ಮಂಗಳ ಗ್ರಹದ ಮೇಲೆ ನೀರಿನ ಪತ್ತೆ: ಒಮ್ಮೆ ಒಣ ಭೂಮಿ ಮತ್ತೊಮ್ಮೆ ತೇವಾಂಶ. NASA ದ ಕ್ಯೂರಿಯಾಸಿಟಿ ರೋವರ್ ನ ಹೊಸ ಮಾಹಿತಿ
ಮಂಗಳನ ಅಂಗಳದಲ್ಲಿ ಏನಿದೆ ? ಎಂಬುದನ್ನು ತಿಳಿದುಕೊಳ್ಳಲು ನಾಸಾ ಬಹಳ ವರ್ಷಗಳಿಂದ ಪ್ರಯತ್ನವನ್ನು ಮಾಡುತ್ತಲೇ ಇದೆ. ಮಂಗಳ ಗ್ರಹದ ಸಂಪೂರ್ಣ ಅಧ್ಯಯನಕ್ಕಾಗಿ ನಾಸಾ ಬಗೆ ಬಗೆಯ ಪ್ರಯೋಗಗಳನ್ನು ಮಾಡುತ್ತಲೇ ಬರುತ್ತಿದೆ
ಮಂಗಳದ ಮೇಲೆ ಜೀವಗಳು ಇದ್ದವೇ?? ಎನ್ನುವ ಪುರಾವೆಗಳನ್ನು ಅನ್ವೇಷಣೆ ಮಾಡುತ್ತಿದ್ದು, ಮಂಗಳನ ಮೇಲೆ ಭವಿಷ್ಯದಲ್ಲಿ ಜೀವನದ ನಿರ್ಮಾಣ ಸಾಧ್ಯವಿದೆಯೇ ಎನ್ನುವ ವಿಚಾರವನ್ನು ಕುರಿತಾಗಿ ಕೂಡಾ ಸಾಕಷ್ಟು ಸಂಶೋಧನೆಗಳು ನಡೆಸಿತ್ತಲೇ ಇದೆ. ಆಗಾಗ ನಾಸಾದಿಂದ ಹೊಸ ಹೊಸ ವರದಿಗಳು ಹೊರಗೆ ಬರುವ ಮೂಲಕ ಮಂಗಳನ ಮೇಲೆ ಭವಿಷ್ಯದಲ್ಲಿ ಮನುಕುಲದ ಅಭಿವೃದ್ಧಿ ಸಾಧ್ಯ ಇದೆಯೇನೋ ಎನ್ನುವಂತಹ ಆಲೋಚನೆಗಳು ಮನುಷ್ಯನ ತಲೆಯಲ್ಲಿ ಬರುವಂತೆ ಮಾಡುತ್ತಿದೆ ಎನ್ನುವುದು ಕೂಡಾ ಸತ್ಯ. ಏಕೆಂದರೆ ಈಗಾಗಲೇ ಒಂದಷ್ಟು ವಿಜ್ಞಾನಿಗಳು ಮಂಗಳನ ಮೇಲೆ, ಅಂತರಿಕ್ಷದಲ್ಲಿ ಆಗುವ ಪ್ರಗತಿಯ ಬಗ್ಗೆ ಮಾತನಾಡುವುದು ಜನರ ಆಸಕ್ತಿಯನ್ನು ಕೆರಳಿಸುತ್ತಿವೆ.
ಮಂಗಳ ಗ್ರಹದ ಮೇಲೆ ಜೀವದ ಪುರಾವೆಯನ್ನು ಅರಸುತ್ತ ಸುತ್ತುತ್ತಿರುವ ನಾಸಾದ ರೋವರ್ ಒಂದು ಮುಖ್ಯವಾದ ಮಾಹಿತಿಯನ್ನು ಭೂಮಿಗೆ ರವಾನಿಸಿದೆ. ನಾಸಾ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ನಲ್ಲಿ ಇಂತಹ ಕೆಲವು ಮಾಹಿತಿಗಳು ಲಭ್ಯವಾಗಿವೆ ಎನ್ನಲಾಗಿದೆ. ಒಂದು ಅಧ್ಯಯನದ ಪ್ರಕಾರ ಮಂಗಳ ಗ್ರಹದ ಮೇಲೆ ದೀರ್ಘಕಾಲದವರೆಗೂ ಬರಗಾಲವಿದ್ದು ನಂತರ ಹಲವು ಬಾರಿ ಅಲ್ಲಿ ನೀರು ಕೂಡ ಇತ್ತು ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಮಂಗಳ ಗ್ರಹದ ಉಬ್ಬು ತಗ್ಗುಗಳ ನೆಲದ ಮೇಲೆ ಸಂಚಾರ ಮಾಡುತ್ತಿರುವ ರೋವರ್ ಗೆ ಅಲ್ಲಿನ ಬಂಡೆಗಳ ರಚನೆಯ ಮಾದರಿಯಿಂದ ಇಂತಹ ಪುರಾವೆಗಳು ದೊರೆತಿದೆ ಎನ್ನಲಾಗಿದೆ.

