ರಸ್ತೆ ಬದಿಯಲ್ಲಿ ಕಡಲೇಕಾಯಿ ಮಾರುವ ಹುಡುಗಿಯ ಶ್ರಮಕ್ಕೆ ಮೆಚ್ಚಿ ಆಕೆಯ ನೆರವಿಗೆ ಧಾವಿಸಿದ ಭಾರತದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ

ಅದಾನಿ ಸಮೂಹದ ಅಧ್ಯಕ್ಷರಾಗಿರುವ ಗೌತಮ್ ಅದಾನಿ ಅವರು ಸದಾ ಒಂದಲ್ಲಾ ಒಂದು ವಿಷಯಕ್ಕಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿ ಇರುತ್ತಾರೆ. ಸಾಮಾನ್ಯವಾಗಿ ಈ ಚರ್ಚೆಯು ಗೌತಮ್ ಅದಾನಿ ಅವರ ವ್ಯವಹಾರಗಳು ಹಾಗೂ ಅವರ ಸಂಪತ್ತಿನ ಕುರಿತಾಗಿ ನಡೆಯುವುದನ್ನು ನಾವು ಗಮನಿಸಿದ್ದೇವೆ‌. ಆದರೆ ಈ ಬಾರಿ ಅವರು ಸದ್ದು ಹಾಗೂ ಸುದ್ದಿ ಮಾಡುತ್ತಿರುವುದು ಅಥವಾ ಚರ್ಚೆಗೆ ಒಳಪಟ್ಟಿರುವುದು ಒಂದು ವಿಭಿನ್ನವಾದ ವಿಷಯಕ್ಕಾಗಿ. ಗೌತಮ್ ಅದಾನಿ ಅವರು ಈಗ ಸುದ್ದಿಯಾಗಲು ಕಾರಣವಾಗಿದ್ದು ಅವರ ಯಾವುದೇ ಹೊಸ ಬಿಸಿನೆಸ್ ಅಥವಾ ಅವರ ಸಂಪತ್ತಿನ ಗಳಿಗೆಯಲ್ಲಿನ ಏರಿಕೆಯ ವಿಚಾರವಾಗಿ ಅಲ್ಲ. ಬದಲಿಗೆ ಏಳನೆ ತರಗತಿ ವಿದ್ಯಾರ್ಥಿನಿಯೊಬ್ಬಳು ಗೌತಮ್ ಅದಾನಿಯವರು ಸುದ್ದಿ ಮಾದ್ಯಮಗಳ ಪ್ರಮುಖ ಸುದ್ದಿಯಾಗಲು ಕಾರಣವಾಗಿದ್ದಾಳೆ ಎನ್ನುವುದು ವಾಸ್ತವ ವಿಷಯವಾಗಿದೆ.

ಎಬಿಪಿ ನ್ಯೂಸ್ ಚಾನೆಲ್ ನ ಪತ್ರಕರ್ತ ಜ್ಞಾನೇಂದ್ರ ತಿವಾರಿಯವರು ಕೆಲವು ದಿನಗಳ ಹಿಂದೆ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಒಂದನ್ನು ಮಾಡಿದ್ದರು. ಈ ಟ್ವೀಟ್ ಸಾಕಷ್ಟು ವೈರಲ್ ಆಗಿ ಜನರ ಗಮನವನ್ನು ಸೆಳೆದಿತ್ತು. ಜ್ಞಾನೇಂದ್ರ ತಿವಾರಿಯವರು ತಮ್ಮ ಟ್ವೀಟ್ ನಲ್ಲಿ ಶಾಲಾ ಬಾಲಕಿಯೊಬ್ಬಳ ಫೋಟೋವನ್ನು ಶೇರ್ ಮಾಡಿ ಕೊಂಡಿದ್ದರು. ಫೋಟೋ ಶೇರ್ ಮಾಡಿಕೊಂಡ ಅವರು ಅದರ ಜೊತೆಗೆ, ಪಾಲನಿ ಕುಮಾರಿ ಎನ್ನುವ ಈ ಹುಡುಗಿಯು ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ ಏಕೆ ಒಂದುವರೆ ವರ್ಷ ವಯಸ್ಸಿನ ಮಗುವಾಗಿದ್ದಾಗ ಅವಳ ತಂದೆ ನಿಧನರಾಗಿದ್ದಾರೆ. ಪಾಲನಿ ಕುಮಾರಿ ತಾನೊಬ್ಬ ನರ್ಸ್ ಆಗಬೇಕೆಂದು ಬಯಸುತ್ತಾಳೆ, ಅದೇ ಅವಳ ಕನಸು. ಏಕೆಂದರೆ ನರ್ಸ್ ಕಾಡು ಜನರ ಸೇವೆಯನ್ನು ಮಾಡುತ್ತಾರೆ ಎನ್ನುವುದು ಅವಳ ಅಭಿಪ್ರಾಯವಾಗಿದೆ ಎ‌ಂದು ಬರೆದುಕೊಂಡು ಆ ಬಾಲಕಿಯ ಬಗ್ಗೆ ತಿಳಿಸಿದ್ದಾರೆ.

