ಗರ್ಭಾವಸ್ಥೆಯ ಆರಂಭಿಕ ಲಕ್ಷಣಗಳು: ನೀವು ಗರ್ಭಿಣಿಯಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷೆಯಿಲ್ಲದೆ ಅರ್ಥಮಾಡಿಕೊಳ್ಳುವುದು ಹೇಗೆ? ಗರ್ಭ ನಿಲ್ಲುವ ಸೂಚನೆಗಳು

ಪ್ರತಿಯೊಬ್ಬ ವಿವಾಹಿತ ಮಹಿಳೆಗೂ ತಾಯಿಯಾಗುವುದು ಜೀವನದ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದಾಗಿದ್ದು ಅಂತಹ ಕ್ಷಣಕ್ಕಾಗಿ ಮಹಿಳೆಯರು ಅದರಲ್ಲಿಯೂ ಭಾರತೀಯ ಮಹಿಳೆಯರು ಕಾಯುತ್ತಾ ಇರುತ್ತಾರೆ. ಆದರೆ ಹಲವಾರು ಮಹಿಳೆಯರಿಗೆ ತಾವು ಗರ್ಭಿಣಿ ಎಂಬುದನ್ನು ಖಚಿತಪಡಿಸಿಕೊಳ್ಳದೇ ಮನೆಯವರಿಗೆ ಹೇಳಲು ಮುಜುಗರ ಅಥವಾ ಸಂಕೋಚವಿರುತ್ತದೆ, ಅಂತಹ ಮಹಿಳೆಯರಿಗಾಗಿಯೇ ಈ ಲೇಖನವನ್ನು ಬರೆದಿದ್ದು ನೀವು ಗರ್ಭಿಣಿ ಎನ್ನುವುದಕ್ಕೆ ಈ ಕೆಳಗೆ ವಿವರಿಸಿದ ವಿವರಣೆಗಳೆಲ್ಲವೂ ಆರಂಭಿಕ ಲಕ್ಷಣಗಳಾಗಿದ್ದು ಕೊನೆಯವರೆಗೂ ಓದಿ ತಿಳಿದುಕೊಳ್ಳಿ.

ಗರ್ಭ ನಿಲ್ಲುವ ಸೂಚನೆಗಳು:

ಪ್ರೆಗ್ನೆನ್ಸಿ ಕನ್ಫರ್ಮ್ ಮಾಡಿಕೊಳ್ಳಲು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸುವುದು ಒಂದು ಸುಲಭ ವಿಧಾನವಾಗಿದೆ, ಆದರೆ ಆ ಟೆಸ್ಟ್ ಮಾಡಿಸಿಕೊಳ್ಳುವ ಮೊದಲು ಸಿಗುವ ಕೆಲವು ಸೂಚನೆಗಳು ನಿಮಗೆ ತಿಳಿದಿದ್ದರೆ ಒಳ್ಳೆಯದು. ಅಂತಹ ಸೂಚನೆಗಳಲ್ಲಿ ಪಿರಿಯಡ್ ಆಗದಿರುವುದು ಕೂಡ ಒಂದಾಗಿದೆ. ಆದರೆ ಪಿರಿಯಡ್ ಮಿಸ್ ಆಗುವುದಕ್ಕೆ ಕೆಲವೊಮ್ಮೆ ಸಾಮಾನ್ಯ ಹಾಗೂ ಮತ್ತೆ ಕೆಲವು ಬಾರಿ ಆರೋಗ್ಯ ಸಮಸ್ಯೆ ಕೂಡ ಇರಬಹುದು, ಹಾಗಾಗಿ ಮಿಸ್ ಪಿರಿಯಡ್ ಒಂದನ್ನೇ ಪ್ರೆಗ್ನೆನ್ಸಿ ಲಕ್ಷಣ ಎಂದು ಹೇಳಲಾಗುವುದಿಲ್ಲ. ಗರ್ಭಿಣಿಯಾಗುವುದು ಒಂಬತ್ತು ತಿಂಗಳುಗಳ ದೊಡ್ಡ ಪ್ರಕ್ರಿಯೆಯಾಗಿದ್ದು, ಮಹಿಳೆಯರು ಗರ್ಭಧರಿಸಿದ ಒಂದು ವಾರದ ನಂತರ ಕಂಡುಬರುವ ಕೆಲವು ಲಕ್ಷಣಗಳು ಹಾಗೂ ಅನುಭವಗಳನ್ನು ಗಮನಿಸುವುದು ಬಹಳ ಮುಖ್ಯವಾಗಿರುತ್ತದೆ, ಅವುಗಳೆಂದರೆ….

