ಈ ಸುಲಭ ವಿಧಾನಗಳನ್ನು ಬಳಸಿಕೊಂಡರೆ ನಮ್ಮ ಮನೆಗಳಲ್ಲೇ ನಾವು ರುಚಿಕರವಾದ ಸ್ಟ್ರಾಬೆರಿ ಹಣ್ಣನ್ನು ಬೆಳೆಯಬಹುದು!
ದಿನೇ ದಿನೇ ಜೈವಿಕ ಆಹಾರಗಳ ಕುರಿತಾಗಿ ಜಾಗೃತಿಯು ಹೆಚ್ಚಾದಂತೆ, ನಗರ ಹಾಗೂ ಪಟ್ಟಣಗಳಲ್ಲಿ ವಾಸಿಸುತ್ತಿರುವ ಜನರು ತಮ್ಮ ಮನೆಗಳ ಮುಂದೆ ಇರುವ ಖಾಲಿ ಜಾಗ ಅಥವಾ ಮನೆಗಳ ಬಾಲ್ಕನಿಗಳಲ್ಲಿ ಸೊಪ್ಪು-ತರಕಾರಿ ಹಾಗೂ ಹಣ್ಣುಗಳನ್ನು ತಾವೇ ಬೆಳೆಯುವ ಕಡೆಗೆ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಮನೆಯ ಮುಂದೆ ಇರುವ ಅಂಗಳದಲ್ಲಿ ಕೊತ್ತಂಬರಿ, ಪುದಿನ ಹಸಿಮೆಣಸಿನಕಾಯಿ ಇಂತಹ ಸಣ್ಣಪುಟ್ಟ ಸಸಿಗಳನ್ನು ಜನ ಬಹಳ ಸುಲಭವಾಗಿ ಬೆಳೆದು ಬಿಡುತ್ತಾರೆ.
ಆದರೆ ಹಣ್ಣುಗಳ ವಿಷಯ ಬಂದಾಗ ಬಹುಶಃ ಹಣ್ಣುಗಳನ್ನು ನಾವು ಬೆಳೆಯಲು ಸಾಧ್ಯವಿಲ್ಲ, ಅದು ಕಠಿಣ ಎಂದು ಎಲ್ಲರೂ ತಿಳಿಯುತ್ತಾರೆ. ಇದು ನಿಜವೇ ಎನಿಸಿದರೂ ಸಹ ಕೆಲವೊಂದು ಹಣ್ಣುಗಳನ್ನು ಯಾವುದೇ ಅನುಮಾನವಿಲ್ಲದೆ ನಮ್ಮ ಮನೆಯಲ್ಲಿ ಇರುವ ಜಾಗದಲ್ಲಿ ನಾವು ಬೆಳೆಯಬಹುದು. ಹಾಗಾದರೆ ತನ್ನ ಅದ್ಭುತ ಕೆಂಪು ಬಣ್ಣದಿಂದ ಎಲ್ಲರ ಗಮನವನ್ನು ಸೆಳೆಯುವ ಸ್ಟ್ರಾಬೆರಿ ಹಣ್ಣನ್ನು ಬೆಳೆಯುವ ವಿಧಾನ ಹೇಗೆ ಎಂಬುದನ್ನು ನಾವು ಈಗ ತಿಳಿಯೋಣ ಬನ್ನಿ…

ಸ್ಟ್ರಾಬೆರಿ ಹಣ್ಣು ನೋಡಲು ಎಷ್ಟು ಸುಂದರವಾಗಿರುತ್ತದೆಯೋ, ಅಷ್ಟೇ ರುಚಿಕರವಾಗಿಯೂ ಮತ್ತು ಆರೋಗ್ಯಕರ ಹಣ್ಣು ಕೂಡಾ ಆಗಿದೆ. ಇದರ ಸಿಹಿ-ಹುಳಿ ಸ್ವಾದವು ನಾಲಿಗೆಗೆ ಹಿತವೆನಿಸುತ್ತದೆ. ಕೇಕ್ ಮೇಲಿನ ಅಲಂಕಾರದಿಂದ ಹಿಡಿದು ಜಾಮ್ ಹಾಗೂ ಐಸ್ ಕ್ರೀಮ್ ಗಳಲ್ಲಿಯೂ ಸ್ಟ್ರಾಬೆರಿಯನ್ನು ಬಳಸಿಕೊಳ್ಳಲಾಗುತ್ತದೆ.
