ಕೆನಡಾದಲ್ಲಿ ದಾಖಲೆ ಮಟ್ಟದ ಉಷ್ಣಾಂಶದ ಅಲೆಗೆ ಕಡಲ ತೀರದಲ್ಲಿ ಜೀವಂತವಾಗಿ ಬೆಂದು ಹೋದ ಅಸಂಖ್ಯಾತ ಜೀವಿಗಳು
ಕೆಲವು ದಿನಗಳಿಂದಲೂ ಅಮೇರಿಕಾ ಮತ್ತು ಕೆನಡಾದಲ್ಲಿ ಸುಡುವಂತಹ ಉಷ್ಣತೆ ಇದ್ದು, ಕೆನಡಾದಲ್ಲಿ ಉಷ್ಣ ಗುಮ್ಮಟದ ರಚನೆಯಾಗಿ, ವಾತಾವರಣದಲ್ಲಿನ ಶಾಖವು ಮತ್ತೆ ಭೂಮಿಗೆ ಮರಳುತ್ತಿದೆ. ಇದರಿಂದಾಗಿ ಉಷ್ಣತೆಯ ಪ್ರಮಾಣ ತೀವ್ರವಾಗಿ ಹೆಚ್ಚುತ್ತಿದೆ ಎನ್ನಲಾಗಿದ್ದು, ಬ್ರಿಟಿಷ್ ಕೊಲಂಬಿಯಾದಲ್ಲಿ ಸಾಗರದ ತೀರದಲ್ಲಿ ವಾಸಿಸುವಂತಹ ಮಸ್ಸೆಲ್ಸ್, ಕ್ಲೆಮ್ಸ್ ಮತ್ತು ಇನ್ನಿತರೆ ಸಮುದ್ರ ಜೀವಿಗಳು ಬಿಸಿಯಾದ ನೀರಿನಲ್ಲಿ ಬೆಂದು ಹೋಗಿದೆ ಎನ್ನಲಾಗಿದೆ. ಈ ಜೀವಿಗಳ ದೊಡ್ಡ ಕಳೇಬರದ ರಾಶಿ ಕಡಲತೀರದಲ್ಲಿ ಬಿದ್ದಿದೆ ಎನ್ನಲಾಗಿದ್ದು, ಸತ್ತಿರುವ ಈ ಜೀವಿಗಳ ಚಿಪ್ಪುಗಳು ಕೊಳೆಯುತ್ತಿದ್ದು, ಇದರ ದುರ್ವಾಸನೆಯೂ ಅಲ್ಲಿನ ಜನರಿಗೆ ಸಮಸ್ಯೆಯನ್ನು ಉಂಟು ಮಾಡಿದ್ದು, ಜನ ಬಳಲುತ್ತಿದ್ದಾರೆ ಎನ್ನಲಾಗಿದೆ.
ಅಂತರರಾಷ್ಟ್ರೀಯ ಮಾಧ್ಯಮವೊಂದರ ವರದಿಯ ಪ್ರಕಾರ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಕ್ರಿಸ್ಟೋಫರ್ ಹಾರ್ಲೆ ಅವರು ಭಾನುವಾರದಂದು ವ್ಯಾಂಕೋವರ್ ನ ಕಿಟ್ಸಿಲಾನೋ ಬೀಚ್ನಲ್ಲಿ ಅಸಂಖ್ಯಾತ ಸತ್ತ ಮಸ್ಸೆಲ್ಸ್ ಗಳ ಚಿಪ್ಪುಗಳು ಕೊಳೆಯುತ್ತಿರುವುದನ್ನು ನೋಡಿದ್ದಾರೆಂದು ಹೇಳಲಾಗಿದೆ. ಹಾರ್ಲೆ ಅವರು ಪರಿಸರ ವಿಜ್ಞಾನದ ಮೇಲೆ ಹವಾಮಾನದ ಬದಲಾವಣೆಗಳ ಪರಿಣಾಮದ ಕುರಿತಾಗಿ ಅಧ್ಯಯನ ಮಾಡುತ್ತಿದ್ದಾರೆ. ಜೂನ್ 26, 27 ಮತ್ತು 28ರಂದು ಆ ಪ್ರದೇಶದಲ್ಲಿನ ದಾಖಲೆ ಮಟ್ಟದ ಉಷ್ಣತೆಯು ಸಮುದ್ರದ ಜೀವಿಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿದೆ ಎಂದು ಹೇಳಿದ್ದಾರೆ.

