ಹೈವೇ ನಿರ್ಮಾಣಕ್ಕೆ ಜಾಗ ನೀಡದ ಮಹಿಳೆ: ರಸ್ತೆಗಳ ನಡುವೆಯೇ ಬಂಧಿಯಾಗಿ ಹೋಯ್ತು ಆಕೆಯ ಮನೆ!

ರಾಷ್ಟ್ರೀಯ ಹೆದ್ದಾರಿಗಳು ಅಥವಾ ಅಣೆಕಟ್ಟುಗಳ ನಿರ್ಮಾಣ ಪ್ರಾರಂಭವಾದಾಗ ಬಹಳಷ್ಟು ಜನರು ತಮ್ಮ ಮನೆಗಳು ಹಾಗೂ ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಒಂದಿಷ್ಟು ಪರಿಹಾರ ಧನವನ್ನು ಘೋಷಣೆ ಮಾಡುತ್ತದೆಯಾದರೂ ಅದು ಜನರಿಗೆ ತಲುಪುವುದು ಮಾತ್ರ ಅಪರೂಪ. ಆದರೆ ಚೀನಾದ guangzhou ನಗರದಲ್ಲಿ ಮಾತ್ರ ಮಹಿಳೆಯೊಬ್ಬರು ರಸ್ತೆ ನಿರ್ಮಾಣ ಕಾರ್ಯವು ಆರಂಭವಾದಾಗ ಸರ್ಕಾರ ಆಕೆಯ ಮನೆಯನ್ನು ಬಿಟ್ಟುಬಿಡುವಂತೆ ಕೇಳಿದಾಗ, ಆಕೆ ತನ್ನ ಮನೆಯನ್ನು ಬಿಡಲು ಒಪ್ಪಿಗೆಯನ್ನು ನೀಡಲಿಲ್ಲ. ಚೀನಾದ ಈ ನಗರದಲ್ಲಿ ಒಂದು ಹೈವೇ ನಿರ್ಮಾಣ ಮಾಡಲಾಗುವ ವೇಳೆಯಲ್ಲಿ ರಸ್ತೆಯ ನಿರ್ಮಾಣಕ್ಕೆ ಇದೊಂದು ಮನೆ ಮಾತ್ರವೇ ಅಡ್ಡಿಯಾಗಿತ್ತು ಎನ್ನಲಾಗಿದೆ. ಆಗ ಸರ್ಕಾರ ಆ ಪುಟ್ಟ ಮನೆಯ ಜಾಗವನ್ನು ಖರೀದಿ ಮಾಡಲು ನಿರ್ಧಾರ ಮಾಡಿತು. ಆದರೆ ಆ ಮನೆಯ ಒಡತಿ ಮಾತ್ರ ತನ್ನ ಮನೆಯನ್ನು ‌ನೀಡಲು ಒಪ್ಪಿಗೆ ನೀಡಲಿಲ್ಲ.

ಸರ್ಕಾರದ ಹಲವು ಪ್ರಯತ್ನಗಳ ನಂತರ ಕೂಡಾ ಮಹಿಳೆ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಆಕೆ ಎಷ್ಟೇ ದಿನಗಳಾದರೂ ತನ್ನ ಮನೆಯನ್ನು ನೀಡಲು ಒಪ್ಪಿಗೆ ನೀಡಲಿಲ್ಲ. ಕಡೆಗೆ ಹೈವೇ ನಿರ್ಮಾಣವಾಯಿತು, ಇದರ ಪರಿಣಾಮ ಆಕೆಯ ಮನೆಯು ಟ್ರಾಫಿಕ್ ನ ನಡುವೆ ಸಿಲುಕುವಂತೆ ಆಯಿತು. ವರದಿಗಳ ಪ್ರಕಾರ ಆ ಮನೆಯ ಒಡತಿಯ ಹೆಸರು ಲಿಯಾಂಗ್. ಈ ಮಹಿಳೆ ಬರೋಬ್ಬರಿ ಹತ್ತು ವರ್ಷಗಳ ಕಾಲ ಸರ್ಕಾರದ ನಿರ್ಧಾರದ ವಿ ರು ದ್ಧ ವಾಗಿ ತನ್ನ ಮನೆಯನ್ನು ಕೊಡುವುದಿಲ್ಲವೆಂದು ಹಠ ಹಿಡಿದಿದ್ದಳು. ಸರ್ಕಾರವು ಆಕೆಯ ಮನೆಯನ್ನು ಖರೀದಿ ಮಾಡಿ ಅದನ್ನು ಬೀಳಿಸಿ ರಸ್ತೆ ನಿರ್ಮಾಣ ಕಾರ್ಯವನ್ನು ಸುಗಮವಾಗಿ ನಡೆಯುವಂತೆ ಮಾಡಲು ನಿರ್ಧರಿಸಿತ್ತು.

ಆದರೆ ಮಹಿಳೆಯ ನಿರ್ಧಾರ ಬದಲಾಗದ ಕಾರಣ ಸರ್ಕಾರವು ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿತು. ರಸ್ತೆ ನಿರ್ಮಾಣ ಕಾರ್ಯದ ಜವಾಬ್ದಾರಿ ಹೊತ್ತ ಡೆವಲಪರ್ಸ್ ಕಂಪನಿಯು ಆಕೆಯ ಮನೆಯ 4 ಕಡೆಗಳಲ್ಲೂ ಮೋಟರ್ವೇ ಸೇತುವೆಯನ್ನು ನಿರ್ಮಾಣ ಮಾಡಿಯೇ ಬಿಟ್ಟಿತು. ಪ್ರಸ್ತುತ ಈ ಮನೆಯನ್ನು ನೈಲ್ ಹೌಸ್ ಎಂದು ಕರೆಯಲಾಗುತ್ತಿದೆ. ಈ ಮನೆಯ ಮಾಲೀಕಳು ಸರ್ಕಾರ ನೀಡುವ ಪರಿಹಾರ ಧನ ತನಗೆ ಬೇಡವೆಂದು ದೃಢನಿರ್ಧಾರ ಮಾಡಿದರ ಪರಿಣಾಮವಾಗಿ ಆಕೆಯ ಮನೆ ನಾಲ್ಕು ಕಡೆಗಳಿಂದಲೂ ರಸ್ತೆಯಿಂದ ಸುತ್ತುವರೆದಿದೆ.

