ವಲಸೆ ಹೋಗುವ ಗ್ರಾಮಸ್ಥರನ್ನು ತಡೆಯಲು ಉದ್ಯೋಗಕ್ಕೆ ರಾಜೀನಾಮೆ ನೀಡಿ ಕೃಷಿಗೆ ಮುಂದಾದ ಮಹಿಳೆ; ಸಂಪಾದನೆ 5 ಕೋಟಿಗಿಂತಲೂ ಅಧಿಕ!
ದೃಢ ನಿಶ್ಚಯ ಹಾಗೂ ಸಾಧಿಸುವ ಛಲವಿದ್ದರೆ ಅಸಾಧ್ಯ ಗಳು ಕೂಡಾ ಸುಸಾಧ್ಯಗಳಾಗುವುದು ಶತ ಸಿದ್ಧ. ಅದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಇಂದು ನಾವು ಹೇಳಲು ಹೊರಟಿರುವ ಮಹಿಳೆಯ ಕಥೆ. ಉತ್ತರಾಖಂಡ ರಾಜ್ಯದಲ್ಲಿ ಗುಳೆ ಹೋಗುವುದು ಅಥವಾ ಉದ್ಯೋಗವನ್ನು ಅರಸಿ ದೂರ ದೂರ ಪ್ರದೇಶಗಳಿಗೆ ವಲಸೆ ಹೋಗುವುದು ಒಂದು ದೊಡ್ಡ ಸ ಮ ಸ್ಯೆಯಾಗಿದೆ. ಈ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಲು ಹಾಗೂ ಗ್ರಾಮೀಣ ಭಾಗದ ಜನರಿಗೆ ಉದ್ಯೋಗವನ್ನು ಒದಗಿಸಲು ತಾನು ಮಾಡುತ್ತಿದ್ದ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಡೆಹ್ರಾಡೂನ್ ಗೆ ಮರಳಿ ಬಂದು ಸಾಧನೆಯನ್ನು ಮೆರೆದ ಆ ಮಹಿಳೆಯು ಇಂದು ಅನೇಕರಿಗೆ ಸ್ಪೂರ್ತಿ ಆಗಿರುವುದು ಮಾತ್ರವೇ ಅಲ್ಲದೇ ಕೃಷಿಯಿಂದಲೂ ಲಾಭ ಪಡೆಯುವುದು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.
ಈ ಕಥೆ ದಿವ್ಯಾ ರಾವತ್ ಎನ್ನುವ ಮಹಿಳೆಯದ್ದು. ತಮ್ಮ ರಾಜ್ಯದ ಜನರಿಗೆ ಒಳಿತಾಗುವ ಏನಾದರೊಂದು ಕಾರ್ಯ ಮಾಡಬೇಕು ಎನ್ನುವ ಆಕೆಯ ಇಚ್ಛೆ ಅವರ ಸಾಧನೆಗೆ ಪ್ರೇರಣೆಯಾಗಿದೆ. ದಿವ್ಯ ಅವರು ನೋಯ್ಡಾದ ವಿಶ್ವವಿದ್ಯಾಲಯದಲ್ಲಿ ಸಮಾಜ ಸೇವಾ ವಿಭಾಗದಲ್ಲಿ ಸ್ನಾತಕೋತ್ತರ ಪಡೆದ ಮೇಲೆ ಖಾಸಗಿ ಕಂಪನಿಯಲ್ಲಿ ಅವರಿಗೆ ಉತ್ತಮ ಸಂಬಳ ದೊರೆಯುವ ಉದ್ಯೋಗ ಕೂಡಾ ದಕ್ಕಿತು. ಮಾನವ ಹಕ್ಕುಗಳ ಕುರಿತಾಗಿ ಅವರು ಕಾರ್ಯ ನಿರ್ವಹಿಸುವಾಗಲೇ ರಾಜ್ಯದಲ್ಲಿ ಜನ ವಲಸೆ ಹೋಗುವ ಸಮಸ್ಯೆಯ ಬಗ್ಗೆ ಆಲೋಚನೆ ಮಾಡಲು ಆರಂಭಿಸಿದರು. 2013 ರಲ್ಲಿ ಉತ್ತರಾಖಂಡದಲ್ಲಿ ಭೀ ಕ ರವಾದ ಪ್ರವಾಹ ಉಂಟಾಗಿ ಜನ ಸಂ ಕಷ್ಟಕ್ಕೆ ಸಿಲುಕಿದರು.

