ಸರ್ಕಾರದ ಈ ಯೋಜನೆಯ ಮೂಲಕ ನಿಮ್ಮ ಮಗಳಿಗೆ ನೀಡಿ ₹ 15 ಲಕ್ಷದ ಲಾಭ: ಶಿಕ್ಷಣ, ಮದುವೆ ಅಥವಾ ಬೇರಾವುದೇ ಖರ್ಚು ಹೊರೆಯಾಗುವುದಿಲ್ಲ

ನಿಮ್ಮ ಸೂಪರ್‌ಗರ್ಲ್ ಅಂದರೆ ನಿಮ್ಮ ಮನೆ ಮಹಾಲಕ್ಷ್ಮಿ ಯಾದ ನಿಮ್ಮ ಮಗಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ನೀವು ಆಲೋಚನೆ ಮಾಡುತ್ತಿರುವಿರಾ, ಹಾಗಾದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಮಗೊಂದು ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ಈ ಬ್ಯಾಂಕ್ ಒಂದು ಟ್ವೀಟ್ ಮಾಡುವ ಮೂಲಕ ಈ ವಿಶೇಷವಾದ ಸೌಲಭ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡೊದೆ. ಬ್ಯಾಂಕಿನ ಈ ಕೊಡುಗೆಯಲ್ಲಿ ನಿಮ್ಮ ಮಗಳ ಸುಭದ್ರವಾದ ಭವಿಷ್ಯದ ದೃಷ್ಟಿಯಿಂದ ಸುಲಭವಾದ ರೀತಿಯಲ್ಲಿ 15 ಲಕ್ಷ ರೂಪಾಯಿಗಳನ್ನು ಉಳಿಸಬಹುದಾಗಿದೆ. PNB (ಪಂಜಾಬ್ ನ್ಯಾಷನಲ್ ಬ್ಯಾಂಕ್) ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯನ್ನು ತೆರೆಯುವ ಮೂಲಕ ನೀವು ನಿಮ್ಮ ಮಗಳನ್ನು ಲಕ್ಷಾಧೀಶಳನ್ನಾಗಿ ಖಂಡಿತ ಮಾಡಬಹುದಾಗಿದೆ. ಬನ್ನಿ ಹಾಗಾದರೆ ಈ ಖಾತೆಯ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಯೋಜನೆಯಲ್ಲಿ ತಂದೆ ತಾಯಿ ಅಥವಾ ಗಾರ್ಡಿಯನ್ ಒಬ್ಬ ಮಗಳ ಹೆಸರಿನಲ್ಲಿ ಕೇವಲ ಒಂದು ಖಾತೆಯನ್ನು ಮಾತ್ರವೇ ತೆರೆಯಲು ಮತ್ತು ಒಂದು ವೇಳೆ ತಮ್ಮದೇ ಇನ್ನೊಬ್ಬ ಹೆಣ್ಣು ಮಗಳ ಖಾತೆಯನ್ನು ತೆರೆಯುವುದಾದರೆ, ಇಲ್ಲಿ ಗರಿಷ್ಠ ಎರಡು ಖಾತೆಗಳನ್ನು ಮಾತ್ರ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ತೆರೆಯಲು ಮಾತ್ರವೇ ಅವಕಾಶವನ್ನು ನೀಡಲಾಗಿದೆ. ಈ ಬಗ್ಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಟ್ವೀಟ್ ನಲ್ಲಿ “ನೀವು ಮತ್ತು ನಿಮ್ಮ ಪುಟ್ಟ ದೇವತೆಗಳ ಕನಸುಗಳು ಹೊಸ ಎತ್ತರಕ್ಕೆ ಹಾರಲು ನಾವು ನಿಮಗೆ ಸಹಾಯ ಮಾಡುತ್ತೇವೆ” ಎಂದು ಬರೆದುಕೊಂಡಿದ್ದು, ಅದರ ಜೊತೆಗೆ ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ ಎಂದು ಒಂದು ಲಿಂಕ್ ಶೇರ್ ಮಾಡಿದೆ.

