ಈ ಹೃದಯವಂತ ರಿಕ್ಷಾ ಮಾಲೀಕ! ತನ್ನ ಮದುವೆಗಾಗಿ ಕೂಡಿಟ್ಟ ಹಣವನ್ನು ಪ್ರತಿದಿನ ಕಾರ್ಮಿಕರ ಊಟಕ್ಕಾಗಿ ಖರ್ಚು ಮಾಡುತ್ತಿದ್ದಾನೆ!!

ಸಂಪೂರ್ಣ ಜಗತ್ತು ಇಂದು ಕೊರೊನ ವಿಷಾಣುವಿನಿಂದ ನಲುಗುತ್ತಿದೆ. ಇದಕ್ಕೆ ನಮ್ಮ ದೇಶವು ಹೊರತಾಗಿಲ್ಲ. ಅದರಲ್ಲೂ ಮಹಾರಾಷ್ಟ್ರದ ಮಹಾನಗರ ಮುಂಬಯಿ ಮತ್ತು ಪುಣೆ ಕೊರೊನ ಸೋಂಕಿತರ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿವೆ. ಇಂಥ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಹತೋಟಿಗೆ ತರುವದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಹೋರಾತ್ರಿ ಒಂದಾಗಿ ಹೋರಾಡುತ್ತಿವೆ. ಜೊತೆಗೆ ನಾಲ್ಕೇನೆಯ ಹಂತದ ಲಾಕ್ ಡೌನ್ ಸಹಿತ 31 ಮೇ ವರೆಗೆ ಹೆಚ್ಚಿಸಲಾಗಿದೆ. ಇದೇ ಸಂದರ್ಭದಲ್ಲಿ ಕಳೆದ ಕೆಲವು ದಿನಗಳಿಂದ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಹೋಗಲು ಸರಕಾರ ಅನುಮತಿ ಕೊಟ್ಟಿದೆ. ಜೊತೆಗೆ ಸಮಾಜದ ಬೇರೆ ಬೇರೆ ಸ್ತರಗಳಿಂದ ಬೇರೆ ಬೇರೆ ರೀತಿಯಾಗಿ ಈ ಕಾರ್ಮಿಕ ಜನರಿಗೆ ತೊಂದರೆಯಾಗದಂತೆ ಸಹಾಯ ಮಾಡುತ್ತಿದ್ದಾರೆ. ಇಂಥ ಜನರಲ್ಲೇ ಒಬ್ಬನಾದ ಪುಣೆಯ ರಿಕ್ಷಾ ಮಾಲೀಕ ಅಕ್ಷಯ್ ಕೊಠಾವಲೇ ಎನ್ನುವವನು ತನ್ನ ಮದುವೆಯ ವೆಚ್ಚಿಗೆ ಅಂತ ಕೂಡಿಟ್ಟ ಎರಡು ಲಕ್ಷ ರೂಪಾಯಿಗಳನ್ನು ಕಾರ್ಮಿಕರ ಊಟಕ್ಕಾಗಿ ವ್ಯಯ ಮಾಡುತ್ತಿದ್ದಾನೆ.

ಈ ಕಾರ್ಮಿಕರಿಗೆ ಸಹಾಯವನ್ನಷ್ಟೇ ಮಾಡುತ್ತಿಲ್ಲ, ಜೊತೆಗೆ ತನ್ನ ಪರಿಸರದಲ್ಲಿಯ ಹಿರಿಯ ನಾಗರಿಕರಿಗೆ, ಗರ್ಭವತಿ ಮಹಿಳೆಯರಿಗೆ ಆಸ್ಪತ್ರೆಯವರೆಗೆ ಉಚಿತವಾಗಿ ಮುಟ್ಟಿಸುವ ಕಾರ್ಯವನ್ನು ಸಹ ಮಾಡುತ್ತಿದ್ದಾನೆ. ತನ್ನದೇ ಲಗ್ನಕ್ಕಾಗಿ ಶೇಖರಿಸಿದ 2 ಲಕ್ಷ ₹ ಹಣವನ್ನು ತನ್ನ ಮಿತ್ರರ ಸಹಾಯದಿಂದ ಆಹಾರವನ್ನು ತಯಾರಿಸಿ ಹಂಚುತ್ತಿದ್ದಾನೆ. ಆಹಾರದ ಪೊಟ್ಟಣಗಳು ತಯಾರಾದ ನಂತರ ಆ ಬಾಕ್ಸ್ ಗಳನ್ನು ರಿಕ್ಷಾದಲ್ಲಿರಿಸಿಕೊಂಡು ಊರಿನ ಕಡೆಗೆ ಹೋಗುತ್ತಿರುವ ಕಾರ್ಮಿಕರಿಗೆ ಹಂಚಲು ಹೋಗುತ್ತಾನೆ. ಪ್ರತಿದಿನ 400 ಜನರ ಊಟದ ವ್ಯವಸ್ಥೆಯನ್ನು ಅಕ್ಷಯ್ ಮತ್ತು ಆತನ ಮಿತ್ರರು ಕೂಡಿಕೊಂಡು ಮಾಡುತ್ತಿದ್ದಾರೆ.

