ಕೇವಲ ಮೂರು ಅಡಿಯ ಆರತಿ ಐಎಎಸ್ ಅಧಿಕಾರಿಯಾಗಿದ್ದು ಹೇಗೆ? IAS ಆಫೀಸರ್ ಆಗಲು ಇವರಿಗೆ ಎತ್ತರ ಅಡ್ಡಿ ಬರಲಿಲ್ಲ!
ಭಾರತದಲ್ಲೇ ಆಗಲಿ, ಎಲ್ಲೇ ಆಗಲಿ ಜಗತ್ತಿನಾದ್ಯಂತ ಪೊಲೀಸ್, ಮಿಲಿಟರಿ ಹಾಗೂ ಯಾವುದೇ ರಕ್ಷಣೆಗೆ ಸಂಬಂಧಪಟ್ಟ ನೌಕರಿಗಳಿಗೆ ಇಂತಿಷ್ಟು ಎತ್ತರ ದೇಹದ ಆಕಾರ ತೂಕ ಹಾಗೂ ಮುಖ್ಯ ಅಂಗಾಂಗಗಳ ಕಾರ್ಯಕ್ಷಮತೆ ಬಗ್ಗೆ ಇಂತಿಷ್ಟು ಅಕ್ಯೂರಸಿ ಇರಲೇಬೇಕು ಎಂದು ನಿಗಧಿಪಡಿಸಲಾಗಿರುತ್ತದೆ ಹಾಗೂ ಅವುಗಳಿಗಿಂತ ಕಡಿಮೆ ಇದ್ದರೆ ಯಾವುದೇ ಕಾರಣಕ್ಕೂ ಅಂತಹ ನೌಕರಿ ಕೊಡಲು ಸಾಧ್ಯವಿಲ್ಲ ಎಂಬುದು ನಿಮಗೆಲ್ಲ ಗೊತ್ತೇ ಇದೆ.
ಆದರೆ ಭಾರತದ ಅತ್ಯಂತ ಉಚ್ಚ ಸರಕಾರಿ ನೌಕರಿಯಾದಂತಹ ಐಎಎಸ್ ಇದೊಂದು ಪರೀಕ್ಷೆಗೆ ಮಾತ್ರ ಕೆಲವು ವಿಶೇಷ ಪರೀಕ್ಷೆ ಬಿಟ್ಟರೆ ಎತ್ತರ, ತೂಕ ಹಾಗೂ ಎದೆಯಳತೆ ಇವೆಲ್ಲ ಪರೀಕ್ಷೆ ಇರುವುದಿಲ್ಲ ಎಂಬುದು ವಿಶೇಷ. ಉತ್ತರಾಖಂಡದ ಡೆಹ್ರಾಡೂನ್ ನ ಒಬ್ಬ ಯುವತಿ ಕೇವಲ ಮೂರು ಅಡಿ ಮಾತ್ರ ಎತ್ತರವಿದ್ದು, ಐಎಎಸ್ ಅಧಿಕಾರಿಯಾಗಿದ್ದಾರೆಂದರೆ ನೀವು ನಂಬಲೇಬೇಕು.
ಇವರ ಹೆಸರು ಆರತಿ ಡೋಗ್ರ, ಭಾರತದ ಮಿಲಿಟರಿಯಲ್ಲಿ ಕರ್ನಲ್ ಆಗಿದ್ದ ರಾಜೇಂದ್ರ ದೋಗ್ರಾ ಹಾಗೂ ಅವರ ತಾಯಿ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿದ್ದ ಕುಂಕುಮ್ ದಂಪತಿಯ ಮಗಳಾಗಿದ್ದು, ಇವರು ಜನಿಸಿದಾಗ ಅಂದರೆ ಚಿಕ್ಕವರಿದ್ದಾಗ ಇವರ ಎತ್ತರ ನೋಡಿ ನಕ್ಕವರೇ ಜಾಸ್ತಿ.
