ಮಕ್ಕಳಿಗೆ ಹಣದ ಬೆಲೆ ಮತ್ತು ಮಹತ್ವ ಹೇಗೆ ತಿಳಿಸಿಕೊಡಬೇಕು? ಅದಕ್ಕಾಗಿ ಮಾಡಬೇಕಾದದ್ದೇನು? ತಿಳಿದುಕೊಳ್ಳಿ ಮಹತ್ವದ ಸಲಹೆಗಳು…
ಮಕ್ಕಳಿಗೆ ಪಾಕೆಟ್ ಮನಿ ನೀಡಬೇಕೋ ಬೇಡವೋ ಎಂಬುದರ ಬಗ್ಗೆ ತುಂಬಾ ಪರ-ವಿರೋಧ ವಿಚಾರಗಳು ಇವೆ. ಮೊದಲಂತೂ ಪೋಷಕರು ಮಕ್ಕಳಿಗೆ, ಬೇಡವಾದ ವಯಸ್ಸಿನಲ್ಲಿ ಹಣ ನೀಡಿ ತಪ್ಪಾದ ರೂಢಿಯನ್ನು ಹಚ್ಚಬಾರದು ಎಂಬ ಮನೋಭಾವನೆ ಹೊಂದಿದ್ದರು. ಇದು ಸಹ ಸ್ವಲ್ಪ ಮಟ್ಟಿಗೆ ಸರಿ ಎನಿಸಿದರೂ ಮಕ್ಕಳಿಗೆ ಯೋಗ್ಯ ಪ್ರಮಾಣದಲ್ಲಿ ಪಾಕೆಟ್ ಮನಿ ನೀಡಬೇಕು ಎಂಬುದು ತಜ್ಞರ ಅಭಿಪ್ರಾಯವಿದೆ. ಯಾವುದಾದರೂ ಒಂದು ವಿಷಯದ ಬಗ್ಗೆ ಅರಿವು ನೀಡದೆ ಮಕ್ಕಳನ್ನು ದೂರವಿಟ್ಟಾಗ ಮಕ್ಕಳಿಗೆ ಅದರ ಬಗ್ಗೆ ಆಕರ್ಷಣೆ ಹೆಚ್ಚಾಗುತ್ತದೆ. ಆಗ ಕೆಲವೊಂದು ಮಕ್ಕಳು ತಪ್ಪು ಮಾರ್ಗವನ್ನು ಹಿಡಿಯಲು ಶುರು ಮಾಡುತ್ತವೆ. ಹೀಗಾಗಿ ಪೋಷಕರೇ ಮಕ್ಕಳಿಗೆ ಸರಿಯಾಗಿ ತಿಳಿಹೇಳಿ ಅವರ ಮೇಲಿರುವ ಅನಾವಶ್ಯಕ ಬಂಧನಗಳನ್ನು ತೊಡೆದು ಹಾಕಿದಾಗ ಈ ರೀತಿಯ ಸಾಧನಗಳ ಉಪಯೋಗವನ್ನು ಮಕ್ಕಳು ಸರಿಯಾದ ಮಾರ್ಗದಿಂದ ಮಾಡುವರು ಎಂಬುದು ತಿಳಿದು ಬಂದಿದೆ.
ಈ ಬಗ್ಗೆ ತಜ್ಞರು ಹೇಳುವ ವಿಚಾರಗಳೇನು ನೋಡುವಾ.
1) ಪೋಷಕರ ಮಾರ್ಗದರ್ಶನದಲ್ಲಿ ಹಣದ ಉಪಯೋಗವನ್ನು ಸರಿಯಾಗಿ ಮಾಡಲು ಕಲಿಸುವಾಗ, ಚಿಕ್ಕ ಪುಟ್ಟ ಖರೀದಿಗಳ ನಿರ್ಣಯಗಳನ್ನು ಅವರಿಗೆ ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡಿದರೆ ಮಕ್ಕಳು ನಿಶ್ಚಿತವಾಗಿಯೂ ಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಮಾಡುವದರಿಂದ ಹಣದ ಬೆಲೆಯ ಬಗ್ಗೆ ಅರಿವಾಗುತ್ತದೆ.
