ರಷ್ಯಾದಲ್ಲಿ ದೊರೆತಿದೆ ಏಲಿಯನ್ ಗಳ ಸಮಾಧಿ: 2000 ವರ್ಷಗಳ ಹಿಂದೆ ಶವಗಳ ಸಂಸ್ಕಾರ ಮಾಡಲಾಗಿತ್ತು!
ಏಲಿಯನ್ ಗಳು ಹಾಗೂ ಅವುಗಳು ಸಂಚರಿಸುವ ವಾಹನಗಳಾದ ಯುಎಫ್ಓ ಗಳ ಕುರಿತಾಗಿ ವಿಶ್ವ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ, ರಷ್ಯಾದ ವಿಜ್ಞಾನಿಗಳಿಗೆ ಅತ್ಯಾಶ್ಚರ್ಯಕರ ಎನ್ನುವಂತೆ ಏಲಿಯನ್ ಗಳ ಸಮಾಧಿ ಒಂದು ದೊರೆತಿದೆ. ಸಮಾಧಿಯಲ್ಲಿ ದೊರೆತಿರುವ ಏಲಿಯನ್ ಗಳ ತಲೆಬುರುಡೆಗಳು ಅಕ್ಷರಶಃ ಎಲಿಯನ್ ಗಳೇ ಎನ್ನುವಂತಹ ಮಾದರಿಯಲ್ಲಿದ್ದು, ಈ ಸಮಾಧಿಯು ರಷ್ಯಾದ ಕ್ರಿಮಿಯಾ ಪ್ರಾಂತ್ಯದಲ್ಲಿ ದೊರೆತಿದೆ. ಸಮಾಧಿಯಲ್ಲಿ ದೊರೆತಿರುವ ಐದು ತಲೆಬುರುಡೆಗಳ ಗಾತ್ರವು ಸಾಕಷ್ಟು ದೊಡ್ಡದಾಗಿದೆ. ಇವುಗಳಲ್ಲಿ ಒಂದು ತಾಯಿ ಹಾಗೂ ಉಳಿದವು ಮಕ್ಕಳ ತಲೆಬುರುಡೆಗಳು ಎನ್ನಲಾಗಿದೆ. ಪುರಾತತ್ವಶಾಸ್ತ್ರಜ್ಞ ಓಲೆಗ್ ಮಾರ್ಕೋವ್ ಅವರು ಈ ಸಮಾಧಿಗಳನ್ನು ಪತ್ತೆಹಚ್ಚಿದ್ದಾರೆ.
ಏಲಿಯನ್ ಗಳ ಸಮಾಧಿ ಕ್ರಿಮಿಯಾದ ಕಿಜ್-ಔಲ್ ಎನ್ನುವ ಪ್ರದೇಶದಲ್ಲಿ ಕಂಡುಬಂದಿದೆ. ಐದು ಅಸ್ತಿಪಂಜರ ಗಳನ್ನು ಒಂದರ ಮೇಲೆ ಇನ್ನೊಂದು ಎನ್ನುವಂತೆ ಇಡಲಾಗಿದೆ. ಇವುಗಳು ಸುಮಾರು 2000 ವರ್ಷಗಳಷ್ಟು ಹಳೆಯವು ಎಂದು ಹೇಳಲಾಗಿದೆ. ಆದ ಕಾರಣ ಈ ಅಸ್ತಿಪಂಜರಗಳು ಮುರಿದ, ಶಿಥಿಲವಾದ ಅವಸ್ಥೆಯಲ್ಲಿ ಕಂಡುಬಂದಿದೆ. ಕೆಲವು ವರ್ಷಗಳ ಹಿಂದೆ ಈ ಜಾಗದಲ್ಲಿ ಒಂದು ಮಗುವಿನ ಅಸ್ತಿಪಂಜರ ದೊರೆತಿತ್ತು. ಆಗ ಅದರ ತಲೆಬುರುಡೆಯ ಗಾತ್ರ ದೊಡ್ಡದಾಗಿದ್ದ ಕಾರಣದಿಂದ ಏಲಿಯನ್ ಸಮಾಧಿ ಎನ್ನುವ ಹೆಸರನ್ನು ಈ ಜಾಗಕ್ಕೆ ನೀಡಲಾಗಿತ್ತು.

ಪುರಾತತ್ವ ಶಾಸ್ತ್ರಜ್ಞರು ಈ ಅಸ್ಥಿಪಂಜರಗಳ ಕುರಿತಾಗಿ ಮಾತನಾಡುತ್ತಾ ಇದು ಸರ್ಮೇಶಿಯನ್ ಸಂಸ್ಕೃತಿಗೆ ಸಂಬಂಧಪಟ್ಟವು ಎಂದು ಹೇಳಿದ್ದಾರೆ. ಸರ್ಮೇಶಿಯನ್ ಸಂಸ್ಕೃತಿಯಲ್ಲಿ ತಲೆ ಬುರುಡೆಯ ಗಾತ್ರ ಹೆಚ್ಚಾಗುವುದನ್ನು ಸೌಂದರ್ಯದ ಹಾಗೂ ಧೈರ್ಯದ ಸಂಕೇತವೆಂದೂ ನಂಬಲಾಗಿತ್ತು. ಆದ್ದರಿಂದಲೇ ಚಿಕ್ಕ ವಯಸ್ಸಿನಿಂದಲೇ ಮಕ್ಕಳ ತಲೆಬುರುಡೆಯನ್ನು ಮರದಿಂದ ತಯಾರಿಸಿದ ಫ್ರೇಮ್ಗಳಲ್ಲಿ ಇಡಲಾಗುತ್ತಿತ್ತು. ಹೀಗೆ ಮಕ್ಕಳ ತಲೆ ಬುರುಡೆಗಳು ಬೆಳೆಯುತ್ತಾ ಹೋದ ಹಾಗೆ ವಿವಿಧ ಆಕಾರಗಳನ್ನು ನೀಡಲಾಗುತ್ತಿತ್ತು.
