ಸುಪ್ರಸಿದ್ಧ TCS ಕಂಪನಿಯಲ್ಲಿಯ ಒಳ್ಳೆಯ ನೌಕರಿಗೆ ನೀರು ಚೆಲ್ಲಿ ತರಕಾರಿ ಬೆಳೆದು ಮಾರಾಟ ಮಾಡುತ್ತಿರುವ ಯುವತಿ; ಈಗ ವರ್ಷದ ಆದಾಯ 20 ಕೋಟಿ!
ಒಳ್ಳೆಯ ನೌಕರಿಯನ್ನು ತ್ಯಜಿಸಿ ಕಾಯಿಪಲ್ಯಗಳನ್ನು ಬೆಳೆಯುವ ಈ ಯುವತಿ ಈಗ ವರ್ಷಕ್ಕೆ ಗಳಿಸುತ್ತಿದ್ದಾಳೆ 20 ಕೋಟಿ ₹ ಗಳನ್ನು ಹೇಗೆ ತಿಳಿದುಕೊಳ್ಳಿ!
ಮಾಡಲು ಕೆಲಸಗಳು ನೂರಾರು ಇವೆ. ಮಾಡುವಂತಹ ಮನಸ್ಸಿರಬೇಕು. ಹಣಗಳಿಸಲು ಅನೇಕ ಮಾರ್ಗಗಳಿವೆ, ಆದರೆ ಆ ಮಾರ್ಗ ಗೌರವಯುತ ಮತ್ತು ಸ್ವಾಭಿಮಾನದ್ದಾಗಿರಬೇಕು.

ಸಮಾಜದಲ್ಲಿ ಮೊದಲು ಬೇಸಾಯಕ್ಕೆ ತುಂಬಾ ಮಹತ್ವ ಕೊಟ್ಟಿದ್ದರು. ಬೇಸಾಯದ ನಂತರ ವ್ಯಾಪಾರ ಅದಾದ ನಂತರ ಮೂರನೆಯ ಸ್ಥಾನದಲ್ಲಿ ನೌಕರಿ ಇತ್ತು.
ಆಗಿನ ಕಾಲದ ಪ್ರಕಾರ ಹಣಗಳಿಸುವ ಮುಖ್ಯ ಮಾರ್ಗ ಕೃಷಿಯಾಗಿತ್ತು. ವ್ಯಾಪಾರ ಮಧ್ಯಮ ಮತ್ತು ಮೂರನೆಯದಾಗಿ ಈ ಮೇಲಿನ ಎರಡು ಮಾರ್ಗಗಳು ಇಲ್ಲದಿದ್ದಾಗ ಮಾತ್ರ ನೌಕರಿಯ ವಿಚಾರ ಮಾಡುತ್ತಿದ್ದರು. ಇದರಿಂದ ತಿಳಿದುಬರುವ ಮಹತ್ವದ ವಿಚಾರವೆಂದರೆ ನೌಕರಿಗೆ ಆಗಿನ ಕಾಲದಲ್ಲಿ ಅಷ್ಟೊಂದು ಬೆಲೆ ಇರಲಿಲ್ಲ. ಯಾರ ಹತ್ತಿರ ಉಳುವುದಕ್ಕಾಗಿ ಭೂಮಿ ಇತ್ತು ಅವರೇ ಆಗ ಶ್ರೀಮಂತರಾಗಿದ್ದರು.
