ಫುಟ್ ಪಾತ್ ನಲ್ಲಿ ನಾಯಿಯ ಜೊತೆ ಮಲಗಿದ್ದ ಬಾಲಕ: ತಂದೆ ಜೈಲಿನಲ್ಲಿದ್ದರೆ, ತಾಯಿ ಮಗನನ್ನು ಬಿಟ್ಟು ಹೋಗಿದ್ದಾಳೆ!
ದೇಶವು ಒಂದು ಕಡೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೇ ವೇಳೆ ಇನ್ನೂ ನಮ್ಮ ದೇಶದಲ್ಲಿ ಅದೆಷ್ಟೋ ಜನ ಮಕ್ಕಳು ಅನಾಥರಂತೆ, ಅಸಹಾಯಕರಾಗಿ ಆಶ್ರಯ ಕೂಡಾ ಇಲ್ಲದೇ ರಸ್ತೆಯಲ್ಲಿ ಮಲಗಿ, ರಸ್ತೆಯಲ್ಲೇ ಬದುಕುತ್ತಿರುವುದು ವಾಸ್ತವ. ಸರ್ಕಾರಗಳು ಇಂತಹವರ ರಕ್ಷಣೆ ಹಾಗೂ ಏಳಿಗೆಗಾಗಿ ಏನೇನೋ ಯೋಜನೆಗಳು ಸಿದ್ಧವಾಗಿದೆ ಎನ್ನುತ್ತದೆಯಾದರೂ ನಮ್ಮ ಕಣ್ಮುಂದೆಯೇ ಇಂತಹ ಅಸಹಾಯಕ ಮಕ್ಕಳು ಓಡಾಡುವುದು ಕಂಡಾಗ ಸರ್ಕಾರವು ಯಾರಿಗಾಗಿ ಯೋಜನೆಗಳನ್ನು ಮಾಡಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ಅಸಹಾಯಕ ಮಕ್ಕಳಿಗೆ ಒಂದು ಸೂರು ಹಾಗೂ ಶಿಕ್ಷಣ ನೀಡುವುದು ಇಂದಿಗೂ ಸಮರ್ಪಕವಾಗಿ ಸಾಧ್ಯವಾಗಿಲ್ಲ.
ಉತ್ತರ ಪ್ರದೇಶದ ಮುಜಪ್ಪರನಗರದ ವ್ಯಕ್ತಿಯೊಬ್ಬರು ಇತ್ತೀಚಿಗೆ ತೆಗೆದ ಒಬ್ಬ ಅಸಹಾಯಕ ಬಾಲಕನ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು ಈ ಫೋಟೋದಲ್ಲಿ ಅಸಹಾಯಕ ಬಾಲಕನು ನಾಯಿಯ ಜೊತೆ ಮಲಗಿದ್ದು ನೋಡುಗರ ಮನಸ್ಸನ್ನು ಭಾವುಕರನ್ನಾಗಿ ಮಾಡುವಂತೆ ಇದೆ. ಫೋಟೋ ವೈರಲ್ ಆದ ಕೂಡಲೇ ಜಿಲ್ಲೆಯ ಆಡಳಿತವು ತನ್ನ ಕುಂಭ ಕರ್ಣ ನಿದ್ದೆಯಿಂದ ಹೊರ ಬಂದಿದ್ದು, ಕೂಡಲೇ ಕಾರ್ಯಪ್ರವೃತ್ತವಾಗಿ ನೀಡಿದ ನಿರ್ದೇಶನಗಳ ಮೇರೆಗೆ ಅಧಿಕಾರಿಗಳ ಸೂಚನೆಯಂತೆ ಪೋಲಿಸರು ಆ ಬಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಅಸಹಾಯಕ ಹಾಗೂ ಮುಗ್ಧ ಬಾಲಕನನ್ನು ಪೋಲಿಸರು ಆತ ಏಕೆ ಹೀಗೆ ರಸ್ತೆಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿದೆ ಎಂದು ಕೇಳಿದಾಗ ಆತ ಹೇಳಿದ ಕಥೆ ಎಲ್ಲರನ್ನೂ ಭಾವುಕರನ್ನಾಗಿ ಮಾಡಿದೆ. ಸುಮಾರು 