ಕೊರೊನಾದಿಂದ ಮೃತ ವ್ಯಕ್ತಿಯ ಬಿಲ್ ಪಾವತಿ ಮಾಡಲಿಲ್ಲವೆಂದು ಕುಟುಂಬಸ್ಥರ ಕಾರನ್ನು ವಶಪಡಿಸಿಕೊಂಡ ಆಸ್ಪತ್ರೆ!

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ರಣಕೇಕೆಯನ್ನು ಹಾಕುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಹೀಗೆ ಹಾಹಾಕಾರ ಎದ್ದಿರುವ ರಾಜ್ಯಗಳಲ್ಲಿ ಗುಜರಾತ್ ಕೂಡಾ ಸೇರಿದೆ. ಇಲ್ಲಿನ ಹಲವು ಆಸ್ಪತ್ರೆಗಳಲ್ಲಿ ಕೊರೊನಾ ಪೀಡಿತರು ಹಾಗೂ ಕೊರೊನಾ ದಿಂದ ಸಾವಿಗೀಡಾದ ಶವಗಳ ಸಂಖ್ಯೆ ಏರುತ್ತಲೇ ಇದ್ದು, ಜನರನ್ನು ಆತಂಕಕ್ಕೆ ಈಡು ಮಾಡಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ, ಜನರು ಕೋವಿಡ್ ನಿಂದ ಕಂಗೆಟ್ಟಿರುವ ದು ಸ್ಥಿತಿಯಲ್ಲಿ ಗುಜರಾತಿನ ವಲ್ಸಾಡ್ ಒಂದು ಆಸ್ಪತ್ರೆ ಯಲ್ಲಿ ಅಮಾನವೀಯ ಎನ್ನುವ ಘಟನೆಯೊಂದು ನಡೆದಿದ್ದು, ಮನಷ್ಯತ್ವ, ಮಾನವೀಯತೆ ಎನ್ನುವುದನ್ನು ಕೊರೊನಾ ನುಂಗಿ ಹಾಕಿದೆಯಾ? ಎನ್ನುವ ಅನುಮಾನವನ್ನು ಹುಟ್ಟು ಹಾಕುವಂತಾಗಿದೆ.

ಆಸ್ಪತ್ರೆಯಲ್ಲಿ ಕೊರೊನಾ ಪೇಷೆಂಟ್ ಗೆ ಚಿಕಿತ್ಸೆ ನೀಡಿದ್ದ ಬಿಲ್ ಪಾವತಿ ಮಾಡಿಲ್ಲವೆಂದು, ಕೊರೊನಾದಿಂದ ನಿಧನರಾದ ವ್ಯಕ್ತಿಯ ಶವವನ್ನು ಆತನ ಕುಟುಂಬದವರಿಗೆ ನೀಡಲು ಆಸ್ಪತ್ರೆಯು ನಿರಾಕರಿಸಿದ ಘಟನೆಯೊಂದು ನಡೆದಿದೆ. ಸತ್ತ ವ್ಯಕ್ತಿಯ ಕುಟುಂಬದವರು ಹೇಳುವಂತೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಶವವನ್ನು ನೀಡಲು ನಿರಾಕರಿಸಿದೆ ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿಯು ಶವವನ್ನು ಪಡೆಯಬೇಕಾದರೆ ಮೊದಲು ಆಸ್ಪತ್ರೆಯ ಪೂರ್ತಿ ಬಿಲ್ ಪಾವತಿ ಮಾಡಬೇಕು ಎನ್ನುವ ಸೂಚನೆಯನ್ನು ನೀಡಿದೆ. ಇದು ಯಾವ ಮಟ್ಟಕ್ಕೆ ಹೋಗಿದೆಯೆಂದರೆ ಕಡೆಗೆ ಆಸ್ಪತ್ರೆ ಶವವನ್ನು ಕೊಡಲು ಕುಟುಂಬಸ್ಥರ ವಾಹನವನ್ನು ಅಡ ಇಟ್ಟುಕೊಂಡಿದೆ.

