ಸಣ್ಣ ವಿಡಿಯೋ: ಆದರೆ ಇಲ್ಲಿನ ಹೃದಯಸ್ಪರ್ಶಿ ಘಟನೆ ಪ್ರತಿಯೊಬ್ಬರನ್ನು ಆಲೋಚಿಸುವಂತೆ ಮಾಡುವ ಶಕ್ತಿ ಪಡೆದಿದೆ

ವರ್ಷಗಳು ಕಳೆದಂತೆ ಆಧುನಿಕತೆ ಎನ್ನುವುದು ನಮ್ಮ ಜೀವನದ ಒಂದು ಭಾಗವಾಗಿದೆ. ಆಧುನಿಕ ಜೀವನ ಶೈಲಿಗೆ ಒಗ್ಗಿ ಹೋಗಿರುವ ನಾವು ಯಂತ್ರ ಮಾನವರಂತೆ ಜೀವನವನ್ನು ನಡೆಸುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಂತೂ ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ಜೀವನ ಮೌಲ್ಯಗಳು, ಮಾನವೀಯತೆ, ದಯೆ, ಕರುಣೆ, ನಿಸ್ವಾರ್ಥ ಸ್ನೇಹ, ನಂಬಿಕೆ, ವಿಶ್ವಾಸ ಗಳಂತಹ ಯಾವುದೇ ವಿಚಾರಗಳಿಗೂ ಬೆಲೆಯೇ ಇಲ್ಲವೇನೋ ಎನ್ನುವಂತೆ ಜನ ತಮ್ಮ ಪಾಡಿಗೆ ತಾವು ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ತಾವಾಯಿತು, ತಮ್ಮ ಪಾಡಾಯಿತು ಎಂದು ಬದುಕುತ್ತಿರುವ ಜನರು ತಮ್ಮ ಸುತ್ತಮುತ್ತಲಿನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಬಡಪಾಯಿ ಜನರ ಬಗ್ಗೆ ಯೋಚಿಸುವಂತಹ ತಾಳ್ಮೆಯನ್ನು ಹೊಂದಿಲ್ಲ. ಒತ್ತಡದ ಜೀವನ ಕ್ರಮದಲ್ಲಿ ವೇಗವಾಗಿ ಸಾಗುವ ಆತುರದಲ್ಲಿ ಮಾನವೀಯ ಮೌಲ್ಯಗಳನ್ನು ಮರೆತು ಮುಂದೆ ಸಾಗುತ್ತಿದ್ದಾರೆ.

ಇಂತಹ ಜೀವನ ಕ್ರಮದಲ್ಲಿ ಎಲ್ಲಾದರೂ ಒಂದು ಕಡೆ ಹೃದಯವಂತ ವ್ಯಕ್ತಿಗಳು ಅಸಹಾಯಕರು ಹಾಗೂ ದೀನರನ್ನು ಗಮನಿಸಿ ಮೆರೆಯುವಂತಹ ಒಂದು ಪುಟ್ಟ ಕಾಳಜಿಯ ವರ್ತನೆ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲುತ್ತದೆ. ಇಂತಹ ಗುಣ ಎಲ್ಲರಲ್ಲೂ ಇದ್ದರೆ ಜಗತ್ತು ಎಷ್ಟು ಸುಂದರವಾಗಿರುತ್ತದೆ ಎನಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹದೊಂದು ಹೃದಯವಂತಿಕೆಯನ್ನು ಮೆರೆದ ಸನ್ನಿವೇಶವೊಂದರ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋಗೆ ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದುಬರುತ್ತಿವೆ
ಡಾಕ್ಟರ್ ಅಜಯಂತಾ ಎನ್ನುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂತಹದೊಂದು ಹೃದಯಸ್ಪರ್ಶಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಗಮನಿಸಿದಾಗ ಮಹಾನಗರವೊಂದರಲ್ಲಿ, ವಾಹನಗಳು ಕಿಕ್ಕಿರಿದು ತುಂಬಿರುವ ರಸ್ತೆಯಲ್ಲಿ ವಯಸ್ಸಾದ ಹಿರಿಯ ಮಹಿಳೆಯೊಬ್ಬರು ರಸ್ತೆಯನ್ನು ದಾಟುತ್ತಿದ್ದಾರೆ. ಬಿರು ಬಿಸಿಲಿನ ಅವೇಳೆಯಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿರುವ ಅಸಂಖ್ಯಾತ ವಾಹನಗಳನ್ನು ದಾಟಿ ರಸ್ತೆಯ ಇನ್ನೊಂದು ಬದಿಗೆ ಬರುವುದು ಸುಲಭವಾದ ಕೆಲಸವಲ್ಲ. ಆದರೆ ಆಗಲೇ ನಡೆದಿದೆ ಒಂದು ಅದ್ಭುತವಾದ ಘಟನೆ ಹಾಗೂ ಪ್ರತಿಯೊಬ್ಬರ ಮನಸ್ಸನ್ನೂ ಗೆಲ್ಲುವ, ಆಲೋಚಿಸುವಂತೆ ಮಾಡುವ ಒಂದು ಹೃದಯ ಸ್ಪರ್ಶಿ ಎನಿಸುವ ಘಟನೆ.