ಅಲ್ಲದೇ ಕೆಲವು ವಿಶೇಷ ಸಾಧನಗಳು ಹಾಗೂ ಟೆಲಿಸ್ಕೋಪ್ ನ ಸಹಾಯದಿಂದ ಬಂಡೆಗಳ ತಳಭಾಗದ ಅಧ್ಯಯನವನ್ನು ಮಾಡಲಾಗಿದೆ. ಪ್ರಸ್ತುತ ನಾಸಾದ ರೋವರ್ ಗೇಲ್ ಕ್ರೇಟರ್ ಒಳಗೆ ಅಯೋಲೊಸ್ ಮಾನ್ಸ್ ಎನ್ನುವ ಪರ್ವತದ ಮೇಲೆ ತಿರುಗುತ್ತಿದೆ. ಇಲ್ಲಿ ಅದು ಸಂಗ್ರಹಿಸಿರುವ ದತ್ತಾಂಶಗಳ ಪ್ರಕಾರ ಹಲವಾರು ಅಡಿಗಳಷ್ಟು ಕೆಂಪಾದ ಧೂಳಿನಿಂದ ರೂಪುಗೊಂಡಿರುವ ಕೆಂಪು ಗ್ರಹದ ಬಂಡೆಯ ಅಡಿಯಲ್ಲಿನ ವಿನ್ಯಾಸವು ಬಹಳ ಬೇಗ ಬದಲಾಗುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಮೌಂಟ್ ಶಾರ್ಪ್ ನ ಕೆಳಭಾಗದಲ್ಲಿ ತೇವದಿಂದ ಕೂಡಿರುವ ಮಣ್ಣು ಲಭ್ಯವಾಗಿದ್ದು, ಅದರ ಮೇಲೆ ಮರಳಿನ ದಿಬ್ಬವಿದ್ದು, ಗುಡುಗಿನ ಜೊತೆಗೆ ಅದು ಬದಲಾಗುತ್ತದೆ ಎನ್ನಲಾಗಿದೆ.
ಇಲ್ಲಿ ಲಭ್ಯವಾಗಿರುವ ದತ್ತಾಂಶಗಳ ಪ್ರಕಾರ ಬಹುಶಃ ಅಲ್ಲಿ ಹಿಂದೆ ಆರ್ದ್ರ ಋತುಮಾನ ಇತ್ತು ಎನ್ನುವುದಾಗಿ ಅಂದಾಜಿಸಬಹುದಾಗಿದೆ. ಅಲ್ಲದೇ ಗೇಲ್ ಕ್ರೇಟರ್ ನ ಒಳಗಡೆ ನೀರು ತುಂಬಿರಬಹುದು ಎಂದು ಕೂಡ ಅಂದಾಜಿಸಲಾಗಿದೆ. ನಾಸಾದ ಈ ಹೊಸ ಪ್ರಯೋಗಕ್ಕಾಗಿ ಕ್ಯೂರಿಯಾಸಿಟಿ ರೋವರ್ ಮೌಂಟ್ ಶಾರ್ಪ್ ನ ಸಂಪೂರ್ಣ ದತ್ತಾಂಶಗಳನ್ನು ಸಂಗ್ರಹಿಸಬೇಕು. ಇಲ್ಲಿ ಆಗುವ ಬದಲಾವಣೆಗಳ ಮೂಲಕ ಮಂಗಳನ ಮೇಲೆ ಋತುಮಾನಗಳಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಸರಿಯಾದ ಹಾಗೂ ಸಮರ್ಪಕವಾದ ಅಧ್ಯಯನವನ್ನು ಮಾಡಲು ಸಾಧ್ಯವಾಗುತ್ತದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ವಿಜ್ಞಾನಿಗಳು ಸಂಗ್ರಹವಾದ ದತ್ತಾಂಶಗಳ ಬಗ್ಗೆ ಸಮರ್ಪಕವಾದ ಅಧ್ಯಯನವನ್ನು ನಡೆಸುವರು ಎನ್ನಲಾಗಿದೆ. ಇನ್ನೂ ಆಸಕ್ತಿಕರವಾದ ವಿಷಯವೇನೆಂದರೆ ಕ್ಯೂರಿಯಾಸಿಟಿ ರೋವರ್ ಕೆಲವು ದಿನಗಳ ಹಿಂದೆ ಮಂಗಳದ ವಾತಾವರಣದಲ್ಲಿ ಕಂಡು ಬಂದಂತಹ ಮೋಡಗಳ ಚಿತ್ರವನ್ನು ವೀಡಿಯೋ ಕಳುಹಿಸಿತ್ತು. ಕ್ಯೂರಿಯಾಸಿಟಿ ರೋವರ್ ಮೇಲೆ ಅಳವಡಿಸಲಾಗಿರುವ ಕ್ಯಾಮರಾಗಳ ಸಹಾಯದಿಂದ ಈ ವಿಡಿಯೋಗಳನ್ನು ಪಡೆಯಲು ಸಾಧ್ಯವಾಯಿತು ಎನ್ನಲಾಗಿದೆ. 8 ಹೊಸ ಚಿತ್ರಗಳಲ್ಲಿ ನ್ಯಾವಿಗೇಷನ್ ಕ್ಯಾಮೆರಾಗಳ ದೃಷ್ಟಿಯಿಂದ ಐದು ನಿಮಿಷಗಳ ಕಾಲದ ದೃಶ್ಯಾವಳಿಯನ್ನು ವಿಜ್ಞಾನಿಗಳು ನೋಡಲು ಸಾಧ್ಯವಾಯಿತು ಎನ್ನಲಾಗಿದೆ.