ನನಗೆ ಜನರಿಗೆ ಸಹಾಯ ಮಾಡಲು ಯಾವತ್ತೂ ಒಳ್ಳೆಯದೆನಿಸುತ್ತದೆ. ಇಂಥ ಸಂಕಷ್ಟದಲ್ಲಿಯಂತೂ ಸಹಾಯ ಮಾಡುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅಕ್ಷಯ್ ತಮ್ಮ ಮನಸಿನ ಮಾತು ಹೇಳಿದ್ದಾರೆ. ನಾನು ರಿಕ್ಷಾ ಓಡಿಸಿ ಬಂದ 2 ಲಕ್ಷ ₹ ಹಣವನ್ನು ನನ್ನ ಮದುವೆಗಾಗಿ ಜಮಾಯಿಸಿದ್ದೆ, ಬರುವ ಮೇ 25 ನೇ ದಿನಾಂಕದಂದು ಮದುವೆಯಾಗುವದಿತ್ತು, ಇಂಥ ಪರಿಸ್ಥಿತಿಯಲ್ಲಿ ನನಗೆ ಮತ್ತು ನನ್ನ ಹೆಂಡತಿಗೆ ಮದುವೆಯಾಗುವದು ಒಳ್ಳೆಯದೆನಿಸಲಿಲ್ಲ. ನಾವಿಬ್ಬರು ಚರ್ಚೆ ಮಾಡಿ ಮದುವೆಯನ್ನು ಮುಂದೂಡಿದೆವು. ಕಳೆದ ಕೆಲವು ದಿನಗಳಿಂದ ಕಾರ್ಮಿಕರು ತಮ್ಮ ತಮ್ಮ ಮನೆಗೆ ತೆರಳುವದನ್ನು ನೋಡುತ್ತಿದ್ದೆ, ಊಟವಿಲ್ಲದೆ ನಡೆದುಕೊಂಡೇ ಹೋಗುವದನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ನೋವಾಗಿ ಮಿತ್ರರೊಡಗೂಡಿ ಅವರ ಊಟದ ವ್ಯವಸ್ಥೆ ಮಾಡೋಣವೆಂದು ನಿರ್ಧರಿಸಿದೆ. ಇದರಲ್ಲಿ ನನ್ನ ಮಿತ್ರರೂ ಸಹಿತ ತಮ್ಮ ತಮ್ಮ ಕೈಲಾದಷ್ಟು ಸಹಾಯ ಮಾಡಿದರು ಎಂದು ಪಿಟಿಆಯ್ ವೃತ್ತಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಪುಣೆಯ ಸಂಗಮವಾಡಿ, ಎರವಡಾ, ರೇಲ್ವೆ ಸ್ಟೇಶನ್ ಪರಿಸರ, ಮಾಲಧಕ್ಕಾ ಸರ್ಕಲ್ ಹೀಗೆ ಮುಂತಾದ ಸ್ಥಳಗಳಲ್ಲಿ ರಿಕ್ಷಾ ಮುಖಾಂತರ ಅನ್ನವನ್ನು ಕಾರ್ಮಿಕರಿಗೆ ಮುಟ್ಟಿಸುವ ಕೆಲಸ ಅಕ್ಷಯ್ ಮತ್ತು ಅವರ ಮಿತ್ರ ಪರಿವಾರದವರು ಹಮ್ಮಿಕೊಂಡಿದ್ದಾರೆ. ಕೂಡಿಟ್ಟ ಹಣ ದಿನ ದಿನ ಕಡಿಮೆಯಾಗುತ್ತಾ ಬಂದಿದೆ, ಆ ಕಾರಣದಿಂದ ಚಪಾತಿ ಪಲ್ಲೆಯ ಬದಲಾಗಿ ಈಗ ಪುಲಾವ್ ಅಥವಾ ಅನ್ನ ಸಾರು ಕೊಡುವ ವಿಚಾರ ಮಾಡಿದ್ದಾರೆ. ಈ ಮೊದಲು ಕೊಲ್ಹಾಪುರ್ ಮತ್ತು ಸಾಂಗಲಿ ಜಿಲ್ಲೆಗಳಲ್ಲಿ ಮಹಾಪೂರ ಬಂದಾಗಲೂ ಅಕ್ಷಯ್ ಇದೆ ರೀತಿ ತಮ್ಮ ಸಹಾಯವನ್ನು ಮಾಡಿದ್ದರು.