ಅರ್ಧ ಬಳಸಿ ಬಿಟ್ಟ ಸಾಬೂನುಗಳನ್ನು ಹೋಟೆಲ್ ನವರು ಏನು ಮಾಡುತ್ತಾರೆ ಗೊತ್ತಾ? ನಿಜಕ್ಕೂ ಅಚ್ಚರಿ ಪಡುವಿರಿ!

ಒಂದು ನಗರದಿಂದ ಇನ್ನೊಂದು ನಗರ ಅಥವಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಜನರು ಸಂಚಾರ ಮಾಡುವುದು ಸಹಜ. ಅನೇಕರು ಅನೇಕ ಉದ್ದೇಶಗಳಿಂದ ಪ್ರಯಾಣವನ್ನು ಮಾಡಲೇಬೇಕಾದರ ಅಗತ್ಯ ಅಥವಾ ಅನಿವಾರ್ಯತೆ ಇರುತ್ತದೆ. ಕೆಲವು ಸಲ ಸುತ್ತಾಡಿ ಬರಲು, ಪ್ರವಾಸಕ್ಕಾಗಿ, ವ್ಯವಹಾರದ ಸಲುವಾಗಿ ಅಥವಾ ಉದ್ಯೋಗದ ಸಲುವಾಗಿ ಹೊಸ ಹೊಸ ಸ್ಥಳಗಳಿಗೆ ಹೋಗಬೇಕಾಗಿ ಬರಬಹುದು. ಹೀಗೆ ಹೋದಂತಹ ಸಂದರ್ಭದಲ್ಲಿ ಅಲ್ಲಿ ನೆಂಟರು, ಸ್ನೇಹಿತರು ಇಲ್ಲದೇ ಇದ್ದರೆ, ಅಥವಾ ಪ್ರೈವೆಸಿ ಬೇಕು ಎನ್ನುವವರು ಸಹಜವಾಗಿಯೇ ಅಲ್ಲಿನ ಹೊಟೇಲ್ ಗಳಲ್ಲಿ ರೂಂ ಅನ್ನು ಬಾಡಿಗೆಗೆ ಪಡೆದು ಇರಬೇಕಾದಷ್ಟು ದಿನ ಅಲ್ಲೇ ಉಳಿದು ಕೊಳ್ಳುತ್ತಾರೆ. ಈ ಹೋಟೆಲ್ ಗಳು ಕೂಡಾ ತಮ್ಮ ಅತಿಥಿಗಳಿಗೆ ವಿವಿಧ ರೀತಿಯ ಸವಲತ್ತುಗಳನ್ನು ನೀಡುತ್ತದೆ.

ಸಾಮಾನ್ಯವಾಗಿ ಹೊಟೇಲ್ ಗಳಲ್ಲಿ ನಿತ್ಯ ಕೂಡಾ ಸ್ವಚ್ಚತೆಯನ್ನು ಗಮನದಲ್ಲಿರಿಸಿಕೊಂಡು, ಗ್ರಾಹಕರಿಗೆ ಹ್ಯಾಂಡ್ ವಾಷ್, ಬಾತ್ ಸೋಪ್ ಗಳನ್ನು ಪೂರೈಕೆ ಮಾಡುತ್ತವೆ. ಆದರೆ ಹೊಟೇಲ್ ನಲ್ಲಿ ಉಳಿದುಕೊಂಡವರು ಒಂದು ಅಥವಾ ಎರಡೇ ದಿನಗಳಲ್ಲಿ ರೂಂ ಚೆಕ್ ಔಟ್ ಮಾಡಿದರೆ ಅವರಿಗೆ ನೀಡಿದ್ದ ಹ್ಯಾಂಡ್ ವಾಷ್, ಸಾಬೂನು ಹಾಗೂ ಶ್ಯಾಂಪುಗಳು ಏನಾಗುತ್ತವೆ? ಇವುಗಳನ್ನು ಎಸೆಯಲಾಗುತ್ತದೆಯೇ? ಎಂದು ಎಂದಾದರೂ ಯೋಚನೆ ಮಾಡಿದ್ದೀರಾ? ಇಲ್ಲವಾದರೆ ಈಗ ತಿಳಿಯೋಣ ಬನ್ನಿ. ಹೀಗೆ ಕೋಣೆಗಳಲ್ಲಿ ಉಳಿದ ಸೋಪು, ಶ್ಯಾಂಪು, ಹ್ಯಾಂಡ್ ವಾಶ್ ಗಳನ್ನು ಹೊಟೇಲ್ ನವರು ಏನು ಮಾಡುತ್ತಾರೆ ಎಂದು.‌

