ಈ ಗ್ರಾಮದಲ್ಲಿರುವುದು ಕೇವಲ 75 ಮನೆಗಳು, ಆದರೆ ಪ್ರತಿ ಮನೆಯಲ್ಲೂ ಒಬ್ಬ ಐಎಎಸ್ ಅಥವಾ ಐಪಿಎಸ್ ಅಧಿಕಾರಿ ಇದ್ದಾರೆ!

ಉತ್ತರಪ್ರದೇಶದ ಜೌನ್ ಪುರ್ ಜಿಲ್ಲೆಯ ಮಾಧೋಪಟ್ಟಿ ಎನ್ನುವ ಗ್ರಾಮದ ಹೆಸರು ಸಾಮಾನ್ಯ ಜನರಿಗೆ ತಿಳಿಯದೇ ಇರಬಹುದು. ಆದರೆ ಆಡಳಿತ ವರ್ಗದಲ್ಲಿ ಆಗಾಗ ಈ ಹಳ್ಳಿಯ ವಿಷಯವು ಹರಿದಾಡುವ ಮೂಲಕ ಸುದ್ದಿಯಾಗುತ್ತಲೇ ಇರುತ್ತದೆ. ಇದರ ಹಿಂದೆ ಬಂದು ಪ್ರಮುಖವಾದ ಕಾರಣ ಕೂಡಾ ಇದೆ. ಈ ಗ್ರಾಮದಲ್ಲಿ ಕೇವಲ ಆಡಳಿತ ಅಧಿಕಾರಿಗಳು ಮಾತ್ರವೇ ಜನಿಸುತ್ತಾರೆ ಎಂದು ಹೇಳಲಾಗುತ್ತದೆ. ಅಲ್ಲದೇ ಈ ಗ್ರಾಮವನ್ನು ‘ಅಧಿಕಾರಿಗಳ ಗ್ರಾಮ’ ಎಂದು ಕೂಡಾ ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ಕೇವಲ 75 ಮನೆಗಳು ಮಾತ್ರ ಇದೆಹಾದರೂ, ಈ ಗ್ರಾಮದಿಂದ ಬಂದ 47 ಜನ ಐಎಎಸ್ ಅಧಿಕಾರಿಗಳಾಗಿ ಇಂದು ದೇಶದ ವಿವಿಧ ಭಾಗಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ವರದಿಗಳ ಪ್ರಕಾರ 1914 ರಲ್ಲಿ ಈ ಗ್ರಾಮದ ಮುಸ್ತಾಫ ಹುಸೇನ ಅವರು ಟಿಸಿಎಸ್ ನಲ್ಲಿ ಆಯ್ಕೆಯಾದರು. ಇದಾದನಂತರ 1952 ರಲ್ಲಿ ಇಂದೂ ಪ್ರಕಾಶ್ ಸಿಂಗ್ 13ನೇ ರ‍್ಯಾಂಕ್ ಪಡೆದು ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಐಎಎಸ್ ಅಧಿಕಾರಿಯಾದರು. ಇಂದು ಪ್ರಕಾಶ್ ಅವರ ನಂತರ ಗ್ರಾಮದ ಯುವ ಜನರಲ್ಲಿ ಐಎಎಸ್ ಮತ್ತು ಪಿಸಿಎಸ್ ಪರೀಕ್ಷೆಗಳನ್ನು ಬರೆಯುವ ವಿಚಾರವಾಗಿ ಒಂದು ಸ್ಪರ್ಧೆಯೇ ಏರ್ಪಟ್ಟಂತೆ ಕಂಡಿತು. ಇಂದು ಪ್ರಕಾಶ ಸಿಂಗ್ ಅವರು ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಕೆಲಸವನ್ನು ಮಾಡಿದ್ದಾರೆ.