2) ಚಿಕ್ಕಂದಿನಿಂದಲೇ ಹಣದ ವಿಷಯದಲ್ಲಿ ಮಕ್ಕಳಿಗೆ ಸ್ವಾವಲಂಬಿಯನ್ನಾಗಿ ಮಾಡುವುದರಿಂದ ದೊಡ್ಡವರಾದಮೇಲೆ ಸಾಲದ ಹೊರೆಯಲ್ಲಿ ಸಿಲುಕುವದರಿಂದ ಮಕ್ಕಳು ತುಂಬಾ ದೂರ ಉಳಿದುಕೊಳ್ಳುತ್ತಾರೆ.
3) ಮಕ್ಕಳಿಗೆ ಹಣದ ಬಗ್ಗೆ ಸರಿಯಾದ ನಿಯೋಜನೆಯನ್ನು ಕಲಿಸಿ ಕೊಡುವದರಿಂದ ಮಕ್ಕಳು ಹಣ ಖರ್ಚು ಮಾಡುವ ಮೊದಲು ಒಮ್ಮೆ ಚೆನ್ನಾಗಿ ಯೋಚಿಸುತ್ತಾರೆ. ಯಾವುದೇ ವಸ್ತುಗಳನ್ನು ಖರೀದಿಸುವ ಮೊದಲು ಈಗಲೇ, ಈಗಿಂದೀಗಲೇ, ಸದ್ಯಕ್ಕೆ ನನಗೆ ಬೇಕೆ ಬೇಕು ಎಂಬ ಹವ್ಯಾಸ ಕಡಿಮೆಯಾಗುತ್ತದೆ. ಜೊತೆಗೆ ಹಣದ ಅಪವ್ಯಯ ಆಗುವದು ನಿಲ್ಲುತ್ತದೆ.
4) ಯಾವುದೇ ವಸ್ತುಗಳು ಉಚಿತವಾಗಿ ದೊರೆಯುವುದಿಲ್ಲ. ಅದಕ್ಕಾಗಿ ಕಷ್ಟ ಪಡಲೇಬೇಕಾಗುತ್ತದೆ. ಹಣ ನಮ್ಮ ಹತ್ತಿರ ಎಷ್ಟೇ ಕಡಿಮೆ ಇದ್ದರೂ ಅದಕ್ಕೆ ಬೆಲೆ ಇದ್ದೇ ಇರುತ್ತದೆ. ಅದೇ ರೀತಿ ಚಿಕ್ಕಂದಿನಿಂದ ಮತ್ತು ಯೋಗ್ಯ ಮಾರ್ಗದಿಂದ ಹಣ ಕೂಡಿಸುತ್ತ ಹೋದಾಗ ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಉಳಿತಾಯದ ಆ ಪುಟ್ಟ ಹಣ ಒಂದು ದೊಡ್ಡ ಹೂಡಿಕೆಯಲ್ಲಿ ಬದಲಾವಣೆಯಾಗುವದರಲ್ಲಿ ಸಂಶಯವಿರುವುದಿಲ್ಲ.
ಕೊನೆಗೆ ಒಂದು ಮಾತು ಹೇಳುವುದೇನೆಂದರೆ, ಶ್ರೀಮಂತ ತನ್ನ ಮಕ್ಕಳಿಗೆ ಹಣ ಹೂಡಿಕೆ ಮಾಡುವ ಬಗ್ಗೆ ಜ್ಞಾನ ನೀಡಿದರೆ, ಬಡವ ತನ್ನ ಮಕ್ಕಳಿಗೆ ಹಣ ಉಳಿತಾಯ ಮಾಡುವ ಜ್ಞಾನವನ್ನು ನೀಡುತ್ತಾನಂತೆ. ಇನ್ನು ಇವೆರಡರಲ್ಲಿ ಮಕ್ಕಳಿಗೆ ಯಾವುದನ್ನು ಹೇಳಬೇಕೆಂಬುದು ಪೋಷಕರಿಗೆ ಬಿಟ್ಟ ವಿಷಯ.
ಈ ಮೇಲಿನ ಎಲ್ಲ ಸತ್ಯಗಳು ಮಕ್ಕಳಿಗೆ ಪೋಷಕರು ನೀಡುವ ಪಾಕೆಟ್ ಮನಿಯಿಂದ ಗೊತ್ತಾಗುತ್ತ ಹೋಗುತ್ತವೆ. ತಮ್ಮ ಪ್ರಾಥಮಿಕ ಜವಾಬ್ದಾರಿಗಳನ್ನು ಮಕ್ಕಳು ಪಾಕೆಟ್ ಮನಿಯಿಂದಲೇ ತಿಳಿದುಕೊಳ್ಳುಲು ಶುರುಮಾಡುತ್ತವೆ ಇದು ನಿಜ.