ಮಗ IAS ಪಾಸಾದ ಸುದ್ದಿ ಬಂದಾಗ ಅಮ್ಮ ಹೊಲದಲ್ಲಿ ಕಳೆ ತೆಗೆಯುತ್ತಿದ್ದಳು!
ಕೇಂದ್ರೀಯ ಲೋಕಸೇವಾ ಆಯೋಗದ ಪರೀಕ್ಷೆಯ ರಿಜಲ್ಟ್ ಬಂದಿದೆ. ಅನೇಕ ಯುವಕ ಯುವತಿಯರ ಪ್ರಯತ್ನ ಮತ್ತು ಪರಿಶ್ರಮಕ್ಕೆ ಯೋಗ್ಯ ಫಲ ದೊರೆತು ಖುಷಿಯಲ್ಲಿದ್ದಾರೆ. ಇದೇ ಪಟ್ಟಿಯಲ್ಲಿ 231 ಕ್ರಮಾಂಕದ ರ್ಯಾಂಕ್ ಪಡೆದು ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಶ್ರೀಕಾಂತ್ ಖಾಂಡೆಕರ್ ಹೆಸರಿನ ಯುವಕನೊಬ್ಬ ಕಲೆಕ್ಟರ್ ನಾದ ಸುದ್ದಿ ಬಂದ ಸಮಯದಲ್ಲಿ ಆತನ ತಾಯಿ ಹೊಲದಲ್ಲಿ ಕಸ ತೆಗೆಯುತ್ತಿದ್ದಳು.
ಶ್ರೀಕಾಂತ್ ನ ತಾಯಿ ತಂದೆ ಬಡತನದಲ್ಲಿಯೇ ಮಗನಿಗೆ ಶಾಲೆಯನ್ನು ಕಲಿಸಿದರು. ಅವರು ಮಗನಿಗಾಗಿ 3 ಎಕರೆ ಭೂಮಿಯನ್ನು ಮಾರಿದರು. ಮತ್ತೆ ಕೆಲವೊಂದು ಕಠಿಣ ಸಮಯದಲ್ಲಿ ಮಗನಿಗೆ ಹಣದ ಅವಶ್ಯಕತೆ ಬಿದ್ದಾಗ ತಂದೆ ಬೇರೊಬ್ಬರಿಂದ ಸಾಲ ಸೋಲ ಮಾಡಿ ಮಗನಿಗೆ ಹಣದ ವ್ಯವಸ್ಥೆ ಮಾಡಿದರು. ತಂದೆ-ತಾಯಿಯ ಕಷ್ಟದ ಪ್ರತಿಫಲ ಮಗ ಬಡ್ಡಿ ಸಮೇತ ಪೋಷಕರಿಗೆ ಕಲೆಕ್ಟರ್ ಆಗಿ ಮರುಪಾವತಿಸಿದ್ದಾನೆ.
ಸೊಲ್ಲಾಪುರ ಜಿಲ್ಲೆಯ ಮಂಗಳವೇಢೆ ತಾಲೂಕಿನ ಬಾವಚಿ ಹೆಸರಿನ ಕುಗ್ರಾಮದಲ್ಲಿ ಪುಂಡಲೀಕ ಖಾಂಡೆಕರ್ ಹೆಸರಿನ ರೈತ ತಾನು ನಿರಕ್ಷರನಾದರೂ ತನ್ನ ಮೂವರು ಮಕ್ಕಳಿಗೆ ಮಾತ್ರ ಚೆನ್ನಾಗಿಯೇ ಶಿಕ್ಷಣ ಕೊಟ್ಟರು. ಇದರಲ್ಲಿ ದೊಡ್ಡ ಮಗ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕರಿಯರ್ ಮಾಡಿದರೆ ನಡುವಿನ ಮಗ ಶ್ರೀಕಾಂತ್ ಕಲೆಕ್ಟರ್ ಹುದ್ದೆಯಲ್ಲಿ ಏರಿದರು. ಮೂರನೆಯ ಮಗ ಪದವಿ ಓದುತ್ತಿದ್ದಾನೆ.
