Articles

ದೇಶಿ ಹಸು ಸಾಕುವುದು ಬಹುತೇಕ ರೈತರ ಆಸೆ, ಆದರೆ ದೇಶಿ ಹಸು ಹೇಗೆ ಸಾಕಬೇಕು? ಎಂಥವರು ಸಾಕಬೇಕು ಗೊತ್ತಾ? ವಿಶಿಷ್ಟ ಮಾಹಿತಿ

ದೇಶಿ ಹಸು ಸಾಕುವುದು ಬಹುತೇಕ ರೈತರ, ಅದರಲ್ಲೂ ಯುವ ರೈತರ ಆಸೆ. ಇತ್ತಿಚೆಗೆ ಅಂಥವರ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಭಾರತ ಮತ್ತೆ ತನ್ನ ಗೋಪರಂಪರೆ ಯಲ್ಲಿ ಮಿನುಗುವುದು ನಿಶ್ಚಿತ. ಅದರಲ್ಲೂ ಗಿರ್ ಹಸು ಸಾಕುವುದು ಒಂಥರಾ ಕ್ರೇಜ್ ಆಗಿದೆ. ಗಿರ್, ಸಾಹಿವಾಲ್, ಥಾರ್ಪಾರ್ಕರ್, ಕಾಂಕ್ರೇಜ್, ಸಿಂಧಿ ಮುಂತಾದ ದೇಶಿ ಗೋ ತಳಿಯ ಹಸುಗಳ ಹಾಲಿನ ಉತ್ಕೃಷ್ಟತೆಯೇ ಇಂದು ಅವುಗಳ ಸಾಕಾಣಿಕೆಗೆ ರೈತರು ಹೆಚ್ಚು ಒಲವು ತೋರುತ್ತಿರುವುದಕ್ಕೆ ಕಾರಣ.

ಇಡೀ ಜಗತ್ತಿನ ಹತ್ತಾರು ಗೋ ವಂಶಗಳನ್ನು ಸಮೃದ್ಧಿಗೊಳಿಸಿದ್ದು ನಮ್ಮ ದೇಶಿ ಹಸುಗಳು. ಅಂದರೆ ನಮ್ಮ ಗಿರ್, ಸಾಹಿವಾಲ್, ಥಾರ್ಪಾರ್ಕರ್ ಗೂಳಿಗಳ ಮಕ್ಕಳು ಇಂದು ವಿಶ್ವದಾದ್ಯಂತ ಇದ್ದಾರೆ! ನಮ್ಮ ದೇಶಿ ತಳಿಯ ವೀರ್ಯ ಬಳಸಿ ತಮ್ಮ ದೇಶದ ತಳಿ ಸಂವರ್ಧನೆ ಮಾಡಿರುವ ಹಲವಾರು ದೇಶಗಳು ಇಂದು ಆ ಕಾರಣದಿಂದಲೇ ಹೈನುಗಾರಿಕೆಯಲ್ಲಿ ಸಾಕಷ್ಟು ಲಾಭ ಗಳಿಸುತ್ತಿವೆ.

ಆದರೆ ನಮ್ಮಲ್ಲಿ ಇದಕ್ಕೆ ವಿರುದ್ಧವಾಗಿ ವಿದೇಶಿ ಮೂಲದ ಹಸುವಿನ ಆಕಾರದ ಪ್ರಾಣಿಗಳನ್ನು ತಂದು ಸಾಕತೊಡಗಿದರು. ನಮ್ಮ ದೇಶದ ಹಸುಗಳ ಹಾಲಿನ ಗುಣಮಟ್ಟಕ್ಕೂ ಈ ವಿದೇಶಿ ಮಿಶ್ರತಳಿಯ ಹಸುಗಳ ಹಾಲಿನ ಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ನಮ್ಮ ಹಸುಗಳಿಗಿರುವ ರೋಗ ನಿರೋಧಕ ಶಕ್ತಿ, ಕರು ಹಾಕುವ ಸಾಮರ್ಥ್ಯ, ಧೀರ್ಘಾವಧಿ ಬಾಳುವಿಕೆಯಲ್ಲೂ ಕೂಡ ವಿದೇಶಿ ಹಸುಗಳು ಯಾವ ಕೋನದಿಂದಲೂ ಸರಿಸಾಟಿಯಾಗಲಾರವು.