ಕೊರೊನಾ ದಿಂದ ಮೃತನಾದ ವ್ಯಕ್ತಿಯಲ್ಲಿ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಅವರ ಕುಟುಂಬದವರು ಆತನನ್ನು 21 ಸೆಂಚುರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು. ಕೆಲವು ದಿನಗಳಿಂದ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಕಳೆದ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಸೋಂಕಿತ ವ್ಯಕ್ತಿ ನಿಧನರಾಗಿದ್ದಾರೆ.‌ ಮಾದ್ಯಮ ವರದಿಗಳ ಪ್ರಕಾರ ಮೃತ ವ್ಯಕ್ತಿಯ ಕುಟುಂಬದವರ ಬಳಿ ಹಣವಿರಲಿಲ್ಲ. ಆದರೆ ಅವರ ಬಳಿ ಅವರ ಒಂದು ವಾಹನ ಮಾತ್ರವೇ ಇತ್ತು ಎನ್ನಲಾಗಿದ್ದು, ಹಣ ನೀಡಲಾಗದ ಕುಟುಂಬದವರಿಗೆ ಶವವನ್ನು ನೀಡಲು ಆಸ್ಪತ್ರೆ ಅವರಿಂದ ಅವರ ವಾಹನವನ್ನು ಅಡವಿಟ್ಟುಕೊಂಡಿದೆ.

ಈ ಘಟನೆಯ ನಂತರ ಮೃತ ವ್ಯಕ್ತಿಯ ಕುಟುಂಬದವರು ಆಸ್ಪತ್ರೆಯ ವಿ ರು ದ್ಧ ಪೋಲಿಸರಿಗೆ ದೂರನ್ನು ನೀಡಿದ್ದಾರೆ. ಅನಂತರ ಪೋಲಿಸ್ ಅಧಿಕಾರಿಗಳು ಆಸ್ಪತ್ರೆಗೆ ಬಂದು ಆಸ್ಪತ್ರೆ ಸಿಬ್ಬಂದಿ ಅಡವಿಟ್ಟುಕೊಂಡಿದ್ದ ವಾಹನವನ್ನು ಮರಳಿ ಮೃತ ವ್ಯಕ್ತಿಯ ಕುಟುಂಬದವರಿಗೆ ಕೊಡಿಸಿದ್ದಾರೆ. ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಅಕ್ಷಯ್ ನದಕರಣಿ ಅವರ ಪ್ರಕಾರ ಕೆಲವು ದಿನಗಳ ಹಿಂದೆ ಕೂಡಾ ಆಸ್ಪತ್ರೆಯಲ್ಲಿ ಇಂತಹುದೇ ಘಟನೆ ನಡೆದಿತ್ತು ಎನ್ನಲಾಗಿದ್ದು, ಮೃತ ವ್ಯಕ್ತಿಯ ಆಸ್ಪತ್ರೆಯ ಬಿಲ್ ಪಾವತಿ ಮಾಡದ ಕುಟುಂಬದವರಿಗಿಂತ ಗ್ಯಾರಂಟಿಗಾಗಿ ಅವರ ವಾಹನವನ್ನು ಅಡವಿಟ್ಟುಕೊಂಡಿದ್ದರು ಎನ್ನಲಾಗಿದ್ದು, ಕುಟುಂಬಸ್ಥರು ಬಿಲ್ ಪಾವತಿ ಮಾಡಿದ ನಂತರ ವಾಹನ ಮರಳಿಸಲಾಗಿತ್ತು ಎನ್ನಲಾಗಿದೆ.

ಕೋವಿಡ್ ಅಥವಾ ಕೊರೊನಾ ಸೋಂಕು ಜಗದ ದಿಕ್ಕನ್ನೇ ಬದಲಿಸಿದೆ. ಕೊರೊನಾ ತೀವ್ರತೆಯಿಂದಾಗಿ ಸಾಮಾನ್ಯ ಜನರು ದುರ್ಬರವಾಗಿದೆ. ಅನೇಕ ಕಡೆಗಳಲ್ಲಿ ಆಸ್ಪತ್ರೆಗಳು ಮಾನವೀಯತೆಯನ್ನು ಮೀರಿ ಪರಿಸ್ಥಿತಿಯಲ್ಲಿ ಎಷ್ಟು ಲಾಭ ಗಳಿಸಬಹುದು ಎನ್ನುವಂತೆ ವರ್ತಿಸುತ್ತಿವೆ. ಕೆಲವು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ವಿಧಿಸುವ ಬಿಲ್ ಮೊತ್ತ ನೋಡಿಯೇ ಕುಟುಂಬದ ಸದಸ್ಯರು ಭಯ ಪಡುವಂತಾಗಿದೆ. ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ಶ್ರೀಮಂತರ ಮೇಲೆ ಕೊರೊನಾ ಪರಿಣಾಮ ಹೇಗಿದ್ದರೂ ಸಾಮಾನ್ಯರ ಬದುಕಿಗೆ ಮಾತ್ರ ಇದು ಶಾಪವಾಗಿದೆ.