ರಾತ್ರಿ ಊಟ ಬಿಟ್ರೆ ವೇಟ್ ಲಾಸ್ ಆಗುತ್ತೆ ಅಂತ ನೀವ್ ಅನ್ಕೊಂಡಿದ್ರೆ ಅದು ತಪ್ಪು? ಇದನ್ನು ಓದಿ…
ಇತ್ತಿತ್ತಲಾಗಿ ಬೊಜ್ಜು ಅಥವಾ ಅತಿಯಾದ ತೂಕ ರಾಷ್ಟ್ರೀಯ ಸಮಸ್ಯೆಯೇನೊ ಎಂಬಷ್ಟು ಗಂಭೀರವಾಗಿದೆ. ತೂಕ ಹೆಚ್ಚಳದ ಸಮಸ್ಯೆ ಹೆಚ್ಚಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೆ ಎಲ್ಲರಲ್ಲೂ ಈ ಬೊಜ್ಜಿನ ಸಮಸ್ಯೆ ಇದೆ. ಈ ಅನಾರೋಗ್ಯಕರ ಬೊಜ್ಜಿಗೆ ಮುಖ್ಯ ಕಾರಣ ನಮ್ಮ ಊಟದ ಪದ್ದತಿ. ಅದಕ್ಕೇ ಕೆಲವರು ಅಥವಾ ತುಂಬಾ ಜನ ಊಟವನ್ನೇ ಬಿಟ್ಟರೆ ತೂಕ ಇಳಿಯುತ್ತದೆ ಎಂದು ಭಾವಿಸಿ ಹಾಗೆ ಮಾಡುತ್ತಿದ್ದಾರೆ. ಅಂಥವರು ಇದನ್ನು ಓದಿ…
ಮೊಟ್ಟ ಮೊದಲಿಗೆ ಹೇಳಿಬಿಡುತ್ತೇನೆ : ಊಟ ಬಿಡುವುದು ಯಾವತ್ತೂ ಬೊಜ್ಜು ನಿವಾರಣೆಗೆ ಸರಿಯಾದ ಕ್ರಮ ಅಲ್ಲ. ಅದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತವೆಯೇ ಹೊರತು, ಪರಿಹಾರವಾಗುವುದಿಲ್ಲ. ಕೆಲವರು ತೂಕ ಇಳಿಕೆಗಾಗಿ ರಾತ್ರಿ ಊಟ ಮಾಡುವುದಿಲ್ಲ, ಇನ್ನು ಕೆಲವರು ಯಾವುದೊ ಒಂದು ಹಣ್ಣು ತಿಂದು ಮಲಗುತ್ತಾರೆ.
ಇನ್ನೊಂದಿಷ್ಟು ಜನ ಹಾಲಷ್ಟೆ ಕುಡಿದು ಮಲಗುತ್ತಾರೆ, ಮತ್ತೆ ಕೆಲವರು ಏನಾದರು ಕುರುಕುಲು ತಿಂಡಿ ತಿಂದು ಸಮಾದಾನ ಮಾಡಿಕೊಳ್ಳುತ್ತಾರೆ. ಇದು ಖಂಡಿತ ಬೊಜ್ಜು ನಿವಾರಣೆಗೆ ಅಥವಾ ತೂಕ ಇಳಿಕೆಗೆ ಸಹಕಾರಿಯಲ್ಲ. ಹಸಿವನ್ನು ಮುಂದೂಡಬಾರದು ಅಥವಾ ಅದನ್ನು ನಿರ್ಲಕ್ಷಿಸಬಾರದು ಮತ್ತು ಅತೃಪ್ತಿಗೊಳಿಸಬಾರದು.
ರಾತ್ರಿ ಊಟ ಬಿಡುವುದು ಅಥವಾ ಬೇರೇನೋ ತಿಂದು ಕುಡಿದು ಮಲಗುವುದರಿಂದ ಅನಾರೋಗ್ಯಕರ ಆರೋಗ್ಯ ಶೈಲಿ ಬೆಳೆಸಿಕೊಂಡ ಹಾಗಾಗುತ್ತದೆ. ಇದರಿಂದ ನಿದ್ರಾಹೀನತೆ ಉಂಟಾಗಿ ತೂಕ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ರಾತ್ರಿ ಊಟವನ್ನು ಬಿಡಬೇಡಿ, ಆ ಸಮಯದಲ್ಲಿ ಕುರುಕುಲು ತಿಂಡಿಯನ್ನಂತೂ ಯಾವ ಕಾರಣಕ್ಕೂ ಸೇವಿಸಬೇಡಿ. ಆರೋಗ್ಯಕರವಾದ ಬೋಜನ ಮಾಡಿಯೇ ಮಲಗಿ, ಅದಕ್ಕೊಂದಿಷ್ಟು ನಿಯಮಗಳಿವೆ, ಅವನ್ನು ಪಾಲಿಸಿ…

ಸರಿಯಾದ ಸಮಯ :
ರಾತ್ರಿ ಊಟಕ್ಕೆ ಸರಿಯಾದ ಸಮಯ ಬಹಳ ಮುಖ್ಯ. ಆಹಾರ ತಜ್ಞರ ಪ್ರಕಾರ, ಮಲಗುವ ಮೂರು ಗಂಟೆ ಮೊದಲು ಊಟ ಮಾಡುವುದು ಅತ್ಯಂತ ಅವಶ್ಯಕ. ತುಂಬಾ ಜನ ಊಟ ಮಾಡಿದ ತಕ್ಷಣ ಮಲಗುತ್ತಾರೆ. ಹೆಚ್ಚೆಂದರೆ ಅರ್ದ ಗಂಟೆ – ಒಂದು ಗಂಟೆ ನಂತರ ಮಲಗುತ್ತಾರೆ.