ಈ ವಿಷಯ ಕ್ರಮೇಣ ಭಾರತದ ಯುವ ರೈತರಿಗೆ ಮನವರಿಕೆಯಾಗುತ್ತಿದೆ. ಹಾಗಂತ ಅವರಲ್ಲಿ ದೇಶಿ ಹಸು ಸಾಕಣೆ ಬಗ್ಗೆ ಸರ್ಕಾರಗಳೇನು ಜಾಗೃತಿ ಮೂಡಿಸಿಲ್ಲ, ಆದರೆ ಸ್ವತಃ ರೈತರು ಅಲ್ಲಿ ಇಲ್ಲಿ ಓದಿ ನೋಡಿ ತಿಳಿಯುತ್ತಿದ್ದಾರೆ ಹಾಗೂ ಅನೇಕ ಸ್ವಯಂ ಸೇವಾ ಸಂಸ್ಥೆಗಳು, ಎನ್.ಜಿ.ಓ ಗಳು, ನುರಿತ ದೇಶಿ ಹೈನುಗಾರರು ಈ ದೆಸೆಯಲ್ಲಿ ರೈತರ ಕಣ್ತೆರೆಸುತ್ತಿದ್ದಾರೆ.

ಈ ಎಲ್ಲ ಕಾರಣಗಳಿಗಾಗಿ ದೇಶಿ ಹಸು ಸಾಕಲು ಮುಂದಾಗಿರುವ ಯುವಕರು ಮೊದಲು ಅವುಗಳನ್ನು ಸಾಕಲು ನಮಗಿರಬೇಕಾದ ಅರಹತೆ ಅಥವಾ ನಮ್ಮಲ್ಲಿ ಏನೇನು ಸೌಲಭ್ಯಗಳಿರಬೇಕು ಎಂಬುದರ ಬಗ್ಗೆ ಅರಿಯಬೇಕು. ಆ ಬಗ್ಗೆ ಸ್ವಲ್ಪ ಮಾಹಿತಿ ಕೊಡುವ ಉದ್ದೇಶದಿಂದಲೇ ಈ ಸಣ್ಣ ಬರಹ ಬರೆಯಲಾಗಿದೆ, ಆಸಕ್ತ ರೈತರು ಓದಿ…

*ಮೊದಲ ಸಂಗತಿಯೆಂದರೆ, ನಿಮ್ಮಲ್ಲಿ ಸಾಕಷ್ಟು ಜಮೀನಿದ್ದರೆ ಮಾತ್ರ ದೇಶಿ ಹಸು ಸಾಕಲು ತಯಾರಿ ನಡೆಸಿ. ಸ್ವಲ್ಪೇ ಜಮೀನಿದ್ದವರು ಬರಿ ಶೆಡ್ ನಲ್ಲಿ ಕಟ್ಟಿ ಹಾಕಿ ಸಾಕುವುದಾದರೆ ದೇಶಿ ಹಸು ಸಾಕುವ ಕೆಲಸಕ್ಕೆ ಕೈ ಹಾಕಬೇಡಿ.
*ನಮ್ಮ ದೇಶಿ ಹಸುಗಳು ಶೆಡ್ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ‌. ಅಲ್ಲೇ ತಿಂದು, ಅಲ್ಲೇ ಸೆಗಣಿ ಹಾಕಿ, ಅಲ್ಲೇ ಮಲಗಿ, ಅಲ್ಲೇ ಹಾಲು ಕೊಡುವುದು ಅವುಗಳಿಗೆ ಒಗ್ಗದ ಕೆಲಸ. ದೇಶಿ ಹಸುಗಳು ಸಾಕಷ್ಟು ಸ್ವಾತಂತ್ರ್ಯ ಬಯಸುತ್ತವೆ.

*ಇಡೀ ದಿನ ಆರಾಮಾಗಿ ಅಡ್ಡಾಡುವುದನ್ನು ದೇಶಿ ಹಸುಗಳು ಇಷ್ಟಪಡುತ್ತವೆ. ಅಡ್ಡಾಡಿ ಮೇಯುವುದು ಅವುಗಳ ಹವ್ಯಾಸ. ಬೇಕಿದ್ದರೆ ಹೊರಗಡೆಯೇ ಅವು ಇದ್ದಲ್ಲೇ ಆಹಾರ ತಲುಪಿಸಿದರೆ ತಿನ್ನುತ್ತವೆ, ಆದರೆ ಹಗಲು ರಾತ್ರಿ ಕಟ್ಟಿ ಹಾಕಬಾರದು. ಇದು ಹಾಲಿನ ಇಳುವರಿ ಮೇಲೆ ಕೂಡ ಗಮನಾರ್ಹ ಪರಿಣಾಮ ಬೀರುತ್ತದೆ.

*ನೀವು ತರುವಾಗ ದಿನಕ್ಕೆ ಹದಿನೈದು ಲೀಟರ್ ಕೊಡುತ್ತಿದ್ದ ಹಸು ನಿಮ್ಮಲ್ಲಿ ಬಂದ ಮೇಲೆ ಹತ್ತೇ ಲೀಟರ್ ಕೊಡಬಹುದು. ಅದಕ್ಕೆ ಕಾರಣ ವಾತಾವರಣದ ಬದಲಾವಣೆ. ಗುಜರಾತ್, ಹರಿಯಾಣ ಮುಂತಾದ ರಾಜ್ಯಗಳಲ್ಲಿ ಇವುಗಳ ದೊಡ್ಡ ದೊಡ್ಡ ಫಾರ್ಮ್ ಗಳೇ ಇವೆ. ಅವರೆಲ್ಲ ಎಕರೆಗಟ್ಟಲೆ ಜಮೀನನ್ನು ಇವುಗಳಿಗೆ ತಿರುಗಾಡಲು ಬಿಟ್ಟಿರುತ್ತಾರೆ. ಇದೇ ಕಾರಣಕ್ಕೆ ಅಲ್ಲಿ ಅಧಿಕ ಹಾಲು ಕೊಡುತ್ತವೆ.

*ಮಳೆ, ಚಳಿ, ಬಿಸಿಲು ಲೆಕ್ಕಿಸದೇ ಎಲ್ಲ ವಾತಾವರಣದಲ್ಲೂ ಹೊರಗಡೆ ತಿರುಗಾಡುವುದರಿಂದಲೇ ನಮ್ಮ ದೇಶಿ ಹಸುವಿನ ಹಾಲು ಉತ್ಕೃಷ್ಟವಾಗಿರುವುದು. ಬೆನ್ನಿನ ಮೇಲಿರುವ ಹಂಪ್ ಗೆ ಸೂರ್ಯನ ಕಿರಣ ತಾಗಿ ಅಲ್ಲಿಂದಲೇ ಉತ್ಕೃಷ್ಟತೆ ಹಸುವಿನ ಹಾಲು, ಗಂಜಲಿಗೆ ರವಾನೆಯಾಗುತ್ತದೆ (ಈ ಬಗ್ಗೆ ಇನ್ನೊಮ್ಮೆ ಬರೆಯುವೆ).

*ನೀವು ಶೆಡ್ ನಲ್ಲಿಯೇ ಕಟ್ಟಿ ಸಾಕುವುದಾದರೆ ಪ್ರಯೋಜನ ಇಲ್ಲ. ಹಾಗೆಯೇ ದೇಶಿ ಹಸುಗಳ ಆಹಾರ ಪದ್ಧತಿ ಕೂಡ ಬೇರೆ ಇದೆ. (ಇದನ್ನೂ ಕೂಡ ಇನ್ನೊಮ್ಮೆ ಬರೆಯುವೆ). ಬೇರೆ ಕಡೆಯಿಂದ ತಂದಾಗ ಒಂದೇ ಸಲಕ್ಕೆ ಆಹಾರ ಪದ್ಧತಿಯ ಬದಲಾವಣೆ ಆಗುವುದರಿಂದ ಹಾಲಿನ ಪ್ರಮಾಣದಲ್ಲಿ ಸಾಕಷ್ಟು ಇಳಿಕೆ ಕಂಡುಬರುವುದು. ನೀವು ಯಾರ ಬಳಿ ಹಸು ಕೊಳ್ಳುತ್ತೀರೊ ಅವರಿಂದ ಅದರ ಆಹಾರ ಪದ್ದತಿ ಕೇಳಿ ತಿಳಿದುಕೊಂಡು ಪಾಲಿಸುವುದು ಮುಖ್ಯ.

ವಿಸ್ತಾರವಾದ ಜಮೀನು, ಅಲ್ಲಲ್ಲಿ ಗಿಡದ ನೆರಳು, ಅಲ್ಲಲ್ಲಿ ಕುಡಿಯಲು ನೀರು, ಸಮಯಕ್ಕೆ ಸರಿಯಾಗಿ ಆಹಾರ, ಮನುಷ್ಯನ ಪ್ರೀತಿ… ಇಷ್ಟು ಸಿಕ್ಕರೆ ಸಾಕು ದೇಶಿ ಹಸು ಸಾಕ್ಷಾತ್ ಗೋಮಾತೆಯಂತೆಯೇ ನಿಮ್ಮ ಏಳಿಗೆ ಮಾಡುತ್ತದೆ.
-Team infotrend

Leave a Comment

Your email address will not be published. Required fields are marked *