ಖಾಸಗಿ ಉದ್ಯೋಗಕ್ಕೆ ಗುಡ್ ಬೈ ಹೇಳಿ ಸಣ್ಣ ಕೋಣೆಯಲ್ಲಿ ಅಣಬೆ ಬೇಸಾಯ ಆರಂಭಿಸಿದ ವ್ಯಕ್ತಿ; ಇಂದು ತಿಂಗಳಿಗೆ 15-20 ಸಾವಿರ ಆದಾಯ!

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಳ್ಳೆಯದನ್ನು ಹಾಗೂ ವಿಭಿನ್ನವಾಗಿರುವುದನ್ನು ಮಾಡಲು ಬಯಸುತ್ತಾರೆ. ಕೆಲವರು ಉದ್ಯೋಗವನ್ನು ಮಾಡಲು ಬಯಸಿದರೆ, ಇನ್ನು ಕೆಲವರು ಸ್ವಂತ ಉದ್ಯಮವನ್ನು ಆರಂಭಿಸಲು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಉದ್ಯೋಗಗಳನ್ನು ಮಾಡಲು ಅನೇಕರು ಬಯಸುವುದಿಲ್ಲ. ಆದರೆ ಅನಿವಾರ್ಯತೆಗಳು ಅವರನ್ನು ಇಷ್ಟವಿಲ್ಲದಿದ್ದರೂ ಕೆಲಸ ಮಾಡುವ ಹಾಗೆ ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅನೇಕರು ತಮ್ಮ ಉದ್ಯೋಗವನ್ನು ಬಿಟ್ಟು ಕೃಷಿಯ ಕಡೆಗೆ ಗಮನವನ್ನು ಹರಿಸುತ್ತಿದ್ದಾರೆ. ಕೃಷಿಯಲ್ಲಿ ಹೊಸ ಹೊಸ ಉದ್ಯೋಗ ಅವಕಾಶಗಳು ಹೊಮ್ಮುತ್ತಿದ್ದು, ಇದು ಹಲವರನ್ನು ತನ್ನ ಕಡೆಯ ಆಕರ್ಷಿಸುತ್ತಿದೆ. ಇದೊಂದು ಉತ್ತಮ ಬೆಳವಣಿಗೆ ಕೂಡಾ ಆಗಿದೆ. ಉದ್ಯೋಗಕ್ಕಿಂತ ಕೃಷಿಯಲ್ಲಿ ಹೆಚ್ಚು ಆದಾಯ ಎನ್ನುವ ಸತ್ಯವನ್ನು ಅರಿತು ಅನೇಕ ಮಂದಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅಣಬೆ ಬೇಸಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ. ಅನೇಕ ಮಂದಿ ಉದ್ಯೋಗವನ್ನು ತೊರೆದು ಈ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಕೃಷಿ ಉತ್ಪನ್ನಗಳ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ನಾವಿಂದು ಉದ್ಯೋಗವನ್ನು ಮಾಡಲು ಇಷ್ಟವಿಲ್ಲದೇ ಕೃಷಿಯನ್ನೇ ತನ್ನ ಜೀವನಾಧಾರವಾಗಿ ಮಾಡಿಕೊಂಡ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಯೋಣ ಬನ್ನಿ. ಕಾಸ್ತಕರ್ ಪ್ರತಾಪ್ ಸಿಂಗ್ ಗಡಿಯಾ, ಇವರು ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ಕಟಾಯತ್ಬರಾ ಎನ್ನುವ ಪ್ರದೇಶದ ನಿವಾಸಿಯಾಗಿದ್ದಾರೆ. 42 ವರ್ಷದ ಪ್ರತಾಪ್ ಸಿಂಗ್ ಅವರು ದೆಹಲಿಯಲ್ಲಿ ಬಂದು ಖಾಸಗಿ ಉದ್ಯೋಗವನ್ನು ಮಾಡುತ್ತಿದ್ದರು.