ಆದರೆ ಮಲಗುವ ಕನಿಷ್ಟ ಮೂರು ತಾಸು ಮೊದಲು ಊಟ ಮಾಡುವುದು ಆರೋಗ್ಯಕ್ಕೆ ಭಾರಿ ಒಳ್ಳೆಯದು. ಈ ನಿಯಮವನ್ನು ಅಳವಡಿಸಿಕೊಂಡರೆ ಆರೋಗ್ಯದ ವಿಷಯದಲ್ಲಿ ಹಲವು ರೀತಿ ನಿಮಗೆ ಸಹಕಾರಿಯಾಗಲಿದೆ. ಬೊಜ್ಜು ಇರುವವರು ಮಾತ್ರವಲ್ಲ, ಎಲ್ಲರೂ ಈ ನಿಯಮ ರೂಢಿಸಿಕೊಳ್ಳಬೇಕು.
ರಾತ್ರಿ ಊಟದಲ್ಲಿ ಏನಿರಬೇಕು?
ನಿಮ್ಮ ರಾತ್ರಿಯ ಭೋಜನದಲ್ಲಿ ಕಿಚಡಿಯನ್ನು ಅವಶ್ಯವಾಗಿ ಸೇರಿಸಿಕೊಳ್ಳಲೇಬೇಕು. ಇದರಲ್ಲಿ ಮಸಾಲೆ ಅಂಶ ಕಮ್ಮಿ ಇದ್ದು, ನಾರಿನಾಂಶ ಹೆಚ್ಚಿರುತ್ತದೆ. ಆದ್ದರಿಂದ ಇದು ಹೆಚ್ಚು ಸಮಯ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗೆಯೇ ಜೀರ್ಣಕ್ರಿಯೆ ಮತ್ತು ಬೆಳಗಿನ ಕ್ರಿಯೆಗೂ ಕೂಡ ಇದು ಅನುಕೂಲಕಾರಿ.
ಹೆಚ್ಚು ತಿನ್ನುವ ಬದಲು ಕಡಿಮೆ ಊಟ ಮಾಡಿ ಹಾಗೂ ಊಟದ ತಟ್ಟೆಯಲ್ಲಿ ಬಹಳಷ್ಟು ಸಲಾಡ್ ಇರಲಿ. ಇದು ನಿಮಗೆ ಪೂರ್ಣ ಶಕ್ತಿಯನ್ನು ನೀಡುತ್ತದೆ ಮತ್ತು ಕೊಬ್ಬು ಸಂಗ್ರಹವಾಗುವುದಿಲ್ಲ. ನೀವು ಟೊಮೆಟೊ, ಕ್ಯಾರೆಟ್, ಮೂಲಂಗಿ, ಬೀಟ್ ರೂಟ್ ಇತ್ಯಾದಿಗಳನ್ನು ಸಲಾಡ್ ನಲ್ಲಿ ತೆಗೆದುಕೊಳ್ಳಬಹುದು.

ರಾತ್ರಿಯಲ್ಲಿ ಪ್ರೋಟೀನ್ ಭರಿತ ದ್ವಿದಳ ಧಾನ್ಯಗಳನ್ನು ತಿನ್ನುವುದು ಒಳ್ಳೆಯದು.ಇದಕ್ಕಾಗಿ ದಾಲ್ ರೋಟಿ ತಿನ್ನಬಹುದು. ಬೇಳೆ – ರಾಗಿ ರೊಟ್ಟಿ ತಿನ್ನಿರಿ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಹೆಚ್ಚುವರಿ ಮಾಂಸವು ದೇಹದಲ್ಲಿ ಸಂಗ್ರಹವಾಗುವುದಿಲ್ಲ.
