15 ವರ್ಷಗಳ ಹಿಂದೆ ಸಮನಾಗಿತ್ತು ಅಂಬಾನಿ ಬಂಧುಗಳ ಸಂಪತ್ತು, ಇಂದು ಮುಕೇಶ್ ಅಂಬಾನಿಯ ಸಂಪತ್ತಿನಲ್ಲಿ 9 ಪಟ್ಟು ಹೆಚ್ಚಳವಾದರೆ, ಅನಿಲ್ ಅಂಬಾನಿ ದಿವಾಳಿಯಾಗಿದ್ದಾರೆ!

2006 ರಲ್ಲಿ ಮುಖೇಶ್ ಅಂಬಾನಿ ಅವರ ಸಹೋದರ ಅನಿಲ್ ಅಂಬಾನಿ ಅವರ ಆಸ್ತಿ ಮುಖೇಶ್ ಅಂಬಾನಿ ಅವರಿಗಿಂತ ಹೆಚ್ಚಾಗಿತ್ತು, ಆದರೆ ಕಾಲ ಚಕ್ರ ಉರುಳಿದ ಹಾಗೆ ಇಂದು ಮುಖೇಶ್ ಅಂಬಾನಿ ವಿಶ್ವದ ಐದನೇ ಮತ್ತು ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಸ್ಥಾನವನ್ನು ಪಡೆದುಕೊಂಡಿದ್ದರೆ ಅವರ ಸಹೋದರ ಅನಿಲ್ ಅಂಬಾನಿ ದಿವಾಳಿಯಾಗುವ ಹಂತಕ್ಕೆ ಬಂದು ತಲುಪಿದ್ದಾರೆ. ಮುಖೇಶ್ ಅಂಬಾನಿಯ ಆಸ್ತಿ 77 ಶತಕೋಟಿಗೆ ಏರಿಕೆಯಾಗಿದ್ದರೆ, ಇನ್ನೊಂದು ಕಡೆ ಅನಿಲ್ ಅಂಬಾನಿ ಹೆಸರು ಶತಕೋಟಿಗಳನ್ನು ಹೊಂದಿರುವ ಶ್ರೀಮಂತರ ಪಟ್ಟಿಯಿಂದ ಈಗಾಗಲೇ ಹೊರಬಂದಿದೆ. ಅವರ ಆಸ್ತಿ ಪ್ರಸ್ತುತ ಒಂದು ಬಿಲಿಯನ್ ಡಾಲರ್ ಗಳಿಗಿಂತ ಕಡಿಮೆ ಇದೆ ಎನ್ನಲಾಗಿದೆ. 2002 ರಲ್ಲಿ ರಿಲಯನ್ಸ್ ನ ಸಂಸ್ಥಾಪಕ ಧೀರೂಭಾಯ್ ಅಂಬಾನಿ ಅವರ ನಿಧನಾನಂತರ ಮುಖೇಶ್ ಅಂಬಾನಿ ರಿಲಯನ್ಸ್ ನ ಅಧ್ಯಕ್ಷರಾಗಿ ಹಾಗೂ ಅನಿಲ್ ಅಂಬಾನಿ ಎಂಡಿ ಆಗಿ ನೇಮಕಗೊಂಡರು.