Symptoms of pregnancy

ಮಿಸ್ ಪಿರಿಯಡ್

ಪಿರಿಯಡ್ ಮಿಸ್ ಆಗುವುದು ಒಂದು ಸಾಮಾನ್ಯ ಲಕ್ಷಣ, ಆದರೆ ಓರ್ವ ಆರೋಗ್ಯವಂತ ಮಹಿಳೆ ಮಾತ್ರ ಈ ಒಂದೇ ಲಕ್ಷಣದ ಮೇಲೆ ತಾನು ಗರ್ಭಿಣಿ ಎಂದು ಪರೀಕ್ಷೆ ಮಾಡಿಸಿಕೊಳ್ಳಬಹುದು.

ಸ್ಥನಗಳಲ್ಲಿ ಸೂಕ್ಷ್ಮತೆ ಹಾಗೂ ನೋವು

ಸಾಮಾನ್ಯವಾಗಿ ಓರ್ವ ಸ್ತ್ರೀ ಗರ್ಭಧರಿಸಿದಾಗ ಆರಂಭದಲ್ಲಿ ಸ್ಥನಗಳಲ್ಲಿ ಸಂವೇದನಶೀಲತೆ ಕಂಡುಬರುತ್ತದೆ, ಅಂದರೆ ತೊಟ್ಟುಗಳ ಬಣ್ಣದಲ್ಲಿ ಬದಲಾವಣೆ ಹಾಗೂ ಕೊಂಚ ನೋವು ಸಹ ಕಾಣಿಸಿಕೊಳ್ಳಬಹುದು. ಪ್ರೆಗ್ನೆನ್ಸಿ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆಯಾಗುವ ಕಾರಣ ಸ್ಥನಗಳು ಭಾರವೆನಿಸುವುದರ ಜೊತೆ ಜೊತೆಗೆ ನೋವು ಸಹ ಕಾಣಿಸಿಕೊಳ್ಳುತ್ತದೆ, ಆದರೆ ಕೆಲವು ದಿನಗಳ ನಂತರ ಆ ಹಾರ್ಮೋನ್ ಗಳು ಸಮತೋಲನಕ್ಕೆ ಬರುವ ಕಾರಣ ಆ ನೋವು ತಾನಾಗೇ ಕಡಿಮೆಯಾಗುತ್ತದೆ.

ಪದೇ ಪದೇ ಮೂತ್ರ ವಿಸರ್ಜನೆ

ಮಹಿಳೆ ಗರ್ಭಧರಿಸಿದ ತಕ್ಷಣ ಆಕೆಯ ದೇಹದಲ್ಲಿ ರಕ್ತ ತನ್ನಷ್ಟಕ್ಕೆ ತಾನೇ ಹೆಚ್ಚಾಗಲು ಶುರುವಾಗುತ್ತದೆ, ಆಗ ಬ್ಲ್ಯಾಡರ್ ನಲ್ಲಿ ಫ್ಲೂಯಿಡ್ ಜಮೆಯಾಗುವ ಕಾರಣ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾತ್ತದೆ, ಹಾಗಾಗಿ ಇದು ಸಹ ಪ್ರೆಗ್ನೆನ್ಸಿಯ ಆರಂಭಿಕ ಲಕ್ಷಣವಾಗಿದೆ.

ವಾಕರಿಕೆ ಮತ್ತು ವಾಂತಿ

ಗರ್ಭಾವಸ್ಥೆಯ ಆರಂಭದಲ್ಲಿ ಮಹಿಳೆಯರಿಗೆ, ಅದರಲ್ಲಿಯೂ ಬೆಳಗಿನ ಸಮಯದಲ್ಲಿ ವಾಕರಿಕೆ ಮತ್ತು ವಾಂತಿ ಬರುವುದು ಸಹ ಒಂದು ಸಾಮಾನ್ಯ ಲಕ್ಷಣವಾಗಿದೆ.

