ಪರಿಸರದ ಮೇಲಿನ ಪ್ರೀತಿಯಿಂದ ದಟ್ಟ ಅರಣ್ಯ ನಿರ್ಮಾಣ : 75 ನೇ ವಯಸ್ಸಿನಲ್ಲೂ ಆರೋಗ್ಯ ಮತ್ತು ಆಹ್ಲಾದಕರ ಜೀವನ ನಡೆಸುವ ದಯಾಳ್ ಅವರು ಇದಕ್ಕೆ ಕಾರಣ ಪ್ರಕೃತಿ ಎನ್ನುತ್ತಾರೆ
ಕೇರಳದ ಎಲಪ್ಪಿ ಪಟ್ಟಣದ ಮುಹಮ್ಮಾ ನಿವಾಸಿಯಾದ 75 ವರ್ಷ ವಯಸ್ಸಿನ ಕೆ.ವಿ.ದಯಾಳ್ ಅವರು ಕಳೆದ 30 ವರ್ಷಗಳಿಂದಲೂ ಸಹಾ ಪರಿಸರ ಸಂರಕ್ಷಣೆಯ ಕೆಲಸವನ್ನು ಮಾಡುತ್ತಿದ್ದಾರೆ. ಕೇರಳದಾದ್ಯಂತ ಜೈವಿಕ ಕೃಷಿಯ ಮೂಲಕ ಒಂದು ಸಂಚಲವನ್ನು ಸೃಷ್ಟಿಸಿರುವ ಅವರು ತಮ್ಮ ಮನೆಯ ಸುತ್ತಲಿನ ವಾತಾವರಣದಲ್ಲಿ ಒಂದು ಅರಣ್ಯವನ್ನೇ ನಿರ್ಮಾಣ ಮಾಡಿದ್ದಾರೆ.
ಇದೇ ಕಾರಣದಿಂದ ಅವರನ್ನು ಇಂದು ಕೇರಳದಲ್ಲಿ ಫಾರೆಸ್ಟ್ ಮ್ಯಾನ್ ಎಂದೇ ಗುರುತಿಸಲಾಗುತ್ತದೆ. ಅವರ ಜೀವನ ಈ ಕಾಡಿಗೆ ಮಾತ್ರವೇ ಸೀಮಿತವಾಗಿಲ್ಲ. ನೂರಾರು ಯುವಕರು, ಮಹಿಳೆಯರು ಹಾಗೂ ರೈತರನ್ನು ಸಾವಯವ ಕೃಷಿಯ ಜೊತೆಗೆ ಸಂಪರ್ಕಿಸುವ ಕೆಲಸವನ್ನು ಸಹಾ ಅವರು ಮಾಡುತ್ತಿದ್ದಾರೆ.
ಎಂಕಾಂ ಪದವಿಯನ್ನು ಪಡೆದ ನಂತರ ದಯಾಳ್ ಅವರು ತಮ್ಮ ಬ್ಯುಸಿನೆಸ್ ಆರಂಭ ಮಾಡಿದರು. ಅವರು ತೆಂಗಿನ ನಾರಿನಿಂದ ದಪ್ಪ ಕಾರ್ಪೆಟ್ ಗಳು, ಮ್ಯಾಟ್ ಗಳನ್ನು ಉತ್ಪಾದಿಸಿ ಅವುಗಳನ್ನು ರಫ್ತು ಮಾಡುತ್ತಿದ್ದರು. ಅವರು ತಮ್ಮ ವ್ಯವಹಾರದ ದೃಷ್ಟಿಯಿಂದ ತೆಂಗಿನ ಮರಗಳನ್ನು ಬೆಳೆಯುತ್ತಿದ್ದರು.
ಹೀಗಿರುವಾಗ ಒಮ್ಮೆ ಆ ಪ್ರದೇಶದಲ್ಲಿ ತೆಂಗಿನ ಮರಗಳಿಗೆ ಒಂದು ರೋಗ ಹತ್ತಿತು. ಆಗ ಅವರು ಎಷ್ಟೆಲ್ಲಾ ಪ್ರಯತ್ನ ಪಟ್ಟರೂ ಸಹಾ ಮರಗಳಿಗೆ ಅಂಟಿದ ರೋಗ ನಿವಾರಣೆ ಮಾಡಲಾಗಲಿಲ್ಲ. ಆಗ ಅವರಿಗೆ ಪತ್ರಿಕೆಯೊಂದರಲ್ಲಿ ಬಂದ ನೈಸರ್ಗಿಕ ಕೃಷಿಯ ವಿಷಯದ ಬಗ್ಗೆ ತಿಳಿಯಿತು. ಅದೇ ವೇಳೆ ಪರಿಸರ ಪ್ರೇಮಿಯಾಗಿದ್ದ ಜಾನ್ಸಿ ಜೇಕಬ್ ಎನ್ನುವವರ ಬಗ್ಗೆ ತಿಳಿಯಿತು.

