ಪ್ಲೇಆಫ್‌ಗೆ ಮೊದಲು ಆರ್‌ಸಿಬಿ ಈ 3 ದೊಡ್ಡ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು, ಅಂದರೆ ಮಾತ್ರ ಈ ಸಲ ಕಪ್ ನಮ್ದೇ!

ಈ ವರ್ಷ ಐಪಿಎಲ್ 2021 ರಲ್ಲಿ ಭಾರತೀಯ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಾಧನೆ ಹೆಚ್ಚು ಉತ್ತಮವಾಗಿದೆ. ಋತುವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ ಆರ್‌ಸಿಬಿ ತಂಡವು ಮೊದಲ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದರೆ ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧದ ಸೋಲಿನ ನಂತರ, ಈ ತಂಡವು ಈಗ ಐಪಿಎಲ್ 2021 ರಲ್ಲಿ 2 ನೇ ಸ್ಥಾನವನ್ನು ಕಳೆದುಕೊಂಡು ಈಗ ಮೂರನೇ ಸ್ಥಾನಕ್ಕಿಳಿದಿದೆ.

ಈ ನಿಟ್ಟಿನಲ್ಲಿ ಬೆಂಗಳೂರು ತಂಡವು ಪರಿಹಿರಿಸಿಕೊಳ್ಳಬೇಕಾದ ಮೂರು ದೊಡ್ಡ ಸಮಸ್ಯೆಗಳ ಬಗ್ಗೆ ನಾವು ಇಂದು ಮಾತನಾಡೋಣ, ಇಲ್ಲದಿದ್ದರೆ ಈ ತಂಡವು ಮತ್ತೊಮ್ಮೆ ಟ್ರೋಫಿಗಾಗಿ ಕಾಯುವ ಸ್ಥಿತಿಯ ಬರಬಹುದು, ಈ ಸಲ ಕಪ್ ನಮ್ದೇ ಎಂಬುದು ಬರೀ ಡೈಲಾಗ್ ಆಗಿಯೇ ಉಳಿಯಲಿದೆ.

ಓಪನಿಂಗ್ ದೌರ್ಬಲ್ಯ :
ದೇವದತ್ ಪಡಿಕ್ಕಲ್ ಅವರೊಂದಿಗೆ ಇನ್ನಿಂಗ್ಸ್ ತೆರೆಯುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ನಿರ್ಧಾರ ಸ್ವಲ್ಪ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿರಬಹುದು, ಆದರೆ ಅಗ್ರ ಕ್ರಮಾಂಕದಲ್ಲಿ ಬರುವ ನಂಬರ್ 3 ಬ್ಯಾಟ್ಸ್‌ಮನ್‌ ಸಮಸ್ಯೆ ಇನ್ನೂ ಹಾಗೇ ಇದೆ. ಇದಿನ್ನೂ ಆರ್‌ಸಿಬಿಯ ಥಿಂಕ್ ಟ್ಯಾಂಕ್ ನ ತಲೆನೋವಾಗಿ ಉಳಿದಿದೆ.

ವಿರಾಟ್ ಮತ್ತು ಪಡಿಕ್ಕಲ್ ಜೋಡಿ ವಿಫಲವಾದ ಸಂದರ್ಭದಲ್ಲಿ, ಅಂದರೆ ಕಳಪೆ ಆರಂಭದ ನಂತರ ಇನ್ನಿಂಗ್ಸ್ ಅನ್ನು ನಿಭಾಯಿಸಬಲ್ಲ ಬ್ಯಾಟ್ಸ್‌ಮನ್‌ ನನ್ನು ಮೂರನೇ ಸ್ಥಾನದಲ್ಲಿ ಇಳಿಸಲು ತಂಡಕ್ಕೆ ಸಾಧ್ಯವಾಗಿಲ್ಲ. ರಜತ್ ಪಾಟಿದಾರ್ ಕಳೆದ ಕೆಲವು ಪಂದ್ಯಗಳಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿಲ್ಲ. ಹೀಗಿರುವಾಗ ಈ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಬ್ಯಾಟ್ಸಮನ್ ನನ್ನು ಆರ್ಸಿಬಿ ಆದಷ್ಟು ಬೇಗ ಭರ್ತಿ ಮಾಡಬೇಕು.