ಸ್ಟ್ರಾಬೆರಿ ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಈಗಾಗಲೇ ಮಾರುಕಟ್ಟೆಯಿಂದ ಬಹಳಷ್ಟು ಸಲ ನೀವು ಈ ಹಣ್ಣನ್ನು ತಂದು ತಿಂದಿರಬಹುದು. ಆದರೆ ಇಂದು ಅದನ್ನು ಬೆಳೆಯುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
ಕೋಲ್ಕತ್ತಾದ ತೋಟಗಾರಿಕಾ ತಜ್ಞರಾದ ಸಂತೋಷ್ ಮೋಹತಾ ಅವರು ಕಳೆದ 15 ವರ್ಷಗಳಿಂದಲೂ ತಮ್ಮ ಮನೆಯಲ್ಲಿ ಸ್ಟ್ರಾಬೆರಿ ಹಣ್ಣನ್ನು ಬೆಳೆಯುತ್ತಿದ್ದಾರೆ. ಸ್ಟ್ರಾಬೆರಿ ಗಿಡವನ್ನು ಬೆಳೆಸಲು 12 ಇಂಚಿನ ಮಣ್ಣಿನ ಕುಂಡವಿದ್ದರೆ ಸಾಕು. ಇದರಲ್ಲೇ ಗಿಡವು ಬಹಳ ಚೆನ್ನಾಗಿ ಬೆಳೆಯುತ್ತದೆ. ಸಸ್ಯದ ಆರೈಕೆಯನ್ನು ಸರಿಯಾಗಿ ಮಾಡಿದರೆ ಮೂರರಿಂದ ನಾಲ್ಕು ತಿಂಗಳಲ್ಲಿ ಅದು ಹಣ್ಣನ್ನು ಬಿಡಲು ಪ್ರಾರಂಭಿಸುತ್ತದೆ.

ಸಂತೋಷ್ ಅವರು ಹೇಳುವಂತೆ ಭಾರತದ ವಾಯುಗುಣಕ್ಕೆ ಅನುಸಾರವಾಗಿ ಸ್ಟ್ರಾಬೆರಿಯನ್ನು ಚಳಿಗಾಲವು ಇದನ್ನು ಬೆಳೆಯಲು ಉತ್ತಮವಾದ ವಾತಾವರಣ ವಾಗಿರುತ್ತದೆ. ಈ ಗಿಡಕ್ಕೆ ಕನಿಷ್ಠ 8 ರಿಂದ ಗರಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಸೂಕ್ತವಾಗಿರುತ್ತದೆ. ಇದನ್ನು ಬೀಜ ಅಥವಾ ಸಸಿಯ ರೂಪದಲ್ಲಿ ನೆಡಬಹುದು.