ಪಾಲನಿ ಕುಮಾರಿ ಶಿಕ್ಷಣಕ್ಕೆ ಹಾಗೂ ಮನೆಗೆ ಹಣದ ಅಗತ್ಯವಿದೆ ಎಂದು ಈ ಬಾಲಕಿಯು ರಸ್ತೆ ಬದಿಯಲ್ಲಿ ಕುಳಿತು ಕಡಲೆಕಾಯಿ ಮತ್ತು ಸೊಪ್ಪನ್ನು ಮಾರಾಟ ಮಾಡುವ ಮೂಲಕ ತಾಯಿಗೆ ನೆರವಾಗುತ್ತಿದ್ದಾಳೆ. ಪಾಲನಿ ಕುಮಾರಿ ಅವರ ತಾಯಿ ಕೂಡಾ ಬಸ್ ಗಳಲ್ಲಿ ಕಡಲೆಕಾಯಿ ಮಾರುವ ವ್ಯಾಪಾರವನ್ನು ಮಾಡುತ್ತಾರೆ ಎನ್ನುವ ವಿಷಯವನ್ನು ಜ್ಞಾನೇಂದ್ರ ತಿವಾರಿಯವರು ತಿಳಿಸುತ್ತಾ ಈ ಬಾಲಕಿಗೆ ನೆರವನ್ನು ಕೋರಿದ್ದಾರೆ. ಜ್ಞಾನೇಂದ್ರ ತಿವಾರಿಯವರು ಮಾಡಿದಂತಹ ಈ ಟ್ವೀಟ್ ಗೆ ಅನೇಕ ಪ್ರತಿಕ್ರಿಯೆಗಳು ಹರಿದು ಬಂದಿದ್ದು, ಅನೇಕರು ಆ ಬಾಲಕಿಗೆ ತಮ್ಮ ಕೈಲಾದ ಸಹಾಯವನ್ನು ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಪಾಲನಿ ಕುಮಾರಿಯ ಸಹಾಯಕ್ಕೆ ಮುಂದಾದ ವ್ಯಕ್ತಿಗಳಲ್ಲಿ ಗೌತಮ್ ಅದಾನಿ ಅವರು ಕೂಡ ಒಬ್ಬರಾಗಿದ್ದಾರೆ‌.

ಗೌತಮ ಅದಾನಿಯವರು ತಮ್ಮ ಟ್ವೀಟ್ ನಲ್ಲಿ ಪುಟ್ಟ ಹುಡುಗಿ ಹಾಗೂ ದೊಡ್ಡ ವಿಚಾರಗಳು!! ಎಂದು ಹೇಳುತ್ತಾ, ಪಾಲನಿಯ ಶಿಕ್ಷಣದ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವುದಾಗಿ, ಅದು ತನಗೆ ಸಿಗುವ ಸೌಭಾಗ್ಯ ಎಂದು ಹೇಳಿದ್ದಾರೆ‌. ಅಲ್ಲದೇ ಅವರು ನಿಮ್ಮ ಯಾರ ಬಳಿಯಾದರೂ ಆ ಹುಡುಗಿಯ ವಿಳಾಸ ಅಥವಾ ಸಂಪರ್ಕದ ವಿಚಾರವಾಗಿ ಯಾವುದೇ ಮಾಹಿತಿ ಇದ್ದರೆ ತನಗೆ ನೀಡಬೇಕೆಂದು ತಿಳಿಸಿದ್ದಾರೆ. ಈ ಹೆಣ್ಣು ಮಕ್ಕಳೇ ಮುಂದೆ ಸಶಕ್ತ ಹಾಗೂ ನವಭಾರತ ನಿರ್ಮಾಣವನ್ನು ಮಾಡುವುದು, ಆದ್ದರಿಙದ ಅವರಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ಗೌತಮ್ ಅದಾನಿ ಅವರ ಟ್ವೀಟ್ ಗೆ ಪತ್ರಕರ್ತ ಜ್ಞಾನೇಂದ್ರ ತಿವಾರಿ ಅವರು ಪ್ರತಿಕ್ರಿಯೆ ನೀಡುತ್ತಾ ಆಕೆಯ ಬಳಿ ಮೊಬೈಲ್ ಇಲ್ಲ. ಆದರೆ ಆಕೆ ಕಡಲೆಕಾಯಿ ಮಾರುವ ಕಡೆ ಒಬ್ಬ ಪೈಂಟರ್ ನ ನಂಬರ್ ಇದೆ ಎಂದು ತಿಳಿಸಿದ್ದಾರೆ. ಈ ಘಟನೆಯ ನಂತರ ಅದಾನಿ ಅವರು ತಮ್ಮ ಗೌತಮ್ ಅದಾನಿ ಫೌಂಡೇಷನ್ ಗೆ ಬಾಲಕಿಗೆ ನೆರವನ್ನು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆನ್ನಲಾಗಿದೆ. ಬ್ಲೂಮ್ ಬರ್ಗ್ ಬಿಲಿಯನೇರ್ಸ್ ವರದಿಯ ಪ್ರಕಾರ ಗೌತಮ್ ಅದಾನಿ ಅವರ ಆಸ್ತಿ ಮೌಲ್ಯ 44.9 ಬಿಲಿಯನ್ ಡಾಲರ್ ಗಳು ಎನ್ನಲಾಗಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಇವರು 27 ನೇ ಸ್ಥಾನವನ್ನು ಪಡೆದು ಕೊಂಡಿದ್ದಾರೆ. ಅದೇ ವೇಳೆ ಭಾರತದ ಶ್ರೀಮಂತರಲ್ಲಿ ಅವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.‌ ಭಾರತದಲ್ಲಿ ಮೊದಲನೇ ಸ್ಥಾನದಲ್ಲಿ ಮುಖೇಶ್ ಅಂಬಾನಿ ಅವರಿದ್ದು ಎರಡನೇ ಸ್ಥಾನದಲ್ಲಿ ಗೌತಮ್ ಅದಾನಿ ಇದ್ದಾರೆ.