ಬರುಬರುತ್ತಾ ಕಾಲವು ಬದಲಾಗುತ್ತಾ ಬಂದಿತು. ಆಧುನಿಕತೆಯ ಮತ್ತು ಶಿಕ್ಷಣದ ಪ್ರವಾಹದಲ್ಲಿ ಹೊಸ ಹೊಸ ಉದ್ಯೋಗಗಳು ನಿರ್ಮಾಣವಾಗುತ್ತ ಬಂದವು. ಹೀಗಾಗಿ ಉದ್ಯೋಗ ದಂಧೆಗಳಲ್ಲಿ ಕೆಲಸ ಮಾಡಲು ನೌಕರ ವರ್ಗದವರ ಅವಶ್ಯಕತೆ ಬಿತ್ತು. ಶಿಕ್ಷಣ ಕಲಿತ ಜನ ಕಡಿಮೆ ಇರುವುದರಿಂದ ಕೈತುಂಬ ಸಂಬಳದ ಒಳ್ಳೆಯ ನೌಕರಿಗಳು ದೊರೆಯಲಾರಂಭಿಸಿದವು.

ಆದರೆ ಇತ್ತೀಚೆಗೆ ಅನೇಕ ಜನರು ತಮ್ಮ ಒಳ್ಳೆಯ ನೌಕರಿಯನ್ನು ಬಿಟ್ಟು ಕೃಷಿಯಲ್ಲಿ ಏನಾದರೂ ಹೊಸದನ್ನು ಮಾಡಿ ನೌಕರಿಗಿಂತ ಹೆಚ್ಚು ಹಣವನ್ನು ಗಳಿಸುವ ಮಾರ್ಗವನ್ನು ಹುಡುಕಿ ಅದರಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಈ ಲೇಖನದಲ್ಲಿ ಹೀಗೆ ಮುಖ್ಯ ಪ್ರವಾಹವನ್ನು ಬಿಟ್ಟು ಬೇರೆ ಮಾರ್ಗ ಅನುಸರಿಸಿ ಅದರಲ್ಲಿ ಯಶಸ್ವಿಯಾದ ಮತ್ತು ಸ್ವಾಭಿಮಾನದ ಕೆಲಸ ಮಾಡಿ ಹೆಸರು ಗಳಿಸಿಕೊಂಡ ಯುವತಿಯೊಬ್ಬಳ ಕಥೆಯನ್ನು ಓದುವ.
ಈ ಯುವತಿಯ ಹೆಸರು ಗೀತಾಂಜಲಿ ರಾಜಮಣಿ. ಟಿಸಿಎಸ್ ಹೆಸರಿನ ಪ್ರಸಿದ್ಧ ಕಂಪನಿಯಲ್ಲಿ ಕೆಲಸಗಾರಳಾದ ಈಕೆ ತನ್ನ ನೌಕರಿಗೆ ತಿಲಾಂಜಲಿಯನ್ನು ಕೊಟ್ಟು ಕರಿಯರ್ ಸಲುವಾಗಿ ಸ್ವಂತದ ಹೊಸಮಾರ್ಗವನ್ನು ಹುಡುಕಿದ ಸ್ವಾಭಿಮಾನಿ ಯುವತಿ.

ಮೂಲತಃ ಕೇರಳದವಳಾದ ಈಕೆ ಹೈದರಾಬಾದಿನಲ್ಲಿ ತಂದೆ ತಾಯಿಯರ ಜೊತೆಗೆ ಇರುತ್ತಿದ್ದಳು. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನು ಸರಿ ಇರಲಿಲ್ಲ. ಅದರಲ್ಲಿ ಚಿಕ್ಕವಳಿರುವಾಗಲೇ ತಂದೆಯ ನಿಧನ. ಮನೆಯ ಎಲ್ಲ ಜವಾಬ್ದಾರಿ ತಾಯಿಯೊಬ್ಬಳ ಮೇಲೆ ಬಿದ್ದಿತು. ಆದರೂ ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದೆ ತಾಯಿ ಇಬ್ಬರು ಮಕ್ಕಳನ್ನು ಕಲಿಸಿ ಓದಿಸಿದಳು.