ಮನೆಯಲ್ಲಿ ಬೆಳೆಸುವುದಾದರೆ ಸಸ್ಯ ರೂಪದಲ್ಲಿ ನೆಟ್ಟು ಬೆಳೆಸುವುದು ಹೆಚ್ಚು ಸೂಕ್ತವಾಗಿರುತ್ತದೆ ಎಂದು ಸಂತೋಷ್ ಅವರು ತಿಳಿಸುತ್ತಾರೆ. ಸ್ಟ್ರಾಬೆರಿಯಲ್ಲಿ ಎರಡು ಪ್ರಭೇದಗಳಿದ್ದು, ಒಂದು ಜನವರಿಯಿಂದ ಬೇಸಿಗೆಯ ಕಾಲ ಆರಂಭವಾಗುವವರೆಗಿನ ಕಾಲದಲ್ಲಿ ಬೆಳೆಯುವ ಸ್ಟ್ರಾಬೆರಿ. ಇನ್ನೊಂದು ಬೇಸಿಗೆಯಿಂದ ಹಿಡಿದು ಚಳಿಗಾಲದ ವರೆಗೆ ಯಾವುದೇ ಸಮಯದಲ್ಲಿ ಬೇಕಾದರೂ ಬೆಳೆಸಬಹುದಾದ ಸ್ಟ್ರಾಬೆರಿ.
ಸ್ಟ್ರಾಬೆರಿಯಲ್ಲಿ ಪ್ರಭೇದಗಳು ಬೇರೆ ಬೇರೆಯಾಗಿದ್ದರೂ ಅವುಗಳನ್ನು ಬೆಳೆಸುವ ವಿಧಾನ ಮಾತ್ರ ಬಹುತೇಕ ಒಂದೇ ರೀತಿ ಇರುತ್ತದೆ ಎಂಬುದು ಸಂತೋಷ್ ಅವರ ಅಭಿಪ್ರಾಯವಾಗಿದೆ. ಸ್ಟ್ರಾಬೆರಿ ಗಿಡವು ನಿಮ್ಮ ಹತ್ತಿರದ ಯಾವುದೇ ನರ್ಸರಿಯಲ್ಲಿ 20 ರಿಂದ 30 ರೂಪಾಯಿಗಳಿಗೆ ಸಿಗುತ್ತದೆ. ಗಿಡವನ್ನು ಖರೀದಿ ಮಾಡುವಾಗ ಅದರ ಎಲ್ಲಾ ಎಲೆಗಳು ಹಸಿರಾಗಿದೆಯೇ ಹಾಗೂ ಅದರ ಬೇರು ದೃಢವಾಗಿದೆಯೇ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಬೇಕು.

ಈ ಸಸಿಗಳನ್ನು ನೆಡಲು 12 ಇಂಚು ಅಗಲವಿರುವ ಮಣ್ಣಿನ ಕುಂಡಗಳು ಬಹಳ ಸೂಕ್ತವಾಗಿರುತ್ತದೆ. ಗಿಡವನ್ನು ನೆಡಲು 50% ಹಸುವಿನ ಸಗಣಿ 50% ಕೋಕೋಪಿಟ್ ಹಾಗೂ ಕೆಲವು ಬೇವಿನ ಕಡ್ಡಿಗಳನ್ನು ಬಳಸಬೇಕು. ಇವು ಸಸ್ಯವನ್ನು ಶಿಲೀಂದ್ರಗಳಿಂದ ಕಾಪಾಡುತ್ತದೆ. ಒಂದು ವೇಳೆ ಕೋಕೋಪಿಟ್ ಇಲ್ಲವೆಂದರೆ ಸಾಮಾನ್ಯವಾದ ಮಣ್ಣನ್ನು ಬಳಸಬಹುದಾಗಿದೆ.
ಪಾಟ್ ಗೆ ಹಾಕುವ ಆ ಮಣ್ಣು ತುಂಬಾ ಸೂಕ್ಷ್ಮ ವಾಗಿರಬೇಕು ಅದರ ಜೊತೆಗೆ ಸ್ವಲ್ಪ ಮರಳನ್ನು ಸೇರಿಸಿಕೊಳ್ಳಬೇಕು. ಕೊಕೊಪಿಟ್ ಕೂಡ ಸುಲಭಾವಾಗಿ ಸಿಗುವುದರಿಂದ ಅದನ್ನೇ ಬಳಸುವುದು ಒಳ್ಳೆಯದು….
