ಜೋರು ಮಳೆಯಲ್ಲಿ ನೆನೆಯುತ್ತಿದ್ದ ಬೈಕ್ ಸವಾರ: ಜೆಸಿಬಿ ಚಾಲಕ ಮಾಡಿದ ಸಹಾಯ ಹೇಗಿತ್ತು? ನೋಡಿ ಈ Video
ರಸ್ತೆಯಲ್ಲಿ ಸಂಚರಿಸುವ ವೇಳೆಯಲ್ಲಿ ಮಳೆ ಏನಾದರೂ ಬಂದರೆ ಕೂಡಲೇ ರಸ್ತೆಯಲ್ಲಿ ಸಂಚರಿಸುತ್ತಿರುವ ಪಾದಾಚಾರಿಗಳು ಮಳೆಯಲ್ಲಿ ನೆನೆಯದಂತೆ ಒಂದು ಸುರಕ್ಷಿತ ಜಾಗವೆಲ್ಲಿದೆ ಎಂದು ಹುಡುಕುತ್ತಾರೆ. ಇದು ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಆಲೋಚನೆ ಮಾತ್ರವೇ ಅಲ್ಲದೇ ಬಹಳಷ್ಟು ಜನ ದ್ವಿಚಕ್ರ ವಾಹನಗಳ ಸವಾರರದ್ದೂ ಕೂಡಾ ಆಗಿರುತ್ತದೆ. ಅವರು ಸಹಾ ಮಳೆ ಬಂದ ಕೂಡಲೇ ಯಾವುದಾದರೂ ಸುರಕ್ಷಿತ ಸ್ಥಳ ಇದೆಯೇ?? ಮಳೆಗೆ ತಾವು ನೆನೆಯದಂತೆ ರಕ್ಷಣೆ ನೀಡುವ ಛಾವಣಿಯೊಂದು ಸಿಗಬಹುದೇ?? ಎಂದು ಕಣ್ಣನ್ನು ಹಾಯಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಹೀಗೆ ಬೈಕ್ ಮೇಲೆ ಸವಾರಿ ಹೊರಟ ಜನರು ಅಥವಾ ಬೈಕ್ ಸವಾರರು ಮಳೆ ಬಂದ ಕೂಡಲೇ ಯಾವುದಾದರೂ ಸೇತುವೆಯ ಕೆಳಗೋ ಅಥವಾ ಯಾವುದಾದರೂ ಒಂದು ಮರದ ಕೆಳಗೋ ಆಶ್ರಯವನ್ನು ಪಡೆದುಕೊಳ್ಳುತ್ತಾರೆ.
ಒಂದು ವೇಳೆ ಯಾವುದೇ ಆಶ್ರಯ ಸಿಗದೇ ಹೋದಾಗ, ಅಪರೂಪ ಎನ್ನುವಂತೆ ಕೆಲವು ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಸಹಾಯವನ್ನು ನೀಡಲು ಮುಂದೆ ಬರುತ್ತಾರೆ. ಇಂತಹುದೇ ಒಂದು ಆಲೋಚನೆಯುಳ್ಳ, ಒಂದು ಮನಸ್ಸಿಗೆ ಹಿತ ಎನಿಸುವ ಹಾಗೂ ಒಂದು ಮಾದರಿ ಎನಿಸುವ ಸುಂದರವಾದ ವಿಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ವೈರಲ್ ಆಗುತ್ತಾ ಸಾಗಿದೆ. ಈ ವಿಡಿಯೋದಲ್ಲಿ ಜೋರು ಮಳೆಯಲ್ಲಿ ನೆನೆಯುತ್ತಿದ್ದ ಬೈಕ್ ಸವಾರನೊಬ್ಬನಿಗೆ ಜೆಸಿಬಿ ಚಾಲಕನೊಬ್ಬರು ಮಳೆಯಿಂದ ರಕ್ಷಣೆ ಒದಗಿಸಿದ್ದಾರೆ. ಅವರು ಅದಕ್ಕಾಗಿ ಮಾಡಿದ ಆಲೋಚನೆಯ ದೃಶ್ಯದ ವೀಡಿಯೋ ಈಗ ವೈರಲ್ ಆಗಿದ್ದು, ಜೆಸಿಬಿ ಯ ಚಾಲಕನ ಆಲೋಚನೆ ಕಂಡು ನೆಟ್ಟಿಗರು ಬಹಳ ಖುಷಿ ಪಟ್ಟಿದ್ದಾರೆ.