ಜನರ ಸಮಸ್ಯೆ ಗಮನಿಸಿದ ದಿವ್ಯ ಆಗಲೇ ತನ್ನ ಉದ್ಯೋಗಕ್ಕೆ ರಾಜೀನಾಮೆಯನ್ನು ನೀಡಿ ಡೆಹ್ರಾಡೂನ್ ಗೆ ವಾಪಸಾಗಿ ಅಲ್ಲಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿಸಿಕೊಡುವ ಪ್ರಯತ್ನಕ್ಕೆ ಮುಂದಾದರು. ಆಗ ಅವರು ಮಶ್ರೂಮ್ ಕೃಷಿ ಹಾಗೂ ಅದರ ಮಾರಾಟವನ್ನು ತಮ್ಮ ಲಕ್ಷ್ಯ ವನ್ನಾಗಿ ಮಾಡಿಕೊಂಡರು. 30 ವರ್ಷ ವಯಸ್ಸಿನ ದಿವ್ಯ ಇಂದು ಉತ್ತರಾಖಂಡ್ ನಲ್ಲಿ ಮಶ್ರೂಮ್ ಕೃಷಿಯಲ್ಲಿ ಜನಪ್ರಿಯತೆ ಹೊಂದಿದ್ದಾರೆ. ಅವರನ್ನು ಮಶ್ರೂಮ್ ಗರ್ಲ್ ಎಂದೇ ಕರೆಯಲಾಗುತ್ತದೆ ಹಾಗೂ ಉತ್ತರಾಖಂಡ ಸರ್ಕಾರವು ಆಕೆಯನ್ನು ರಾಜ್ಯದ ಮಶ್ರೂಮ್ ಬೆಳೆಯ ಬ್ರಾಂಡ್ ಅಂಬಾಸಿಡರ್ ಆಗಿ ಕೂಡಾ ಘೋಷಣೆ ಮಾಡಿದೆ.
ಮಶ್ರೂಮ್ ಕೃಷಿ ಬೇರೆ ಬೆಳೆಗಳಿಗಿಂತ ಸುಲಭವಾಗಿ ಹಾಗೂ ಲಾಭದಾಯಕವಾಗಿದ್ದು ರೈತರ ಆರ್ಥಿಕ ಸ್ಥಿತಿ ಕೂಡಾ ಸುಧಾರಿಸಲು ಸಹಾಯವಾಗುತ್ತದೆ, ಕೃಷಿ ಸುಲಭವಾಗಿ ಹೆಚ್ಚು ಹೆಚ್ಚು ಜನರು ಅದನ್ನು ಅಳವಡಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ತಾನು ಮಶ್ರೂಮ್ ಕೃಷಿಗೆ ಆದ್ಯತೆ ನೀಡಿದ್ದಾಗಿ ಹೇಳುವ ದಿವ್ಯ ಅವರ ಪ್ರಯತ್ನದ ಫಲವಾಗಿ ಇಂದು ಸುಮಾರು 7000 ರೈತರಿಗೆ ಇದು ಜೀವನಾಧಾರವಾಗಿದ್ದರೆ, ಮಶ್ರೂಮ್ ಬೇಸಾಯದ ಮೂಲಕ ದಿವ್ಯ ವಾರ್ಷಿಕ 5 ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸುತ್ತಿದ್ದಾರೆ ಕೂಡಾ. ಇದಲ್ಲದೇ ಇವರು ಸೌಮ್ಯ ಫುಡ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿ ಹಾಗೂ ಒಂದು ಮಶ್ರೂಮ್ ಉತ್ಪನ್ನಗಳ ಲ್ಯಾಬ್ ಕೂಡಾ ಸ್ಥಾಪನೆ ಮಾಡಿ ವಿವಿಧ ಮಶ್ರೂಮ್ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.

ವಾರ್ಷಿಕ ನಾಲ್ಕು ಸಾವಿರ ಕಿಲೋ ಮಶ್ರೂಮ್ ವ್ಯಾಪಾರ ನಡೆಸುತ್ತಿದ್ದ ಇವರು ಇಂದು 1.2 ಲಕ್ಷ ಕಿಲೋ ಗಿಂತ ಅಧಿಕ ವಹಿವಾಟನ್ನು ನಡೆಸುತ್ತಿದ್ದಾರೆ. ಇದಲ್ಲದೇ ಮಶ್ರೂಮ್ ನಿಂದ ತಯಾರಿಸಲಾದ ವಿವಿಧ ಆಹಾರ ಪದಾರ್ಥಗಳನ್ನು ಕೂಡಾ ಮಾರಾಟ ಮಾಡಲಾಗುತ್ತಿದೆ. ಆರಂಭದ ದಿನಗಳಲ್ಲಿ ಜನರು ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅವರ ಮಾನಸಿಕ ಸ್ಥಿತಿಯನ್ನು ಬದಲಿಸುವುದು ಒಂದು ಸವಾಲಾಗಿತ್ತು. ಆದರೆ ದಿನಕಳೆದಂತೆ ಈಗ ಜನರು ಕೂಡಾ ಇದರ ಬಗ್ಗೆ ಆಸಕ್ತಿ ತೋರುತ್ತಾರೆ ಎನ್ನುವ ದಿವ್ಯ ಒಂದು ಸಾಮಾಜಿಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಾಧನೆಗೆ ರಾಷ್ಟ್ರಪತಿಯವರಿಂದ ಕೂಡಾ ಸನ್ಮಾನಿತರಾಗಿದ್ದಾರೆ.