ಜೀವನದಲ್ಲಿ ಸ್ಪೂರ್ತಿ ಬಯಸಿದರೆ, ಇದಕ್ಕಿಂತ ಸ್ಪೂರ್ತಿದಾಯಕ ಕಥೆ ಇನ್ನೊಂದಿಲ್ಲ: ಐಎಎಸ್ ಆದ ಮಹಿಳೆಯ ಕಥೆ

ವಿವಾಹಕ್ಕೂ ಮುನ್ನ ಯುವತಿಯರು ತಮ್ಮ ಜೀವನದ ಬಗ್ಗೆ ಅನೇಕ ಕನಸುಗಳನ್ನು ಕಂಡಿರುತ್ತಾರೆ.‌ ತಾವು ಜೀವನದಲ್ಲಿ ತಮ್ಮದೇ ಆದ ಒಂದು ಸ್ಥಾನ, ಹೆಸರು ಪಡೆಯಬೇಕು, ತಾವು ಕೂಡಾ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಲ್ಪಡಬೇಕೆನ್ನುವ ಗುರಿಯನ್ನು ಕೂಡಾ ಹೊಂದಿರುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಯುವತಿಯರು ಮದುವೆ ನಂತರ ಮನೆ,ಸಂಸಾರ, ಮಕ್ಕಳು ಹಾಗೂ ಜವಾಬ್ದಾರಿ ಗಳ ನಡುವೆ ತಮ್ಮ ಇಡೀ ಜೀವನವನ್ನೇ ಕಳೆಯುವುದು ಮಾತ್ರವಲ್ಲದೇ ತಮ್ಮ ಕನಸುಗಳನ್ನು ಅವರು ಮರೆತು ಬಿಡುತ್ತಾರೆ. ಆದರೆ ಇಂತಹವರ ನಡುವೆಯೇ ಕೆಲವು ಮಹಿಳೆಯರು ಮಾತ್ರ ಮದುವೆಯ ನಂತರವೂ ಕೂಡಾ ತಮ್ಮ ಕನಸು ಹಾಗೂ ಗುರಿಗಳ ಕಡೆಗೆ ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸದಿಂದ ನಡೆದು ಗುರಿಯನ್ನು ಸಾಧಿಸುವುದು ಮಾತ್ರವಲ್ಲದೇ ಅನೇಕ ಯುವತಿಯರು ಹಾಗೂ ಮಹಿಳೆಯರಿಗೆ ಸ್ಪೂರ್ತಿಯಾಗುತ್ತಾರೆ.

ಈಗ ನಾವು ಹೇಳಲು ಹೊರಟಿರುವ ಕಥೆಯಲ್ಲಿ ಕೂಡಾ ಮಹಿಳೆಯೊಬ್ಬರು ತನ್ನ ಎರಡೂವರೆ ವರ್ಷದ ಮಗುವನ್ನು ಹಾಗೂ ಕುಟುಂಬವನ್ನು ಬಿಟ್ಟು ದೂರದಲ್ಲಿ ಉಳಿದು ಯುಪಿಎಸ್ಎಸ್ಸಿ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಿದ್ದು ಮಾತ್ರವೇ ಅಲ್ಲದೇ ಆಕೆ ಯುಪಿಎಸ್ಎಸ್ಸಿ ಪರೀಕ್ಷೆಯಲ್ಲಿ 90 ನೇ ರ‍್ಯಾಂಕ್ ಪಡೆದು ಸಫಲತೆಯನ್ನು ತನ್ನದಾಗಿಸಿಕೊಳ್ಳುವ ಮೂಲಕ ದೃಢ ನಿಶ್ಚಯವಿದ್ದರೆ ಯಶಸ್ಸಿನ ಹಾದಿಯಲ್ಲಿ ಯಾವುದೇ ಅಡ್ಡಿ ಉಂಟಾದರೂ ಕೂಡಾ ಅದನ್ನು ದಾಟಿ ಮುನ್ನಡೆಯಲು ಸಾಧ್ಯ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಇಂತಹುದೊಂದು ಸಾಧನೆಯನ್ನು ಮೆರೆದ ಮಹಿಳೆ ಪಾಟ್ನಾದ ಅನುಪಮಾ ಸಿಂಗ್ ಅವರು.

ಪಾಟ್ನಾದಲ್ಲೇ ತನ್ನ ಪ್ರಾರಂಭಿಕ ಶಿಕ್ಷಣವನ್ನು ಪಡೆದ ಅನುಪಮಾ ಅವರ ತಂದೆ ನಿವೃತ್ತ ಎಂಆರ್ ಆಗಿದ್ದು ಅವರ ತಾಯಿ ಒಬ್ಬ ಅಂಗನವಾಡಿ ಕಾರ್ಯಕರ್ತೆಯಾಗಿದ್ದವರು. ಓದಿನಲ್ಲಿ ಸದಾ ಮುಂದೆ ಇದ್ದ ಅನುಪಮಾ 12 ನೇ ತರಗತಿಯ ನಂತರ ಎಂಬಿಬಿಎಸ್ ಗೆ ದಾಖಲಾದರು. ಅದನ್ನು ಸಫಲವಾಗಿ ಮುಗಿಸಿದ ಅನುಪಮಾ ಅವರು ಅನಂತರ ಬಹಳ ಕಠಿಣವೆಂದೇ ಕರೆಯಲಾಗುವ ಎಂಎಸ್ ಪದವಿಯನ್ನು ಕೂಡಾ ಪಡೆದರು. 2014 ರಲ್ಲಿ ಅವರು ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಮಾಸ್ಟರ್ ಆಫ್ ಸರ್ಜರಿ ಪದವಿಯನ್ನು ಪಡೆದುಕೊಂಡರು. ನಂತರ ಅವರಿಗೆ ವಿವಾಹವಾಗಿ ಮಗುವಿಗೆ ಜನ್ಮ ನೀಡಿದರು.

