Viral Video: ಮರದ ಬೊಡ್ಡೆಯೊಳಗೆ ಹೊತ್ತಿ ಉರಿಯುತ್ತಿರುವ ಬೆಂಕಿ ನರಕದ ದ್ವಾರದ ತರ ಭಾಸವಾಗುತ್ತಿದೆ!
ನಮ್ಮಲ್ಲಿ ಅನೇಕ ನಂಬಿಕೆಗಳು ಇರುವುದು ನಮಗೂ, ನಿಮಗೂ ಕೂಡಾ ತಿಳಿದಂತಹ ವಿಚಾರಗಳೇ. ಈ ನಂಬಿಕೆಗಳಲ್ಲಿ ಒಂದು, ಮನುಷ್ಯ ಸತ್ತ ನಂತರ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಇಲ್ಲವಾದರೆ ಮೋಕ್ಷ ಸಿಗದೆ ಅಂತರ್ ಪಿಶಾಚಿಯಾಗಿ ಅಲೆಯುತ್ತಾನೆ ಎಂದು. ಅಂದರೆ ಬದುಕಿದ್ದಾಗ ಪುಣ್ಯ ಕೆಲಸಗಳನ್ನು ಮಾಡಿದವರಿಗೆ ಸ್ವರ್ಗ, ಪಾಪ ಕೃತ್ಯಗಳನ್ನು ಎಸಗಿದವರಿಗೆ ನರಕ ಹಾಗೂ ಅಲ್ಲಿ ಘನಘೋರವಾದ ಶಿಕ್ಷೆಗಳನ್ನು ಕೂಡ ಪಾಪಿಗಳು ಅನುಭವಿಸಬೇಕು ಎನ್ನಲಾಗಿದೆ. ನರಕದ ದಂಡನೆಗಳ ಬಗ್ಗೆ ಕೇಳಿದರೇನೇ ಮೈ ನಡುಕು ಹುಟ್ಟುವಂತಾಗುವುದು ಕೂಡಾ ಸಹಜವೇ. ಆದರೆ ಸ್ವರ್ಗ ಮತ್ತು ನರಕ ಎಂಬುದನ್ನು ನೋಡಿದವರಾರೂ ಇಲ್ಲ, ಅದೆಲ್ಲಾ ನಾವು ಕಥೆ ಹಾಗೂ ಸಿನಿಮಾಗಳಲ್ಲಿ ನೋಡಿರುವುದು ಅಷ್ಟೇ.
ಸ್ವರ್ಗ ಎಂದ ಕೂಡಲೇ ಸೌಂದರ್ಯವೇ ತುಂಬಿದ ಲೋಕ, ನೋವು, ದುಃಖ ಹತ್ತಿರ ಕೂಡಾ ಸುಳಿಯದ ಲೋಕ, ಅಪ್ಸರೆಯರು, ಗಾನ ಗಂಧರ್ವರು ತುಂಬಿರುವ, ಅಷ್ಟೈಶ್ವರ್ಯಗಳು, ಸುಖದ ಎಲ್ಲಾ ಸವಲತ್ತುಗಳು ತುಂಬಿರುವ ಲೋಕ ನೆನಪಾಗುತ್ತದೆ. ಇನ್ನು ನರಕ ಎಂದರೆ ನಮ್ಮ ಕಣ್ಣಿಗೆ ರಕ್ತದ ನದಿ, ಯಮಲೋಕ, ಪಾಪಿಗಳಿಗೆ ಶಿಕ್ಷೆ ನೀಡುವ ಯಮಧರ್ಮರಾಯ, ಪಾಪಿಗಳಿಗೆ ಶಿಕ್ಷೆ ನೀಡುವ ಯಮದೂತರು, ಶಿಕ್ಷೆ ಅನುಭವಿಸುತ್ತಾ ನೋವು, ವೇದನೆಯಿಂದ ಆರ್ತನಾದ ಮಾಡುತ್ತಿರುವ ಪಾಪಿಗಳ ಚೀರಾಟ, ಉರಿಯುತ್ತಿರುವ ಜ್ವಾಲೆಗಳು ಕಣ್ಣಮುಂದೆ ಬರುತ್ತವೆ. ಇದೆಲ್ಲಾ ನಾವು ನೋಡಿರುವ ಚಿತ್ರ, ಸಿನಿಮಾಗಳು ಹಾಗೂ ಕೇಳಿರುವ ವರ್ಣನೆಯ ಪರಿಣಾಮ.
ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದು ವೀಡಿಯೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅದರಲ್ಲಿ ನರಕ ದ್ವಾರದಂತೆ ಕಾಣುವ ದೃಶ್ಯವೊಂದು ಬಹಳ ಕುತೂಹಲವನ್ನು ಕೆರಳಿಸುವಂತೆ ಇದೆ. ನೇಚರ್ ಅಂಡ್ ಅನಿಮಲ್ಸ್ ಎನ್ನುವ ಟ್ವಿಟರ್ ಬಳಕೆದಾರರು ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮರವೊಂದರ ಬೊಡ್ಡೆಯೊಳಗೆ ಬೆಂಕಿಯು ಹೊತ್ತುಕೊಂಡು ಉರಿದಿದೆ. ಅದನ್ನು ನೋಡಿದರೆ ಅದು ಕೆಂಪಗೆ ಕಾಣುತ್ತಿದ್ದು, ಒಂದು ಕ್ಷಣ ಅದು ನಮಗೆ ನಾವು ಸಿನಿಮಾಗಳಲ್ಲಿ ನೋಡಿರುವ ನರಕ ದ್ವಾರವನ್ನು ದರ್ಶನ ಮಾಡಿಸುತ್ತಿದೆಯೇನೋ ಎನ್ನುವಂತೆ ಕಾಣುತ್ತಿದೆ. ಮರದೊಳಗಿನ ಬೆಂಕಿ, ನರಕದ ಪ್ರವೇಶ ದ್ವಾರವಾಗಿ ಕಂಡಿದೆ.
Fire burning INSIDE of a tree looks like a portal straight to hell 🔥😱 pic.twitter.com/c9CHtsmR2o
— Nature & Animals 🌴 (@AnimalsWorId) August 19, 2020
ವೀಡಿಯೋ ಹಂಚಿಕೊಂಡು ಅದಕ್ಕೆ ಮರದ ಒಳಗೆ ಬೆಂಕಿ ಸುಡುವಿಕೆಯು ನರಕಕ್ಕೆ ನೇರವಾಗಿ ದ್ವಾರವನ್ನು ತೆರೆದಂತೆ ಕಾಣುತ್ತಿದೆ ಎಂದು ಶೀರ್ಷಿಕೆಯನ್ನು ಕೂಡಾ ಹಾಕಿದ್ದಾರೆ. ಈ ವೀಡಿಯೋವನ್ನು ಆಗಸ್ಟ್ 20 ರಂದು ಶೇರ್ ಮಾಡಲಾಗಿದ್ದು, ಈಗಾಗಲೇ ಇದನ್ನು 26 ಸಾವಿರಕ್ಕೂ ಮೀರಿದ ಜನರು ವೀಕ್ಷಣೆ ಮಾಡಿದ್ದು, ಒಂದು ಸಾವಿರಕ್ಕೂ ಅಧಿಕ ಲೈಕ್ ಗಳು ನೂರಾರು ರೀಟ್ವೀಟ್ ಗಳು ಕೂಡಾ ಆಗಿವೆ. ಇದನ್ನು ನೋಡಿದ ಟ್ವಿಟರ್ ಬಳಕೆದಾರರೊಬ್ಬರು, “ದುರಂತ ಈ ಮರವು ನಾವೂ ಸಹ ಶಾಖವನ್ನು ಅನುಭವಿಸಬೇಕು.” ಎಂದು ಮರುಕ ಪಟ್ಟಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ ಅಳಿಲುಗಳು ಧೂಮಪಾನ ಮಾಡಿದ್ದರ ಪರಿಣಾಮ ಎಂದಿದ್ದಾರೆ.
ಹಲವು ರೀತಿಯ ಪ್ರತಿಕ್ರಿಯೆಗಳು ಹರಿದು ಬರುತ್ತಿದ್ದು ಒಬ್ಬರಂತೂ ಬಹುಶಃ ಇದೇ ಇರಬೇಕು ಟ್ರಂಪ್ ಜನ್ಮಸ್ಥಳ ಎಂದು ಹಾಸ್ಯ ಮಾಡಿದ್ದಾರೆ. ಕೆಲವರು ಬೆಂಕಿ ಏನೋ ಸರಿ, ಆದರೆ ಹೊಗೆ ಎಲ್ಲಿ? ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ ನೋಡಲು ಆಸಕ್ತಿದಾಯಕವಾದ ವೀಡಿಯೋ ಮಾತ್ರ ಭರ್ಜರಿಯಾಗಿ ವೈರಲ್ ಆಗುತ್ತಿದೆ.