ಒಂದೇ ಓವರ್ ನಲ್ಲಿ 6 ಸಿಕ್ಸ್ ಹೊಡೆದ ಪೊಲಾರ್ಡ್ ಗೆ ಸಿಕ್ಕಿತು ಯುವರಾಜ್ ಸಿಂಗ್ ಮತ್ತು ಹರ್ಷಲ್ ಗಿಬ್ಸ್ ಅಭಿನಂದನೆ: ವೈರಲ್ ಆಯ್ತು ಟ್ವೀಟ್

ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೈರಾನ್ ಪೊಲಾರ್ಡ್ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಒಂದರಲ್ಲಿ ಆರು ಬಾಲುಗಳಲ್ಲಿ 6 ಸಿಕ್ಸ್ ಗಳನ್ನು ಹೊಡೆಯುವ ಮೂಲಕ, ಇಂತಹುದೊಂದು ದಾಖಲೆಯನ್ನು ಮಾಡಿದ ಮೂರನೇ ಕ್ರಿಕೆಟ್ ಆಟಗಾರ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಗುರುವಾರ ಶ್ರೀಲಂಕಾದ ವಿರುದ್ಧ ನಡೆದಂತಹ ಮೂರು ಟಿ-ಟ್ವೆಂಟಿ ಸರಣಿಯ ಪಂದ್ಯಗಳಲ್ಲಿ ಮೊದಲನೆಯ ಪಂದ್ಯದಲ್ಲಿ ಇಂತಹುದೊಂದು ದಾಖಲೆಯನ್ನು ಮಾಡಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ಅಖಿಲ ಧನಂಜಯ್ ಅವರ ಓವರ್ ನಲ್ಲಿ ಪೊಲಾರ್ಡ್ ಸಿಕ್ಸ್ ಗಳನ್ನು ಹೊಡೆಯುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಹಾಗೂ ಭಾರತದ ಆಲ್-ರೌಂಡರ್ ಯುವರಾಜ್ ಸಿಂಗ್ ಅವರು ಆರು ಬಾಲುಗಳಲ್ಲಿ 6 ಸಿಕ್ಸ್ ಗಳನ್ನು ಹೊಡೆದ ದಾಖಲೆಯನ್ನು ಮಾಡಿದ್ದರು.

ಈ ಮೂವರಲ್ಲಿ ಹರ್ಷಲ್ ಗಿಬ್ಸ್ ಈ ಸಾಧನೆಯನ್ನು ಮೆರೆದ ಮೊದಲ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. 2007ರಲ್ಲಿ ನೆದರ್ಲಂಡ್ಸ್ ವಿರುದ್ಧ ನಡೆದಂತಹ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಹರ್ಷಲ್ ಗಿಬ್ಸ್ ಅವರು ನೆದರ್ ಲ್ಯಾಂಡ್ ನ ಬೌಲರ್ ಡಾನ್ ವೈನ್ ಬುಂಗೆ ಅವರ ಓವರ್ ನಲ್ಲಿ ಎಲ್ಲಾ ಆರು ಭಾಗಗಳಿಗೆ 6 ಸಿಕ್ಸ್ ಗಳನ್ನು ಹೊಡೆಯುವ ಮೂಲಕ ಹೊಸ ದಾಖಲೆಯೊಂದನ್ನು ಬರೆದರು. ಅದೇ ವರ್ಷ ಅಂದರೆ 2007ರ ಸೆಪ್ಟೆಂಬರ್ ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಟಿ-20 ವಿಶ್ವಕಪ್ ದಲ್ಲಿ ಭಾರತದ ಆಟಗಾರ ಯುವರಾಜ್ ಸಿಂಗ್ ಅವರು ಸ್ಟುವರ್ಟ್ ಬ್ರಾಡ್ ಅವರ ಓವರ್ ನಲ್ಲಿ 6ಸಿಕ್ಸ್ ಗಳನ್ನು ಹೊಡೆಯುವ ಮೂಲಕ ಹರ್ಷಲ್ ಗಿಬ್ಸ್ ಅವರ ದಾಖಲೆ ಪುನರಾವರ್ತಿತವಾಯಿತು.

ಆದರೆ ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ ಇಂತಹದೊಂದು ದಾಖಲೆಯನ್ನು ಬರೆದ ಮೊದಲ ಆಟಗಾರ ಯುವರಾಜ್ ಸಿಂಗ್ ಎನಿಸಿಕೊಂಡರು. ಈಗ ಗುರುವಾರದಂದು ಪೊಲಾರ್ಡ್ ಇಂತಹದೇ ದಾಖಲೆ ಮಾಡಿ ಯುವರಾಜ್ ಸಿಂಗ್ ಅವರಿಗೆ ಸರಿಸಮಾನ ಎನಿಸಿಕೊಂಡಿದ್ದಾರೆ. ಪೊಲಾರ್ಡ್ ನಿರ್ಮಿಸಿದ ಹೊಸ ದಾಖಲೆಯನ್ನು ಕಂಡು ಯುವರಾಜ್ ಸಿಂಗ್ ಹಾಗೂ ಹರ್ಷಲ್ ಗಿಬ್ಸ್ ಇಬ್ಬರೂ ಕೂಡ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರೂ ಆಟಗಾರರು ಕೂಡಾ ಟ್ವೀಟ್ ಮಾಡುವ ಮೂಲಕ ಹೊಸ ದಾಖಲೆ ಬರೆದ ಕೆರೆಬಿಯನ್ ಬ್ಯಾಟ್ಸ್ ಮನ್ ನನ್ನು ಅಭಿನಂದಿಸಿದ್ದಾರೆ. ಯುವರಾಜ್ ಸಿಂಗ್ ತಮ್ಮ ಟ್ವೀಟ್ ನಲ್ಲಿ 6 ಸಿಕ್ಸ್ ಗಳ ಕ್ಲಬ್ ಗೆ ನಿಮಗೆ ಸ್ವಾಗತ, ನೀವು ನಿಜವಾಗಲೂ ಅದ್ಭುತ ಎಂದು ಪೊಲಾರ್ಡ್ ಅವರನ್ನು ಅಭಿನಂದಿಸಿದ್ದಾರೆ.