ಇನ್ನು ಶ್ರೀಕಾಂತನ ಬಗ್ಗೆ ಹೇಳುವದಾದರೆ ಈತ 1 ನೆ ಇಯತ್ತೆಯಿಂದ 7 ನೆ ಇಯತ್ತೆಯವರೆಗೆ ತನ್ನ ಊರಲ್ಲಿಯೇ ಕಲಿತು ಹೈಸ್ಕೂಲ್ ಶಿಕ್ಷಣ ಪಕ್ಕದ ನಿಂಬೋಣಿಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ SSLC ವರೆಗೆ ಕಲಿತನು. ಮುಂದಿನ ಶಿಕ್ಷಣ ಸೊಲ್ಲಾಪುರ ಹಾಗೂ ಪುಣೆಯಲ್ಲಿ ಕಂಪ್ಲೀಟ್ ಮಾಡಿದರು. ಕೇಂದ್ರೀಯ ಲೋಕಸೇವಾ ಆಯೋಗದ ಪರೀಕ್ಷೆಗೆ ಅಭ್ಯಾಸದ ತಯಾರಿ ಮಾತ್ರ ಪುಣೆ ಹಾಗು ದೆಹಲಿಯಲ್ಲಿ ಮಾಡಿದರು. ವನಕ್ಷೇತ್ರದ ಪರೀಕ್ಷೆಯಲ್ಲಿ ಭಾರತದಲ್ಲಿ 33 ನೆ ಕ್ರಮಾಂಕದಲ್ಲಿ ಹಾಗು ಮಹಾರಾಷ್ಟ್ರದಲ್ಲಿ ಪ್ರಥಮ ಕ್ರಮಾಂಕದಲ್ಲಿ ಪಾಸಾದರು.

ಶ್ರೀಕಾಂತ್ ತನ್ನ ಯಶಸ್ಸಿನ ಗುಟ್ಟಿನ ಬಗ್ಗೆ ಹೇಳುತ್ತಾನೆ. ಪಟ್ಟಣದ ವಿದ್ಯಾರ್ಥಿಗಳ ಜೊತೆಗೆ ತುಲನೆ ಮಾಡುತ್ತ ಕುಳಿತುಕೊಳ್ಳುವದಕ್ಕಿಂತ ನಮ್ಮ ಧ್ಯೇಯ ಮುಂದೆ ಇಟ್ಟುಕೊಂಡು ಪ್ರಯತ್ನ ಮಾಡಿದರೆ ಯಶಸ್ಸು ಲಭಿಸಿಯೇ ತೀರುತ್ತದೆ. ಇಂದು ಈ ಬಾವಚಿ ಊರಲ್ಲಿ ಎಲ್ಲಿಯೂ ವಾತಾವರಣ ಆನಂದಮಯವಾಗಿದೆ. ತಂದೆಯ ಆರೋಗ್ಯ ಸರಿಯಿಲ್ಲದ ಕಾರಣ ಅವರು ದವಾಖಾನೆಗೆ ಹೋಗಿದ್ದರು. ಅವರ ಹತ್ತಿರ ಫೋನ್ ಇಲ್ಲದ ಕಾರಣ ಸಂಬಂಧಿಕನೊಬ್ಬ ದವಾಖಾನೆಯಲ್ಲಿಯೇ ಫೋನ್ ಮಾಡಿ ಈ ಸುದ್ದಿ ತಿಳಿಸಿದ್ದಾನೆ. ತಾಯಿ ಮಾತ್ರ ಆಗ ಹೊಲದಲ್ಲಿ ಕಳೆ ತೆಗೆಯುತ್ತಿದ್ದರು.
ಮಗನ ಯಶಸ್ಸಿನ ಬಗ್ಗೆ ತಂದೆ ತಾಯಿ ಇಬ್ಬರೂ ಖುಷಿಯಲ್ಲಿದ್ದಾರೆ. ಮಗನ ಶಿಕ್ಷಣಕ್ಕಾಗಿ ಮಾಡಿದ ಸಾಲ ಇಂದಿಗೂ ತೀರಿಸುತ್ತಿದ್ದೇನೆ. ಯಾರಿಗೂ ನಾನು ಮೋಸ ಮಾಡಿದವನಲ್ಲ. ಪ್ರಮಾಣಿಕತನದಿಂದ ನನ್ನ ಮಕ್ಕಳಿಗೆ ಕಲಿಸಿದ್ದೇನೆ, ಅವರೂ ಸಹಿತ ಮುಂದಿನ ಭವಿಷ್ಯದಲ್ಲಿ ತಮ್ಮ ಒಳ್ಳೆಯ ಕೆಲಸದಿಂದ ಛಾಪು ಮೂಡಿಸಲಿ ಮತ್ತು ಬಡವರಿಗಾಗಿ ಒಳ್ಳೆಯ ಕೆಲಸ ಮಾಡಲಿ ಎಂದು ತಮ್ಮ ಮಕ್ಕಳಿಗೆ ಹರಸಿದರು.