ಗೋಮಾತೆಯ ಮೇಲಿನ ಪ್ರೀತಿ ಅಂದ್ರೆ ಇದು..ಹಸುವಿಗೆ ಉಳಿಸಿಕೊಳ್ಳಲು ಇಡೀ ಕುಟುಂಬವೇ ಗಾಡಿಗೆ ಹೆಗಲು ನೀಡಿ ತಳ್ಳುತ್ತ ಆಸ್ಪತ್ರೆಗೆ ಒಯ್ದು ದಾಖಲಿಸಿದರು!

ಗೋಮಾತೆಯನ್ನು ರಕ್ಷಿಸಿರಿ ಎಂದು ಬರೀ ಸಂದೇಶ ರವಾನೆ ಮಾಡಿದರೆ ಸಾಲದು, ಅದಕ್ಕಾಗಿ ಸಮಯ ಬಂದಾಗ ಪ್ರಾಣವನ್ನು ನೀಡಲು ತಯಾರಿರುವ ಜನ ಈ ನೆಲದ ಮೇಲೆ ಇದ್ದಾರೆ. ಯಾಕೆಂದರೆ ಇದರ ಉದಾಹರಣೆ ನೆರೆಯ ಮಹಾರಾಷ್ಟ್ರದಿಂದ ವರದಿಯಾಗಿದೆ.

ಥಾಣೆ ಜಿಲ್ಲೆಯ ವಿಹಿ ಹೆಸರಿನ ಊರಲ್ಲಿ ಮೇಲೆ ಹೇಳಿದ ಘಟನೆ ಬೆಳಕಿಗೆ ಬಂದಿದೆ. ಗಾಯಗೊಂಡ ಹಾಗೂ ಗರ್ಭಾವ್ಥೆಯಲ್ಲಿದ್ದ ಹಸುವನ್ನು ಕುಟುಂಬದ ಸದಸ್ಯರೆಲ್ಲರೂ ಬೆಂಕಿಯಂತಹ ಸುಡು ಬಿಸಿಲಲ್ಲಿ ಎತ್ತಿನ ಗಾಡಿಯಲ್ಲಿ ಹಸುವಿಗೆ ಕೂಡಿಸಿ ಸ್ವತಃ ತಾವೇ ಜಗ್ಗುತ್ತ ಅಥವಾ ತಳ್ಳಿಕೊಂಡು ಉಪಚಾರಕ್ಕಾಗಿ ಆಸ್ಪತ್ರಗೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ನೋಡಿದ ಆ ಮೂಕ ಪ್ರಾಣಿಯ ಕಣ್ಣಲ್ಲಿಯೂ ಸಹ ನೀರು ಬಂದಿತ್ತು. ಜೀವವಿರುವ ತನಕ ಜೊತೆ ನೀಡಿದ ‘ಡವಳಿ’ (ಹಸುವಿನ ಹೆಸರು) ಒಂದು ಅಪಘಾತದಲ್ಲಿ ಗಾಯಗೊಂಡಿತ್ತು. ಅದಕ್ಕಾಗಿ ಅದನ್ನು ಉಳಿಸಿಕೊಳ್ಳಲು ಮನೆಯ ಸದಸ್ಯರು ಎತ್ತಿ ಎತ್ತಿನ ಗಾಡಿಯಲ್ಲಿ ಹಾಕಿ ಎತ್ತುಗಳ ಸ್ಥಾನದಲ್ಲಿ ತಮಗೆ ತಾವೇ ಹೂಡಿಕೊಂಡು ಸುಡು ಬಿಸಿಲಲ್ಲಿ ಪ್ರಾಣಿಗಳ ಆಸ್ಪತ್ರೆಗೆ ಕರೆತಂದಿದ್ದಾರೆ. ಮೂಲಭೂತ ಸೌಕರ್ಯಗಳ ಅಲಭ್ಯತೆ ಇನ್ನೂ ಗ್ರಾಮೀಣ ಭಾಗಗಳಲ್ಲಿ ಕಂಡು ಬರುತ್ತದೆ. ಆದರೆ ತಮ್ಮ ಸಾಕು ಪ್ರಾಣಿಗಳ ಮೇಲೆ ಇಟ್ಟ ಪ್ರೀತಿ ಮಾತ್ರ ಯಾವತ್ತೂ ಕಡಿಮೆಯಾಗಿಲ್ಲ.

ಥಾಣೆ ಹತ್ತಿರದ ಕಸಾರಾ ಘಟ್ಟದಲ್ಲಿರುವ ವಿಹಿ ಹೆಸರಿನ ಊರಿನಲ್ಲಿ ತುಕಾರಾಂ ತೆಲಂ ಹೆಸರಿನ ಕುಟುಂಬ ಹಾಗೂ ಡವಳಿ ಮತ್ತು ಪವಳಿ ಈ ಜೋಡಿ ಹಸುಗಳ ಹಾಲು ಮಾರಿಕೊಂಡು ತಮ್ಮ ಉದರ ನಿರ್ವಾಹ ಮಾಡಿಕೊಂಡಿರುತ್ತಾರೆ. ಕಳೆದ ಸೋಮವಾರ ಹಸುವನ್ನು ಮೇಯಿಸಲು ತುಕಾರಾಂ ಬೆಟ್ಟದ ಮೇಲೆ ತೆಗೆದುಕೊಂಡು ಹೋದಾಗ ಡವಳಿ ಕಾಲು ಜಾರಿ 6 ರಿಂದ 7 ಅಡಿ ಎತ್ತರದ ತಗ್ಗಿನಲ್ಲಿ ಬಿದ್ದಿತು. ಗ್ರಾಮಸ್ಥರ ಸಹಾಯದಿಂದ ಹಾಗೂ ಹೀಗೂ ಹಸುವನ್ನು ಮೇಲೆ ತೆಗೆಯಲಾಯಿತು. ಇದರಲ್ಲಿ ಹಸುವಿನ ಬೆನ್ನೆಲುಬು ಮುರಿದು ಹೋಗಿದೆ. ಅದರಲ್ಲಿ ಹಸು ಗರ್ಭವತಿ ಬೇರೆ. ಊರಲ್ಲಿ ಪಶುವೈದ್ಯರು ಇಲ್ಲದ ಕಾರಣ ಮತ್ತು ವಾಹನ ಸೌಕರ್ಯ ಲಭಿಸದ ಕಾರಣ ಕುಟುಂಬವು ಎತ್ತಿನಗಾಡಿಯಲ್ಲಿಯೇ ಸುಮಾರು 3 ಕಿಲೋಮೀಟರ್ ಅಂತರವನ್ನು ಕ್ರಮಿಸಿದ್ದಾರೆ.