ಜ್ವರ ಬರಬಹುದು

ದೇಹದಲ್ಲಿ ಬದಲಾಗುವ ಹಾರ್ಮೋನ್ ಗಳ ಕಾರಣದಿಂದಾಗಿ ಸುಸ್ತು, ಆಯಾಸವಾದಂತಾಗುವುದು ಹಾಗೂ ಜ್ವರ ಸಹ ಬರಬಹುದು.

ಕೆಳಹೊಟ್ಟೆ ನೋವು

ಗರ್ಭಧಾರಣೆ ಸಮಯದಲ್ಲಿ ಕೆಲವು ಮಹಿಳೆಯರ ಗರ್ಭಕೋಶದಲ್ಲಿ ಕೊಂಚ ನೋವು ಸಹ ಕಾಣಿಸಿಕೊಳ್ಳಬಹುದು.

ಭಾವನೆಗಳಲ್ಲಿ ಭಾರಿ ಬದಲಾವಣೆ

ಪ್ರೆಗ್ನೆನ್ಸಿ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆ ಸಾಕಷ್ಟು ಪ್ರಮಾಣದಲ್ಲಿ ಆಗುವದರಿಂದ ಸಣ್ಣ ಪುಟ್ಟ ಕಾರಣಕ್ಕೂ ಸಂತೋಷ ಅಥವಾ ದುಃಖ ಎರಡನ್ನೂ ಅವರು ಅನುಭವಿಸಬಹುದಾಗಿದ್ದು, ಅದರಲ್ಲಿಯೂ ಕೆಲವು ಮಹಿಳೆಯರು ಚಿಂತಿತರಾಗುವುದು ಸಹ ಇದೆ.

ರುಚಿಯಲ್ಲಿ ಬದಲಾವಣೆ

ಈ ಲಕ್ಷಣ ಹೆಚ್ಚಿನ ಮಹಿಳೆಯರಲ್ಲಿ ಕಾಣಿಸುಕೊಳ್ಳುತ್ತದೆ, ಇದಕ್ಕೂ ಸಹ ಅವರ ದೇಹದಲ್ಲಾಗುವ ಹಾರ್ಮೋನ್ ಗಳ ಬದಲಾವಣೆಯೇ ಕಾರಣ. ಮಹಿಳೆಯರಿಗೆ ಪ್ರೆಗ್ನೆನ್ಸಿ ಸಮಯದಲ್ಲಿ ಒಂದು ಆಹಾರ ಪದಾರ್ಥ ಅತ್ಯಂತ ಪ್ರಿಯವಾಗಬಹುದು ಅಥವಾ ಮತ್ತಾವುದೋ ಆಹಾರ ಬೇಡವಾಗಿ ಬಿಡಬಹುದು, ಇದರೊಟ್ಟಿಗೆ ವಾಸನೆ ಗ್ರಹಿಕೆ ಕೂಡ ಬದಲಾಗುವ ಸಾಧ್ಯತೆ ಇರುತ್ತದೆ.

ಗರ್ಭಾವಸ್ಥೆಯ ಮಾಸಿಕ ಲಕ್ಷಣಗಳು:

ಒಂದನೇ ತಿಂಗಳು – ಸ್ಥನಗಳಲ್ಲಿ ಕೊಂಚ ನೋವು, ವಾಂತಿ, ಆಯಾಸ ಹಾಗೂ ಮೇಲೆ ಸೂಚಿಸಿದ ಲಕ್ಷಣಗಳಲ್ಲಿ ಕೆಲವು.

ಎರಡನೇ ತಿಂಗಳು – ಹಸಿವು ಮತ್ತು ಭಾವನೆಗಳಲ್ಲಿ ಬದಲಾವಣೆ.

ಮೂರನೇ ತಿಂಗಳು – ತೂಕದಲ್ಲಿ ಹೆಚ್ಚಾಗುವುದು ಹಾಗೂ ಹೊಟ್ಟೆ ದೊಡ್ಡದಾಗುವುದು.

