿಂದ ಪ್ರಾಣ ಭೀತಿ ಬಿಟ್ಟು ಕೆಳಗೆ ಜಾರಿದ ಕಾಡೆಮ್ಮೆಗಳು, ಉಳಿವಿಗಾಗಿ ಹೋರಾಟ ಎನ್ನುವುದು ಇದೇನಾ? ವೈರಲ್ ಆಯ್ತು ವೀಡಿಯೋ
ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದು ಪ್ರಕೃತಿಯಲ್ಲಿ ನಡೆಯುವ ಒಂದು ಸಹಜವಾದ ಪ್ರಕ್ರಿಯೆ. ಪ್ರಾಣಿಗಳು ತಾವು ವಾಸಿಸುವ ಸ್ಥಳದಲ್ಲಿ ತಮಗೆ ಅಗತ್ಯವಿರುವ ನೀರು, ಆಹಾರ ಸಿಗದೇ ಇರುವಾಗ ಅಥವಾ ಬರಗಾಲ ಉಂಟಾದ ಸಂದರ್ಭದಲ್ಲಿ ಅವು ಇರುವ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಆಹಾರ ಮತ್ತು ನೀರನ್ನು ಅರಸಿ ಹೊರಟು ಬಿಡುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕೂಡಾ ಪ್ರಾಣಿಗಳಿಗೆ ಕಷ್ಟವೇ ಆಗಿದೆ. ಏಕೆಂದರೆ ಅರಣ್ಯಗಳೆಲ್ಲಾ ಮಾನವನು ವಾಸಿಸುವ ಸ್ಥಳಗಳಾಗಿ ಬದಲಾಗಿ ಹೋಗಿವೆ. ಆದರೆ ವಿಶಾಲವಾದ ಅರಣ್ಯ ಇರುವ ಆಫ್ರಿಕಾದಂತಹ ದೇಶಗಳಲ್ಲಾದರೆ ಇಂತಹ ದೃಶ್ಯಗಳು ನೋಡಲು ಸಿಗುತ್ತವೆ. ನಾವಾದರೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ವೀಡಿಯೋಗಳ ಮೂಲಕ ಇಂತಹ ಅಪರೂಪದ ಸನ್ನಿವೇಶಗಳನ್ನು ನೋಡಬಹುದಾಗಿದೆ.
ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಒಂದು ದೊಡ್ಡ ಪ್ರಮಾಣದ ಆಫ್ರಿಕಾದ ಅರಣ್ಯಗಳಲ್ಲಿ ಕಂಡು ಬರುವ ವಿಶೇಷ ಜಾತಿಯ ಕಾಡೆಮ್ಮೆಗಳು ಒಟ್ಟಾಗಿ ಎಲ್ಲಿಗೋ ವಲಸೆ ಹೋಗುತ್ತಿರುವಂತಹ ದೃಶ್ಯ ಇದ್ದು ಇದನ್ನ ನೋಡಿದ ನೆಟ್ಟಿಗರು ಒಂದು ಕಡೆ ಆಶ್ಚರ್ಯ ಪಡುತ್ತಿದ್ದರೆ ಇನ್ನೊಂದು ಕಡೆ ಈ ಕಾಡೆಮ್ಮೆಗಳ ಪ್ರಯತ್ನ ನೋಡಿ ಬೇಸರ ಪಡುತ್ತಿರುವುದು ಮಾತ್ರವೇ ಅಲ್ಲದೇ ಅವುಗಳ ಬಗ್ಗೆ ಕಾಳಜಿಯನ್ನು ಕೂಡಾ ತೋರಿಸಿದ್ದಾರೆ. ಈ ವೀಡಿಯೋ ವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಶೇರ್ ಮಾಡಿಕೊಂಡಿದ್ದಾರೆ.
ವೀಡಿಯೋ ಶೇರ್ ಮಾಡಿಕೊಂಡ ಅವರು, ಒಂದು ವೇಳೆ ನ್ಯೂಟನ್ ಈ ದೃಶ್ಯವನ್ನು ಮೊದಲೇ ನೋಡಿದಿದ್ದರೆ ತಮ್ಮ ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಇನ್ನೂ ಮೊದಲೇ ಆವಿಷ್ಕಾರ ಮಾಡಿರುತ್ತಿದ್ದರು ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ಈಗಾಗಲೇ ಇಪ್ಪತ್ತೆರಡು ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ ಎರಡು ಸಾವಿರಕ್ಕೂ ಅಧಿಕ ಮಂದಿ ಮೆಚ್ಚಿದ್ದು, ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಇನ್ನು ವೀಡಿಯೋದಲ್ಲಿ ಇರುವ ದೃಶ್ಯದ ಬಗ್ಗೆ ಹೇಳುವುದಾದರೆ ಇದೊಂದು ಆಫ್ರಿಕಾದಲ್ಲಿ ಕಂಡು ಬಂದಂತಹ ದೃಶ್ಯ ಎನ್ನಲಾಗಿದೆ.