ಇಂದು ಪ್ರಕಾಶ್ ಅವರ ನಂತರ ಇದೇ ಗ್ರಾಮದ ಒಂದೇ ಕುಟುಂಬದ ನಾಲ್ಕು ಜನ ಸಹೋದರರು ಐಎಎಸ್ ಪರೀಕ್ಷೆಯನ್ನು ಪಾಸು ಮಾಡುವುದರ ಮೂಲಕ ಹೊಸದೊಂದು ದಾಖಲೆಯನ್ನು ಬರೆದರು. 1955 ರಲ್ಲಿ ವಿನಯ್ ಸಿಂಗ್ ಅವರು ಐಎಎಸ್ ಪರೀಕ್ಷೆಯನ್ನು ಪಾಸ್ ಮಾಡಿದರು. ಅನಂತರ ಅವರು ರಾಜಕೀಯವನ್ನು ಪ್ರವೇಶಿಸಿ ಪ್ರಮುಖ ಸಚಿವರಾದರು. ನಂತರ ಇವರ ಇಬ್ಬರು ಸಹೋದರರಾದ ಛತ್ರಪಾಲ್ ಸಿಂಗ್ ಮತ್ತು ಅಜಯ್ ಸಿಂಗ್ ಅವರು 1964 ರಲ್ಲಿ ಐಎಎಸ್ ಪರೀಕ್ಷೆಯನ್ನು ಪಾಸುಮಾಡಿ ಐಎಎಸ್ ಅಧಿಕಾರಿಗಳಾದರು.

ತಮ್ಮ ಗ್ರಾಮವನ್ನು ಅಧಿಕಾರಿಗಳ ಗ್ರಾಮವೆಂದು ಕರೆಯುವುದನ್ನು ಕಂಡು ಇಲ್ಲಿನ ಗ್ರಾಮಸ್ಥರು ಬಹಳ ಹೆಮ್ಮೆ ಹಾಗೂ ಸಂತೋಷಪಡುತ್ತಾರೆ. ಮಾಧೋಪಟ್ಟಿ ಹಳ್ಳಿಯ ಡಾಕ್ಟರ್ ಸಂಜಲ್ ಸಿಂಗ್ ಅವರು, ಬ್ರಿಟಿಷ್ ಆಡಳಿತದಲ್ಲಿ ಮುರ್ತಜ ಹುಸೇನ ಅವರು ಕಮಿಷನರ್ ಆಗಿ ಆಯ್ಕೆಯಾದ ನಂತರ ಈ ಗ್ರಾಮದ ಯುವಕರಲ್ಲಿ ಸ್ಪೂರ್ತಿ ಮೂಡಿತು. ಅವರು ಅಂದು ಹಳ್ಳಿಯಲ್ಲಿ ಹೊತ್ತಿಸಿದ ಶಿಕ್ಷಣದ ಕಿಚ್ಚು ಇಂದು ದೇಶದ ಮೂಲೆಮೂಲೆಗಳಲ್ಲಿ ಪ್ರಕಾಶಿಸುತ್ತಿದೆ ಎಂದು ಬಹಳ ಹೆಮ್ಮೆಯಿಂದ ಹೇಳುತ್ತಾರೆ.