ನಾಲ್ಕನೇ ತಿಂಗಳು – ಹೊಟ್ಟೆಯಲ್ಲಿ ಮಗುವಿನ ಚಲನೆ ತಿಳಿಯುತ್ತದೆ, ಅಲ್ಲದೇ ಗರ್ಭವತಿ ಮಹಿಳೆಯ ಮುಖದ ಕಾಂತಿ ಹೆಚ್ಚಾಗುತ್ತದೆ.

ಐದನೇ ತಿಂಗಳು – ಐದನೇ ತಿಂಗಳಿನಲ್ಲಿ ಮಗುವಿನ ಚಲನೆ ಸಂಪೂರ್ಣವಾಗಿ ತಿಳಿಯುತ್ತದೆ, ಅಲ್ಲದೆ ಗರ್ಭಿಣಿ ಮಹಿಳೆಗೆ ಸುಸ್ತು ಹೆಚ್ಚಾಗುತ್ತದೆ.

ಆರನೇ ತಿಂಗಳು – ಆರನೇ ತಿಂಗಳಿನಲ್ಲಿ ಮಗು ಬೆಳೆದಂತೆ ಅದರ ಒತ್ತಡ ಮಹಿಳೆಯ ಮೂತ್ರ ಪಿಂಡಗಳ ಮೇಲೆ ಬೀಳುವುದರಿಂದ ಮೂತ್ರಪಿಂಡಗಳಲ್ಲಿ ಕೊಂಚ ನೋವು ಕಾಣಿಸಿಕೊಳ್ಳುತ್ತದೆ, ಹಾಗೇನೇ ಉಸಿರಾಟಕ್ಕೆ ಕೊಂಚ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.

ಏಳನೇ ತಿಂಗಳು – ಈ ತಿಂಗಳಲ್ಲಿ ಹೆರಿಗೆ ನೋವಿನಂತೆಯೇ ನೋವು ಬರಲು ಆರಂಭಿಸುತ್ತದೆ, ಹಾಗಂತ ಆಗಲೇ ಡೆಲಿವರಿ ಆಗುವುದಿಲ್ಲ, ಬದಲಾಗಿ ನಿಮ್ಮ ದೇಹ ತನ್ನಷ್ಟಕ್ಕೆ ತಾನೇ ಹೆರಿಗೆ ನೋವು ತಡೆಯಲು ತಯಾರು ಮಾಡಿಕೊಳ್ಳುತ್ತಿರುತ್ತದೆ, ಅಲ್ಲದೇ ಮುಖ ಕೈಕಾಲುಗಳಲ್ಲಿ ಊತ ಕೂಡ ಕಂಡುಬರಬಹುದು.

ಎಂಟನೇ ತಿಂಗಳು – ಈ ಸಮಯದಲ್ಲಿ ಮಗುವಿನ ಚಲನೆ ಹೆಚ್ಚಾಗುವ ಕಾರಣ ಮಹಿಳೆಯ ಅರೋಗ್ಯದಲ್ಲಿ ಕೊಂಚ ಬದಲಾವಣೆಗಳು ಕಾಣಿಸಿಕೊಳ್ಳುವವು, ಆದಷ್ಟು ವೈದ್ಯರೊಂದಿಗೆ ಸಂಪರ್ಕದಲ್ಲಿರುವುದು ಒಳ್ಳೆಯದು.

ಒಂಬತ್ತನೇ ತಿಂಗಳು – ಈ ತಿಂಗಳಿನಲ್ಲಿ ಮಗುವಿನ ಜನನ ಸಮೀಪವಿರುವ ಕಾರಣ ನಿಜವಾದ ಹೆರಿಗೆ ನೋವು ಆರಂಭವಾಗಲು ಶುರುವಾಗುತ್ತದೆ, ಹಾಗಾಗಿ ಹೊಟ್ಟೆ ಮತ್ತು ಸೊಂಟನೋವು ಕಾಣಿಸಿಕೊಳ್ಳುತ್ತದೆ, ಹಾಗೇನೇ ಮಗುವಿನ ಜನನ ಸಮೀಪಿಸಿದಂತೆ ಮಹಿಳೆಯ ಟ್ಯೂಬ್ ನಿಂದ ನೀರು ಬರಲು ಆರಂಭಿಸುತ್ತದೆ, ಇದು ಹೆರಿಗೆಯ ಮುಖ್ಯ ಲಕ್ಷಣವಾಗಿದೆ.