ಹಾರ್ಲೆ ಅವರು ಮಾತನಾಡುತ್ತಾ, ಬೀಚ್ ತಲುಪುವ ಮೊದಲೇ ಸತ್ತ ಜೀವಿಗಳ ವಾಸನೆಯೂ ಮೂಗಿಗೆ ಬಡಿಯುತ್ತಿತ್ತು. ಇನ್ನು ಬೀಚ್ ನ ಹತ್ತಿರ ತಲುಪಿದಾಗ ಅಲ್ಲಿ ಸತ್ತು ಬಿದ್ದಿರುವ ಜೀವಿಗಳ ಸಂಖ್ಯೆಯನ್ನು ಕಂಡು ನಾನು ದಿಗ್ಭ್ರಾಂತನಾದೆ. ಕೆಲವು ತಮ್ಮ ಚಿಪ್ಪಿನೊಳಗೆ ಕೊಳೆಯುತ್ತಿದ್ದವು, ಇನ್ನು ಕೆಲವು ಚಿಪ್ಪಿನಿಂದ ಹೊರಬಂದು ಸತ್ತಿದ್ದವು. ಆ ದಿನ ಸತ್ತ ಸಮುದ್ರ ಜೀವಿಗಳ ಪ್ರಮಾಣ ಹಿಂದೆಂದಿಗಿಂತಲೂ ಕೂಡಾ ಬಹಳ ಹೆಚ್ಚಾಗಿತ್ತು ಎಂದು ಹೇಳಿದ್ದಾರೆ. ಮರುದಿನ ಅವರು ತಮ್ಮ ಒಬ್ಬ ವಿದ್ಯಾರ್ಥಿಯೊಬ್ಬನ ಜೊತೆ ವ್ಯಾಂಕೋವರ್ ನ ಲೈಟ್ಹೌಸ್ ಪಾರ್ಕ್ ಗೆ ಹೋಗಿದ್ದರು ಎನ್ನಲಾಗಿದೆ..
ಪ್ರೊಫೆಸರ್ ಹಾರ್ಲೆ ಅವರು ಕಳೆದ 12 ವರ್ಷಗಳಿಂದಲೂ ಈ ಪಾರ್ಕಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಈ ಬಾರಿ ಅವರು ಕಂಡಂತಹ ವಿ ನಾ ಶ ಹಿಂದೆ ಎಂದೂ ಕಂಡಿರಲಿಲ್ಲ ಎಂದು ಹೇಳುತ್ತಾರೆ. ಬೀಚ್ ನಲ್ಲಿ ಸತ್ತಿರುವ ಮಸ್ಸೆಲ್ಸ್ ನ ರಾಶಿಯು ಬಿದ್ದಿತ್ತು. ಮಸ್ಸೆಲ್ಸ್ ಗಳು ತಮ್ಮನ್ನು ತಾವು ಸಾಗರದಾಚೆಯ ಬಂಡೆಗಳು ಹಾಗೂ ಇನ್ನಿತರೆ ಮೇಲ್ಮೈಗೆ ಅಂಟಿಸಿಕೊಂಡು ಕಡಿಮೆ ಉಬ್ಬರವಿಳಿತದ ಸಮಯದಲ್ಲಿ ಗಾಳಿ ಮತ್ತು ಸೂರ್ಯನ ಬೆಳಕಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತವೆ, ಆದರೆ ಅವು ಸಾಮಾನ್ಯವಾಗಿ 100 ಡಿಗ್ರಿ ಫ್ಯಾರನ್ಹೀಟ್ ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಬದುಕುವುದು ಸಾಧ್ಯವಿಲ್ಲ ಎಂದು ಹಾರ್ಲೆ ಅವರು ತಿಳಿಸಿದ್ದಾರೆ.