ಗೀತಾಂಜಲಿಯ ಜೀವನದಲ್ಲಿ ಬದಲಾವಣೆಗೆ ಸೂಚನೆ ಅಥವಾ ತಿರುವು ಕೊಟ್ಟ ಸಂಗತಿಯೆಂದರೆ ಬೇಸಿಗೆ ರಜೆಗಳನ್ನು ಯಾವಾಗಲೂ ಕೇರಳದಲ್ಲಿ ಕಳೆಯುತ್ತಿದ್ದಳು. ಆ ಸಂದರ್ಭದಲ್ಲಿ ಅಲ್ಲಿದ್ದ ದೊಡ್ಡಪ್ಪನ ತೋಟಕ್ಕೆ ತಪ್ಪದೇ ಹೋಗುತ್ತಿದ್ದಳು. ಗೀತಾಂಜಲಿ ಪ್ರತಿದಿನ ತೋಟಕ್ಕೆ ಕೊಟ್ಟ ಭೇಟಿ ಮತ್ತು ತೋಟದಲ್ಲಿದ್ದ ಬೇರೆ ಬೇರೆ ಪ್ರಕಾರದ ಕಾಯಿಪಲ್ಯಗಳ ವಿವಿಧ ರೀತಿಯ ಗಿಡಗಳು ಮತ್ತು ಅವುಗಳ ಬಗ್ಗೆ ತೆಗೆದುಕೊಂಡ ಜ್ಞಾನ ಮುಂದಿನ ಜೀವನದಲ್ಲಿ ಉಪಯುಕ್ತವಾಗಿ ಸಿದ್ಧವಾದವು.
ಗೀತಾಂಜಲಿ ಸಾಯನ್ಸ್ ನಲ್ಲಿ ಗ್ರಾಜುಯೇಷನ್ ಪೂರ್ಣ ಮಾಡಿ ಮುಂದೆ ಎಂಬಿಎ ಸಹಿತ ಪೂರ್ಣ ಮಾಡಿದಳು. ಆನಂತರ ಹನ್ನೆರಡು ವರ್ಷಗಳವರೆಗೆ ಕ್ಲಿನಿಕಲ್ ರಿಸರ್ಚ್ ಲ್ಯಾಬರೋಟರಿಯಲ್ಲಿ ಕೆಲಸ ಮಾಡಿದಳು. ಆಮೇಲೆ ಟಾಟಾ ಕನ್ಸಲ್ಟನ್ಸಿ ಸರ್ವಿಸೇಸ್ ನಲ್ಲಿಯೂ ಗ್ಲೋಬಲ್ ಬಿಸಿನೆಸ್ ರಿಲೇಶನ್ ಮ್ಯಾನೇಜರ್ ಆಗಿ ಕೆಲಸ ಮಾಡಿದಳು.
ಇಷ್ಟೆಲ್ಲ ಮಾಡುವಾಗ ಆಕೆಯ ಮದುವೆಯು ಆಗಿತ್ತು. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವಾಗ ಅನೇಕ ರೀತಿಯ ಬಿಜಿನೆಸ್ ಐಡಿಯಾಗಳನ್ನು ತಿಳಿದುಕೊಂಡಳು. ಯಾವುದೇ ಒಂದು ಕೆಲಸ ಮಾಡುವ ಮೊದಲು ಕೆಲಸದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಒಂದು ಬಿಸಿನೆಸ್ ಪ್ರಾರಂಭ ಮಾಡುವ ಮೊದಲು ಬಿಜಿನೆಸ್ ಗೆ ಬೇಕು-ಬೇಡವಾದ ವಿಷಯಗಳ ಬಗ್ಗೆ ಲಾಭ-ನಷ್ಟಗಳ ಬಗ್ಗೆ ಕೆಲಸಗಾರರ ಬಗ್ಗೆ ವ್ಯವಸ್ಥಾಪನೆಯ ಬಗ್ಗೆ ಅಭ್ಯಾಸ ಮಾಡುವುದು ತುಂಬಾ ಅವಶ್ಯಕವಾಗಿದೆ. ಇದನ್ನೆಲ್ಲ ಗೀತಾಂಜಲಿ ತಾನು ಕೆಲಸ ಮಾಡುವ ಕಂಪನಿಗಳಿಂದ ಜ್ಞಾನ ಪಡೆದುಕೊಂಡಳು.