2004 ರಲ್ಲಿ ವೈಯಕ್ತಿಕ ಕಾರಣಗಳಿಂದ ಇಬ್ಬರು ಸಹೋದರರ ನಡುವೆ ಉಂಟಾದ ವೈ ಮನಸ್ಸಿನ ಕಾರಣದಿಂದ 2005 ರಲ್ಲಿ ಇಬ್ಬರೂ ಕೂಡಾ ಆಸ್ತಿಯನ್ನು ಹಂಚಿಕೊಂಡರು. ಆ ಸಂದರ್ಭದಲ್ಲಿ ಅವರ ಆಸ್ತಿಯ ಮೊತ್ತ ಏಳು ಬಿಲಿಯನ್ ಡಾಲರ್ ಗಳಾಗಿತ್ತು. ಹೀಗೆ ಇಬ್ಬರು ಆಸ್ತಿಯನ್ನು ವಿಭಜನೆ ಮಾಡಿಕೊಂಡ ಹದಿನೈದು ವರ್ಷಗಳ ನಂತರ ಇಂದು ಇಬ್ಬರು ಸಹೋದರರ ಒಟ್ಟು ಆಸ್ತಿಯನ್ನು ಗಮನಿಸಿದರೆ ಅದರಲ್ಲಿ ಭೂಮಿ ಆಕಾಶಕ್ಕಿರುವ ಅಂತರವನ್ನು ನಾವು ಗಮನಿಸಬಹುದಾಗಿದೆ. ಆಸ್ತಿ ವಿಭಜನೆಯ ನಂತರ ಮುಖೇಶ್ ಅಂಬಾನಿ ಅವರ ಆಸ್ತಿಯ ನಿವ್ವಳ ಮೌಲ್ಯ 9 ಪಟ್ಟು ಹೆಚ್ಚಾಗಿದೆ.

ಆಸ್ತಿ ವಿಭಜನೆಯ ನಂತರ ಮುಖೇಶ್ ಅಂಬಾನಿ ಅವರ ಪಾಲಿಗೆ ಪೆಟ್ರೋಲಿಯಂ ವ್ಯವಹಾರಗಳು ಬಂದವು, ಕಿರಿಯ ಸಹೋದರ ಅನಿಲ್ ಅಂಬಾನಿ ಅವರ ಪಾಲಿಗೆ ರಿಲಯನ್ಸ್ ಕಮ್ಯುನಿಕೇಶನ್ಸ್, ರಿಲಯನ್ಸ್ ಕ್ಯಾಪಿಟಲ್ ಎನರ್ಜಿ ಬ್ಯುಸಿನೆಸ್ ಬಂದವು. 2008 ರವರೆಗೂ ಕೂಡಾ ಆಸ್ತಿಯ ವಿಚಾರದಲ್ಲಿ ಇಬ್ಬರೂ ಸಹೋದರರಲ್ಲಿ ಸಾಮ್ಯತೆಯಿತ್ತು. ಆದರೆ 2009 ರಲ್ಲಿ ಉಂಟಾದ ಜಾಗತಿಕ ಆರ್ಥಿಕ ಹಿಂಜರಿತವು ಇಬ್ಬರ ವ್ಯವಹಾರಗಳ ಮೇಲೂ ಕೂಡಾ ತನ್ನ ಪ್ರಭಾವವನ್ನು ಬೀರಿತು. ಆದರೆ ಮುಖೇಶ್ ಅಂಬಾನಿ ಈ ಆರ್ಥಿಕ ಹೊ ಡೆ ತದಿಂದ ಬೇಗ ಚೇತರಿಸಿಕೊಂಡರು. ಆದರೆ ಅನಿಲ್ ಅಂಬಾನಿಗೆ ಅದು ಸಾಧ್ಯವಾಗಲಿಲ್ಲ.