ಗ್ರೀನ್ ಟೀ :
ರಾತ್ರಿಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ದೇಹದ ಚಯಾಪಚಯ ಹೆಚ್ಚಾಗುತ್ತದೆ. ಇದರೊಂದಿಗೆ ನೀವು ಏನನ್ನು ಸೇವಿಸಿದರೂ ಅದು ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುವುದಿಲ್ಲ, ಇದರಿಂದಾಗಿ ತೂಕ ಹೆಚ್ಚಾಗುವುದಿಲ್ಲ. ತಿಂದ ನಂತರ, ನೀವು ನಿದ್ರೆಗೆ ಹೋಗುವ ಮೊದಲು ಗ್ರೀನ್ ಟೀ ಕುಡಿಯಿರಿ.
ಹಸಿರು ತರಕಾರಿ :
ಬೇರೆ ಸಮಸ್ಯೆ ಇಲ್ಲದವರು ಆದಷ್ಟು ಹಸಿರು ಮೆಣಸಿನಕಾಯಿಯನ್ನೇ ಬಳಸಿ. ಹಸಿರು ಮೆಣಸಿನಕಾಯಿ ತಿನ್ನುವ ಜನರು ಬೊಜ್ಜು ಹೊಂದುವ ಸಾಧ್ಯತೆ ಕಡಿಮೆ ಎಂಬುದಕ್ಕೆ ವೈಜ್ಞಾನಿಕ ಆಧಾರವೂ ಇದೆ. ಹಾಗೆಯೇ ಹಸಿರು ಸೊಪ್ಪು ತರಕಾರಿಗಳು ಆಹಾರ ಪಟ್ಟಿಯಲ್ಲಿ ಪ್ರಮುಖ ಭಾಗವಾಗಲಿ. ನೀವು ಅವುಗಳನ್ನು ನಿರಂತರವಾಗಿ ತಿನ್ನುತ್ತಿದ್ದರೆ ಬೊಜ್ಜು ದೇಹದಲ್ಲಿ ಸಂಗ್ರಹವಾಗುವುದಿಲ್ಲ.
ಈ ತರಕಾರಿಗಳು ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೊರಿಗಳಲ್ಲಿ ಬಹಳ ಕಡಿಮೆ, ಆದರೆ ಫೈಬರ್ನಲ್ಲಿ ಸಮೃದ್ಧವಾಗಿವೆ. ಅವುಗಳನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆ ಕೂಡ ತುಂಬಿರುತ್ತದೆ ಮತ್ತು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ. ಭೋಜನದಲ್ಲಿ ಮಸಾಲೆಯುಕ್ತ ತರಕಾರಿಗಳು, ಬೇಳೆ ಕಾಳು ಇತ್ಯಾದಿಗಳನ್ನು ಬಳಸಲು ಮರೆಯಬೇಡಿ.

ಊಟ – ತಿಂಡಿ ಬಿಡಬೇಡಿ :
ಈ ರೀತಿಯಾಗಿ ರಾತ್ರಿಯಲ್ಲಿ ಆಹಾರವನ್ನು ತೆಗೆದುಕೊಳ್ಳುವುದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇಂದಿನಿಂದ ಪ್ರತಿದಿನ ರಾತ್ರಿ ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ಆರೋಗ್ಯವಾಗಿರಿ. ತೂಕ ಇಳಿಸಲು ಊಟ ಬಿಡುವ ಬದಲು – ಜಿಮ್ ನಲ್ಲಿ ಬೆವರು ಹರಿಸುವು ಬದಲು ಆಹಾರ ಕ್ರಮ ಬದಲಿಸಿಕೊಳ್ಳುವುದು ಉತ್ತಮ.
ಯಾವ ಕಾರಣಕ್ಕೂ ಹೆಚ್ಚು ಮಸಾಲೆಯುಕ್ತ ಆಹಾರ ಬೇಡ, ಹೆಚ್ಚು ಎಣ್ಣೆ ಬಳಸಿದ ಆಹಾರ ಬೇಡ, ಅಧಿಕ ನಾನ್ ವೆಜ್ ಒಳ್ಳೆಯದಲ್ಲ, ಒಂದೇ ರೀತಿಯ ಆಹಾರ ಒಳ್ಳೆಯದಲ್ಲ. ಊಟದಲ್ಲಿ ಎಲ್ಲ ರೀತಿಯ ಆಹಾರ ಇರಲಿ. ಬೆಳಿಗ್ಗೆ ತಿಂಡಿ ಮಾಡುವುದು ಬಿಟ್ಟರೆ, ಮದ್ಯಾನ ಊಟ ಬಿಟ್ಟರೆ, ರಾತ್ರಿ ಊಟ ಬಿಟ್ಟರೆ ಬೊಜ್ಜು ಕಡಿಮೆಯಾಗುವದರ ಬದಲು ಇತರೆ ಸಮಸ್ಯೆ ಹೆಚ್ಚುತ್ತವೆ. ಒಳ್ಳೆಯ ಆಹಾರ ಪದ್ದತಿ ಅನುಸರಿಸಿ ಸಾಕು.
-Team Infotrend