ಖಾಸಗಿ ಉದ್ಯೋಗವನ್ನು ಮಾಡುತ್ತಾ, ಒಂಟಿಯಾಗಿ ನಗರಗಳಲ್ಲಿ ನೆಲೆಸಿರುವವರಿಗೆ ದಿನಕ್ಕೆ ಹತ್ತರಿಂದ ಹನ್ನೆರಡು ಗಂಟೆಗಳ ಕೆಲಸದ ನಂತರ, ತಮಗಾಗಿ ಆಹಾರ ಸಿದ್ದ ಮಾಡಿಕೊಳ್ಳುವುದು, ಬಟ್ಟೆಗಳನ್ನು ಒಗೆದುಕೊಳ್ಳುವುದು ಹಾಗೂ ಇನ್ನಿತರ ಕೆಲಸಗಳು ಇರುತ್ತವೆ. ಆದ್ದರಿಂದಲೇ ಅನೇಕರಿಗೆ ವಿಶ್ರಾಂತಿ ಎನ್ನುವುದೇ ಸಿಗದ ಖಾಸಗಿ ಉದ್ಯೋಗ ಹಿಡಿಸುವುದಿಲ್ಲ. ಪ್ರತಾಪ್ ಸಿಂಗ್ ಅವರಿಗೂ ಇಂತಹದೇ ಅನುಭವ ಆದಾಗ ಅವರು ದೆಹಲಿಯಲ್ಲಿ ತಾನು ಮಾಡುತ್ತಿದ್ದ ಖಾಸಗಿ ಉದ್ಯೋಗಕ್ಕೆ ರಾಜೀನಾಮೆ ಯನ್ನು ನೀಡಿ, ತಮ್ಮ ಊರಿಗೆ ವಾಪಸಾದರು. ಸ್ವಂತವಾಗಿ ಏನಾದರೂ ಮಾಡುವ ಆಲೋಚನೆ ಮಾಡಿದರು. ಅವರ ಆಲೋಚನೆಯ ಫಲವಾಗಿಯೇ ಅವರು ಅಂದು ಅಣಬೆ ಬೇಸಾಯವನ್ನು ಮಾಡುವ ನಿರ್ಧಾರ ಮಾಡಿದರು.

ಪ್ರತಾಪ್ ಸಿಂಗ್ ಅವರು ಹೇಳುವಂತೆ ಅಣಬೆ ಬೇಸಾಯವನ್ನು ಮಾಡಲು, ಉತ್ತಮವಾದ ಅಣಬೆ ಫಸಲನ್ನು ಪಡೆಯಲು 20 ರಿಂದ 25 ದಿನಗಳಲ್ಲಿ ಅಣಬೆಯನ್ನು ಸಿದ್ಧ ಮಾಡಲಾಗುತ್ತದೆ. ಇದನ್ನು ಬೆಳೆಸಲು 24 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅಗತ್ಯವಿರುತ್ತದೆ. ಇವರ ಊರು ಒಂದು ಗುಡ್ಡಗಾಡು ಪ್ರದೇಶದಲ್ಲಿ ಇದ್ದು, ಬೆಟ್ಟ ಪ್ರದೇಶಗಳಲ್ಲಿ ಎಲ್ಲವೂ ಸಿಗುತ್ತದೆ ಆದರೆ ಅನೇಕರು ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಎಂದಿದ್ದಾರೆ ಪ್ರತಾಪ್ ಸಿಂಗ್. ಗುಡ್ಡಗಾಡು ಪ್ರದೇಶದಲ್ಲಿ ಅಣಬೆ ಬೆಳೆಯುವುದು ಸಾಧ್ಯವಿಲ್ಲ ಎನ್ನುವುದು ಜನರ ನಂಬಿಕೆಯಾಗಿತ್ತು, ಅಲ್ಲದೆ ಅರಣ್ಯದಲ್ಲಿ ಬೆಳೆಯುವ ಅಣಬೆಯು ಉತ್ತಮವಾದುದಲ್ಲ ಎಂದು ಅದನ್ನು ಜನ ಬಳಸುವುದಿಲ್ಲ. ಆದರೆ ಇಂದು ವೈಜ್ಞಾನಿಕ ಕೃಷಿ ಪದ್ಧತಿಯ ಅಳವಡಿಕೆಯಿಂದ ಗುಡ್ಡ ಗಾಡು ಪ್ರದೇಶಗಳಲ್ಲಿ ಕೂಡ ಉತ್ತಮವಾದ ಅಣಬೆ ಬೇಸಾಯವನ್ನು ಮಾಡಲು ಸಾಧ್ಯವಿದೆ ಎಂದು ಪ್ರತಾಪ್ ಅವರು ಹೇಳುತ್ತಾರೆ.