ಸ್ಟ್ರಾಬೆರಿ ಬೆಳೆಯುವ ವಿಧಾನ ಹೀಗಿದೆ..
ಮೊದಲನೆಯದಾಗಿ, ಖಾಲಿ ಕುಂಡದ ಒಳಗೆ ರಂಧ್ರದ ಮೇಲೆ ಬೇರೆ ಒಡೆದು ಹೋದ ಕುಂಡದ ತುಂಡುಗಳನ್ನು ಹಾಕಿ. ನಂತರ ಸಣ್ಣ ಕಲ್ಲುಗಳ ಪದರವನ್ನು ಮಾಡಿ. ಈಗ ಕುಂಡದೊಳಗೆ ಸುಮಾರು ಎರಡು ಇಂಚುಗಳಷ್ಟು ಪಾಟಿಂಗ್ ಮಿಕ್ಸ್ ಹಾಕಿ… ನಂತರ ನರ್ಸರಿಯಿಂದ ತಂದ ಸಸ್ಯವನ್ನು ಎಚ್ಚರಿಕೆಯಿಂದ ಕುಂಡದ ಮಧ್ಯದಲ್ಲಿ ಇರಿಸಿ.

ಈಗ ಮತ್ತೆ ಗೊಬ್ಬರ ಹಾಗೂ ಮಣ್ಣಿನ ಮಿಶ್ರಣವನ್ನು ಮೇಲೆ ಸುರಿಯಿರಿ. ಸಸ್ಯದಿಂದ ಎಲೆಗಳು ಹೊರಬರುವ ಸ್ಥಳದಲ್ಲಿಯೇ ಆ ಮಿಶ್ರಣವಿದೆ ಎಂದು ಖಚಿತಪಡಿಸಿಕೊಳ್ಳಿ. ಸ್ಟ್ರಾಬೆರಿ ಸಸ್ಯಗಳಿಗೆ ಹೆಚ್ಚಿನ ನೀರು ಅಗತ್ಯವಿಲ್ಲ, ಆದ್ದರಿಂದ ನೀರನ್ನು ಹಿತ ಮಿತವಾಗಿ ಹಾಕಿ. ಪ್ರಖರವಾದ ಸೂರ್ಯನ ಬೆಳಕಿನಿಂದ ಕೆಲವು ದಿನಗಳವರೆಗೆ ಅದನ್ನು ದೂರವಿಡಿ.
ಸಸ್ಯದ ಬೇರು ಮಣ್ಣನ್ನು ಭದ್ರವಾಗಿ ಹಿಡಿದ ನಂತರ, ನೀವು ಅದನ್ನು ಸಾಮಾನ್ಯ ಸೂರ್ಯನ ಬೆಳಕಿನಲ್ಲಿ ಇಡಬಹುದು. ಸಸ್ಯವನ್ನು ನೆಟ್ಟ ನಂತರ ಅದನ್ನು ನಿರಂತರವಾಗಿ ಗಮನಿಸಿ ಆರೈಕೆ ಮಾಡುವುದು ಅವಶ್ಯಕ. ಸಸ್ಯದ ಬೇರಿನ ಬಳಿ ನೀರು ನಿಲ್ಲುತ್ತಿದೆಯೇ, ಅಲ್ಲಿ ಯಾವುದೇ ಶಿಲೀಂಧ್ರವಿದೆಯೇ ಎಂಬುದನ್ನು ಆಗಾಗ ನೋಡಿಕೊಳ್ಳಿ.