ವ್ಯಾಂಕೋವರ್ ನಗರದಲ್ಲಿ ಜೂನ್ 26ರಂದು 98.6 ಡಿಗ್ರಿ ಫ್ಯಾರನ್ ಹೀಟ್, 27ರಂದು 99.5 ಡಿಗ್ರಿ ಫ್ಯಾರನ್ ಹೀಟ್ ಮತ್ತು 28ರಂದು 101.5 ಫ್ಯಾರೆಂಹೈತ್ ಉಷ್ಣಾಂಶವು ದಾಖಲಾಗಿದೆ. ಹಾರ್ಲೆ ಹಾಗೂ ಅವರ ವಿದ್ಯಾರ್ಥಿಯು ಥರ್ಮಲ್ ಇಮೇಜಿಂಗ್ ಕ್ಯಾಮೆರಾ ಬಳಸುವ ಮೂಲಕ ಈ ಜೀವಿಗಳು ಅಂಟಿಕೊಂಡಿದ್ದ ಕಲ್ಲಿನ ಉಷ್ಣತೆಯನ್ನು ಪರೀಕ್ಷೆ ಮಾಡಿದಾಗ ಅದು 125 ಡಿಗ್ರಿ ಫ್ಯಾರನ್ ಹಿಟ್ ಆಗಿತ್ತು ಎನ್ನಲಾಗಿದೆ. ಅಮೇರಿಕಾದ ಡೆತ್ ವ್ಯಾಲಿ ಕೂಡ ತನ್ನ ಹೆಸರಿಗೆ ತಕ್ಕಂತೆ ಇದ್ದು, ಕ್ಯಾಲಿಫೋರ್ನಿಯಾದ ಮರುಭೂಮಿ ಕಣಿವೆಯಲ್ಲಿ ತಾಪಮಾನವು ಅದರ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವತ್ತ ಬಹಳ ವೇಗವಾಗಿ ಸಾಗುತ್ತಿದೆ.

ಕಳೆದ ಶುಕ್ರವಾರದಂದು ಇಲ್ಲಿನ ಉಷ್ಣತೆಯು 130 ಡಿಗ್ರಿ ಫ್ಯಾರನ್ಹೀಟ್ ತಲುಪಿತ್ತು. ಅಂದರೆ 54.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ತನ್ನ ಹಳೆಯ ದಾಖಲೆಯ ನಾಲ್ಕು ಡಿಗ್ರಿ ಸೆಲ್ಸಿಯಸ್ ಅಷ್ಟೇ ಹಿಂದೆ ಇದೆ ಎನ್ನಲಾಗಿದೆ. ಜೂನ್ 9, 1913 ರಲ್ಲಿ ಇಲ್ಲಿನ ತಾಪಮಾನ 134 ಡಿಗ್ರಿ ಫ್ಯಾರನ್ಹೀಟ್ ಆಗಿತ್ತು. ಅದು ಭೂಮಿಯ ಮೇಲೆ ದಾಖಲಾದ ಅತ್ಯಧಿಕ ತಾಪಮಾನವಾಗಿತ್ತು. ಆತಂಕಕಾರಿ ವಿಷಯವೆಂದರೆ ಪಶ್ಚಿಮ ಕರಾವಳಿಯಲ್ಲಿ ಇನ್ನೂ ಶಾಖದ ಅಲೆಯ ಭೀತಿ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಉಷ್ಣತೆಯ ವಿಚಾರದಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ ಎನ್ನುವ ಆತಂಕಕಾರಿ ವಿಷಯವು ಚಿಂತೆ ಗೀಡುಮಾಡಿದೆ.