ಐಪಿಎಲ್ 2021 ರ ಲೈನ್ ಕ್ಲಿಯರ್! : ಬಿಸಿಸಿಐನ ವಿನಂತಿಯ ಮೇರೆಗೆ ಸಿಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ

IPL 2021 : ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನ 14 ನೇ ಋತುವಿನ ಉಳಿದ ಪಂದ್ಯಗಳನ್ನು ಆಯೋಜಿಸುವಲ್ಲಿನ ದೊಡ್ಡ ಅಡಚಣೆಯನ್ನು ನಿವಾರಿಸಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕೋರಿಕೆಯ ಮೇರೆಗೆ, ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ವೇಳಾಪಟ್ಟಿಯನ್ನು ಬದಲಾಯಿಸಲು ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಒಪ್ಪಿದೆ. ಅಂದರೆ ಈಗ ಬಿಸಿಸಿಐ ಸೆಪ್ಟೆಂಬರ್ 19 ರಿಂದ ಐಪಿಎಲ್ 2021 ರ ಉಳಿದ ಪಂದ್ಯಗಳನ್ನು ಸುಲಭವಾಗಿ ಆಯೋಜಿಸಬಹುದು.

ಸಿಡಬ್ಲ್ಯುಐ ಬಿಸಿಸಿಐ ಮನವಿಯನ್ನು ಸ್ವೀಕರಿಸಿದೆ :
ವಿಶೇಷವೆಂದರೆ ಐಪಿಎಲ್ 2021 ರ ಉಳಿದ ಪಂದ್ಯಗಳನ್ನು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಯುಎಇಯಲ್ಲಿ ಆಡಲಾಗುವುದು ಎಂದು ಬಿಸಿಸಿಐ ಘೋಷಿಸಿದೆ. ಮಂಡಳಿಯು ಇನ್ನೂ ತನ್ನ ದಿನಾಂಕಗಳನ್ನು ಘೋಷಿಸದಿದ್ದರೂ, ಐಪಿಎಲ್ 2021 ರ ಉಳಿದ ಪಂದ್ಯಗಳು ಸೆಪ್ಟೆಂಬರ್ 19 ರಿಂದ ನಡೆಯಲಿದೆ ಎಂದು ಅನೇಕ ವರದಿಗಳು ಹೇಳಿಕೊಂಡಿವೆ. ಆದರೆ ಇದಕ್ಕಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ ನ ವೇಳಾಪಟ್ಟಿಯಲ್ಲಿ ಬದಲಾವಣೆ ಅಗತ್ಯವಾಗಿತ್ತು.

ಮುಂಬರುವ ಸಿಪಿಎಲ್ ಋತುವನ್ನು ಆಗಸ್ಟ್ 28 ರಿಂದ ಸೆಪ್ಟೆಂಬರ್ 19 ರವರೆಗೆ ನಿಗದಿಪಡಿಸಲಾಗಿದೆ. ಆದರೆ ಸೆಪ್ಟೆಂಬರ್ 19 ರ ಮೊದಲು ಕ್ರಿಕೆಟ್ ವೆಸ್ಟ್ ಇಂಡೀಸ್ ಸಿಪಿಎಲ್ ಅನ್ನು ಮುಕ್ತಾಯಗೊಳಿಸಬೇಕೆಂದು ಭಾರತೀಯ ಮಂಡಳಿ ಬಯಸಿತು ಮತ್ತು ಅದಕ್ಕಾಗಿಯೇ ಐಪಿಎಲ್ 2021 ರ ಉಳಿದ ಪಂದ್ಯಗಳ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಲಿಲ್ಲ.

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಅವರು ಸಿಪಿಎಲ್ ಸಿಇಒ ಪೀಟ್ ರಸ್ಸೆಲ್ ಅವರೊಂದಿಗೆ ಸಂವಾದ ನಡೆಸಿದರು, ನಂತರ ಅದರ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಈಗ ಸಿಪಿಎಲ್ ಮೂರು ದಿನಗಳ ಮೊದಲು ಪ್ರಾರಂಭವಾಗಲಿದ್ದು, ಐಪಿಎಲ್‌ ಗೂ ಮೊದಲು ಕೊನೆಗೊಳ್ಳಲಿದೆ.

ಕ್ರಿಕೆಟ್ ವೆಬ್‌ಸೈಟ್ ಕ್ರಿಕೆಟ್‌ ಬಜ್ ‌ನ ವರದಿಯ ಪ್ರಕಾರ, ಈಗ ಮುಂಬರುವ ಸಿಪಿಎಲ್ ಋತುವನ್ನು ಆಗಸ್ಟ್ 25 ರಿಂದ ಸೆಪ್ಟೆಂಬರ್ 15 ರವರೆಗೆ ಆಡಿಸಲಾಗುವುದು. ಸಿಪಿಎಲ್ ಕಾರಣದಿಂದಾಗಿ ಐಪಿಎಲ್ ಗೆ ಸಮಸ್ಯೆಯಾಗುವುದಕ್ಕೆ ನಾವು ಬಯಸುವುದಿಲ್ಲ ಎಂದು ರಿಕಿ ಸ್ಕೆರಿಟ್ ಹೇಳಿದ್ದಾರೆ.

ವೇಳಾಪಟ್ಟಿಯಲ್ಲಿನ ಬದಲಾವಣೆಗಳನ್ನು ದೃಢೀಕರಿಸಿದ ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷ ರಿಕಿ ಸ್ಕೆರಿಟ್ ಸಿಪಿಎಲ್ ಕಾರಣದಿಂದಾಗಿ ಐಪಿಎಲ್ ಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಯಾಗುವುದನ್ನು ವೆಸ್ಟ್ ಇಂಡೀಸ್ ಮಂಡಳಿ ಬಯಸುವುದಿಲ್ಲ ಎಂದು ಕ್ರಿಕ್ ಬಜ್ ಗೆ ತಿಳಿಸಿದರು. ಐಪಿಎಲ್ ಗೆ ಸಂಬಂಧಿಸಿದಂತೆ ಎಲ್ಲ ಸಹಾಯವನ್ನು ನೀಡಲು ಕ್ರಿಕೆಟ್ ವೆಸ್ಟ್ ಇಂಡೀಸ್ ಸಿದ್ಧವಾಗಿದೆ.