ಇದಲ್ಲದೇ, PNB ಒಂದು ಫೋಟೋ ಕೂಡಾ ಬಿಡುಗಡೆ ಮಾಡಿದ್ದು, ಅದರಲ್ಲಿ ಕೆಲವೊಮ್ಮೆ ಶಿಕ್ಷಕಿ, ಕೆಲವೊಮ್ಮೆ ವೈದ್ಯೆ, ಕೆಲವೊಮ್ಮೆ ಸೂಪರ್ ಗರ್ಲ್ ಆಗಬೇಕೆಂದು ಹೇಳುತ್ತಾಳೆ, ಅವರ ಆ ಕನಸು ನನಸು ಮಾಡುವುದಕ್ಕಾಗಿ ನಾವು ಸಿದ್ಧರಿದ್ದೇವೆ ಮತ್ತೆ ನೀವು?” ಸುಕನ್ಯಾ ಸಮೃದ್ಧಿ ಯೋಜನೆ” ಎಂದು ಸಹಾ ತಿಳಿಸಿದೆ ಪಂಜಾಬ್ ನ್ಯಾಷನಲ್ ಬ್ಯಾಂಕ್. ಇನ್ನು ಸುಕನ್ಯಾ ಅಭಿವೃದ್ಧಿ ಯೋಜನೆಯಲ್ಲಿ ಖಾತೆಯನ್ನು ತೆರೆದ ಮೇಲೆ ಇದರಲ್ಲಿ 250 ರೂಪಾಯಿಗಳ ಕನಿಷ್ಠ ಠೇವಣಿಯನ್ನು ಮಾಡಬೇಕು. ಗರಿಷ್ಠ ಠೇವಣಿಯ ಬಗ್ಗೆ ಹೇಳುವುದಾದರೆ 1,50,000 ರೂ.ಗಳಾಗಿರುತ್ತದೆ. ಈ ಖಾತೆಯನ್ನು ತೆರೆಯುವ ಮೂಲಕ, ನಿಮ್ಮ ಮಗಳ ವಿದ್ಯಾಭ್ಯಾಸ ಮತ್ತು ಇನ್ನಿತರೆ ಖರ್ಚುಗಳ ಹೊರೆಯು ಕಡಿಮೆಯಾಗುವುದು.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆ ತೆರೆದ ಮೇಲೆ ಇದರಿಂದ ಬರುವ ವಾರ್ಷಿಕ ಬಡ್ಡಿ ದರ 7.6%. ಇರುತ್ತದೆ. ಈ ಬಡ್ಡಿ ದರಗಳನ್ನು ಕೇಂದ್ರ ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುವುದು. ಇದರಲ್ಲಿ ಅನೇಕ ಸಣ್ಣ ಉಳಿತಾಯ ಯೋಜನೆಗಳು ಒಳಗೊಂಡಿರುತ್ತದೆ. ಇದರ ಹೊರತಾಗಿ, ಗ್ರಾಹಕರು ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಸಹಾ ಪಡೆಯುತ್ತಾರೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೆರೆದ ಖಾತೆಯು ಯಾವಾಗ ಮೆಚ್ಯೂರ್ ಆಗುತ್ತದೆ ಎನ್ನುವ ಪ್ರಶ್ನೆ ನಿಮ್ಮದಾದರೆ ಅದಕ್ಕೂ ಉತ್ತರ ಇಲ್ಲಿದೆ.‌ ಸುಕನ್ಯಾ ಸಮೃದ್ಧಿ ಅಡಿಯಲ್ಲಿ ಖಾತೆಯನ್ನು ತೆರೆದ ಮೇಲೆ, ಅದನ್ನು ತೆರೆದ ದಿನಾಂಕದಿಂದ 21 ವರ್ಷಗಳ ನಂತರ ಅಥವಾ ಮಗಳಿಗೆ 18 ವರ್ಷ ವಯಸ್ಸಾದಾಗ, ಇಲ್ಲವೇ ಮದುವೆಯ ಸಮಯದಲ್ಲಿ (ಮದುವೆಯಾದ 1 ತಿಂಗಳ ಮೊದಲು ಅಥವಾ ಮೂರು ತಿಂಗಳ ನಂತರ) ಮೆಚ್ಯೂರ್ ಆಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆಯಲು ನಾವು ಯಾವೆಲ್ಲಾ ದಾಖಲೆಗಳನ್ನು ನೀಡಬೇಕು? ಎನ್ನುವ ವಿಚಾರದ ಕಡೆಗೆ ನಾವೀಗ ಗಮನವನ್ನು ನೀಡೋಣ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯಲು, ನೀವು ನಿಮ್ಮ ಮಗಳ ಜನನ ಪ್ರಮಾಣಪತ್ರವನ್ನು ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನಲ್ಲಿ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾಗುತ್ತದೆ. ಇದಲ್ಲದೇ, ಮಗುವಿನ ತಂದೆ ತಾಯಿ ತಮ್ಮ ಗುರುತಿನ ಚೀಟಿ (ಪ್ಯಾನ್ ಕಾರ್ಡ್, ಪಡಿತರ ಚೀಟಿ, ಚಾಲನಾ ಪರವಾನಗಿ, ಪಾಸ್‌ಪೋರ್ಟ್) ಮತ್ತು ಅವರು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದರ ಸ್ಪಷ್ಟವಾದ ದಾಖಲೆಗಳನ್ನು (ಪಾಸ್‌ಪೋರ್ಟ್, ಪಡಿತರ ಚೀಟಿ, ವಿದ್ಯುತ್ ಬಿಲ್, ದೂರವಾಣಿ ಬಿಲ್, ನೀರಿನ ಬಿಲ್) ಸಲ್ಲಿಸಬೇಕಾಗಿರುತ್ತದೆ.