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅನೇಕ ಅವ್ಯವಸ್ಥೆಗಳು ಕಂಡಾಗ ಡಾಕ್ಟರ್ ಆಗಿ ಚಿಕಿತ್ಸೆ ನೀಡಬಹುದೇ ಹೊರತು ವ್ಯವಸ್ಥೆಯಲ್ಲೊಂದು ಬದಲಾವಣೆ ತರಲು ಬಯಸಿದರು. ಅದಕ್ಕಾಗಿ ಅವರು ತಮ್ಮ ಗಮನವನ್ನು ಸಿವಿಲ್ ಸರ್ವೀಸ್ ನ ಕಡೆಗೆ ಹರಿಸಿದರು. ಒಂದು ವರ್ಷದ ಸಮಯವನ್ನು ತೆಗೆದುಕೊಂಡು ಪತಿಯ ಅನುಮತಿಯೊಂದಿಗೆ ಆಕೆ ಮನೆ, ಮಗುವನ್ನು ಅಗಲಿ ದೆಹಲಿಗೆ ಶಿಫ್ಟ್ ಆದರು. ಅಲ್ಲಿ ಆಕೆ ಐಎಎಸ್ ಕೋಚಿಂಗ್ ಗೆ ಸೇರಿಕೊಂಡರು. ಸೈನ್ಸ್ ವಿದ್ಯಾರ್ಥಿನಿಯಾಗಿದ್ದ ಅವರಿಗೆ ಕಲಾ ವಿಷಯಗಳು ಅರ್ಥವಾಗದೇ ಕೋಚಿಂಗ್ ಸೆಂಟರನ್ನು ಸಂಪರ್ಕಿಸಿದರು. ಆಗ ಕೋಚಿಂಗ್ ಸೆಂಟರ್ ನಲ್ಲಿ ಮಾರ್ಗದರ್ಶನ ಮಾತ್ರವೇ ಸಿಗುವುದೇ ಹೊರತು ಪ್ರಯತ್ನ ನಮ್ಮದಾಗಬೇಕೆಂದು ಅರ್ಥ ವಾಯಿತು ಎನ್ನುತ್ತಾರೆ ಅನುಪಮಾ.

ದೆಹಲಿಯಲ್ಲಿ ಇದ್ದ ದಿನಗಳಲ್ಲಿ ಮನೆ, ಮಗುವಿನ ನೆನಪಾಗಿ ಕಣ್ಣೀರು ಬರುತ್ತಿತ್ತು ಎನ್ನುತ್ತಾರೆ. ಆದರೆ ಗುರಿಯ ಕಡೆ ನಡೆಯಬೇಕೆನ್ನುವ ಅವರ ಆಶಯಕ್ಕೆ ಅವರ ಪತಿ ಹಾಗೂ ನಾದಿನಿ ಇಬ್ಬರೂ ಸಹಕರಿಸಿದರು ಅನುಪಮಾಗೆ ಇದು ಬಹಳ ಸಹಾಯವನ್ನು ಒದಗಿಸಿತು. ಹಗಲು ರಾತ್ರಿ ಶ್ರಮವಹಿಸಿ, ತನ್ನ ಪರೀಕ್ಷಾ ಸಿದ್ಧತೆಗೆ ಎದುರಾದಂತಹ ಎಲ್ಲಾ ಸಮಸ್ಯೆಗಳನ್ನು ಮೀರಿ ಆಕೆ ನಡೆಸಿದ ಪ್ರಯತ್ನದ ಫಲವಾಗಿ ಮೊದಲ ಬಾರಿಯೇ ಅಂದರೆ 2019 ರಲ್ಲಿ ಯುಪಿಎಸ್ಎಸ್ಸಿ ಪರೀಕ್ಷೆಯಲ್ಲಿ 90 ನೇ ರ‍್ಯಾಂಕ್ ಪಡೆದುಕೊಂಡರು. ಅನುಪಮಾ ಹೇಳುವುದೊಂದೇ ಜೀವನದಲ್ಲಿ ಕನಸನ್ನು ಕಾಣುವ ಶಕ್ತಿಯನ್ನು ದೇವರು ನೀಡಿದ್ದಾನೆ ಎಂದರೆ ಅದನ್ನು ಸಾಕಾರ ಮಾಡಿಕೊಳ್ಳುವ ಶಕ್ತಿಯನ್ನು ಕೂಡಾ ನಮಗೆ ನೀಡಿರುತ್ತಾನೆ. ಆದ್ದರಿಂದಲೇ ಛಲವನ್ನು ಬಿಡದೇ ಮುಂದೆ ಸಾಗಬೇಕು ಎನ್ನುತ್ತಾರೆ.