ತೂಗುದೀಪ ಶ್ರೀನಿವಾಸ್ ಅವರ ಮನೆಯ ಹೆಸರು ಕೇಳಿದರೆ ಅಚ್ಚರಿಯಾಗ್ತಿರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದೊಡನೆ ಕಣ್ಣ ಮುಂದೆ ಬರುವುದು ಆ ಆರಡಿಗಿಂತಲೂ ಎತ್ತರವಾದ ಅಜಾನುಬಾಹು ವ್ಯಕ್ತಿ. ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟರಲ್ಲೊಬ್ಬರಾಗಿರುವ ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಡಾ. ರಾಜಕುಮಾರ್ ಅವರ ಸಮಕಾಲಿನ ನಟರಾಗಿದ್ದರು. ಇವರ ಜೀವನದ ಬಗ್ಗೆ ಒಂದು ಸಣ್ಣ ಸ್ಟೋರಿ ನೋಡೋಣ ಬನ್ನಿ…

ಕರ್ನಾಟಕದ ಸುಂದರ ನಗರಿ ಮೈಸೂರಿನಲ್ಲಿ 1943 ರಲ್ಲಿ ಜನಿಸಿದ ಶ್ರೀನಿವಾಸ್ ಅವರು ತಮ್ಮ ನಟನೆಯಿಂದಲೇ ತೂಗುದೀಪ ಎಂಬ ಬಿರುದನ್ನೂ ಪಡೆದು ತೂಗುದೀಪ ಶ್ರೀನಿವಾಸ್ ಆದರು. ಇವರು ಬಿ. ಎಸ್ಸಿ ಓದುತ್ತಿರುವಾಗಲೇ ನಾಟಕಗಳ ಕಡೆಗೆ ಒಲವು ತೋರಿ ತಮ್ಮ ಶಿಕ್ಷಣವನ್ನು ಸಹ ಅರ್ಧಕ್ಕೆ ಬಿಟ್ಟು ಬಿಟ್ಟರು.

ಶ್ರೀನಿವಾಸ್ ಅವರಿಗೆ ತಮ್ಮ ಹುಟ್ಟೂರಾದ ಮೈಸೂರಿನಲ್ಲಿ ಒಂದು ಕನಸಿನ ಮನೆ ಕಟ್ಟುವ ಆಸೆ ಇತ್ತು, ಅದರಂತೆಯೇ ಮನೆ ಕಟ್ಟಲು ಆರಂಭಿಸಿದ ತೂಗುದೀಪ ಶ್ರೀನಿವಾಸ್ ಅವರ  ಮನೆ ಹಣಕಾಸಿನ ಸಮಸ್ಯೆ ಎದುರಾಗಿ ಅರ್ಧಕ್ಕೆ ನಿಂತಿತ್ತು. ಅಂದಿನ ದಿನಗಳಲ್ಲಿ ಚಿತ್ರ ನಟರಿಗೆ ಅಷ್ಟೇನೂ ಆದಾಯ ಇರಲಿಲ್ಲ ಎಂಬುದು ಮುಖ್ಯ ಕಾರಣವಾಗಿತ್ತು, ಅದರಲ್ಲೂ ಇವರು ಖಳ ನಟನ ಪಾತ್ರವನ್ನೇ ನಿಭಾಯಿಸುತ್ತಿದ್ದರಿಂದ ಸಂಭಾವನೆ ಅಷ್ಟಕ್ಕಷ್ಟೇ.

ಇಂತಹ ಪರಿಸ್ಥಿತಿಯಲ್ಲಿ ಇವರಿಗೆ ಸಹಾಯವಾಗಿ ನಿಂತವರು ಡಾ. ರಾಜಕುಮಾರ್ ಅವರು, ಅದು ಹೇಗೆ ಅಂತೀರಾ? ಡಾ. ರಾಜಕುಮಾರ್ ಹಾಗೂ ಶ್ರೀನಿವಾಸ್ ಅವರು ಬಹಳ ಆತ್ಮೀಯ ಸ್ನೇಹಿತರಾಗಿದ್ದರು, ಅದೆಷ್ಟರ ಮಟ್ಟಿಗೆ ಇವರ ಸ್ನೇಹ ಇತ್ತೆಂದರೆ, ರಾಜಕುಮಾರ ನಟಿಸುವ ಎಲ್ಲಾ ಚಿತ್ರಗಳಲ್ಲೂ ಶ್ರೀನಿವಾಸ್ ಅವರು ಇರುವಂತೆ ನೋಡಿಕೊಳ್ಳುತ್ತಿದರು.

ಇದೆ ಸ್ನೇಹದ ಮೇಲೆಯೇ ಶ್ರೀನಿವಾಸ್ ಅವರ ಮನೆ ಪೂರ್ತಿಗೊಳಿಸಲು ರಾಜಕುಮಾರ ಅವರು ಹಣದ ಸಹಾಯ ಕೂಡ ಮಾಡಿದರು, ಅವರ ಸಹಾಯದಿಂದಲೇ ಮನೆ ಪೂರ್ಣಗೊಂಡ ಮೇಲೆ ಆ ಮನೆಗೆ ಮುಪಾ ನಿಲಯ ಎಂದು ಹೆಸರು ಇಟ್ಟು ಡಾ. ರಾಜಕುಮಾರ ಅವರ ಮೇಲೆ ತಮ್ಮ ಪ್ರೀತಿಯನ್ನು ತೋರಿಸಿದರು ಶ್ರೀನಿವಾಸ್. ಮು.ಪಾ ಎಂದರೆ ಮುತ್ತುರಾಜ್ ಪಾರ್ವತಮ್ಮ ಎಂದು ಅರ್ಥ!

ಅಂದಿನ ಕಾಲದಲ್ಲಿ ಇವರ ಬಳಿ ಒಂದು ಲೂನಾ ಇತ್ತು ಅದರ ಮೇಲೆಯೇ ನಟ ಶ್ರೀನಿವಾಸ್ ಅವರು ತಮ್ಮೆಲ್ಲ ಸ್ನೇಹಿತರನ್ನ ಭೇಟಿಯಾಗಲು ಹಾಗೂ ಇತರೆ ಕೆಲಸಕ್ಕೆ ಹೋಗುತ್ತಿದ್ದರು. ನಟ ದರ್ಶನ್ ಸೇರಿದಂತೆ ಮೂರು ಜನ ಮಕ್ಕಳೊಂದಿಗೆ ಸುಂದರವಾಗಿ ಸಂಸಾರ ಸಾಗುತ್ತಿದ್ದಾಗ ಕಿಡ್ನಿ ವೈಫಲ್ಯದಿಂದ ಶ್ರೀನಿವಾಸ್ ಅವರು ಇಹಲೋಕ ತ್ಯಜಿಸಿದರು.

-ಮಂಜುನಾಥ್