ಅಣಬೆ ಬೇಸಾಯಕ್ಕೆ 24ರಿಂದ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅಗತ್ಯವಿದ್ದು, ಪ್ರತಾಪ್ ಸಿಂಗ್ ಅವರ ಊರಿನಲ್ಲಿ ಪ್ರಸ್ತುತ 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಅಣಬೆ ಬೇಸಾಯಕ್ಕಾಗಿ ಅವರು ಉಷ್ಣಾಂಶವನ್ನು ಏರಿಕೆ ಮಾಡಲು ಹೈಲೋಜನ್ ಬಳಸಿಕೊಂಡಿದ್ದಾರೆ. ಅಣಬೆ ಬೇಸಾಯವನ್ನು ಮಾಡಲು ಅವರು ಜೌಳಿಕೋಟ್ ನಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಅಣಬೆ ಕೃಷಿಗಾಗಿ ತೋಟಗಾರಿಕಾ ಇಲಾಖೆಯು ಅವರಿಗೆ 50 ಪ್ರತಿಶತ ರಿಯಾಯಿತಿಯಲ್ಲಿ ಅಣಬೆಯ ಬೀಜಗಳು ಹಾಗೂ ಗೊಬ್ಬರ ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ಪಡೆಯಲು ನೆರವನ್ನು ನೀಡಿದ್ದು, 21 ದಿನಗಳ ಅವಧಿಯಲ್ಲಿ ಪ್ರತಾಪ್ ಅವರು ಸುಮಾರು 15 ರಿಂದ ಕಿಲೋ ಅಣಬೆಯನ್ನು ಬೆಳೆಯುತ್ತಾರೆ.

ತೋಟಗಾರಿಕೆ ಇಲಾಖೆಯು ಅಣಬೆ ಬೇಸಾಯ ಮಾಡುವವರಿಗೆ ತರಬೇತಿ ನೀಡುವ ಜೊತೆಗೆ ಅವರಿಗೆ 50% ಸಹಾಯಧನವನ್ನು ಕೂಡಾ ನೀಡುತ್ತದೆ.
ಇದರಿಂದ ಅನೇಕ ಕೃಷಿಕರಿಗೂ ಕೂಡ ಸಾಕಷ್ಟು ಅನುಕೂಲವಾಗುತ್ತಿದೆ. ಪ್ರತಾಪ್ ಸಿಂಗ್ ಅವರು ತಾನು ಮಾತ್ರವೇ ಅಣಬೆ ಬೇಸಾಯವನ್ನು ಮಾಡುವುದಲ್ಲದೆ, ಅನೇಕರಿಗೆ ಇದನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹವನ್ನು ಸಹ ನೀಡುತ್ತಾರೆ. ವಿಶೇಷವಾಗಿ ಯುವಜನರಿಗೆ ಅಣಬೆ ಬೇಸಾಯದ ಮೂಲಕ ಸಂತ ಉದ್ಯಮವನ್ನು ಕಟ್ಟಿಕೊಳ್ಳುವ ಸಲಹೆಯನ್ನು ಅವರು ನೀಡುತ್ತಾರೆ. ವರ್ಷದಿಂದ ವರ್ಷಕ್ಕೆ ಅಣಬೆಗೆ ಬೇಡಿಕೆಯು ಹೆಚ್ಚುತ್ತಿದ್ದು, ಕೊರೋನಾ ನಂತರದ ಕಾಲದಲ್ಲಿ ಉದ್ಯೋಗವನ್ನು ಕಳೆದುಕೊಂಡಿರುವ ಅನೇಕ ಜನರಿಗೆ ಇದು ಒಂದು ಉದ್ಯೋಗದ ಸೆಲೆಯಾಗಿ ಪರಿಣಮಿಸಿದೆ.