ಜೇಕಬ್ ಅವರು ಆ ದಿನಗಳಲ್ಲಿ ಮಕ್ಕಳನ್ನು ಪ್ರಕೃತಿಯ ಜೊತೆಗೆ ಬೆಸೆಯಲು ಕ್ಯಾಂಪ್ ಗಳನ್ನು ಆಯೋಜನೆ ಯನ್ನು ಮಾಡುತ್ತಿದ್ದರು. ದಯಾಳ್ ಅವರು ತಮ್ಮ ಇಬ್ಬರ ಮಕ್ಕಳನ್ನು ಕ್ಯಾಂಪ್ ಗೆ ದಾಖಲು ಮಾಡಿ ತಾವು ಅವರ ಜೊತೆಗೆ ಹೋದರು. ಆಗ ಅವರು ಪ್ರಕೃತಿಗೆ ಇನ್ನಷ್ಟು ಹತ್ತಿರವಾದರು.
ಅಲ್ಲದೇ ಅವರ ಜಪಾನಿನ ಮಾಸಾನೇಬು ಫುಕುವಾಕ ಎನ್ನುವ ಸಾವಯವ ಕೃಷಿಯ ಬಗ್ಗೆ ತಿಳಿದುಕೊಂಡರು. ದಿನಕಳೆದಂತೆ ಅವರು ಸಾವಯವ ಕೃಷಿ, ಜೈವಿಕ ಕೃಷಿ ಹಾಗೂ ಜೀವ ವೈವಿಧ್ಯತೆ ಗಳ ಕುರಿತಾಗಿ ಹೆಚ್ಚು ಹೆಚ್ಚು ತಿಳಿದಷ್ಟು ಪ್ರಕೃತಿಗೆ ಇನ್ನಷ್ಟು ಹತ್ತಿರವಾದರು. ಅವರ ಆಸಕ್ತಿ ಹೆಚ್ಚಿದಂತೆ ತಮ್ಮ ಮನೆಯ ಸುತ್ತ ಇರುವ ಖಾಲಿ ಜಾಗದಲ್ಲಿ ಗಿಡಗಳನ್ನು ನೆಡುವ ಕಾರ್ಯವನ್ನು ಆರಂಭಿಸಿದರು.
ಪ್ರಕೃತಿಯ ಮೇಲೆ ಬೆಳೆದ ಪ್ರೀತಿಯ ಪರಿಣಾಮ ಅವರ ಮನಸ್ಸು ಅವರದ್ದೇ ಒಂದು ಕಾಡನ್ನು ನಿರ್ಮಾಣ ಮಾಡಲು ಪ್ರೇರಣೆಯನ್ನು ನೀಡಿತ್ತು. ಆಗ ಅವರು ತಮ್ಮ ಬಳಿಯಿಂದ ಒಂದೂವರೆ ಎಕರೆ ಬಂಜರು ಭೂಮಿಯಲ್ಲಿ ಗಿಡ ಮರಗಳನ್ನು ಬೆಳೆಸುವ ಆಲೋಚನೆ ಮಾಡಿದರು. ಬಂಜರು ಭೂಮಿಯಲ್ಲಿ ಗಿಡ ಮರ ಬೆಳೆಸುವುದು ಅಸಾಧ್ಯ ಎನಿಸಿದರೂ ಒಂದು ಪ್ರಯತ್ನಕ್ಕೆ ಕೈ ಹಾಕಿದರು.

ಮೊದಲು ಜಮೀನಿನಲ್ಲಿ ಒಂದು ಸಣ್ಣ ಕೊಳದ ನಿರ್ಮಾಣವನ್ನು ಮಾಡಿಸಿ, ನೀರನ್ನು ಸಂಗ್ರಹಿಸಿ ಅನಂತರ ಗಿಡ ಮರಗಳನ್ನು ನೆಡೆಸುವ ಕಾರ್ಯವನ್ನು ಆರಂಭ ಮಾಡಿದರು. ಕೆಲವು ವರ್ಷ ಅವರು ಶ್ರಮ ಪಟ್ಟರು. ಅನಂತರ ಉಳಿದೆಲ್ಲಾ ಕಾರ್ಯವನ್ನು ಪ್ರಕೃತಿಯೇ ಮಾಡಲು ಆರಂಭಿಸಿತ್ತು. ಅವರ ಬಂಜರು ಭೂಮಿ ಒಂದು ಅರಣ್ಯದ ರೂಪವನ್ನು ಪಡೆಯಿತು.