ಇವರ ತಂದೆ ತಾಯಿಗೂ ಸಹ ಇವರಿಗೆ ಓದಿಸುವುದು ವ್ಯರ್ಥ ಎಂದು ತಿಳಿಹೇಳಲು ಬಂದವರಿದ್ದಾರೆ. ಆದರೆ ಯಾರ ಮಾತಿಗೂ ಬೆಲೆ ಕೊಡದ ಈ ದಂಪತಿ ತಮ್ಮ ಮಗಳ ಮೇಲೆ ಪ್ರೀತಿ ಇಟ್ಟು ಅವರನ್ನು ಓದಿಸಿದ್ದು ಅಲ್ಲದೇ ಅವರಿಗೆ ಧೈರ್ಯ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಇಂದು ಅವರ ಪರಿಶ್ರಮಕ್ಕೆ ಸರಿಯಾದ ಫಲ ಸಿಕ್ಕು ತಮ್ಮ ಮಗಳ ಮೇಲೆ ಹೆಮ್ಮೆ ಪಡುವುದಷ್ಟೇ ಅಲ್ಲದೇ ಎಲ್ಲರ ಮೆಚ್ಚುಗೆಗೂ ಪಾತ್ರರಾಗುತ್ತಿದ್ದಾರೆ.

ಆರತಿಯವರು ಕೂಡ ಅಷ್ಟೇ, ತಮ್ಮ ಕುಬ್ಜತೆಯನ್ನು ಶಾಪ ಎಂದು ಪರಿಗಣಿಸದೇ ವರದಾನವೆಂದು ತಿಳಿದು ತಮ್ಮ ತಂದೆ ತಾಯಿ ತಮ್ಮ ಮೇಲಿಟ್ಟಿದ್ದ ನಂಬಿಕೆ ಉಳಿಸಿಕೊಂಡು ಒಳ್ಳೆಯ ವಿದ್ಯಾರ್ಥಿನಿಯಾಗಿ ಓದುತ್ತಿದ್ದರು. ತಮ್ಮ ಹುಟ್ಟುರಾದ ಡೆಹ್ರಾಡೂನ್ ನಲ್ಲಿಯೇ ತಮ್ಮ ವೆಲ್ಹಮ್ ಎಂಬ ಬಾಲಕಿಯರ ಶಾಲೆಯಲ್ಲಿ ಮುಗಿಸಿ ನಂತರ ದೆಹಲಿ ವಿಶ್ವ ವಿದ್ಯಾಲಯದ ಶ್ರೀ ರಾಮ್ ಲೇಡಿಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು.
ಪದವಿ ನಂತರ ತಮ್ಮ ಹುಟ್ಟೂರಿಗೆ ತೆರಳಿದ ಆರತಿಯವರು ಅಲ್ಲಿಯೇ ತಮ್ಮ ಸ್ನಾತಕೋತ್ತರ ಪದವಿ ಮುಗಿಸಿದರು. ಇಂತಹ ಸಮಯದಲ್ಲಿ ಆರತಿಯವರ ಜೀವನದಲ್ಲೊಂದು ತಿರುವು ಬರುತ್ತದೆ, ಅದೇನೆಂದರೆ ಅಂದು ಡೆಹ್ರಾಡೂನ್ ನ ಜಿಲ್ಲಾಧಿಕಾರಿಯಾಗಿದ್ದ ಮನಿಷಾ ಎಂಬುವರ ಭೇಟಿಯಾಯಿತು, ಅಲ್ಲಿಂದಲೇ ಇವರಿಗೆ ಐಎಎಸ್ ಅಸೆ ಹುಟ್ಟಿದ್ದು.