ಕೆಲವೊಂದು ಸಲ ಜೀವನದಲ್ಲಿ ನಾವು ನಮ್ಮಿಷ್ಟ ಗಳನ್ನು ಬದಿಗೊತ್ತಿ ಯಾವುದೋ ಒಂದು ಪರಿಸ್ಥಿತಿಗೆ ಹೊಂದಿಕೊಳ್ಳುವ ಸಲುವಾಗಿ ಬೇರೆ ಕರಿಯರನ್ನು ಆಯ್ಕೆ ಮಾಡಿಕೊಂಡಿರುತ್ತೇವೆ. ಯಾರು ತಮ್ಮ ಇಷ್ಟಕ್ಕೆ ಬೆಲೆ ಕೊಡುತ್ತಾರೆ ಅವರು ಹಣಕ್ಕೆ ಬೆಲೆ ಕೊಡುವುದಿಲ್ಲ. ಹಣಕ್ಕೆ ಬೆಲೆ ಕೊಡುವವರು ತಮ್ಮ ಇಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸರಿಯಾಗಿ ನೌಕರಿಯನ್ನು ಮಾಡುತ್ತಾ ಹೋಗುತ್ತಾರೆ.
ಆದರೆ ಗೀತಾಂಜಲಿ ಆ ತರದವಳಗಾಗಿರಲಿಲ್ಲ. ಇವಳ ವಿಚಾರ ದೊಡ್ಡ ಕಂಪನಿಯಲ್ಲಿ ನೌಕರನಾಗುವುದಕ್ಕಿಂತ ಚಿಕ್ಕದಾದ ಕಂಪನಿಯ ಮಾಲೀಕಳಾಗುವ ಆಸೆ ಹೊತ್ತಿದ್ದಳು. ಅದಕ್ಕಾಗಿಯೇ ಒಳ್ಳೆಯ ಸಂಬಳದ ನೌಕರಿಯನ್ನು ಬಿಟ್ಟು ತನ್ನಿಷ್ಟದ ಗುರಿಯನ್ನು ಮುಟ್ಟಲು ತಯಾರಾದಳು.
ಆಕೆಯ ಉದ್ದೇಶ ತನ್ನ ಕೆಲಸದಿಂದ ಎಲ್ಲರಿಗೂ ಅನುಕೂಲವಾಗುವ ಎಲ್ಲರಿಗೂ ಒಳ್ಳೆಯ ಆರೋಗ್ಯವನ್ನು ನೀಡುವ ಸಾವಯವ ಕೃಷಿಯಲ್ಲಿ ಏನಾದರೂ ಮಾಡುವದಾಗಿತ್ತು. ರಾಸಾಯನಿಕ ಗೊಬ್ಬರಗಳನ್ನು ಮತ್ತು ಕೀಟನಾಶಕಗಳನ್ನು ಉಪಯೋಗಿಸದ ಕೃಷಿ ವ್ಯವಸಾಯ ಮಾಡುವ ಉದ್ದೇಶವನ್ನು ಆಕೆ ಹೊಂದಿದ್ದಳು.