ಈ ಸುಂದರವಾದ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಎನ್ನುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿಕೊಂಡಿರುವ ಅವರು ಅದರ ಶೀರ್ಷಿಕೆಯಲ್ಲಿ, ಅವಕಾಶ ದೊರೆತಾಗ ದಯಾವಂತ ರಾಗಿರಿ, ಅದು ಯಾವಾಗಲೂ ಸಾಧ್ಯವಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಸಹಸ್ರಾರು ಸಂಖ್ಯೆಯಲ್ಲಿ ನೆಟ್ಟಿಗರು ವೀಕ್ಷಣೆಯನ್ನು ಮಾಡಿದ್ದಾರೆ. ಒಂದೂವರೆ ಸಾವಿರಕ್ಕಿಂತ ಅಧಿಕ ಜನರು ಈ ವಿಡಿಯೋಗೆ ಲೈಕ್ ನೀಡಿದ್ದರೆ, ನೂರಾರು ಜನರು ರೀಟ್ವೀಟ್ ಮಾಡುವ ಮೂಲಕ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿನ ದೃಶ್ಯವನ್ನು ಗಮನಿಸಿದಾಗ ಮಳೆ ಜೋರಾಗಿ ಸುರಿಯುವ ಸಂದರ್ಭದಲ್ಲಿ ಹತ್ತಿರದಲ್ಲೆಲ್ಲೂ, ಯಾವುದೇ ಆಶ್ರಯ ದೊರೆಯದ ಕಾರಣ ಬೈಕ್ ಸವಾರನೊಬ್ಬ ರಸ್ತೆಬದಿಯಲ್ಲಿ ಮಳೆಯಲ್ಲಿ ನೆನೆಯುತ್ತಾ ತನ್ನ ಬೈಕ್ ನಲ್ಲಿ ನಿಂತಿರುತ್ತಾನೆ. ಅವನು ಕೆಂಪುಬಣ್ಣದ ರೈನ್ ಕೋಟ್ ಧರಿಸಿರುತ್ತಾನೆ. ರಸ್ತೆಯಲ್ಲಿ ಬಹಳಷ್ಟು ವಾಹನಗಳು ವೇಗವಾಗಿ ಸಂಚರಿಸುತ್ತಿರುತ್ತವೆ. ರಸ್ತೆಯ ಬದಿಯಲ್ಲಿ ನಿಂತಿರುವ ವ್ಯಕ್ತಿಯನ್ನು ಗಮನಿಸಿದ ಜೆಸಿಬಿ ಚಾಲಕನು, ತನ್ನ ಜೆಸಿಬಿಯ ಮಣ್ಣನ್ನು ಎತ್ತುವ ಸಾಧನವನ್ನು ಛತ್ರಿಯಂತೆ ಬಳಸುತ್ತಾ ಬೈಕ್ ಸವಾರನ ಮೇಲೆ ಹಿಡಿಯುತ್ತಾನೆ. ಬೈಕ್ ಸವಾರರನ್ನು ಮಳೆಯಲ್ಲಿ ನೆನೆಯುವುದನ್ನು ತಪ್ಪಿಸುತ್ತಾನೆ.
ವಿಡಿಯೋ ನೋಡಿ..
Be kind whenever possible. It is always possible.#Wednesdayvibe pic.twitter.com/8Xl3rO1jK3
— Awanish Sharan (@AwanishSharan) June 23, 2021
ಒಂದು ಸಣ್ಣ ಆಲೋಚನೆಯ ಮೂಲಕ ಅಪರಿಚಿತ ವ್ಯಕ್ತಿಗೆ ಸಹಾಯವನ್ನು ನೀಡಲು ಮುಂದಾದ ಆ ದೃಶ್ಯವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದವರು ಸೋಶಿಯಲ್ ಮೀಡಿಯಾದಲ್ಲಿ ಮಾಡಿಕೊಂಡಿದ್ದಾರೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಶೇರ್ ಮಾಡಿಕೊಂಡ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರೊಬ್ಬರು, “ಸಹಾಯವನ್ನು ಈ ರೀತಿ ಕೂಡ ಮಾಡಬಹುದು, ಆದರೆ ಸಹಾಯ ಮಾಡಬೇಕೆನ್ನುವ ಆಲೋಚನೆ ಬರಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಇದೊಂದು ಬಹಳ ಸ್ಫೂರ್ತಿದಾಯಕವಾದ ವಿಡಿಯೋ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಅದ್ಭುತ ಮತ್ತು ಅನುಕರಣೀಯ” ಎಂದು ಹೇಳಿದ್ದಾರೆ. ಒಟ್ಟಾರೆ ಚಾಲಕನ ಸಮಯ ಪ್ರಜ್ಞೆಗೆ, ಸಹಾಯ ಮಾಡುವ ಆಲೋಚನೆಗೆ ಭರ್ಜರಿಯಾಗಿ ಮೆಚ್ಚುಗೆಗಳು ಹರಿದುಬರುತ್ತಿದೆ.