ಜಿಲ್ಲಾ ಕೇಂದ್ರ ಕಚೇರಿಯಿಂದ ಪೂರ್ವಕ್ಕೆ 11 ಕಿಲೋಮೀಟರ್ ದೂರದಲ್ಲಿರುವ ಮಾಧೋಪಟ್ಟಿ ಗ್ರಾಮ ಪ್ರವೇಶಿಸುವ ವೇಳೆಯಲ್ಲಿ ಅಲ್ಲಿ‌ನ ದೊಡ್ಡ ಪ್ರವೇಶ ದ್ವಾರವು ಗ್ರಾಮದ ವಿಶೇಷತೆಯನ್ನು ಪ್ರದರ್ಶಿಸುತ್ತದೆ. ಸುಮಾರು 800 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಆಗಾಗ ಕೆಂಪು ಮತ್ತು ನೀಲಿ ಬತ್ತಿಯ ವಾಹನಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ದೊಡ್ಡ ದೊಡ್ಡ ಅಧಿಕಾರವನ್ನು ಪಡೆದ ನಂತರವೂ ಗ್ರಾಮದ ಯುವಜನರು ತಮ್ಮ ಗ್ರಾಮವನ್ನು ಇಂದಿಗೂ ಮರೆತಿಲ್ಲ. ಆಗಾಗ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಈ ಹಳ್ಳಿಯ ಮಹಿಳೆಯರೂ ಪುರುಷರಿಗಿಂತ ಹಿಂದೆ ಏ‌ನೂ ಉಳಿದಿಲ್ಲ. 1980 ರಲ್ಲಿ ಆಶಾ ಸಿಂಗ್, 1982 ರಲ್ಲಿ ಉಷಾ ಸಿಂಗ್, 1983 ರಲ್ಲಿ ಕುನ್ವರ್ ಚಂದ್ರಮಾಲ್ ಸಿಂಗ್ ಮತ್ತು 1983 ರಲ್ಲಿ ಅವರ ಪತ್ನಿ ಇಂದೂ ಸಿಂಗ್, ಅಮಿತಾಬ್ 1994 ರಲ್ಲಿ ಐಪಿಎಸ್ ಆದರು ಮತ್ತು ಅವರ ಪತ್ನಿ ಸರಿತಾ ಸಿಂಗ್ 1994 ರಲ್ಲಿ ಐಪಿಎಸ್ ಆಗಿ ಆಯ್ಕೆಯಾದರು. ಡಾಕ್ಟರ್ ಸಜಲ್ ಸಿಂಗ್ ಅವರು, ತಮ್ಮ ಗ್ರಾಮದಲ್ಲಿ ಶಿಕ್ಷಣದ ಮಟ್ಟವು ಅತ್ಯುತ್ತಮವಾಗಿದ್ದು, ಪ್ರತಿಯೊಂದು ಮನೆಯಲ್ಲೂ ಇಬ್ಬರಿಗಿಂತ ಹೆಚ್ಚು ಪದವೀಧರರು ಇದ್ದಾರೆ. ಮಹಿಳೆಯರು ಶಿಕ್ಷಣದಲ್ಲಿ ಹಿಂದೆ ಬಿದ್ದಿಲ್ಲ ಎನ್ನುತ್ತಾ, ಅವರು ತಮ್ಮ ಗ್ರಾಮದ ಸಾಕ್ಷರತೆಯ ಪ್ರಮಾಣ 95% ಇದೆ ಎನ್ನುತ್ತಾರೆ. ಇದೇ ವೇಳೆ ಉತ್ತರ ಪ್ರದೇಶದ ಸಾಕ್ಷರತೆಯ ಪ್ರಮಾಣ 69.72% ಇದೆ.

ಈ ಗ್ರಾಮದ ಮಕ್ಕಳು ಆಡಳಿತ ಸೇವೆಗಳಲ್ಲಿ ಮಾತ್ರವಲ್ಲದೇ ಇನ್ನಿತರೆ ಕ್ಷೇತ್ರಗಳಲ್ಲೂ ಹೆಸರು ಗಳಿಸುತ್ತಿದ್ದಾರೆ. ಈ ಗ್ರಾಮದ ಅಮಿತ್ ಪಾಂಡೆಗೆ ಕೇವಲ 22 ವರ್ಷ ವಯಸ್ಸಾಗಿದೆ, ಆದರೆ ಅವರು ಬರೆದ ಅನೇಕ ಪುಸ್ತಕಗಳು ಪ್ರಕಟವಾಗಿದೆ. ಇದೇ ಗ್ರಾಮದ ಅನ್ಮಜಯ್ ಸಿಂಗ್ ಅವರು ವಿಶ್ವಬ್ಯಾಂಕ್ ಮನಿಲಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಡಾ.ನೀರು ಸಿಂಗ್ ಮತ್ತು ಲಲೇಂದ್ರ ಪ್ರತಾಪ್ ಸಿಂಗ್ ಅವರು ಭಾಭಾ ಸಂಸ್ಥೆಯಲ್ಲಿ ವಿಜ್ಞಾನಿಗಳಾಗಿ ಸೇವೆ ಸಲ್ಲಿಸುತ್ತಿದ್ದರೆ. ಜ್ಞಾನು ಮಿಶ್ರಾ ಇಸ್ರೋ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.