ಮಧ್ಯಮ ಕ್ರಮದಲ್ಲಿ ಅಸ್ಥಿರತೆ :
ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಧ್ಯಮ ಕ್ರಮಾಂಕ ಹೇಗಿದೆ ಎಂಬುದನ್ನು ಪಂಜಾಬ್ ಕಿಂಗ್ಸ್ ವಿರುದ್ಧ 25 ವರ್ಷದ ಯುವ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ತೋರಿಸಿಕೊಟ್ಟರು. ಮ್ಯಾಕ್ಸ್‌ವೆಲ್ ಮತ್ತು ಡಿವಿಲಿಯರ್ಸ್ ಅವರು ಔಟಾದ ನಂತರ ಯಾವುದೇ ಬ್ಯಾಟ್ಸ್‌ಮನ್ ಪಂದ್ಯವನ್ನು ಕೊನೆವರೆಗೆ ತಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ.

ಕಳೆದ ಕೆಲವು ಪಂದ್ಯಗಳಲ್ಲಿ ಆಲ್‌ರೌಂಡರ್ ಶಹಬಾಜ್ ಅಹ್ಮದ್‌ ಗೆ ತಂಡವು ಅವಕಾಶ ನೀಡಿದ್ದರೂ ಅವರು ಬ್ಯಾಟಿಂಗ್ ನಲ್ಲಿ ಪರಿಣಾಮಕಾರಿಯಾಗಿಲ್ಲ. ಇದಕ್ಕಾಗಿ ನಾಯಕ ಕೋಹ್ಲಿ ಮತ್ತು ಆರ್‌ಸಿಬಿ ತಂಡದ ಆಡಳಿತವು ಕೇರಳದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುರುದ್ದೀನ್‌ಗೆ ಅವಕಾಶ ನೀಡುವ ಬಗ್ಗೆ ಯೋಚಿಸಬೇಕು ಹಾಗೂ ಮಧ್ಯಮ ಕ್ರಮಾಂಕದಲ್ಲಿನ ಈ ಕೊರತೆಯನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಬೇಕು.

ಡೆತ್ ಓವರ್‌ ಬೌಲರ್‌ ಗಳು ವಿಫಲ :
ಇಲ್ಲಿಯವರೆಗೆ ಬೆಂಗಳೂರು ತಂಡವು ಸೋತ 2 ಪಂದ್ಯಗಳನ್ನು ನೋಡಿದರೆ ಡೆತ್ ಓವರ್‌ ಗಳಲ್ಲಿ ಕಳಪೆ ಬೌಲಿಂಗ್ ಅಥವಾ ಕಳಪೆ ಬೌಲಿಂಗ್ ಪ್ರದರ್ಶನ ದೊಡ್ಡ ಪಾತ್ರವನ್ನು ವಹಿಸಿದೆ. ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿ, ಎಲ್ಲ ಬೌಲರ್ ಗಳು ಕೊನೆಯ ಓವರ್ನಲ್ಲಿ ಅತ್ಯಂತ ದುಬಾರಿ ಎಂದು ಸಾಬೀತಾಗಿದ್ದಾರೆ. ಕಳೆದ ಪಂದ್ಯದಲ್ಲೂ ಪಂಜಾಬ್ ಕಿಂಗ್ಸ್ ವಿರುದ್ಧ ಇದೇ ಆಗಿತ್ತು.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೈಲ್ ಜಾಮಿಸನ್, ಯುಜ್ವೇಂದ್ರ ಚಹಲ್ ಮತ್ತು ಹರ್ಷಲ್ ಪಟೇಲ್ ಓವರ್ ಗೆ 8 ಕ್ಕಿಂತ ಹೆಚ್ಚು ರನ್ ಕೊಟ್ಟರು. ಎಲ್ಲರನ್ನೂ ಪಂಜಾಬ್ ಬ್ಯಾಟ್ಸಮನ್ ಚೆಂಡಾಡಿದರು. ಈ ಸಂಬಂಧದಲ್ಲಿ ಆರ್‌ಸಿಬಿ ತಂಡದ ಆಡಳಿತವು ಮುಂದಿನ ಪಂದ್ಯಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ.

ಓಪನಿಂಗ್ ದೌರ್ಬಲ್ಯ, ಮಧ್ಯಮ ಕ್ರಮದ ಅಸ್ಥಿರತೆ, ಡೆತ್ ಓವರ್‌ ಗಳಲ್ಲಿ ಬೌಲರ್‌ ಗಳು ದುಬಾರಿಯಾಗುವುದು, ಈ ಮೂರು ಸಮಸ್ಯೆಗಳನ್ನು ಬೆಂಗಳೂರು ತಂಡ ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕು, ಇಲ್ಲದಿದ್ದರೆ ಪ್ರಶಸ್ತಿಯನ್ನು ಗೆಲ್ಲುವ ಅದರ ಕನಸು ಕನಸಾಗಿಯೇ ಉಳಿಯಲಿದೆ.
ಈ ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ…
-Team Infotrend