ಈ ಸಸ್ಯಕ್ಕೆ ಸಣ್ಣ ಕೀಟಗಳ ಭಯವಿದ್ದು, ಅವು ಕಂಡರೆ ಆಗ ಅಕ್ಕಿ ನೀರನ್ನು ಸಿಂಪಡಿಸಿ. ಸರಿಯಾಗಿ ಕಾಳಜಿ ವಹಿಸಿದರೆ ಎರಡು ತಿಂಗಳಲ್ಲಿ ಈ ಸಸ್ಯವು ಇಡೀ ಪಾಟ್ ನಲ್ಲಿ ಪುದೀನ ಸಸ್ಯದಂತೆ ಹರಡುತ್ತದೆ ಮತ್ತು ಅದರಲ್ಲಿ ಹೂವುಗಳು ಸಹ ಹೊರ ಬರುತ್ತವೆ. ಸಸ್ಯ ಹೂವುಗಳು ಬಿಟ್ಟ ಕೂಡಲೇ ಅದನ್ನು ಇತರ ಹೂಬಿಡುವ ಸಸ್ಯಗಳನ್ನುಇಡುವ ಸ್ಥಳದಲ್ಲಿ ಇರಿಸಿ.

ಈ ಕಾರಣದಿಂದಾಗಿ ಪರಾಗಸ್ಪರ್ಶದಿಂದಾಗಿ ಹೂವನ್ನು ಹಣ್ಣಾಗಿ ಪರಿವರ್ತಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹಣ್ಣು ಬಂದ ಕೂಡಲೇ ಪಾಟ್ ನ ಮಣ್ಣನ್ನು ಒಣ ಹುಲ್ಲು ಅಥವಾ ಮರದ ತುಂಡುಗಳಿಂದ ಮುಚ್ಚಿ, ಇದು ಹಣ್ಣಿನಲ್ಲಿ ಶಿಲೀಂಧ್ರದ ಅಪಾಯವನ್ನು ತಡೆಯುತ್ತದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಸಸಿಯನ್ನು ನೆಡುವುದಾದರೆ ಜನವರಿ ಕೊನೆಯ ವೇಳೆಗೆ ಇದು ಹಣ್ಣನ್ನು ಬಿಡಲು ಆರಂಭಿಸುತ್ತದೆ.
ಮೊದಲು ಹಣ್ಣು ಬಿಳಿಯ ಬಣ್ಣದಲ್ಲಿ ಇರುತ್ತದೆ. ಅನಂತರ ಅದು ಹಸಿರು ಬಣ್ಣಕ್ಕೆ ತಿರುಗಿ ಕೊನೆಗೆ ಕೆಂಪಾಗುತ್ತವೆ. ಆಗ ನಿಮ್ಮ ಪರಿಶ್ರಮ ಫಲಿಸಿತು ಎಂದರ್ಥ. ಸಂತೋಷ್ ಅವರು ಹೇಳುವಂತೆ ಮನೆಯಲ್ಲಿ ಜೈವಿಕ ಗೊಬ್ಬರವನ್ನು ಬಳಸಿ ಬೆಳೆಸಿ ದಂತಹ ಸ್ಟ್ರಾಬೆರಿಯ ರುಚಿ ಮಾರುಕಟ್ಟೆಯಿಂದ ತರುವಂತಹ ಸ್ಟ್ರಾಬೆರಿ ಗಿಂತ ಮಧುರವಾಗಿರುತ್ತದೆ.
ಒಂದು ಸಲ ಫಲವನ್ನು ಬಿಟ್ಟಮೇಲೆ ಮತ್ತೊಂದು ಸೀಸನ್ ಗೆ ಗಿಡ ಸಿದ್ಧವಾಗುವ ಮೊದಲು ಅದರ ಪಾಟ್ ಬದಲಿಸಬಹುದು ಅಥವಾ ಎಲೆಗಳನ್ನು ಕತ್ತರಿಸಬಹುದಾಗಿರುತ್ತದೆ. ಆಸಕ್ತಿ ಇದ್ದವರು ಇನ್ನೊಮ್ಮೆ ಓದಿಕೊಂಡು ಇವತ್ತೇ ಮನೆಯಲ್ಲಿ ಸ್ಟ್ರಾಬೆರಿ ಕೃಷಿ ಆರಂಭಿಸಿ…