ಮೇಲೆ ತಿಳಿಸಿದ ಎಲ್ಲ ಲಕ್ಷಣಗಳು ಸಾಮಾನ್ಯವಾಗಿ ಎಲ್ಲ ಗರ್ಭಿಣಿ ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಕೆಲವರಿಗೆ ಆರಂಭಿಕ ಲಕ್ಷಣಗಳು ಪಿರಿಯಡ್ ಮಿಸ್ ಆದ ಒಂದು ಅಥವಾ ಎರಡು ವಾರಗಳಲ್ಲಿಯೇ ಕಾಣಿಸಿಕೊಳ್ಳಬಹುದು ಅಥವಾ ಎರಡು ವಾರಗಳ ನಂತರ ಕೂಡ ಕಾಣಿಸಿಕೊಳ್ಳಬಹುದು, ಹಾಗಾಗಿ ಅಂತಹ ಲಕ್ಷಣಗಳು ಕಾಣಿಸಿಕೊಂಡರೆ ಹೆರಿಗೆ ಅಥವಾ ಸ್ತ್ರೀರೋಗ ತಜ್ಞರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

Symptoms of pregnancy

ಪ್ರೆಗ್ನೆನ್ಸಿ ಬಗೆಗಿನ ಕೆಲವು ಪ್ರಶ್ನೆಗಳು :

ಪ್ರಶ್ನೆ : ಪಿರಿಯಡ್ ಮಿಸ್ ಆದಮೇಲೆ ಎಷ್ಟು ದಿನಗಳ ನಂತರ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಳ್ಳಬೇಕು?
ಉತ್ತರ : ನಿಮ್ಮ ಮೆನುಸ್ಟ್ರಲ್ ಸೈಕಲ್ ನಿಯಮಿತವಾಗಿ ಒಂದೇ ದಿನಾಂಕಕ್ಕೆ ಬರುತ್ತಿದ್ದರೆ ನೀವು ಪಿರಿಯಡ್ ಮಿಸ್ ಆದ ಒಂದೇ ದಿನಕ್ಕೆ ಪರೀಕ್ಷೆ ಮಾಡಿಸಿಕೊಳ್ಳಬಹುದು. ಆದರೆ ನಿಮ್ಮ ಪಿರಿಯಡ್ ನಿಯಮಿತವಾಗಿಲ್ಲದಿದ್ದರೆ ಹಿಂದಿನ ಪಿರಿಯಡ್ ನ ದಿನಾಂಕಕ್ಕಿಂತ 7-10 ದಿನಗಳ ಒಳಗಾಗಿ ಪರೀಕ್ಷೆ ಮಾಡಿಸಿಕೊಂಡರೆ ಫಲಿತಾಂಶ ಸಿಗುತ್ತದೆ.

ಪ್ರಶ್ನೆ : ಪ್ರೆಗ್ನೆನ್ಸಿ ಆರಂಭಿಕ ಲಕ್ಷಣಗಳು ಎಷ್ಟು ದಿನಗಳ ನಂತರ ಕಂಡುಬರುತ್ತವೆ?
ಉತ್ತರ : ಸಾಮಾನ್ಯವಾಗಿ 6-41 ದಿನಗಳ ಒಳಗೆ ಈ ಮೇಲೆ ತಿಳಿಸಿದ ಲಕ್ಷಣಗಳು ಕಂಡುಬರಲು ಆರಂಭಿಸುತ್ತವೆ, ಆದರೆ ಕೆಲವರಲ್ಲಿ 2 ರಿಂದ ಮೂರು ವಾರಗಳ ನಂತರವೇ ಪ್ರೆಗ್ನೆನ್ಸಿ ಲಕ್ಷಣಗಳು ಕಂಡುಬರಲು ಆರಂಭಿಸುತ್ತವೆ.