ವೀಡಿಯೋದಲ್ಲಿ ನೋಡಿದಾಗ ಅನೇಕ ಆಫ್ರಿಕಾದ ಕಾಡೆಮ್ಮೆಗಳು ಒಂದು ಎತ್ತರವಾದ ಪ್ರದೇಶದಿಂದ ಕೆಳಗೆ ಬರಲು ಪ್ರಯತ್ನ ಪಡುತ್ತಿವೆ. ಆದರೆ ಅವು ಕೆಳಗೆ ಬರಲು ಮಾಡುತ್ತಿರುವ ಪ್ರಯತ್ನ ನೋಡಿದಾಗ ಆಶ್ಚರ್ಯ ಎನಿಸುತ್ತದೆ. ಏಕೆಂದರೆ ಕಾಡೆಮ್ಮೆಗಳು ಒಂದೊಂದಾಗಿ ಮೇಲಿನಿಂದ ಕೆಳಕ್ಕೆ ಜಾರಿಕೊಂಡು ಬರುತ್ತಿವೆ. ಆ ದೃಶ್ಯ ನೋಡಿದಾಗ ಅವುಗಳ ಕಾಲಿಗೆ ಪೆಟ್ಟಾಗಿರಬಹುದು ಎನ್ನುವ ಅನುಮಾನ ಮೂಡುತ್ತದೆ. ಆದರೂ ಕೂಡಾ ಕಾಡೆಮ್ಮೆಗಳು ಒಂದೊಂದಾಗಿ ಧುಮುಕುತ್ತಾ ಸಾಗುತ್ತವೆ. ಬಹುಶಃ ಅವೆಲ್ಲವೂ ವಲಸೆ ಹೋಗುತ್ತಿರುವಂತೆ ಕಾಣುತ್ತಿದೆ ಏಕೆಂದರೆ ವಾಪಸಾಗಲು ಅವುಗಳಿಗೆ ಮೇಲೆ ಏರಿ ಬರಲು ಅವಕಾಶವಿಲ್ಲ.
ವಿಡಿಯೋ ನೋಡಿ
Had Newton seen this,he would have discovered gravity much earlier☺️ pic.twitter.com/80gEjBia2S
— Susanta Nanda IFS (@susantananda3) April 3, 2021
ವೀಡಿಯೋ ನೋಡಿದ ನೆಟ್ಟಿಗರು ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗಿದ್ದಾರೆ. ಒಬ್ಬರು ನೋಡುವುದಕ್ಕೆ ಅದ್ಭುತವಾಗಿದೆ ಆದರೆ ಅವುಗಳ ಕಾಲು ಮುರಿದಿದ್ದರೆ ಒಂದು ಇಡೀ ಕಾಡೆಮ್ಮೆಗಳ ದಂಡಿಗೆ ಕಾಲಿಗೆ ಪೆಟ್ಟಾದಂತೆ, ಹಾಗೆ ಆಗದಿರಲಿ ಎಂದು ಮರುಕಪಟ್ಟಿದ್ದಾರೆ. ಇನ್ನೂ ಕೆಲವರು ವೀಡಿಯೋ ಶೀರ್ಷಿಕೆಗೆ ಉತ್ತರಿಸುತ್ತಾ ನ್ಯೂಟನ್ ಆಫ್ರಿಕಾಕ್ಕೆ ಹೋಗಿರಲಿಲ್ಲ ಬಿಡಿ ಎಂದಿದ್ದಾರೆ. ಮತ್ತೆ ಅನೇಕರು ಇದು ಕಾಡೆಮ್ಮೆಗಳು ದೊಡ್ಡ ಪ್ರಮಾಣದಲ್ಲಿ ವಲಸೆ ಹೊರಟಿರುವ ದೃಶ್ಯ, ಅವುಗಳ ಕಾಲಿಗೆ ಏನಾಗದಿದ್ದರೆ ಸಾಕೆಂದಿದ್ದಾರೆ. ಒಟ್ಟಾರೆ ಕಾಡೆಮ್ಮೆಗಳು ಮಾಡಿರುವ ಸಾಹಸ ನೋಡಿದಾಗ ಉಳಿವಿಗಾಗಿ ಹೋರಾಟ ಎನ್ನುವುದು ಇದೇನಾ ಅನಿಸುತ್ತದೆ.