ವಯಸ್ಸಾದ ಹಿರಿಯ ಮಹಿಳೆಯು ರಸ್ತೆ ದಾಟುವುದನ್ನು ಗಮನಿಸಿದ ಕಾರಿನ ಚಾಲಕರೊಬ್ಬರು ತಮ್ಮ ಕಾರನ್ನು ಮುಂದಕ್ಕೆ ಚಲಾಯಿಸದೇ ಅಜ್ಜಿಗೆ ರಸ್ತೆ ದಾಟಲು ನೆರವಾಗಲು ಕಾರನ್ನು ಅಲ್ಲೇ ನಿಲ್ಲಿಸಿದ್ದಾರೆ. ಅವರು ವಾಹನವನ್ನು ನಿಲ್ಲಿಸಿದ್ದನ್ನು ನೋಡಿ ಪ್ರೇರಣೆಗೊಂಡ ಅವರ ಪಕ್ಕದಲ್ಲಿದ್ದ ಇನ್ನಿತರ ವಾಹನಗಳು ಕೂಡ ಮುಂದಕ್ಕೆ ಸಾಗದೆ ರಸ್ತೆಯಲ್ಲಿ ನಿಂತ ಕಡೆಯೇ ನಿಂತುಬಿಟ್ಟಿವೆ. ಅದೇ ವೇಳೆ ಈ ವಿಷಯ ತಿಳಿಯದೆ ಮುಂದಕ್ಕೆ ಬಂದಂತಹ ಕಾರೊಂದು ಹಿರಿಯ ಮಹಿಳೆಯನ್ನು ಕಂಡ ಕೂಡಲೇ ಎಲ್ಲ ವಾಹನಗಳು ನಿಂತಿರುವ ಉದ್ದೇಶವನ್ನು ಅರ್ಥ ಮಾಡಿಕೊಂಡು ತಮ್ಮ ಕಾರನ್ನು ಅಲ್ಲೇ ನಿಲ್ಲಿಸಿದ್ದಾರೆ. ಮಹಿಳೆ ರಸ್ತೆಯನ್ನು ದಾಟಿದ ನಂತರ ವಾಹನಗಳು ಮುಂದೆ ಚಲಿಸಿದೆ.

ಈ ಘಟನೆಯನ್ನು ನೋಡಿದಾಗ ನಮ್ಮಲ್ಲಿ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿದೆ ಎನಿಸುತ್ತದೆ. ಆದರೆ ಅದರ ಸಮಯೋಚಿತ ಆಚರಣೆ ಆಗಿಲ್ಲ ಎನಿಸುತ್ತದೆ. ಅದು ಸಾಧ್ಯವಾದರೆ ಸಮಾಜದಲ್ಲೊಂದು ಧನಾತ್ಮಕ ಬದಲಾವಣೆ ಖಂಡಿತವಾಗಿ ಬರುತ್ತದೆ ಎನ್ನುವುದಕ್ಕೆ ಒಬ್ಬ ವ್ಯಕ್ತಿ ಕಾರು ನಿಲ್ಲಿಸಿದಾಗ, ಇತರೆ ವಾಹನಗಳು ಚಲಿಸದೆ ನಿಂತಿದ್ದು ಸಾಕ್ಷಿಯಾಗಿದೆ. ಈ ಹೃದಯಸ್ಪರ್ಶಿ ವೀಡಿಯೋವನ್ನು 80 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 19 ಸಾವಿರಕ್ಕಿಂತ ಅಧಿಕ ಮಂದಿ ಮೆಚ್ಚುಗೆಯನ್ನು ನೀಡಿದ್ದಾರೆ. ಮೂರು ಸಾವಿರಕ್ಕಿಂತ ಅಧಿಕ ಮಂದಿ ಈ ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿ

ಅಸಂಖ್ಯಾತ ನೆಟ್ಟಿಗರು ಕಾಮೆಂಟ್ಗಳನ್ನು ಮಾಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರೊಬ್ಬರು, ಎಲ್ಲರ ಮನಸರ ಮನಸ್ಸಿನಲ್ಲಿ ಇಂತಹ ಆಲೋಚನೆಗಳು ಬಂದರೆ ಅವರಿಗೆ ಸರಿಯಾದ ಮಾರ್ಗವನ್ನು ತೋರಲು ಯಾವುದೇ ಧರ್ಮ ಅಥವಾ ಕಾನೂನಿನ ಅಗತ್ಯವಿಲ್ಲ ಎಂದಿದ್ದಾರೆ. ಮತ್ತೊಬ್ಬರು ಮಾನವೀಯತೆ ಎನ್ನುವುದು ಇನ್ನೂ ನಮ್ಮಲ್ಲಿ ಉಳಿದಿದೆ ಎಂಬುದನ್ನು ನೋಡಿ ಸಂತೋಷವಾಯಿತು ಎಂದಿದ್ದಾರೆ. ಇನ್ನೊಬ್ಬರು ಈ ಜಗತ್ತಿನಲ್ಲಿ ಇನ್ನೂ ಹೃದಯವಂತ ವ್ಯಕ್ತಿಗಳು ಇದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದಿದ್ದಾರೆ.