ಈ ಕೆಲಸದಲ್ಲಿ ಯಾವುದೇ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರುತ್ತಿರಲಿಲ್ಲ ಬದಲಾಗಿ ತಲೆಯ ಸುತ್ತ ಕಟ್ಟಿದಂತಹ ಮರದ ಫ್ರೇಮ್ ಗಳಿಂದಾಗಿ ತಲೆಬುರುಡೆಗಳು ವೈವಿಧ್ಯಮಯ ಆಕಾರದಲ್ಲಿ ಬೆಳೆಯುತ್ತಿತ್ತು. ಸಮಾಧಿಯಲ್ಲಿ ಪತ್ತೆಯಾದ ಅಸ್ತಿಪಂಜರವನ್ನು ಗಮನಿಸಿದಾಗ ತಾಯಿಯ ಎದೆಯ ಮೇಲೆ ಮಗು ಮಲಗಿರುವುದು ಗಮನಿಸಬಹುದು. ಆದರೆ ಐದು ಜನರನ್ನು ಹೇಗೆ ಸಮಾಧಿ ಮಾಡಲಾಗಿದೆ ಎನ್ನುವ ಪ್ರಶ್ನೆಗೆ ಮಾತ್ರ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ ಅಥವಾ ಉತ್ತರ ಯಾರ ಬಳಿಯೂ ಇಲ್ಲ ಎನ್ನಬಹುದಾಗಿದೆ. ಸರ್ಮೇಶಿಯನ್ ಸಂಸ್ಕೃತಿಯಲ್ಲಿ ತಲೆಬುರುಡೆಯನ್ನು ಈ ರೀತಿ ಹೆಚ್ಚಿಸುವ ಸಂಪ್ರದಾಯವೊಂದು ಇತ್ತು.
ಈ ಜನರು ತುಂಬಾ ಬಲಶಾಲಿಗಳಾಗಿದ್ದರು ಮತ್ತು ಈ ಸಂಸ್ಕೃತಿಯಲ್ಲಿ ಹೆಂಗಸರು ಸಹ ಯೋಧರಾಗಿದ್ದರು. ಅಂತಹ ಪರಿಸ್ಥಿತಿಯಲ್ಲಿ ಯುದ್ಧ ನಡೆದಂತಹ ಸಂದರ್ಭದಲ್ಲಿ ಹೀಗೆ ಸಮಾಧಿಯನ್ನು ಮಾಡಲಾಗಿದೆ ಎಂದು ಕೆಲವು ಪುರಾತತ್ವ ಶಾಸ್ತ್ರಜ್ಞರು ವಿವರಣೆಯನ್ನು ನೀಡುತ್ತಾರೆ. ಈ ನಾಗರಿಕತೆಯಲ್ಲಿ ತಲೆಬುರುಡೆಯನ್ನು ಹೀಗೆ ಬೆಳೆಸುವುದರಿಂದ ಯೋಧರು ಇನ್ನಷ್ಟು ಆಕ್ರಮಣಕಾರಿಗಳಾಗುತ್ತಾರೆ ಎನ್ನುವ ನಂಬಿಕೆ ಇತ್ತು ಎನ್ನಲಾಗಿದೆ. ಇದೇ ವೇಳೆ ಮತ್ತೊಬ್ಬ ಪುರಾತತ್ವಶಾಸ್ತ್ರಜ್ಞರಾದ ನಿಕೋಲಾಯ್ ಸುದರೆವ್ ಅವರು, ಸರ್ಮೇಶಿಯನ್ ಸಂಸ್ಕೃತಿಯಲ್ಲಿ ತಲೆಬುರುಡೆಯ ಗಾತ್ರವನ್ನು ಹೆಚ್ಚಿಸಿಕೊಳ್ಳುವುದು ಸೌಂದರ್ಯದ ಸಂಕೇತವೆಂದು ನಂಬಲಾಗಿತ್ತು, ಅಲ್ಲದೇ ಈ ಸಂಸ್ಕೃತಿಯಲ್ಲಿನ ಮಹಿಳೆಯರ ಶೌರ್ಯ ಹಾಗೂ ಹೋರಾಟದ ಪ್ರವೃತ್ತಿಯ ಕುರಿತಾಗಿ ಅನೇಕ ಕಥೆಗಳು ಪ್ರಾಚೀನಕಾಲದಲ್ಲಿ ಬಹಳಷ್ಟು ಪ್ರಸಿದ್ಧವಾಗಿದ್ದವು ಎಂದು ಹೇಳಿದ್ದಾರೆ.