ಪ್ರತಿ ರಜೆಯಲ್ಲಿ ಕೇರಳಕ್ಕೆ ಹೋದಾಗ ಬೇಸಾಯದ ಬಗೆಗಿನ ಅಲ್ಲಿದ್ದ ಅವಳ ಅಂಕಲ್ ಕೊಟ್ಟ ಜ್ಞಾನವು ಆಕೆಯ ತಲೆಯಲ್ಲಿ ಇದ್ದೆ ಇತ್ತು. ಹೀಗಾಗಿ ವಿಶೇಷವಾಗಿ ಕಾಯಿಪಲ್ಯಗಳ ಬೇಸಾಯ ಯಾವ ರೀತಿ ಮಾಡುವುದು ಇದನ್ನೆಲ್ಲಾ ತಿಳಿದುಕೊಂಡಿದ್ದಳು. ಆದರೆ ಈಗ ಸಮಯ ಔಟ್ಪುಟ್ ಗಾಗಿ ಕಾದಿತ್ತು. ಇದನ್ನು ಮಾಡುವಾಗ ಮೊಬೈಲ್ ಸಹಿತ ತುಂಬಾ ಒಳ್ಳೆಯ ಉಪಯೋಗಕ್ಕೆ ಬಂದಿತು. ಗೀತಾಂಜಲಿ ಫರ್ಮಿಜನ್ ಹೆಸರಿನ ಸಾವಯವ ಕೃಷಿ ವ್ಯವಸಾಯವನ್ನು ತನ್ನ ಇಬ್ಬರು ಸಹಕಾರಿಗಳೊಂದಿಗೆ ಪ್ರಾರಂಭಿಸಿದಳು.
ಈ ಪದ್ಧತಿಯಲ್ಲಿ ರೈತ 600 ಸ್ಕ್ವೇರ್ ಫೀಟ್ ಜಾಗ ತಿಂಗಳಿಗೆ 2500 ರೂಪಾಯಿಗಳ ಬಾಡಿಗೆಗೆ ಕೊಡುತ್ತಾನೆ. ಬಾಡಿಗೆ ತೆಗೆದುಕೊಂಡ ಗ್ರಾಹಕ ಆ ರೈತನ ಮುಖಾಂತರವೇ ತನಗೆ ಬೇಕಾದ ಕಾಯಿಪಲ್ಲೆಗಳನ್ನು ಅಲ್ಲಿ ಬೆಳೆಯಬಹುದು.
ಬೇಸಾಯದಲ್ಲಿ ಹೊಸ ಪದ್ಧತಿಯನ್ನು ವಿಕಸಿತ ಮಾಡುವ ಸಲುವಾಗಿ ಫರ್ಮಿಜನ್ ಆಪ್ ತುಂಬಾ ಉಪಯೋಗಿ ಸಿದ್ಧವಾಗಿದೆ. ಇವರು ಭೂಮಿಯನ್ನು ಬಾಡಿಗೆಗೆ ತೆಗೆದುಕೊಳ್ಳುವುದರ ಜೊತೆಗೆ ಸಾವಯವ ಗೊಬ್ಬರ, ಒಳ್ಳೆಯ ತಳಿಯ ಬೀಜಗಳನ್ನು ಮತ್ತು ಸಸಿಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತಾರೆ.
ಈ ಸಾವಯವ ಕೃಷಿಯಿಂದ ಬೆಳೆದ ತರಕಾರಿಗಳನ್ನು ಗ್ರಾಹಕರಿಗೆ ಮನೆಯವರೆಗೆ ತಲುಪಿಸುವ ಕಾರ್ಯವನ್ನು ಸಹಿತ ಫಾರ್ಮಿಜನ್ ಮಾಡುತ್ತದೆ. ಇದರಿಂದ ಮಧ್ಯದಲ್ಲಿ ಬರುವ ದಲ್ಲಾಳಿಗಳು ಬದಿಗುಳಿದು ರೈತ ಮತ್ತು ಗ್ರಾಹಕರ ನೇರ ಸಂಪರ್ಕವಾಗುತ್ತದೆ. ಇದರಲ್ಲಿ ಇಬ್ಬರಿಗೂ ಲಾಭವಾಗುತ್ತದೆ.
