Viral Video: ಮಿಂಚಿನವೇಗ ಎಂದರೆ ಇದೇನಾ? ಕೈಯಲ್ಲಿದ್ದ ಆಹಾರವನ್ನು ಕಸಿದು ಕ್ಷಣ ಮಾತ್ರ ದಲ್ಲೇ ಕಣ್ಮರೆಯಾಯಿತು ಹಕ್ಕಿ!

ಪಕ್ಷಿಗಳು ಆಕಾಶದಲ್ಲಿ ಹಾರುವಾಗಲೇ ಭೂಮಿಯ ಮೇಲೆ ಎಲ್ಲಿ ಆಹಾರವಿದೆ, ತಮಗೆ ತಿನ್ನಲು ಏನು ಸಿಗಬಹುದು ಎನ್ನುವುದನ್ನು ನೋಡಿರುತ್ತವೆ. ಅವುಗಳ ದೃಷ್ಟಿ ಕೂಡಾ ಬಹಳ ಚುರುಕಾಗಿರುತ್ತದೆ. ಹಾರಿ ಬಂದು ನೆಲದ ಮೇಲೆ ಇರುವ ಹುಳುವನ್ನೋ, ಆಹಾರವನ್ನೋ ಎತ್ತಿಕೊಂಡು ಹಾರಿ ಹೋಗುವ ದೃಶ್ಯಗಳನ್ನು ನಾವು ಕೂಡಾ ನೋಡಿಯೇ ಇದ್ದೇವೆ. ಸಾಮಾನ್ಯವಾಗಿ ಇವೆಲ್ಲಾ ಅನಿರೀಕ್ಷಿತವಾಗಿ ನಡೆಯುವ ಘಟನೆಗಳು. ಆದರೆ ಹಕ್ಕಿ ಬಂದು ಆಹಾರವನ್ನು ಹೆಕ್ಕಿ ಹಾರಿ ಹೋಗುವುದನ್ನು ನಾವು ನೋಡಲು ಸಾಧ್ಯವಾಗುತ್ತದೆ. ಆಗ ನಾವೇ ಅದರ ಸಾಮರ್ಥ್ಯವನ್ನು ಹೊಗಳುವುದು ಕೂಡಾ ಉಂಟು, ಒಂದು ವೇಳೆ ಅಗತ್ಯ ವಸ್ತುವನ್ನು ಎತ್ತಿಕೊಂಡು ಹೋದರೆ ಬೈದು ಕೊಳ್ಳುವುದು ಕೂಡಾ ಉಂಟು.

ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೊವನ್ನು ಶೇರ್ ಮಾಡಿದ ಎರಡೇ ದಿನಗಳ ಅವಧಿಯಲ್ಲಿ ಒಂದು ಲಕ್ಷ, ಹದಿನೆಂಟು ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ, ಸಾವಿರದ ಐನೂರಕ್ಕಿಂತ ಅಧಿಕ ಮಂದಿ ಇಷ್ಟ ಪಟ್ಟಿದ್ದು ನೂರಾರು ಜನರು ವೀಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಈ ವೀಡಿಯೋದಲ್ಲಿನ ವಿಶೇಷ ಏನಂತೀರಾ ಇದರಲ್ಲಿ ಒಂದು ಹಕ್ಕಿ ಹಾರುತ್ತಾ ಬಂದು ತನ್ನ ಆಹಾರವನ್ನು ಹೆಕ್ಕಿಕೊಂಡು ಹೋಗುತ್ತದೆ. ಆದರೆ ವಿಚಿತ್ರ, ವಿಸ್ಮಯ ಅಥವಾ ವಿಶೇಷ ಏನೆಂದರೆ ಆ ಹಕ್ಕಿ ಕಣ್ಣಿಗೆ ಕಾಣುವುದೇ ಇಲ್ಲ.

