ಹುಟ್ಟುತ್ತಲೇ ಡಾಕ್ಟರ್ ಮಾಸ್ಕ್ ಎಳೆದು ಹಾಕಿದ ಮಗು; ‘ಕೊರೊನಾ ಅಂತ್ಯದ ಶುಭ ಸಂಕೇತವೆಂದ ಜನ!’

ಕೊರೊನಾ ಎನ್ನುವ ವೈರಸ್ ಅದಾವ ಘಳಿಗೆಯಲ್ಲಿ ಹರಡಿತೋ ಏನೋ ಇದರಿಂದಾಗಿ ಇಡೀ ಜಗತ್ತು ತೊಂದರೆಗೆ ಒಳಗಾಗಿದೆ ಹಾಗೂ ಮಾನವರ ಜೀವನದ ದಿಕ್ಕು ಬದಲಾಗಿದೆ. ಒಂದರ್ಥದಲ್ಲಿ ಇದು ಜನ ಜೀವನವನ್ನು ಅಸ್ತವ್ಯಸ್ತವಾಗಿ ಮಾಡಿ ಬಿಟ್ಟಿದೆ. ದಿನಗಳು ಕಳೆದು ತಿಂಗಳಾಗಿ, ಇದೀಗ ಅರ್ಧ ವರ್ಷವೇ ಕಳೆದುಹೋದರೂ ಕೂಡಾ ಈ ಕೊರೊನಾ ಮಾತ್ರ ತಣ್ಣಗಾಗುವ ಸೂಚನೆಗಳು ಕಾಣುತ್ತಿಲ್ಲ. ಬಹಳಷ್ಟು ಅಸ್ತ ವ್ಯಸ್ತವಾದ ಜೀವನದಲ್ಲಿ ಜನರು ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಗಳು ಇಂದು ನಮ್ಮ ಮುಂದೆ ಇದೆ‌. ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳು ಈಗ ನಮ್ಮ ಜೀವನದೊಂದು ಭಾಗವಾಗಿದ್ದು, ಮನೆಯಿಂದ ಹೊರ ಬಂದರೆ ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.

ಜನರು ಕೊರೊನಾದಿಂದ ಬೇಸತ್ತು ಪವಾಡದಂತೆ ಏನಾದರೂ ನಡೆದು ಈ ಸಂ ಕ ಷ್ಟವು ದೂರಾಗಲಿ ಎಂದು ಪ್ರಾರ್ಥನೆ ಮಾಡುವಂತಾಗಿದೆ. ಹೀಗೆ ಪವಾಡದ ನಿರೀಕ್ಷೆ ಮಾಡುತ್ತಿದ್ದವರಿಗೆ ಅಂತಹುದೊಂದು ಶುಭ ಸೂಚನೆ ಅಥವಾ ಪವಾಡ ನಡೆಯಲಿದೆ ಎನ್ನುವಂತೆ ಸೂಚನೆ ದೊರೆತಿದೆ ಎನ್ನುವಂತಹ ಫೋಟೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಹಾಗಾದರೆ ಯಾವುದು ಆ ಫೋಟೋ? ಏನಿದೆ ಅಂತಹ ಪವಾಡ ಆ ಫೋಟೋದಲ್ಲಿ ಎನ್ನುವುದಾದರೆ ಅಲ್ಲಿ ಪವಾಡ ಇದೆಯೋ ಇಲ್ಲವೋ ನಂತರದ ಮಾತು ಆದರೆ ಆ ರೀತಿ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ವಿಚಾರ ವಾಸ್ತವ.