ಖಾತೆಯನ್ನು ತೆರೆದ ಮೇಲೆ ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 3000 ರೂ.ಗಳನ್ನು ಹೂಡಿಕೆ ಮಾಡಿದರೆ, ಅಂದರೆ ವಾರ್ಷಿಕ 36000 ರೂ.ಗಳಂತೆ ಹೂಡಿಕೆ ಮಾಡುವುದಾದರೆ, 14 ವರ್ಷಗಳ ನಂತರ ನೀವು 7.6 ಶೇಕಡಾ ವಾರ್ಷಿಕ ಬಡ್ಡಿ ದರದಲ್ಲಿ 9,11,574 ರೂ. ಗಳನ್ನು ಪಡೆಯಬಹುದು. ಆದರೆ ಇದರ ಬದಲಾಗಿ 21 ವರ್ಷಗಳಲ್ಲಿ ಮೆಚ್ಯೂರಿಟಿ ಆದಾಗ ಈ ಮೊತ್ತವು ಸುಮಾರು 15,22,221 ರೂ. ಗಳಾಗಿರುತ್ತದೆ.‌ ಈ ಯೋಜನೆಯಲ್ಲಿ ಯಾರು ಖಾತೆಯನ್ನು ತೆರೆಯಬಹುದು ಎನ್ನುವುದನ್ನು ಸಹಾ ಒಮ್ಮೆ ಸಂಕ್ಷಿಪ್ತವಾಗಿ ನೋಡೋಣ ಬನ್ನಿ.

  • ಸುಕನ್ಯಾ ಸಮೃದ್ಧಿ ಖಾತೆಯನ್ನು ಪೋಷಕರು ಮಗಳ ಹೆಸರಿನಲ್ಲಿ ತೆರೆಯಬಹುದು.
  • ಮಗಳು ಹುಟ್ಟಿದಾಗಿನಿಂದ 10 ವರ್ಷದ ವಯಸ್ಸಿನ ವರೆಗೆ ಈ ಖಾತೆಯನ್ನು ಯಾವಾಗ ಬೇಕಾದರೂ ತೆರೆಯುವ ಅವಕಾಶವಿರುತ್ತದೆ.
  • ಒಬ್ಬ ಮಗಳ ಹೆಸರಿನಲ್ಲಿ ಕೇವಲ ಒಂದು ಖಾತೆಯನ್ನು ಮಾತ್ರವೇ ತೆರೆಯಬಹುದು.
  • ಒಬ್ಬ ಮಗಳಿಗೆ ಪೋಷಕರು ಪ್ರತ್ಯೇಕವಾಗಿ ಖಾತೆಗಳನ್ನು ತೆರೆಯುವ ಅವಕಾಶವಿಲ್ಲ.
  • ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಖಾತೆ ತೆರೆಯಬಹುದಾಗಿದೆ.
  • ವಿಶೇಷ ಸಂದರ್ಭಗಳಲ್ಲಿ ಅಂದರೆ ಅವಳಿ ಮಕ್ಕಳ ಸಂದರ್ಭದಲ್ಲಿ ಎರಡಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.