ಇಂದು ಅವರ ಈ ಅರಣ್ಯದಲ್ಲಿ 250 ವಿವಿಧ ಮರಗಳಿವೆ. ದಯಾಳ್ ಅವರು ಪ್ರಕೃತಿಯ ನಿಯಮವೇ ಹೀಗೆ, ನಾವು ಎರಡು ಬೀಜ ನೆಟ್ಟರೆ ಪ್ರಕೃತಿ ತಾನಾಗಿಯೇ ಅದನ್ನು ನಾಲ್ಕು, ಎಂಟು ಮಾಡುವುದು. ಅದೇ ಪ್ರಕಾರ ಒಂದು ನಮ್ಮ ಕಾಡಿನಲ್ಲಿ ನಾನು ನೆಟ್ಟ ಗಿಡ ಮರಗಳಿಗಿಂತ ಅಧಿಕ ಪ್ರಮಾಣದಲ್ಲಿ ಮರ ಗಿಡಗಳು ಇವೆ ಎಂದು ಹೇಳುತ್ತಾರೆ.
ದಯಾಳ್ ಅವರು ತಮ್ಮ ಮನೆಯ ಹೊರಗೆ ನಿರ್ಮಾಣವಾಗಿರುವ ಈ ಕಾಡಿಗೆ ಶ್ರೀ ಕೋವಿಲ್ ಎನ್ನುವ ಹೆಸರನ್ನು ಇಟ್ಟಿದ್ದಾರೆ. ಈ ಕಾಡಿನಲ್ಲಿ ಮರಗಳು ಎಷ್ಟು ದಟ್ಟವಾಗಿದೆಯೆಂದರೆ ಸೂರ್ಯನ ಕಿರಣಗಳು ಭೂಮಿಯನ್ನು ತಲುಪುವುದಿಲ್ಲ. ದಯಾಳ್ ಅವರು ಮರಗಳು ತಮ್ಮ ಎಲೆಗಳ ಮೂಲಕ ಸೂರ್ಯನ ಬೆಳಕನ್ನು ಪಡೆಯುತ್ತವೆ, ಅದು ಅವುಗಳ ಶಕ್ತಿಯ ಮೂಲವಾಗಿದೆ ಎಂದು ಹೇಳುತ್ತಾರೆ.

2010 ರಲ್ಲಿ ದಯಾಳ್ ಅವರಿಗೆ ವೃಕ್ಷ ಪ್ರೇಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕೇರಳ ರಾಜ್ಯದಲ್ಲಿ ಜನರನ್ನು ಸಾವಯವ ಕೃಷಿಯೊಂದಿಗೆ ಬೆಸೆಯುವ ಅಭಿಯಾನವನ್ನು ಅವರು ಆರಂಭಿಸಿದ್ದಾರೆ. ದಯಾಳ್ ಅವರು ರಾಸಾಯನಿಕಗಳ ಬಳಕೆಯಿಂದ ಕೃಷಿಯ ಮೇಲೆ ಆಗಿರುವ ದುಷ್ಪರಿಣಾಮ ಗಳನ್ನು ಸಾವಯವ ಕೃಷಿಯಿಂದ ಮಾತ್ರವೇ ಕಡಿಮೆ ಮಾಡಲು ಸಾಧ್ಯ ಎನ್ನುತ್ತಾರೆ.
ದಯಾಳ್ ಅವರು ಸಾವಯವ ಕೃಷಿಯನ್ನು ನಾನು ಬೇರೆ ಬೇರೆಯವರಿಂದ ಕಲಿತೆ. ನಮ್ಮ ಮನೆಯ ಬಳಿ ಇರುವ ಅರಣ್ಯ ನನಗೆ ಗುರು ಎನ್ನುವರು. ಅಲ್ಲದೇ ಆ ಅರಣ್ಯದಿಂದ ನಾನು ಜೀವನದಲ್ಲಿ ಸಾಮರಸ್ಯ ಇರಬೇಕೆಂಬ ಪಾಠವನ್ನು ಕಲಿತೆ. ಅರಣ್ಯದಲ್ಲಿ ಬೇರೆ ಬೇರೆ ಜಾತಿಯ ಮರಗಳು, ಪ್ರಾಣಿ ಪಕ್ಷಿಗಳು ಹೇಗೆ ಸಾಮರಸ್ಯ ದಿಂದ ಜೀವನವನ್ನು ನಡೆಸುತ್ತಿದೆ ಎನ್ನುವುದು ನನಗೆ ಆ ಅರಣ್ಯದಿಂದ ತಿಳಿದು ಬಂದಿದೆ.
ಮಾನವರಲ್ಲಿ ಕೂಡಾ ಇಂತಹುದೊಂದು ಸಾಮರಸ್ಯ ಬದುಕು ಇದ್ದರೆ ಚೆನ್ನ ಎನ್ನುವ ದಯಾಳ್ ಅವರು ಅಕ್ಷರಶಃ ಪ್ರಕೃತಿ ಪ್ರೇಮಿಯಾಗಿದ್ದಾರೆ. ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ವಿಶ್ರಾಂತ ಜೀವನ ಮತ್ತಷ್ಟು ನೆಮ್ಮದಿ ಹಾಗೂ ಅರೋಗ್ಯದಿಂದ ಕೂಡಿರಲಿ…
-Team Infotrend