ಹೈಜುಯಾಂಗ್ ಹೆಸರಿನ ಈ ರಸ್ತೆ ಸೇತುವೆಯನ್ನು 2020 ರಲ್ಲಿ ವಾಹನಗಳ ಸಂಚಾರಕ್ಕಾಗಿ ತೆರೆಯಲಾಯಿತು. ಈಗ ಈ ಸಣ್ಣ ಮನೆಯಲ್ಲಿ ವಾಸಿಸುವ ಮಹಿಳೆಯ ಲಿಯಾಂಗ್ ತನ್ನ ಮನೆಯ ಕಿಟಕಿಗಳನ್ನು ತೆರೆದರೆ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ವಾಹನಗಳನ್ನು ನೋಡಬಹುದಷ್ಟೇ. ಇನ್ನು ಈಕೆಯ ಈ ಒಂದು ಅಂತಸ್ತಿನ ಮನೆ 40 ಚದರ ಮೀಟರ್ (430 ಚದರ ಅಡಿ) ನ ಫ್ಲಾಟ್ ಆಗಿದೆ, ಇದು ನಾಲ್ಕು ಪಥಗಳ ಸಂಚಾರ ಸಂಪರ್ಕದ ಮಧ್ಯದಲ್ಲಿ ಒಂದು ಹಳ್ಳದಲ್ಲಿ ಇರುವಂತೆ ಕಾಣುತ್ತಿದ್ದು, ಪ್ರಸ್ತುತ ಈ ಮನೆಯ ಬೆಲೆ ಸಹಾ ಕುಸಿದು ಹೋಗಿದೆ.

ಮಾಧ್ಯಮವೊಂದರ ವರದಿಯ ಪ್ರಕಾರ ಮನೆಯ ಮಾಲೀಕಳಾದ ಲಿಯಾಂಗ್ ಸರ್ಕಾರ ತನಗೆ ಒಂದು ಉತ್ತಮವಾದ ಜಾಗವನ್ನು ನೀಡಲು ವಿಫಲವಾದ ಕಾರಣ ನಾನು ನನ್ನ ಮನೆಯನ್ನು ಬಿಟ್ಟುಕೊಡಲಿಲ್ಲ. ಜನ ನನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ನನಗೆ ಚಿಂತೆ ಇಲ್ಲ. ಆದರೆ ಪರಿಸ್ಥಿತಿಗಳನ್ನು ಎದುರಿಸಿ ಜೀವನ ನಡೆಸುತ್ತಿರುವುದು ನನಗೆ ಸಮಾಧಾನವನ್ನು ನೀಡಿದೆ. ಜನರು ಈ ವಾತಾವರಣ ಚೆನ್ನಾಗಿಲ್ಲ ಎನ್ನಬಹುದು, ಆದರೆ ನನಗೆ ಈ ಜಾಗ ಶಾಂತಿ ನೆಮ್ಮದಿಯನ್ನು ನೀಡಿದೆ ಹಾಗೂ ಆರಾಮದಾಯಕವಾಗಿದೆ ಎಂದು ಹೇಳಿದ್ದಾರೆ..

ಸರ್ಕಾರಿ ಅಧಿಕಾರಿಗಳು ಈ ಸೇತುವೆಯ ನಿರ್ಮಾಣಕ್ಕಾಗಿ 2010ರಲ್ಲಿ ಈ ಮನೆಯನ್ನು ಆ ಜಾಗದಿಂದ ತೆರವುಗೊಳಿಸುವ ಯೋಜನೆಯನ್ನು ಸಿದ್ಧ ಮಾಡಿದ್ದರು ಎನ್ನಲಾಗಿದೆ. ಆದರೆ ಮಹಿಳೆ ತನ್ನ ನಿರ್ಧಾರವನ್ನು ಬದಲಿಸದ ಕಾರಣ ಸೇತುವೆಯ ನಿರ್ಮಾಣ ಕಾರ್ಯಕ್ಕೆ ಬರೋಬ್ಬರಿ ಹತ್ತು ವರ್ಷಗಳು ತಗುಲಿತು. ಸರ್ಕಾರ ಆಕೆ ತನ್ನ ನಿರ್ಧಾರವನ್ನು ಬದಲಿಸಬಹುದು ಎಂದು ಒಂದಷ್ಟು ವರ್ಷಗಳು ಕಾದು ಕುಳಿತಿತ್ತು. ಅಧಿಕಾರಿಗಳ ಪ್ರಕಾರ ಸರ್ಕಾರ ಲಿಯಾಂಗ್ ಅವರಿಗೆ ಕೆಲವು ಫ್ಲಾಟ್ ಗಳನ್ನು ತೋರಿಸಿದ್ದು, ಮಾತ್ರವಲ್ಲದೇ ನಗದು ಹಣದ ಆಫರನ್ನು ಕೂಡಾ ನೀಡಲಾಗಿತ್ತು. ಆದರೆ ಲಿಯಾಂಗ್ ಎಲ್ಲವನ್ನು ನಿರಾಕರಣೆ ಮಾಡಿದರು ಎಂದು ಹೇಳಿದ್ದಾರೆ.