ವೈರಲ್ ಆಗಿರುವ ಫೋಟೋದಲ್ಲಿ ಆಸ್ಪತ್ರೆಯೊಂದರಲ್ಲಿ ಆಗತಾನೇ ತಾಯಿಯ ಗರ್ಭದಿಂದ ಈ ಭೂಮಿಗೆ ಬಂದ ಮಗುವೊಂದು, ತನ್ನನ್ನು ಎತ್ತಿ ಹಿಡಿದ ವೈದ್ಯರು ತೊಟ್ಟಿದ್ದ ಮಾಸ್ಕ್ ಅನ್ನು ಎಳೆದು ಹಾಕಿದೆ. ಈ ಫೋಟೋ ದುಬೈನ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಿದೆ ಎನ್ನಲಾಗಿದೆ. ಯುಎಇ ಯಲ್ಲಿ ಸ್ತ್ರೀ ರೋಗ ತಜ್ಞರಾಗಿರುವ ಡಾ.ಸಮೀರ್ ಚೇಯಬ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿದ ವೈದ್ಯರು ಅದರ ಜೊತೆ, ನಾವೆಲ್ಲರೂ ಕೂಡಾ ಮಾಸ್ಕ್ ಧರಿಸದೇ ಇರುವ ದಿನದ ಇಂತಹುದೊಂದು ಸೂಚನೆಗೆ ಕಾದಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ವೈದ್ಯರು ಹಂಚಿಕೊಂಡ ಈ ಫೋಟೋ ಸೋಶಿಯಲ್ ಮೀಡಿಯಾ ದಲ್ಲಿ ಭರ್ಜರಿ ವೈರಲ್ ಆಗಿದ್ದು, ಈಗಾಗಲೇ 38 ಸಾವಿರಕ್ಕಿಂತಲೂ ಅಧಿಕ ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಅಲ್ಲದೇ ಫೋಟೋಗೆ ಉತ್ತಮವಾದ ಕಾಮೆಂಟ್ ಗಳು ಕೂಡಾ ಬರುತ್ತಿವೆ. ನೆಟ್ಟಿಗರೊಬ್ಬರು 2020 ರ ಸುಂದರವಾದ ಫೋಟೋ ಎಂದರೆ ಇದೇ, ಬಹಳ ಬೇಗ ಕೊರೊನಾ ಮುಕ್ತವಾಗುತ್ತದೆ ಎನ್ನುವುದಕ್ಕೆ ಇದೊಂದು ಶುಭ ಸೂಚನೆ ಎಂದು ಹೇಳಿದ್ದಾರೆ.‌ಮತ್ತೊಬ್ಬರು ಬಹುಶಃ ನಾವು ಮಾಸ್ಕ್ ಅನ್ನು ಕಿತ್ತೆಸೆಯುವ ಸಮಯ ಹತ್ತಿರವಾಗಿದೆ ಎನ್ನುವ ಸೂಚನೆ ಇದಾದರೆ ಬಹಳ ಚೆನ್ನಾಗಿರುತ್ತದೆ ಎಂದು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಇಂತಹ ಒಳ್ಳೆಯ ಕಾಮೆಂಟ್ ಗಳು ಸಾಲು ಸಾಲಾಗಿ ಬರುತ್ತಿದ್ದು, ಮಗು ಮಾಸ್ಕ್ ಕಿತ್ತ ಫೋಟೋವನ್ನು ಭವಿಷ್ಯವಾಣಿ ಎನ್ನುವ ಅರ್ಥದಲ್ಲಿ ಎಲ್ಲರೂ ನೋಡಲು ಆರಂಭಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಚೀನಾದಲ್ಲಿ ಕಂಡು ಬಂದ ಕೊರೊನಾ ಅನಂತರದ ದಿನಗಳಲ್ಲಿ ಬಹುಬೇಗ ವಿಶ್ವವನ್ನೇ ವ್ಯಾಪಿಸಿ ತಲ್ಲಣ ಉಂಟು ಮಾಡಿದ್ದು, ಇನ್ನೆರಡು ತಿಂಗಳು ಕಳೆದರೆ ಒಂದು ವರ್ಷವೇ ಆಗಿ ಬಿಡುತ್ತದೆ‌. ಕೊರೊನಾ ಮಾನವ ಜೀವನದ ದಿಕ್ಕನ್ನು ಬದಲಿಸಿದ್ದು, ಈ ಪರಿಸ್ಥಿತಿಯನ್ನು ದಾಟಿ ಹೊರ ಬರಲು ಇನ್ನೂ ಸ್ವಲ್ಪ ಸಮಯ ಖಚಿತವಾಗಿ ಬೇಕಾಗಿದೆ.