ಪ್ರಶ್ನೆ : ಪ್ರೆಗ್ನೆನ್ಸಿಯ ಆರಂಭಿಕ ಲಕ್ಷಗಳು ಯಾವಾಗ ಕಾಣಿಸಿಕೊಳ್ಳುತ್ತವೆ ಮತ್ತು ಅವುಗಳು ಯಾವುವು?
ಉತ್ತರ : ಒಂದು ಅಥವಾ ಎರಡು ವಾರಗಳಲ್ಲಿ ಕಾಣಿಸಿಕೊಳ್ಳುತ್ತವೆ, ಅವುಗಳಲ್ಲಿ ಮುಖ್ಯವಾಗಿ ವಾಕರಿಕೆ ಮತ್ತು ವಾಂತಿ, ಸ್ಥನಗಳಲ್ಲಿ ನೋವು ಹಾಗೂ ತೊಟ್ಟುಗಳ ಬಣ್ಣ ಬದಲಾವಣೆ, ಮಲಬದ್ಧತೆ, ಪದೇ ಪದೇ ಮೂತ್ರವಿಸರ್ಜನೆ, ತಲೆಸುತ್ತು ಬರುವಿಕೆ ಹಾಗೂ ಜ್ವರ ಮತ್ತು ಆಯಾಸ ಮುಖ್ಯ ಲಕ್ಷಣಗಳಾಗಿವೆ.

ಪ್ರಶ್ನೆ : ಪಿರಿಯಡ್ ಮಿಸ್ ಆಗುವ ಮೊದಲೇ ಪ್ರೆಗ್ನೆನ್ಸಿ ಟೆಸ್ಟ್ ಮಾಡಬಹುದೇ?
ಉತ್ತರ : ಹೌದು ಮಾಡಿಸಬಹುದು, ಆದರೆ ಇದಕ್ಕಾಗಿ ನೀವು ಅಸುರಕ್ಷಿತ ಲೈಂಗಿಕ ಸಂಪರ್ಕದ 10 ರಿಂದ ಹದಿನಾಲ್ಕು ದಿನಗಳ ನಂತರ ಪ್ರಸೂತಿ ತಜ್ಞರನ್ನೇ ಭೇಟಿಯಾಗಬೇಕು, ಅವರು ಕೆಲವು ಪರೀಕ್ಷೆ ಮಾಡಿ ಅದರಲ್ಲಿ ಗರ್ಭಧಾರಣೆ ಸಮಯದಲ್ಲಿ ಹ್ಯುಮನ್ ಕೊರಿಯೋನಿಕ್ ಗೊನೆಡೋಟ್ರೋಪಿನ್ (hCG) ಎಂಬ ಹಾರ್ಮೋನ್ ಉತ್ಪಾದನೆಯಾಗುತ್ತದೆ, ಅದರ ಆಧಾರದ ಮೇಲೆ ನಿಮ್ಮ ಗರ್ಭಧಾರಣೆಯಾಗಿದೆಯೇ ಅಥವಾ ಇಲ್ಲವಾ ಎಂಬ ಬಗ್ಗೆ ತಿಳಿಸುತ್ತಾರೆ.

ಪ್ರಶ್ನೆ : ಪಿರಿಯಡ್ ಬಂದ ನಂತರ ಕೂಡ ಗರ್ಭಧಾರಣೆಯಾಗಬಹುದೇ?
ಉತ್ತರ : ಇದಕ್ಕೆ ಉತ್ತರ ಅಚ್ಚರಿಯಾದರೂ, ಹೌದು ಎಂದೇ ಬರುತ್ತದೆ. ಏಕೆಂದರೆ ಪಿರಿಯಡ್ ಬಂದ ಸಮಯದಲ್ಲಿ ಅಥವಾ ನಂತರ ಅಸುರಕ್ಷಿತ ಲೈಂಗಿಕ ಸಂಪರ್ಕ ನಡೆಸಿದರೆ ಗರ್ಭವತಿಯಾಗಬಹುದು.

ನಾವು ತಿಳಿಸಿದ ಗರ್ಭ ನಿಲ್ಲುವ ಸೂಚನೆಗಳು ಬಗೆಗಿನ ನಿಮ್ಮ ಅಭಿಪ್ರಾಯ ತಿಳಿಸಿ