9-10 ವರ್ಷದ ಈ ಬಾಲಕ ತನ್ನ ಹೆಸರನ್ನು ಅಂಕಿತ್ ಎಂದು ತಿಳಿಸಿದ್ದಾನೆ. ಬಾಲಕನ ತಂದೆ ಜೈಲಿನಲ್ಲಿ ಇದ್ದು, ಆತನ ತಾಯಿ ಮಗನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ಅಲ್ಲದೇ ಬಾಲಕನಿಗೆ ಆತನ ಕುಟುಂಬದವರ ಬಗ್ಗೆ ಇನ್ನೇನು ಮಾಹಿತಿ ಕೂಡಾ ತಿಳಿದಿಲ್ಲ. ಈ ಅಮಾಯಕ ಹುಡುಗನು ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಕಸವನ್ನು ಆಯುವ ಮೂಲಕ ಒಂದಷ್ಟು ಸಂಪಾದನೆ ಮಾಡಿಕೊಂಡು ಜೀವನ ಮಾಡುತ್ತಿದ್ದಾನೆ.
ಅಲ್ಲದೇ ತನ್ನ ಜೊತೆ ಇರುವ ನಾಯಿಗೂ ಕೂಡಾ ಊಟ ಹಾಕಿ ಅದರ ಹೊಟ್ಟೆಯನ್ನು ತುಂಬಿಸುವ ಬಾಲಕ ಆ ನಾಯಿಗೆ ಡೈನಿ ಎಂದು ಹೆಸರನ್ನು ಇಟ್ಟಿದ್ದಾನೆ. ರಾತ್ರಿ ವೇಳೆ ಚಳಿ ಗಾಳಿಯಲ್ಲೂ ಕೂಡಾ ಬಾಲಕ ಮುಜಪ್ಪರನಗರದ ಶಿವ ಚೌಕ ಎನ್ನುವ ಕಡೆ ಯಾವುದೋ ಒಂದು ಅಂಗಡಿಯ ಮುಂದೆ ತನ್ನ ಸಂಗಾತಿಯಾಗಿರುವ ನಾಯಿಯ ಜೊತೆಗೆ ಮಲಗಿ ಬಿಡುತ್ತಾನೆ. ನಾಯಿಯು ತನಗೆ ನಿತ್ಯ ಆಹಾರ ನೀಡುವ ತನ್ನ ಮಾಲೀಕನ ಜೊತೆಗೆ ಮಲಗಿ ಆತನ ರಕ್ಷಣೆಯನ್ನು ಮಾಡುತ್ತಿತ್ತು. ಹಲವು ದಿನಗಳ ಹಿಂದೆ ತೆಗೆದ ಈ ಫೋಟೋ ವೈರಲ್ ಆದ ಮೇಲೆ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿತ್ತು.

ಜಿಲ್ಲೆಯ ಎಸ್ ಎಸ್ ಪಿ ಅಭಿಷೇಕ್ ಯಾದವ್ ಅವರು ಮಗುವನ್ನು ಹುಡುಕಲು ಒಂದು ಪೋಲಿಸ್ ತಂಡವನ್ನು ರಚಿಸಿದ ಮೇಲೆ ಪೋಲಿಸರು ಕಾರ್ಯಪ್ರವೃತ್ತರಾಗಿ ಬಾಲಕನನ್ನು ನಗರದಲ್ಲಿ ಹುಡುಕುವಲ್ಲಿ ಯಶಸ್ವಿಯಾಗಿದ್ದರು. ಅದಾದ ನಂತರ ಬಾಲಕನನ್ನು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಆರೈಕೆಯಲ್ಲಿ ಇರಿಸಲಾಗಿದೆ. ಅಲ್ಲದೇ ಆತನಿಗೆ ಉತ್ತಮವಾದ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿ ಯನ್ನು ಜಿಲ್ಲಾಡಳಿತವು ವಹಿಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ.