ಸೋಫು-ಸರ್ಫ್ ಇಲ್ಲದ ಕಾಲದಲ್ಲಿ ರಾಜ ರಾಣಿಯರ ದುಬಾರಿ ವಸ್ತ್ರಗಳು ಹೇಗೆ ಸ್ವಚ್ಛ ವಾಗಿ, ಹೊಳೆಯುತ್ತಿದ್ದವು???
ಸಾಬೂನು ಅಥವಾ ಸರ್ಫ್ ಪೌಡರ್ ಗಳು ಇಲ್ಲದ ಕಾಲದಲ್ಲಿ ನಮ್ಮ ದೇಶದಲ್ಲಿ ಯಾವ ರೀತಿಯಲ್ಲಿ ಬಟ್ಟಗಳನ್ನು ಒಗೆದು ಸ್ವಚ್ಛ ಮಾಡಲಾಗುತ್ತಿತ್ತು ಎನ್ನುವ ವಿಚಾರವಾಗಿ ಯಾವತ್ತಾದರೂ ಆಲೋಚನೆ ಮಾಡಿರುವಿರಾ ?? ಈ ಆಲೋಚನೆ ಮಾಡಿದರೆ ಹೌದಲ್ಲವೇ ?? ಬಹಳ ಹಿಂದಿನ ಕಾಲದಲ್ಲಿ ರಾಜ ಮಹಾರಾಣಿಯರ ದುಬಾರಿ ಬೆಲೆಯ ಬಟ್ಟೆಗಳನ್ನು ಹೇಗೆ ಸ್ವಚ್ಛ ಮಾಡಲಾಗುತ್ತಿತ್ತು?? ಎನ್ನುವ ಅನುಮಾನ ಮೂಡುತ್ತದೆ. ಕೇವಲ ರಾಜಮಹಾರಾಜರು ಮಾತ್ರವೇ ಅಲ್ಲ ಸಾಮಾನ್ಯ ಜನರು ತಮ್ಮ ಬಟ್ಟೆಗಳನ್ನು ಯಾವುದರಿಂದ ಒಗೆದು ಸ್ವಚ್ಛ ಮಾಡುತ್ತಿದ್ದರು ಎನ್ನುವ ಪ್ರಶ್ನೆ ಕೂಡಾ ನಮ್ಮಲ್ಲಿ ಮೂಡುತ್ತದೆ. ಹಾಗಿದ್ದಾರೆ ಈ ವಿಚಾರದ ಕುರಿತಾಗಿ ಒಂದಷ್ಟು ಆಸಕ್ತಿಕರ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.
ಭಾರತದಲ್ಲಿ ಆಧುನಿಕ ಸಾಬೂನಿನ ಪರಿಚಯ 130 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ಆಯಿತು. ಭಾರತದ ಮಾರುಕಟ್ಟೆಯಲ್ಲಿ ಮೊಟ್ಟಮೊದಲ ಬಾರಿಗೆ ಸಾಬೂನನ್ನು ಲೀಬರ್ ಬ್ರದರ್ಸ್ ಪರಿಚಯ ಮಾಡಿದರು. ಹೀಗೆ ಇಂಗ್ಲೆಂಡ್ ನಿಂದ ಸಾಬೂನನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಭಾರತೀಯರು ಸಾಬೂನುಗಳನ್ನು ಬಳಕೆ ಮಾಡಲು ತೊಡಗಿದ ಮೇಲೆ ಅದರ ಬೇಡಿಕೆ ಹೆಚ್ಚಾಯಿತು. ಆದ್ದರಿಂದ ಅದನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಲು ಭಾರತದಲ್ಲಿ ಸಾಬೂನು ತಯಾರಿಕೆಯ ಕಾರ್ಖಾನೆಯನ್ನು ಸ್ಥಾಪನೆ ಮಾಡಲಾಯಿತು. 1897 ರಲ್ಲಿ ಮೀರತ್ ನಲ್ಲಿ ಮೊಟ್ಟಮೊದಲ ಸಾಬೂನು ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಇಲ್ಲಿ ಬಟ್ಟೆ ಒಗೆಯುವ ಹಾಗೂ ಮೈ ತೊಳೆಯುವ ಎರಡು ರೀತಿಯ ಸಾಬೂನುಗಳನ್ನು ತಯಾರು ಮಾಡಲಾಗುತ್ತಿತ್ತು.
ಈ ಕಂಪನಿಯು ಬಹಳಷ್ಟು ಅಭಿವೃದ್ಧಿಯನ್ನು ಕಂಡ ಮೇಲೆ ಜೆಮ್ಶೆಡ್ ಟಾಟಾ ಅವರು ಕೂಡಾ ಈ ಕ್ಷೇತ್ರಕ್ಕೆ ತಮ್ಮ ಅಡಿಯನ್ನು ಇಟ್ಟರು. ಆದರೆ ಈಗ ಇರೋ ಪ್ರಶ್ನೆ ಭಾರತದಲ್ಲಿ ಸಾಬೂನು ಯಾವಾಗ ಪರಿಚಯವಾಯಿತು ಎನ್ನುವುದಲ್ಲ, ಬದಲಾಗಿ ಸಾಬೂನಿನ ಬಳಕೆ ಅಥವಾ ಅದರ ಪರಿಚಯ ಆರಂಭವಾಗುವುದಕ್ಕೂ ಮೊದಲು ಹೇಗೆ ಬಟ್ಟೆಗಳನ್ನು ಒಗೆದು ಸ್ವಚ್ಛ ಮಾಡಲಾಗುತ್ತಿತ್ತು ಎನ್ನುವುದಾಗಿದೆ.
ಭಾರತವು ಮೊದಲಿನಿಂದಲೂ ಸಸ್ಯ ಹಾಗೂ ಖನಿಜ ಸಂಪತ್ತಿನಿಂದ ಸಮೃದ್ಧವಾಗಿರುವ ದೇಶವಾಗಿದೆ. ಆ ಕಾಲದಲ್ಲಿ ರೀಟಾ ಎನ್ನುವ ಮರವನ್ನು ಬಟ್ಟೆಗಳನ್ನು ಒಗೆಯಲು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ. ಈ ಮರದ ತುಂಡುಗಳನ್ನು ಬಟ್ಟೆ ಒಗೆಯಲು ಬಳಸುತ್ತಿದ್ದರು.

ರಾಜ ಮಹಾರಾಜರ ಅರಮನೆಯ ಉದ್ಯಾನ ವನಗಳಲ್ಲಿ ಈ ಮರಗಳನ್ನು ಬೆಳೆಸಲಾಗುತ್ತಿತ್ತು. ದುಬಾರಿ ಬೆಲೆಯ ರೇಷ್ಮೆಯ ಬಟ್ಟೆಗಳನ್ನು ಸ್ವಚ್ಛ ಮಾಡಲು ಮತ್ತು ಸೂಕ್ಷ್ಮ ಜೀವಿಗಳನ್ನು ಮುಕ್ತಗೊಳಿಸಿ ಸ್ವಚ್ಛವಾಗಿಡಲು ರೀಟಾ ಅತ್ಯುತ್ತಮ ಸಾವಯವ ಉತ್ಪನ್ನ ವಾಗಿತ್ತು. ಇನ್ನು ಇಂದಿನ ದಿನಗಳಲ್ಲಿ ತಲೆ ಗೂದಲನ್ನು ತೊಳೆಯುವುದಕ್ಕೆ ರೀಟಾವನ್ನು ಬಳಸಲಾಗುತ್ತದೆ. ರೀಟಾ ಈಗಲೂ ಕೂಡಾ ಜನಪ್ರಿಯತೆ ಉಳಿಸಿಕೊಂಡಿದೆ. ಶ್ಯಾಂಪೂ ಉತ್ಪಾದನೆಗೆ ಇದನ್ನು ಬಳಸಲಾಗುತ್ತಿದೆ. ಹಿಂದಿನ ಕಾಲದಲ್ಲಿ ಮಹಾರಾಣಿಯರು ತಮ್ಮ ಉದ್ದವಾದ ತಲೆಯ ಕೂದಲನ್ನು ಇದರಿಂದಲೇ ತೊಳೆಯುತ್ತಿದ್ದರು ಎಂದು ಹೇಳಲಾಗಿದೆ.
ಪುರಾತನ ಕಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ, ನಂತರ ಬಟ್ಟೆಗಳನ್ನು ಎರಡು ರೀತಿಯಲ್ಲಿ ಸ್ವಚ್ಛಗೊಳಿಸಲಾಗುತ್ತಿತ್ತು. ಸಾಮಾನ್ಯ ಜನರು ತಮ್ಮ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸುತ್ತಿದ್ದರು. ಅದಾದ ನಂತರ ಅದನ್ನು ಹೊರಗೆ ತೆಗೆದು, ತಣ್ಣಗಾದ ನಂತರ, ಅದನ್ನು ಕಲ್ಲುಗಳ ಮೇಲೆ ಒಗೆಯುತ್ತಿದ್ದರು. ಇದರಿಂದಾಗಿ ಅದರ ಕೊಳೆ ದೂರಾಗುತ್ತಿತ್ತು. ಅಲ್ಲದೇ ದೊಡ್ಡ ಮಡಿಕೆಗಳು ಮತ್ತು ಕುಲುಮೆಗಳನ್ನು ಬಳಸಿ ಈ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗ್ತಾ ಇತ್ತು. ಇಂದು ಸಹಾ ನಮ್ಮ ದೇಶದಲ್ಲಿ ಬಟ್ಟೆ ಒಗೆಯುವ ಘಾಟ್ ಗಳಿದ್ದು ಇಲ್ಲಿ ಇಂತಹ ಸ್ವದೇಶಿ ವಿಧಾನಗಳಿಂದಲೇ ಬಟ್ಟೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಇದರಲ್ಲಿ ಯಾವುದೇ ಸೋಪ್ ಅಥವಾ ಸರ್ಫ್ ಅನ್ನು ಬಳಸಲಾಗುವುದಿಲ್ಲ.
ರೀಟಾದ ನೊರೆಯಿಂದ ದುಬಾರಿ ಬಟ್ಟೆಗಳನ್ನು ತೊಳೆಯಲಾಗುತ್ತಿತ್ತು.., ರೀಟಾವನ್ನು ದುಬಾರಿ ಮತ್ತು ಮೃದುವಾದ ಬಟ್ಟೆಗಳಿಗೆ ಹೆಚ್ಚು ಬಳಸಲಾಗುತ್ತಿತ್ತು. ಇನ್ನು ಈ ಮರದ ಹಣ್ಣುಗಳನ್ನು ನೀರಿನಲ್ಲಿ ಸೇರಿಸಿ ಬಿಸಿಮಾಡುವ ತಂತ್ರ ಕೂಡಾ ಇತ್ತು. ಹಾಗೆ ಮಾಡುವುದರಿಂದ, ನೀರಿನಲ್ಲಿ ನೊರೆ ಉತ್ಪತ್ತಿಯಾಗುತ್ತದೆ, ಆಗ ಅದನ್ನು ಬಟ್ಟೆಯ ಮೇಲೆ ಇಟ್ಟು ಕಲ್ಲು ಅಥವಾ ಮರದ ಬ್ರಷ್ ಅಥವಾ ಕೈಯಿಂದ ಉಜ್ಜಿದರೆ ಬಟ್ಟೆಗಳು ಸ್ವಚ್ಛವಾಗುವುದಲ್ಲದೆ ರೋಗಾಣು ರಹಿತವೂ ಆಗುತ್ತಿತ್ತು, ಅದು ದೇಹದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುತ್ತಾ ಇರಲಿಲ್ಲ ಎನ್ನುವುದು ವಿಶೇಷವಾಗಿತ್ತು.
ಆ ಕಾಲದಲ್ಲಿ ಒಂದು ವಿಶೇಷವಾದ ಬಿಳಿ ಪುಡಿಯೂ ಸಿಗುತ್ತಿತ್ತು, ಅದನ್ನು ಸಹಾ ಬಟ್ಟೆ ಸ್ವಚ್ಛಗೊಳಿಸಲು ಬಳಸಲಾಗುತ್ತಿತ್ತು ಮತ್ತು ಅದು ಕೂಡಾ ಬಹಳ ಜನಪ್ರಿಯವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಈ ಬಿಳಿ ಬಣ್ಣದ ಪುಡಿ ಖಾಲಿ ಭೂಮಿಯಲ್ಲಿ, ನದಿ-ಕೊಳದ ದಡದಲ್ಲಿ ಅಥವಾ ಹೊಲಗಳಲ್ಲಿ ಕಂಡುಬರುತ್ತದೆ ಎನ್ನಲಾಗಿದೆ. ಇದನ್ನು ‘ರೆಹ್’ ಎಂದೂ ಕರೆಯುತ್ತಾರೆ. ಇದು ಭಾರತದ ನೆಲದಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದೇನು ದುಬಾರಿ ಬೆಲೆಯ ಪುಡಿಯಲ್ಲ. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಬಟ್ಟೆಗಳನ್ನು ನೆನೆಸಲಾಗುತ್ತಿತ್ತು, ನಂತರ ಬಟ್ಟೆಗಳನ್ನು ಮರದ ತುಂಡು ಅಥವಾ ಮರಗಳ ಬೇರುಗಳಿಂದ ಮಾಡಿದ ಉಜ್ಜುವ ಬ್ರಷ್ ನಂತಹ ವಸ್ತು ಬಳಸಿ ಸ್ವಚ್ಛ ಮಾಡುತ್ತಿದ್ದರು.
ಪ್ರಾಕೃತಿಕ ಜಲ ಮೂಲಗಳಾದ ನದಿಗಳು ಮತ್ತು ಸಮುದ್ರಗಳ ನೀರಿನಲ್ಲಿನ ಸೋಡಾದಿಂದ ಬಟ್ಟೆಗಳು ಸ್ವಚ್ಚವಾಗುತ್ತಿದ್ದವು. ನದಿಗಳು ಮತ್ತು ಸಮುದ್ರಗಳ ನೀರಿನಲ್ಲಿ ಸೋಡಾ ಪತ್ತೆಯಾದ ಮೇಲೆ ಅದನ್ನು ಬಟ್ಟೆ ತೊಳೆಯಲು ಯಥೇಚ್ಛವಾಗಿ ಬಳಸಲಾಗುತ್ತಿತ್ತು.
ಕೇವಲ ಪುರಾತನ ಭಾರತದಲ್ಲಿ ಮಾತ್ರವಲ್ಲ, ಕೆಲವು ದಶಕಗಳ ಹಿಂದೆ ಕೂಡ ಭಾರತೀಯರು ತಮ್ಮ ದೇಹದ ಮೇಲೆ ಮಣ್ಣು ಮತ್ತು ಬೂದಿಯನ್ನು ಉಜ್ಜಿ ತಮ್ಮ ಕೈಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಬೂದಿ ಮತ್ತು ಜೇಡಿಮಣ್ಣನ್ನು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಹಾ ಬಳಸಲಾಗುತ್ತಿತ್ತು.