ಆಂಜನೇಯನಿಗೆ ಜೈ ಅಂದುಬಿಡಿ – ದೇವರವ್ನೆ ನೀ ಕಾರ್ಡು ಹೊಡಿ!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೊವನ್ನು ತಮಾಷೆಯ ಲಿಸ್ಟಿಗೆ ಸೇರಿಸಬೇಕೊ ಅಥವಾ ಆತ್ಮವಿಶ್ವಾಸ ತುಂಬುವ ವಿಡಿಯೊ ಅನ್ನಬೇಕೊ ಗೊತ್ತಾಗುತ್ತಿಲ್ಲ. ಇಲ್ಲಿ ಎಷ್ಟೊ ಜನ ಕೊರೋನ ಅಂದರೇನೇ ಹೆದರಿ ಸಾಯುತ್ತಿದ್ದಾರೆ, ಆದರೆ ಇವರು ಏನೂ ಆಗೇ ಇಲ್ಲ ಎಂಬಂತೆ ಕಾರ್ಡ್ ಆಡುತ್ತಾ ಕೂತಿದ್ದಾರೆ! ಪಾಪ ಇವರ ಮನರಯವರು ಅದೆಷ್ಟು ಆತಂಕದಲ್ಲಿದ್ದಾರೋ! ಇದು ಎಲ್ಲಿಯ ವಿಡಿಯೊ ಗೊತ್ತಿಲ್ಲ, ಇವರೆಲ್ಲ ಕೋವಿಡ್ ವಾರ್ಡ್ ನಲ್ಲೇ ಕಾರ್ಡ್ ಆಡುತ್ತಾ ಕೂತಿದ್ದು ಈ ವಿಡಿಯೊ ಈಗ ಭರ್ಜರಿ ವೈರಲ್ ಆಗುತ್ತಿದೆ.
ಕೊರೋನ ಬಂತೆಂದರೆ ಅದೆಷ್ಟೊ ಜನ ಬರೀ ಹೆದರಿಕೆಗೇನೇ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಇನ್ನು ಮನೆಯಲ್ಲಿ ಯಾರಿಗಾದರೂ ಕೊರೊನ ಅಟಕಾಯಿಸಿಕೊಂಡಾಗ, ಮನೆಯವರೆಲ್ಲ ಅದೆಷ್ಟು ಚಿಂತಿತರಾಗಿರುತ್ತಾರೆಂದರೆ ಅವರ ಭಯಕ್ಕೆ ಅಂಕೆಯೇ ಇರುವುದಿಲ್ಲ. ದಿನನಿತ್ಯ ನ್ಯೂಸ್ ಚಾನೆಲ್ ನೋಡಿ ನೋಡಿ ಅವರಲ್ಲಿ ಈ ಮಟ್ಟದ ಭಯ ಕುಳಿತುಬಿಟ್ಟಿರುತ್ತದೆ.
ವಾಸ್ತವದಲ್ಲಿ ಕೊರೋನ ಬಂದವರಿಗೆಲ್ಲ ಭಾರಿ ತೊಂದರೆ ಮಾಡುವುದಿಲ್ಲ. ಹಾಗೆ ನೋಡಿದರೆ ಅದು ಯಾರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳಲು ಕೂಡ ಆಗುವುದಿಲ್ಲ. ಆದರೆ ಮಾಧ್ಯಮಗಳು ಕೊರೊನದಿಂದ ಉಂಟಾದ ಸಾವುಗಳ ಲೆಕ್ಕವನ್ನು ಹೆಚ್ಚು ಬಿತ್ತರಿಸಿ, ಹುಷಾರಾಗಿ ಮನೆ ಸೇರಿದವರ ಲೆಕ್ಕವನ್ನು ಹೇಳುವುದೇ ಇಲ್ಲ.
ವಾಸ್ತವದಲ್ಲಿ ಆರಾಮಾದವರ ಲೆಕ್ಕ ಕೊಟ್ಟು ಜನರಲ್ಲಿ ಧೈರ್ಯ ತುಂಬಬೇಕಾದವರು, ಪ್ರಾಣ ಕಳೆದಕೊಂಡವರ ಬಗ್ಗೆ ವರ್ಣರಂಜಿತ ಎಪಿಸೋಡ್ ಮಾಡಿ ಭಯ ಹುಟ್ಟಿಸುತ್ತಿದ್ದಾರೆ. ನೀವೇ ನೋಡಿ, ಭಾರತದಲ್ಲಿ ದಿನಕ್ಕೆ ನಾಲ್ಕು ಲಕ್ಷದವರೆಗೆ ಪಾಸಿಟಿವ್ ಪ್ರಕರಣ ಬೆಳಕಿಗೆ ಬರುತ್ತವೆ, ಸಾವಿನ ಸಂಖ್ಯೆ ಮೂರ್ನಾಲ್ಕು ಸಾವಿರ ಇರುತ್ತದೆ. ಅಲ್ಲಿಗೆ ಮೂರು ಲಕ್ಷ ತೊಂಬತ್ತು ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡು ಮನೆ ಸೇರುತ್ತಾರೆ, ಆದರೆ ಅವರ ಬಗ್ಗೆ ಯಾರೂ ತಲೆ ಕೆಡಿಸೊಕೊಳ್ಳುವುದಿಲ್ಲ.
ಹಾಗಂತ ಕೊರೋನ ಬಗ್ಗೆ ಭಯ ವೇ ಬೇಡ ಅಂತಲ್ಲ, ಅದು ಎಷ್ಟಿರಬೇಕೊ ಅಷ್ಟಿರಲಿ, ಭಯಕ್ಕಿಂತ ಜಾಸ್ತಿ ಜಾಗೃತೆಯಿರಲಿ. ಒಂದು ಸಲ ಪಾಸಿಟಿವ್ ಆಯಿತೆಂದೇ ಇಟ್ಟುಕೊಳ್ಳಿ, ಅಲ್ಲಿಗೆ ಭಯ ಬಿಟ್ಟಾಕಿ ಆತ್ಮವಿಶ್ವಾಸ ತಂದುಕೊಳ್ಳಿ, ವಿಲ್ ಪವರ್ ನಿಂದ ಅದೆಂಥದೋ ಕಾಯಿಲೆ ಗೆದ್ದವರಿದ್ದಾರೆ, ಇನ್ನು ಕೊರೋನ ಯಾವ ಲೆಕ್ಕ, ಅಲ್ವಾ?
-Team Infotrend