ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ದಾರಿ ಅಂತ ಹಾಕಿರೊ ಬೋರ್ಡಲ್ಲಿ ನಗುತ್ತಿರುವ ನಾಯಕರ ಫೋಟೊ : ನೆಟ್ಟಿಗರ ಆಕ್ರೋಶ

ಇದೇನು ತಿಳಿದೇ ಮಾಡುತ್ತಾರೋ ಅಥವಾ ತಿಳಿಗೇಡಿಗಳ ಕೆಲಸಾನೋ ಗೊತ್ತಿಲ್ಲ, ಕೋವಿಡ್ ನಿಂದ ಮೃತಪಟ್ಟವರ ಉಚಿತ ಅಂತ್ಯಸಂಸ್ಕಾರಕ್ಕೆ ಹೋಗುವ ದಾರಿ ಅಂತ ದಾರಿ ತೋರಿಸುವ ಬೋರ್ಡ್ ನಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರ ಫೋಟೊ ಹಾಕಿರುವುದಲ್ಲೇ ಕೆಲವರು ನಗುತ್ತಿರುವ ಫೋಟೊ ಕೂಡ ಬಳಸಲಾಗಿದೆ. ಈ ಮೂಲಕ ಇವರು ಜನರಿಗೆ ಹೇಳಲು ಬಯಸಿರುವುದಾದರೂ ಏನನ್ನು?

ನಗುನಗುತ್ತಾ ಜನರಿಗೆ ತಿಳಿಯಪಡಿಸಲು, ಅದರಲ್ಲೂ ರಾಷ್ಟ್ರ ಮಟ್ಟದ ನಾಯಕರ ಫೋಟೊ ಬಳಸಿ ತಿಳಿಸಲು ಇದೇನು ಯಾವುದೋ ಅಬಿವೃದ್ಧಿ ಕಾರ್ಯಕ್ರಮದ ಉದ್ಘಾಟನೆಯಾ? ದೇಶದ ತುಂಬಾ, ರಾಜ್ಯದ ಹಲವೆಡೆ ಕೊರೋನ ರೋಗಿಗಳು ಆಕ್ಸಿಜನ್ ಕೊರತೆಯಾಗಿ ಸಾಯ್ತಾ ಇದಾರೆ, ಇಂಥ ಪರಸ್ಥಿತಿಯಲ್ಲಿ ಎಲ್ಲರೂ ಶಕ್ತಿ ಮೀರಿ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕೇ ಅಥವಾ ಉಚಿತ ಅಂತ್ಯಸಂಸ್ಕಾರದ ವ್ಯವಸ್ಥೆ ಮಾಡಬೇಕೆ?

ಅಂತ್ಯಸಂಸ್ಕಾರ ವ್ಯವಸ್ಥೆ ಮಾಡುವುದೇನೋ ಮಾಡಲೇಬೇಕು, ಆದರೆ ಅದನ್ನು ಹೀಗೆ ಡಂಗುರ ಸಾರಿ ಜನರಲ್ಲಿ ಮತ್ತಷ್ಟು ಭಯ – ನಾಯಕರ ಬಗ್ಗೆ ಹೇಸಿಗೆ ಹುಟ್ಟಿಸುವ ಅವಶ್ಯಕತೆ ಇದೆಯಾ? ಮೊನ್ನೆ ಯಾರೋ ಸಚಿವರು ಪತ್ರಿಕಾಗೋಷ್ಠಿ ಕರೆದು ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಿದಿವೇನೋ ಅನ್ನೊ ಥರ ಹೊಸ ಸ್ಮಶಾನ ಮಾಡಿರುವುದರ ಕುರಿತು ಹೇಳಿಕೆ ಕೊಟ್ಟರು. ಸ್ಮಶಾನ ಮಾಡಿರುವುದನ್ನೂ ಯಾರಾದರೂ ಪ್ರೇಸ್ ಮೀಟ್ ಕರೆದು ಹೇಳುತ್ತಾರಾ?

ಅಂಥವೆಲ್ಲ ತಣ್ಣಗೆ ಮಾಡಿ ಮುಗಿಸಬೇಕು, ಸಚಿವರು – ಶಾಸಕರು ಜನರಲ್ಲಿ ಜಾಗೃತಿ ಮೂಡಿಸಬೇಕು, ಭಯ ಹೋಗಲಾಡಿಸಬೇಕು. ಅದು ಬಿಟ್ಟು ಮತ್ತಷ್ಟು ಅವರನ್ನು ಖಿನ್ನತೆಗೆ ದೂಡುವ ಇಂಥ ವಿಷಯ ಹೇಳುವುದು ಎಷ್ಟರ ಮಟ್ಟಿಗೆ ಸರಿ? ಈ ಬೋರ್ಡ್ ಪ್ರಕಾರ ಕೋವಿಡ್ ನಿಂದ ಮೃತಪಟ್ಟವರನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಸಂಸ್ಕಾರ ಮಾಡುತ್ತಾರಂತೆ! ಅದ್ಯಾಕೆ ಅಂತ ಗೊತ್ತಾಗಲಿಲ್ಲ.

ಇನ್ನು ಅಲ್ಲಿ ಉಚಿತವಾಗಿ ನೀರು, ಕಾಫಿ, ಟೀ, ತಿಂಡಿ, ಊಟದ ವ್ಯವಸ್ಥೆ ಮಾಡುತ್ತಾರಂತೆ! ಯಾರಿಗೆ ಅಂತ ಗೊತ್ತಿಲ್ಲ. ಈ ಘನಕಾರ್ಯಕ್ಕೆ ಯಲಹಂಕ ಕ್ಷೇತ್ರದ ಶಾಸಕರಾದ ಮಾನ್ಯ ವಿಶ್ವನಾಥ್ ರವರು ಮಾರ್ಗದರ್ಶನ ಮಾಡುತ್ತಿದ್ದಾರಂತೆ, ಇನ್ನು ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್ ಮಲ್ಲಯ್ಯ ಎಂಬುವವರು ವ್ಯವಸ್ಥೆ ಮಾಡಿರುತ್ತಾರಂತೆ.

ಕೊನೆಯದಾಗಿ ಕಾಡ್ತಾ ಇರೊ ಪ್ರಶ್ನೆ : ಇಲ್ಲಿ ಯಡಿಯೂರಪ್ಪ, ಅಶೋಕ್, ವಿಶ್ವನಾಥ್, ಮರಿಸ್ವಾಮಿ, ಮಲ್ಲಯ್ಯನವರ ನಗ್ತಾ ನಗ್ತಾ ಇರೊ ಫೋಟೊ ಯಾಕ್ ಬಳಸಿದರು ಅಂತ? ಅದೆಲ್ಲ ಹೋಗ್ಲಿ, ಇದರಲ್ಲಿ ಪ್ರಧಾನಿ ಮೋದಿ ಫೋಟೊ ಬೇಕಾಗಿತ್ತಾ? ನಿಮ್ಮ ಅನಿಸಿಕೆ ಹೇಳಿ
-Team Infotrend