ಇದು ನಿಜಕ್ಕೂ ಕೂಡಾ ಒಂದು ವಿಸ್ಮಯ ಅನಿಸದೇ ಇರಲ್ಲ. ವೀಡಿಯೋದಲ್ಲಿ ನಾವು ನೋಡಿದಾಗ ಅರಣ್ಯವೊಂದರಲ್ಲಿ ವ್ಯಕ್ತಿಯೊಬ್ಬರು, ಬೆಂಕಿ ಹೊತ್ತಿಸಿ, ಅದರ ಮೇಲೆ ಹೆಂಚನ್ನು ಇಟ್ಟು ತಿನ್ನುವುದಕ್ಕಾಗಿ ಯಾವುದೋ ಆಹಾರ ಪದಾರ್ಥವನ್ನು ಇಟ್ಟು ಅದನ್ನು ಸುಡುತ್ತಿರುವುದನ್ನು ನಾವು ನೋಡಬಹುದು. ಆ ವ್ಯಕ್ತಿ ಒಂದು ತುಂಡು ಆಹಾರ ಪದಾರ್ಥವನ್ನು (ಸ್ನಾಕ್) ಎತ್ತಿಕೊಂಡು, ಇನ್ನೊಂದು ಕೈಯಲ್ಲಿ ಪಾನೀಯದ ಬಾಟಲಿ ಹಿಡಿದು ಏನನ್ನೋ ಹೇಳುವುದಕ್ಕಾಗಿ ವೀಡಿಯೋ ಮಾಡುತ್ತಿರುವವರ ಕಡೆ ನೋಡುತ್ತಾ ಇರುವಾಗಲೇ ನಡೆಯುತ್ತದೆ ಒಂದು ಅನಿರೀಕ್ಷಿತ ಎನಿಸುವ ವಿಸ್ಮಯ‌.

ಅವರು ಕೈಯಲ್ಲಿ ಸ್ನಾಕ್ ಹಿಡಿದಿರುವುದನ್ನು ನೋಡಿದ ಸುತ್ತ ಮುತ್ತಲಿನ ಯಾವುದೋ ಮರದಲ್ಲಿ ಅಡಗಿದ್ದ ಹಕ್ಕಿಯೊಂದು ಎಷ್ಟು ರಭಸವಾಗಿ ಬಂದು ಆ ಆಹಾರದ ತುಣುಕನ್ನು ಕಸಿದುಕೊಂಡು ಹಾರಿ ಹೋಗುತ್ತದೆ ಎಂದರೆ ಆ ಹಕ್ಕಿ ಅವರ ಕಣ್ಣಿಗೆ ಕಾಣದಷ್ಟು ವೇಗವಾಗಿ ಹಾರಿ ಹೋಗುತ್ತದೆ. ಕೈಯಲ್ಲಿ ಸ್ನಾಕ್ ಹಿಡಿದಿದ್ದ ವ್ಯಕ್ತಿ ಕೂಡಾ ಒಂದು ಕ್ಷಣ ಬ್ಲಾಂಕ್ ಆಗಿ ಬಿಡುತ್ತಾರೆ. ಅನಂತರ ಅವರ ಸುತ್ತ ಮುತ್ತ ನೋಡಿದರೂ ಕೂಡಾ ಆ ಹಕ್ಕಿಯ ಜಾಡು ಕೂಡಾ ಕಾಣಿಸುವುದಿಲ್ಲ. ಕ್ಷಣ ಮಾತ್ರದಲ್ಲಿ ವಾಯುವೇಗದಲ್ಲಿ ಹಾರಿ ಬಂದ ಹಕ್ಕಿ ಮಾಡಿದ ಕೆಲಸ ನಿಜಕ್ಕೂ ನೋಡುಗರಿಗೂ ವಿಸ್ಮಯ ಎನಿಸುವಂತೆ ಇದೆ.

ವಿಡಿಯೋ ನೋಡಿ

ವೀಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಅದು ಕೂಕ ಬುರ್ರಾ ಎನ್ನುವ ಹಕ್ಕಿ ಎಂದು ಕಾಮೆಂಟ್ ಮಾಡಿದ್ದರೆ, ಒಬ್ಬರು ವೀಡಿಯೋವನ್ನು ಸ್ಲೋ ಮೋಷನ್ ಮಾಡಿ, ಹಕ್ಕಿ ಸ್ನಾಕ್ ಕಚ್ಚಿ ಹೋಗುವ ದೃಶ್ಯದ ಫೋಟೋ ಹಾಕಿದ್ದಾರೆ. ಮಿಂಚಿನಂತೆ ಬಂದ ಆ ಪಕ್ಷಿ ಕೂಕಬುರ್ರಾ ನನಗೂ ಇಂತಹ ಅನುಭವ ಆಗಿದೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಪರವಾಗಿಲ್ಲ ಆ ವ್ಯಕ್ತಿಯ ಇನ್ನೊಂದು ಕೈಲಿದ್ದ ಬಿಯರ್ ಬಾಟಲನ್ನು ಅದು ಎತ್ತಿಕೊಂಡು ಹಾರಲಿಲ್ಲ ಎಂದು ಹಾಸ್ಯ ಚಟಾಕಿಯನ್ನು ಕೂಡಾ ಹಾರಿಸಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.