ಮತ್ತೊಂದೆಡೆ ಹರ್ಷಲ್ ಗಿಬ್ಸ್ ಒಂದರ ನಂತರ ಮತ್ತೊಂದು ಟ್ವೀಟ್ ಮಾಡಿ ಪೊಲಾರ್ಡ್ ರನ್ನು ಅಭಿನಂದಿಸಿದ್ದಾರೆ. ಹರ್ಷಲ್ ಗಿಬ್ಸ್ ಪೊಲಾರ್ಡ್ ಅವರ ಸಿಕ್ಸ್ ಗಳನ್ನು ಹೊಗಳುತ್ತಾ, ಅವರ ಸಾಧನೆಯನ್ನು ಮುಂಬೈ ಇಂಡಿಯನ್ಸ್ ಟೀಮ್ ಜೊತೆಗೆ ಲಿಂಕ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ಮಾರ್ಚ್ ತಿಂಗಳು ಸಿಕ್ಸರ್ ಗಳನ್ನು ಹೊಡೆಯಲು ಮೆಚ್ಚಿನ ತಿಂಗಳು ಎನಿಸುತ್ತದೆ ಎನ್ನುತ್ತಾ, ತಾವು ಸಿಕ್ಸ್ ಹೊಡೆದಿದ್ದು 16 ಮಾರ್ಚ್ 2017 ಹಾಗೂ 3 ಮಾರ್ಚ್ 2021 ಅನ್ನು ಉಲ್ಲೇಖ ಮಾಡಿದ್ದಾರೆ. ಈ ಪಂದ್ಯಾವಳಿಯಲ್ಲಿ ಪೊಲಾರ್ಡ್ 11 ಬಾಲುಗಳಲ್ಲಿ 38 ರನ್ ಗಳನ್ನು ಮಾಡಿದ್ದರು ಎಂಬುದನ್ನು ನಾವಿಲ್ಲಿ ಹೇಳಲು ಇಚ್ಛಿಸುತ್ತೇವೆ. ಅವರು ಮಾಡಿದ 38 ರನ್ ಗಳಲ್ಲಿ ಅವರ ಸಿಕ್ಸ್ ಗಳಿಂದ ಪೇರಿಸಿದ ಮೊತ್ತವೇ 36 ರನ್ ಗಳಾಗಿವೆ.

ಮ್ಯಾಚ್ ನ ಮತ್ತೊಂದು ವಿಶೇಷತೆ ಏನೆಂದರೆ ಶ್ರೀಲಂಕಾದ ಆಟಗಾರ ಆಕಿಲ ಧನಂಜಯ್ ಅವರು ತಮ್ಮ ಮೊದಲನೇ ಓವರ್ ನಲ್ಲಿ ಅನುಕ್ರಮವಾಗಿ ಇವಿನ್ ಲೂಯಿಸ್, ಕ್ರಿಸ್ ಗೇಲ್ ಹಾಗೂ ನಿಕೋಲಸ್ ಪೂರನ್ ಅವರ ವಿಕೆಟುಗಳನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದರು. ಆದರೆ ಮೂರನೇ ಓವರ್ ನಲ್ಲಿ ಅವರ ಆರು ಬಾಲಗಳಿಗೆ ಪೊಲಾರ್ಡ್ 6 ಸಿಕ್ಸ್ ಗಳನ್ನು ಹೊಡೆದು ಹೊಸ ದಾಖಲೆಯನ್ನು ಬರೆದರು.‌ ಒಂದೇ ಓವರ್ ನಲ್ಲಿ ಮೂರು ವಿಕೆಟ್ ಪಡೆದ ಹಾಗೂ ಒಂದೇ ಓವರ್ ನಲ್ಲಿ 6 ಸಿಕ್ಸ್ ಗಳನ್ನು ನೀಡಿದ ಬೌಲರ್ ಕೂಡ ಆಗಿದ್ದಾರೆ ಆಕಿಲ ಧನಂಜಯ.

ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ ಮೂಲಕ ಮೈದಾನಕ್ಕೆ ಇಳಿದ ಶ್ರೀಲಂಕಾ ತಂಡವು 20 ಓವರ್ ಗಳಿಗೆ ಒಂಬತ್ತು ವಿಕೆಟ್ ಗಳನ್ನು ಕಳೆದುಕೊಂಡು 131 ರನ್ ಗಳ ಗುರಿಯನ್ನು ವೆಸ್ಟ್ ಇಂಡೀಸ್ ತಂಡದ ಮುಂದೆ ಇಟ್ಟಿತ್ತು. ವೆಸ್ಟ್ ಇಂಡೀಸ್ ತಂಡವು 41 ಎಸೆತಗಳಲ್ಲಿ ಆರು ವಿಕೆಟ್ ಗಳನ್ನು ಕಳೆದುಕೊಂಡು, 134 ರನ್ನುಗಳನ್ನು ಮಾಡುವ ಮೂಲಕ ಪಂದ್ಯವನ್ನು ಗೆದ್ದಿತ್ತು. ಒಂದೇ ಓವರ್ ನಲ್ಲಿ 6 ಸಿಕ್ಸ್ ಗಳನ್ನು ಹೊಡೆಯುವ ಮೂಲಕ ಪೊಲಾರ್ಡ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.