ಕೇವಲ ಯುಎಸ್ ಒಂದರಲ್ಲೇ ಒಟ್ಟು 4.6 ಹೊಟೇಲ್ ಕೋಣೆಗಳಿವೆ. ಇಲ್ಲಿ ಬಂದು ಕೆಲವು ದಿನಗಳಿಗೆ ಮಾತ್ರ ಉಳಿದುಕೊಳ್ಳುವ ಗ್ರಾಹಕರಿಗೆ ಹೊಟೇಲ್ ನೀಡುವ ಸಾಬೂನನ್ನು ಪೂರ್ತಿಯಾಗಿ ಬಳಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಹಾಗೆ ಉಳಿದ ಶ್ಯಾಂಪು, ಸಾಬೂನುಗಳನ್ನು ವ್ಯರ್ಥವಾಗದೇ ಇರಲು ಅವುಗಳನ್ನು ಮತ್ತೊಮ್ಮೆ ಬಳಕೆ ಮಾಡಲಾಗುತ್ತದೆ. ‌ಹೌದು ಕ್ಲೀನ್ ದ ಗ್ಲೋಬಲ್ ಎನ್ನುವ ಸಂಸ್ಥೆಯು ಈ ರೀತಿ ಸಾಬೂನು ಗಳು ವ್ಯರ್ಥವಾಗುವುದನ್ನು ನಿಯಂತ್ರಣ ಮಾಡಲು ಗ್ಲೋಬಲ್ ಸೋಪ್ ಪ್ರಾಜೆಕ್ಟ್ ಎನ್ನುವ ಕಾರ್ಯ ವಿಧಾನವನ್ನು ಅನುಸರಿಸುತ್ತಿದೆ.‌ ಈ ಸಂಸ್ಥೆಯು ಉಪಯೋಗಿಸಿ ಇನ್ನೂ ಉಳಿದಿರುವ ಸಾಬೂನನ್ನು ಹೊಸ ಸಾಬೂನಾಗಿ ಪರಿವರ್ತನೆ ಮಾಡುವ ಕಾರ್ಯವನ್ನು ಮಾಡುತ್ತದೆ.‌

ಹೀಗೆ ತಯಾರಿಸಿದ ಸಾಬೂನನ್ನು ಅಭಿವೃದ್ಧಿ ಶೀಲ ದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ. ಸಾಬೂನು ಹಾಳಾಗುವುದನ್ನು ತಪ್ಪಿಸಿ ಅವುಗಳ ಮರುಬಳಕೆಯನ್ನು ಈ ದೇಶಗಳಲ್ಲಿ ಮಾಡಲಾಗುತ್ತಿದೆ.
ಹೀಗೆ ಸಾಬೂನುಗಳನ್ನು ಮರುಬಳಕೆಗೆ ಸಿದ್ಧಪಡಿಸಲು ಬಹಳ ಹಣ ಖರ್ಚಾಗುತ್ತದೆ. ಮೊದಲಿಗೆ ಸಾಬೂನು, ಶ್ಯಾಂಪೂ, ಹ್ಯಾಂಡ್ ವಾಷ್ ಗಳನ್ನು ಕೀಟಾಣು ಮುಕ್ತಗೊಳಿಸಲಾಗುತ್ತದೆ. ನಂತರ ಅವುಗಳ ಶುದ್ಧತೆಯ ಪರೀಕ್ಷೆಯನ್ನು ಮಾಡಲಾಗುತ್ತದೆ. ಅನಂತರ ಅವುಗಳನ್ನು ಮರುಬಳಕೆಗೆ ಅನುಮತಿ ನೀಡಲಾಗುತ್ತದೆ. ವಿಶ್ವದ ಅನೇಕ ಕಡೆ ಇಂದಿಗೂ ಸ್ವಚ್ಚತೆಯ ಬಗ್ಗೆ ಅಷ್ಟಾಗಿ ಗಮನ ಹರಿಸದ ಅಥವಾ ಸಾಬೂನು ಇತ್ಯಾದಿಗಳ ಉಪಯೋಗ ಕಡಿಮೆ ಇರುವ ದೇಶಗಳಿಗೆ ಈ ಸಾಬೂನುಗಳನ್ನು ರವಾನೆ ಮಾಡಲಾಗುತ್ತದೆ.

ಎಲ್ಲಾ ದೇಶಗಳಲ್ಲಿ ಕೂಡಾ ಎಲ್ಲಾ ಹೊಟೇಲ್ ಗಳು ಹೀಗೆ ಮಾಡುತ್ತವೆ ಎಂದು ಹೇಳಲಾಗುವುದಿಲ್ಲ.‌ ಕೆಲವು ಕಡೆ ಹೊಟೇಲ್ ಗಳು ಇಂತಹ ಸಾಬೂನು, ಹ್ಯಾಂಡ್ ವಾಶ್, ಶ್ಯಾಂಪೂ ಇತ್ಯಾದಿಗಳನ್ನು ಸ್ಥಳೀಯವಾಗಿ ಬಡವರಿಗೆ, ನಿರ್ಗತಿಕರಿಗೆ, ಅನಾಥಾಶ್ರಮಗಳಿಗೆ ಹಂಚಿ ಬಿಡುತ್ತವೆ. ಆದರೆ ಕೆಲವು ಹೊಟೇಲ್ ಗಳು ದುರಾಸೆಯ ಕಾರಣದಿಂದ ಬಳಕೆಯಾದ ಸಾಬೂನುಗಳು, ಶ್ಯಾಂಪು ಹಾಗೂ ಹ್ಯಾಂಡ್ ವಾಶ್ ಗಳನ್ನು ಸಂಸ್ಕರಣ ಮಾಡದೇ ಮರು ಬಳಕೆಗೆ ಇಡುವುದೂ ಕೂಡಾ ನಡೆಯುತ್ತದೆ. ಇದರಿಂದ ಇಂತಹ ಹೊಟೇಲ್ ಗಳಲ್ಲಿ ಉಳಿದುಕೊಳ್ಳುವ ಗ್ರಾಹಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಕೂಡಾ ಇರುತ್ತದೆ.