ಇನ್ನೂ ವಿಶೇಷ ಎಂದರೆ, ತೀರಾ ಅಪರೂಪದಲ್ಲೇ ಅಪರೂಪದ ಸಾಧನೆಯನ್ನು ಆರತಿಯವರು ಮಾಡಿದ್ದರು. ಅದೇನೆಂದರೆ ಎಲ್ಲಾ ಸರಿಯಾಗಿದ್ದುಕೊಂಡೆ ಈ ಕಠಿಣ ಪರೀಕ್ಷೆ ಎದುರಿಸಿ ಪಾಸಾಗುವುದು ಕಷ್ಟ, ಅಂಥದ್ರಲ್ಲಿ ಮೊದಲನೇ ಅವಕಾಶದಲ್ಲೇ ಎಕ್ಸಾಮ್ ಹಾಗೂ ಸಂದರ್ಶನ ಪಾಸ್ ಮಾಡುವ ಮೂಲಕ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ ಆರತಿಯವರು.

ಇಷ್ಟೆಲ್ಲ ಕಷ್ಟ ಪಟ್ಟು ಓದಿ ಕೊನೆಗೂ 2006 ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದ ಆರತಿ ಡೋಗ್ರ ಅವರು ಬಿಕಾನೇರ್ ಹಾಗೂ ಬಂಡಿ ಜಿಲ್ಲೆಗಳಲ್ಲಿ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿ ಅಧಿಕಾರ ನಿರ್ವಹಿಸಿದ್ದಾರೆ, ನಂತರ ಅದೇ ರಾಜ್ಯದ ಅಜ್ಮಿರ್ ಜಿಲ್ಲೆಯ ಸಹಾಯಕ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿ ಸದ್ಯ ಅದೇ ಅಜ್ಮಿರ್ ನ ಐಎಎಸ್ ಅಧಿಕಾರಿಣಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆರತಿಯವರು ಬಿಕಾನೇರ್ ಜಿಲ್ಲೆಯಲ್ಲಿ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಬಂಕೋ ಬಿಕಾನೋ ಎಂಬ ಅಭಿಯಾನದ ಮೂಲಕ ಬರೋಬ್ಬರಿ ಅಂದಾಜು 200 ಗ್ರಾಮ ಪಂಚಾಯತ್ ಗಳಲ್ಲಿ ಬಯಲು ಮುಕ್ತ ಶೌಚದ ಬಗ್ಗೆ ಯಶಸ್ವಿ ಕೆಲಸ ಮಾಡಿ ಒಬ್ಬ ಐಎಎಸ್ ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಇಷ್ಟೇ ಅಲ್ಲದೇ ಮತದಾನ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಡಲು ಬರೋಬ್ಬರಿ 4 ಕಿಲೋಮೀಟರ್ ನಡೆದು ಮತದಾನ ಮಾಡುವಂತೆ ಪ್ರೆರೇಪಿಸಿ ಅಭಿಯಾನ ಶುರು ಮಾಡಿದ ಇವರ ಒಂದು ಪುಟ್ಟ ವಿಡಿಯೋ ಈ ಕೆಳಗೆ ಇದೆ ನೋಡಿ.
ಇಷ್ಟೆಲ್ಲ ಸಾಧನೆ ಮಾಡಿರುವ ಇವರಿಗೆ ರಾಜ್ಯ ಹಾಗೂ ಕೆಲವು ರಾಷ್ಟ್ರ ಮಟ್ಟದ ಪ್ರಶಸ್ತಿ ಸಂದಿವೆ. ಇದಷ್ಟೇ ಅಲ್ಲದೇ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರಿಂದ ಅಭಿನಂದನೆಗಳು ಕೂಡ ದೊರೆತಿರುವುದು ವಿಶೇಷ. ಏನೇ ಸಾಧಿಸಲು ಮೊದಲು ಬೇಕಾಗಿರುವುದು ದೃಢ ನಿರ್ಧಾರ, ಶ್ರದ್ದೆ ಎಂಬುದಕ್ಕೆ ಆರತಿ ಉತ್ತಮ ಉದಾಹರಣೆ.
-ಮಂಜುನಾಥ್