ಅಲ್ಲಿಂದ ಅನಿಲ್ ಅಂಬಾನಿ ಅವರ ದಿವಾಳಿತನ ಆರಂಭವಾಗಿ ಅದು ವರ್ಷದಿಂದ ವರ್ಷಕ್ಕೆ ಹೆಚ್ಚಾಯಿತು, ಅನಿಲ್ ಅಂಬಾನಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡರು. ಅದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಇಂದು ಅನಿಲ್ ಅಂಬಾನಿ ದಿವಾಳಿತನದ ಹಂತಕ್ಕೆ ಬಂದು ತಲುಪಿದ್ದಾರೆ. ಆಸ್ತಿ ವಿಭಜನೆ ಸಂದರ್ಭದಲ್ಲಿ ಇಬ್ಬರೂ ಸಹೋದರರು ಕೂಡಾ ಪರಸ್ಪರ ವ್ಯವಹಾರಗಳಿಗೆ ಪ್ರವೇಶಿಸುವುದಿಲ್ಲ ಎನ್ನುವ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಆ ಒಪ್ಪಂದ 2010 ರಲ್ಲಿ ಮುಗಿದ ನಂತರ ಮುಖೇಶ್ ಅಂಬಾನಿ ಸಂವಹನ ಕ್ಷೇತ್ರ ಪ್ರವೇಶಿಸಿ ರಿಲಯನ್ಸ್ ಜಿಯೋ ಮೂಲಕ ಭರ್ಜರಿ ಪ್ರವೇಶ ಮಾಡಿದರು. ಇದರ ದೊಡ್ಡ ಹೊ ಡೆತ ಬಿದ್ದಿದ್ದು ಅನಿಲ್ ಅಂಬಾನಿ ಅವರ ರಿಲಯನ್ಸ್ ಕಮ್ಯುನಿಕೇಶನ್ಸ್ ಮೇಲೆ.

2016 ರಲ್ಲಿ ರಿಲಯನ್ಸ್ ಜಿಯೋವನ್ನು ಆರಂಭಿಸಿತು. ಆಗ ಸೆಪ್ಟೆಂಬರ್ ತಿಂಗಳಲ್ಲಿ ಜಿಯೋ ಬಳಕೆದಾರರ ಸಂಖ್ಯೆ 1.59 ಕೋಟಿ ಇದ್ದರೆ, ಅದೇ ಸಮಯದಲ್ಲಿ, ರಿಲಯನ್ಸ್ ಸಂವಹನ ಬಳಕೆದಾರರ ಸಂಖ್ಯೆ 8.71 ಕೋಟಿ ಇತ್ತು. ಆಗ ಅನಿಲ್ ಅಂಬಾನಿ ಕಂಪನಿಯು
8% ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಜಿಯೋ ಕೇವಲ 1.52 % ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು. ಆದರೆ ಇಂದು ಅಂದರೆ 2020 ರಲ್ಲಿ ಜಿಯೋ ಮಾರುಕಟ್ಟೆಯ ಪಾಲು ಶೇಕಡಾ 33 ಕ್ಕಿಂತ ಹೆಚ್ಚಾಗಿದೆ ಮತ್ತು ಅದರ ಬಳಕೆದಾರರ ಸಂಖ್ಯೆಯೂ ಸುಮಾರು 39 ಕೋಟಿಗೆ ಏರಿದೆ. ಇದಕ್ಕೆ ಪ್ರತಿಯಾಗಿ
ಅನಿಲ್ ಅಂಬಾನಿಯ ರಿಲಯನ್ಸ್ ಕಮ್ಯುನಿಕೇಷನ್‌ನ ಮಾರುಕಟ್ಟೆ ಪಾಲು 0.002 % ಗೆ ಕುಸಿದಿದ್ದು, ಅದರ ಬಳಕೆದಾರರ ಸಂಖ್ಯೆ ಕೇವಲ 18,000 ಆಗಿದೆ.
ಮುಖೇಶ್ ಅಂಬಾನಿ ನೇತೃತ್ವದ ವ್ಯವಹಾರ ಸಮೂಹದ ಮಾರುಕಟ್ಟೆ ಮೌಲ್ಯವು ಇಂದು 12 ಲಕ್ಷ ಕೋಟಿಗೂ ಅಧಿಕವಾಗಿದ್ದರೆ, ಅನಿಲ್ ಅಂಬಾನಿ ನೇತೃತ್ವದ ಕಂಪನಿಗಳ ಮಾರುಕಟ್ಟೆ ಮೌಲ್ಯವು 2 ಸಾವಿರ ಕೋಟಿ ರೂಪಾಯಿಗಳಿಗೆ ಇಳಿದಿದ್ದು ಅನಿಲ್ ಅಂಬಾನಿ ದಿವಾಳಿಯಾಗಿದ್ದಾರೆ.