ಈ ಕೆಲಸದಲ್ಲಿ ಗೀತಾಂಜಲಿ ಮತ್ತು ಆಕೆಯ ಸಹಕಾರಿಗಳು ತುಂಬಾ ಪಾರದರ್ಶಕತೆಯನ್ನು ಇಟ್ಟುಕೊಂಡಿದ್ದಾರೆ. ಗ್ರಾಹಕರಿಗೆ ದೊರೆಯುವ ತರಕಾರಿಗಳು ಯಾವ ರೈತರದ್ದಾಗಿದೆ ಎಂಬುದು ಗ್ರಾಹಕರಿಗೆ ತಿಳಿದುಬರುತ್ತದೆ. ಇನ್ನೊಂದು ವಿಶೇಷತೆ ಏನೆಂದರೆ ಗ್ರಾಹಕರು ಜಿಪಿಎಸ್ ಸಹಾಯದಿಂದ ತೋಟವನ್ನು ಗಮನಿಸಬಹುದು. ತೋಟಕ್ಕೆ ಭೇಟಿ ಕೊಡಬೇಕೆಂದರೆ ಭೇಟಿಯು ಕೊಡಬಹುದು. ಗ್ರಾಹಕರಿಂದ ಈ ಫರ್ಮಿಜನ್ ಆಪ್ ಗೆ ತುಂಬಾ ಒಳ್ಳೆಯ ರೆಸ್ಪಾನ್ಸ್ ದೊರೆಯುತ್ತಿದೆ.

ಗೀತಾಂಜಲಿ ಹೇಳುವ ಹಾಗೆ ಈ ಕಾರ್ಯದಲ್ಲಿ ಕೆಲವೊಂದು ತೊಂದರೆಗಳು ಸಹಿತ ಉದ್ಭವಿಸುವವು. ಜನರು ತರಕಾರಿಗಳ ಗುಣಮಟ್ಟಕ್ಕಿಂತ ಅವುಗಳ ಆಕಾರವನ್ನು ನೋಡುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರ ಮತ್ತು ಔಷಧ ಸಿಂಪಡಿಸದೆ ಬರೀ ಸಾವಯವ ಗೊಬ್ಬರಗಳ ಮುಖಾಂತರ ಬರುವ ತರಕಾರಿ ಮತ್ತು ಹಣ್ಣುಗಳ ಆಕಾರ ಸ್ವಲ್ಪ ಚಿಕ್ಕದಾಗಿರುತ್ತೆ.
ಕೆಮಿಕಲ್ಸಗಳ ಉಪಯೋಗದಿಂದ ಹಣ್ಣುಗಳು ಆಕಾರದಲ್ಲಿ ದೊಡ್ಡದಾಗುತ್ತವೆ. ಇದನ್ನು ಜನರು ಮರೆಯುತ್ತಾರೆ. ಆ ರಾಸಾಯನಿಕಗಳ ಉಪಯೋಗ ನಮ್ಮ ಶರೀರಕ್ಕೆ ಹಾನಿಯನ್ನು ಉಂಟು ಮಾಡುತ್ತದೆ ಎಂಬುದು ಅವರಿಗೆ ಗೊತ್ತಾಗುವುದಿಲ್ಲ.
2017 ರಲ್ಲಿ ಪ್ರಾರಂಭವಾದ ಈ ಫಾರ್ಮೀಜನ್ ನ್ನು 16 ಸಾವಿರಕ್ಕೂ ಹೆಚ್ಚು ಗ್ರಾಹಕರು ಮೆಚ್ಚಿದ್ದಾರೆ. ಕಂಪನಿಯು ವರ್ಷಾಂತ್ಯದ ವರೆಗೆ 20 ಕೋಟಿ ರೂಪಾಯಿಗಳು ಟರ್ನವರ್ ಮಾಡಿದೆ.
ಕಂಪನಿಯಲ್ಲಿ ದೊಡ್ಡ ಸ್ಥಾನದ ಮೇಲೆ ನೌಕರನಾಗುವುದಕ್ಕಿಂತ ಸ್ವಂತದ ಚಿಕ್ಕ ಕಂಪನಿಯ ಮಾಲೀಕಳಾಗುವ ಗುರಿಯನ್ನು ತಲುಪಿದ ಗೀತಾಂಜಲಿಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ.